Dailyhunt Logo
  • Light mode
    Follow system
    Dark mode
    • Play Story
    • App Story
ಅಮೆರಿಕದಲ್ಲಿ ಅಕ್ಕ-ಸಿನಿಗನ್ನಡ ಚಲನಚಿತ್ರೋತ್ಸವ: ಪಿ. ಶೇಷಾದ್ರಿ

ಅಮೆರಿಕದಲ್ಲಿ ಅಕ್ಕ-ಸಿನಿಗನ್ನಡ ಚಲನಚಿತ್ರೋತ್ಸವ: ಪಿ. ಶೇಷಾದ್ರಿ

ಮೆರಿಕದ ನೆಲದಲ್ಲಿ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಪಸರಿಸುತ್ತಿರುವ ಕನ್ನಡಿಗರ ಪ್ರತಿನಿಧಿ ಸಂಸ್ಥೆ 'ಅಕ್ಕ' ಈ ವರ್ಷ ತನ್ನ ಬೆಳ್ಳಿಹಬ್ಬವನ್ನು ಆಚರಿಸುತ್ತಿದೆ. ಈ ಸಂಭ್ರಮದ ಅಂಗವಾಗಿ 'ಅಕ್ಕ-ಸಿನಿಗನ್ನಡ ಚಲನಚಿತ್ರೋತ್ಸವ 2026' ಆಯೋಜಿಸಲು ಸಿದ್ಧತೆ ನಡೆದಿದೆ.

ಕನ್ನಡ ಚಿತ್ರಗಳಿಗೆ ಜಾಗತಿಕ ವೇದಿಕೆ ಕಲ್ಪಿಸುವ ಉದ್ದೇಶದಿಂದ ಮಧು ರಂಗಯ್ಯ ಅವರ ಪರಿಕಲ್ಪನೆಯಲ್ಲಿ ರೂಪುಗೊಂಡಿರುವ ಈ ಚಿತ್ರೋತ್ಸವವು ಅಮೆರಿಕದ ಫಿಲಡೆಲ್ಫಿಯಾದಲ್ಲಿ ನಡೆಯಲಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಹಿರಿಯ ನಿರ್ದೇಶಕ ಪಿ. ಶೇಷಾದ್ರಿ, 'ಚಿತ್ರೋತ್ಸವದಲ್ಲಿ ಸಿನಿಮಾ ನೋಡುವ ಅನುಭವವೇ ವಿಭಿನ್ನ. ಚಿತ್ರೋತ್ಸವದಲ್ಲಿ ಸಿನಿಮಾ ವೀಕ್ಷಿಸುವುದಷ್ಟೇ ಅಲ್ಲ; ಚಿತ್ರಾಸಕ್ತರು ಒಂದೆಡೆ ಸೇರಿ ಚಿತ್ರದ ಬಗ್ಗೆ ಚರ್ಚಿಸುತ್ತಾರೆ, ತಮ್ಮ ಗ್ರಹಿಕೆಗಳನ್ನು ಹಂಚಿಕೊಳ್ಳುತ್ತಾರೆ. ಯಾರ ವ್ಯಾಖ್ಯಾನ ಹೆಚ್ಚು ಸಮರ್ಪಕ ಎಂಬ ವಿಚಾರವೂ ಚರ್ಚೆಗೆ ಬರುತ್ತದೆ' ಎಂದು ಅವರು ಹೇಳಿದರು.

ಚಿತ್ರೋತ್ಸವದ ನಿರ್ದೇಶಕರಾಗಿ ಶೇಷಾದ್ರಿ ಕಾರ್ಯನಿರ್ವಹಿಸುತ್ತಿದ್ದು, ಗೌರೀಶ್ ಅಕ್ಕಿ ಹಾಗೂ ಬಡಿಗೇರ್ ದೇವೇಂದ್ರ ಸಹಯೋಗ ನೀಡುತ್ತಿದ್ದಾರೆ.

2025ರ ಜನವರಿ 1ರಿಂದ ಡಿಸೆಂಬರ್ 31ರ ನಡುವೆ ನಿರ್ಮಾಣಗೊಂಡ ಕನ್ನಡ ಚಲನಚಿತ್ರಗಳು ಚಿತ್ರೋತ್ಸವಕ್ಕೆ ಪ್ರವೇಶ ಪಡೆಯಲು ಅರ್ಹವಾಗಿವೆ. ಪ್ರವೇಶ ಕೋರಿ ಸಲ್ಲಿಕೆಯಾಗುವ ಎಲ್ಲ ಚಿತ್ರಗಳನ್ನು ಮೊದಲಿಗೆ ಐವರು ಸದಸ್ಯರ ಸಮಿತಿ ವೀಕ್ಷಿಸಿ ಹತ್ತು ಚಿತ್ರಗಳನ್ನು ಆಯ್ಕೆ ಮಾಡಲಿದೆ. ಬಳಿಕ ಮೂವರು ತೀರ್ಪುಗಾರರ ತಂಡ ಈ ಹತ್ತು ಚಿತ್ರಗಳಲ್ಲಿ ಅತ್ಯುತ್ತಮ ಮೂರು ಚಿತ್ರಗಳನ್ನು ಆಯ್ಕೆ ಮಾಡಲಿದೆ.

ವಿಜೇತ ಚಿತ್ರಗಳಿಗೆ ಪ್ರಥಮ ಬಹುಮಾನ ₹1 ಲಕ್ಷ, ದ್ವಿತೀಯ ಬಹುಮಾನ ₹50 ಸಾವಿರ ಹಾಗೂ ತೃತೀಯ ಬಹುಮಾನ ₹25 ಸಾವಿರ ನಿಗದಿಪಡಿಸಲಾಗಿದೆ. ಆಯ್ಕೆಯಾದ ಹತ್ತು ಚಿತ್ರಗಳನ್ನು ಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಗುವುದು. ಪ್ರಶಸ್ತಿ ವಿಜೇತ ಚಿತ್ರಗಳ ಪಟ್ಟಿಯನ್ನು ಆಗಸ್ಟ್ ಕೊನೆ ವಾರದಲ್ಲಿ ಪ್ರಕಟಿಸಲಾಗುವುದು. ಚಿತ್ರೋತ್ಸವಕ್ಕೆ ಪ್ರವೇಶ ಸಲ್ಲಿಸುವ ವಿಧಾನ ಹಾಗೂ ಮಾಹಿತಿಗೆ https://cinegannadafilmfest.org ವೀಕ್ಷಿಸಬಹುದು ಎಂದು ಆಯೋಜಕರು ತಿಳಿಸಿದ್ದಾರೆ.v

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260716-51-1686471473

Dailyhunt
Disclaimer: This content has not been generated, created or edited by Dailyhunt. Publisher: Prajavani