Dailyhunt Logo
  • Light mode
    Follow system
    Dark mode
    • Play Story
    • App Story
ಅಮೆರಿಕದಲ್ಲಿ ಇಂದು ಮಧ್ಯಂತರ ಚುನಾವಣೆ: ಟ್ರಂಪ್ ಆಡಳಿತಕ್ಕೆ ಜನಾದೇಶದ ಪರೀಕ್ಷೆ

ಅಮೆರಿಕದಲ್ಲಿ ಇಂದು ಮಧ್ಯಂತರ ಚುನಾವಣೆ: ಟ್ರಂಪ್ ಆಡಳಿತಕ್ಕೆ ಜನಾದೇಶದ ಪರೀಕ್ಷೆ

ವಾಷಿಂಗ್ಟನ್: ಅಮೆರಿಕದಲ್ಲಿ ಅತ್ಯಂತ ನಿರ್ಣಾಯಕ ಎನ್ನಲಾದ ಮಧ್ಯಂತರ ಚುನಾವಣೆ ಇಂದು (ನವೆಂಬರ್‌ 3) ನಡೆಯುತ್ತಿದೆ. ಇರಾನ್‌ ಜೊತೆಗಿನ ಸುದೀರ್ಘ ಯುದ್ಧ, ಏರುತ್ತಿರುವ ಹಣದುಬ್ಬರ, ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ಜನಾದೇಶದ ಪರೀಕ್ಷೆ ಎದುರಿಸುತ್ತಿದೆ.

ಟ್ರಂಪ್ ಅವರ ಎರಡನೇ ಅವಧಿಯ ಕೊನೆಯ ಎರಡು ವರ್ಷಗಳಲ್ಲಿ ರಿಪಬ್ಲಿಕನ್ ಪಕ್ಷವು ಅಮೆರಿಕ ಕಾಂಗ್ರೆಸ್‌ನ ಎರಡು ಸದನಗಳಾದ ಹೌಸ್‌ ಆಫ್‌ ರೆಪ್ರೆಸೆಂಟೇಟಿವ್ಸ್‌ (ಕೆಳಮನೆ) ಮತ್ತು ಸೆನೆಟ್‌ನಲ್ಲಿ (ಮೇಲ್ಮನೆ) ತನ್ನ ಹಿಡಿತವನ್ನು ಕಾಯ್ದುಕೊಳ್ಳಲಿದೆಯೇ ಅಥವಾ ಜನಾಭಿಪ್ರಾಯ ಸಮೀಕ್ಷೆಗಳು ಹೇಳಿದಂತೆ ಡೆಮಾಕ್ರಟಿಕ್ ಪಕ್ಷವು ಹೌಸ್ ಆಫ್ ರೆಪ್ರೆಸೆಂಟ್ಸ್‌ನಲ್ಲಿ ಜಯ ಸಾಧಿಸಲಿದೆಯೇ ಎಂಬುದನ್ನು ಈ ಚುನಾವಣೆ ತೀರ್ಮಾನಿಸಲಿದೆ.

ಹೌಸ್ ಆಫ್ ರೆಪ್ರೆಸೆಂಟ್ಸ್‌ನ ಎಲ್ಲಾ 435 ಸ್ಥಾನಗಳಿಗೆ ಹಾಗೂ 100 ಸದಸ್ಯರ ಸೆನೆಟ್‌ನ 37 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ.

ಒಹಿಯೊ ಸೇರಿದಂತೆ 36 ರಾಜ್ಯಗಳ ರಾಜ್ಯಪಾಲರ ಹುದ್ದೆಗಳಿಗೂ ಚುನಾವಣೆ ನಡೆಯುತ್ತಿದೆ. ಒಹಿಯೊದಲ್ಲಿ ಭಾರತೀಯ ಮೂಲದ ರಿಪಬ್ಲಿಕನ್ ನಾಯಕ ವಿವೇಕ್ ರಾಮಸ್ವಾಮಿ ಮತ್ತು ಡೆಮಾಕ್ರಟಿಕ್ ಅಭ್ಯರ್ಥಿ ಆಮಿ ಆಕ್ಟನ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.

ರಾಜ್ಯಪಾಲ ಹುದ್ದೆಯಿಂದ ಹಿಡಿದು ಸಿಟಿ ಕೌನ್ಸಿಲ್ ಸದಸ್ಯತ್ವದವರೆಗೆ ಹಲವು ಭಾರತೀಯ ಮೂಲದ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕೇರಳಂ ಮೂಲದ ಡೆಮಾಕ್ರಟಿಕ್ ನಾಯಕಿ ನಿತ್ಯಾ ರಾಮನ್ ಅವರು ಅಮೆರಿಕದ ಎರಡನೇ ಅತಿ ದೊಡ್ಡ ನಗರವಾದ ಲಾಸ್ ಏಂಜಲೀಸ್‌ನ ಮೇಯರ್ ಹುದ್ದೆಗಾಗಿ ಸ್ಪರ್ಧಿಸಿದ್ದಾರೆ.

ಹೌಸ್‌ ಆಫ್‌ ರೆಪ್ರೆಸೆಂಟೇಟಿವ್ಸ್‌ಗೆ (ಕೆಳಮನೆ) ಭಾರತೀಯ ಮೂಲದ ಸಂಸದರಾದ ರೋ ಖನ್ನಾ, ಪ್ರಮೀಳಾ ಜಯಪಾಲ್‌, ಆಮಿ ಬೇರಾ, ಸುಹಾಸ್‌ ಸುಬ್ರಹ್ಮಣ್ಯಂ ಕಣದಲ್ಲಿದ್ದಾರೆ. ಡೆಮಾಕ್ರಟಿಕ್ ನಾಯಕರಾದ ಪಿಯಾ ದಾಂಡಿಯಾ ಮತ್ತು ಅಮಿಶ್ ಶಾ ಮೊದಲ ಬಾರಿಗೆ ಸಂಸತ್ ಪ್ರವೇಶಿಸಲು ಸ್ಪರ್ಧಿಸಿದ್ದಾರೆ.

ಸೋಮವಾರದಂದು ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ಪಕ್ಷಗಳು ಅಂತಿಮ ಹಂತದ ಮತ ಪ್ರಚಾರ ನಡೆಸಿದ್ದವು. ಟ್ರಂಪ್ ಅವರು ತಮ್ಮ ಚುನಾವಣಾ ರ‍್ಯಾಲಿಗಳ ಮುಖ್ಯ ವಿಷಯಗಳಾಗಿದ್ದ ತೆರಿಗೆ ಕಡಿತ, ಸುಂಕ ಮತ್ತು ಗಡಿ ಭದ್ರತೆಯ ಬಗ್ಗೆ ಮಾತನಾಡಿಲ್ಲ. ಬದಲಾಗಿ, ವಾಷಿಂಗ್ಟನ್‌ನಲ್ಲಿ ನೆರವೇರಿಸಿದ ನವೀಕರಣ ಕಾರ್ಯಗಳ ಮೇಲೆ ಬೆಳಕು ಚೆಲ್ಲಲು ಪ್ರಸಿದ್ಧ 'ಲಿಂಕನ್ ಮೆಮೋರಿಯಲ್ ರಿಫ್ಲೆಕ್ಟಿಂಗ್ ಪೂಲ್' ಸ್ಥಳವನ್ನು ಆಯ್ಕೆ ಮಾಡಿಕೊಂಡಿದ್ದು ವಿಶೇಷವಾಗಿತ್ತು.

ಟ್ರಂಪ್ ಕಳೆದ 32 ದಿನಗಳಲ್ಲಿ ರಿಪಬ್ಲಿಕನ್ ಪಕ್ಷದ ಭದ್ರಕೋಟೆಗಳಾಗಿರುವ 20 ರಾಜ್ಯಗಳಿಗೆ ಭೇಟಿ ನೀಡಿ 30 ಬೃಹತ್ ರ‍್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಆದರೆ, ಮಧ್ಯಂತರ ಚುನಾವಣೆಯಲ್ಲಿ ಡೆಮಾಕ್ರಟಿಕ್‌ ಪಕ್ಷವು ಗಮನಾರ್ಹ ಯಶಸ್ಸು ಸಾಧಿಸಲಿದ್ದು, ರಿಪಬ್ಲಿಕನ್‌ ಪಕ್ಷಕ್ಕೆ ತೀವ್ರ ಹಿನ್ನಡೆಯಾಗುವ ಸಾಧ್ಯತೆ ಇದೆ ಎಂದು ರಾಜಕೀಯ ವಿಶ್ಲೇಷಕರು ಭವಿಷ್ಯ ನುಡಿದಿದ್ದಾರೆ.

ಅಮೆರಿಕ ಸಂಸತ್‌ನಲ್ಲಿ ಡೆಮಾಕ್ರಟಿಕ್‌ ಪಕ್ಷವು ಅಂತಿಮವಾಗಿ ಮುನ್ನಡೆ ಸಾಧಿಸಿದರೂ, ಭಾರಿ ಬಹುಮತ ಪಡೆಯುವ ಸಾಧ್ಯತೆ ಕಡಿಮೆ ಎಂದೂ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಡೆಮಾಕ್ರಟಿಕ್‌ ನಾಯಕರು ಹೌಸ್‌ ಆಫ್‌ ರೆಪ್ರೆಸೆಂಟೇಟಿವ್ಸ್‌ (ಕೆಳಮನೆ) ಅನ್ನು ಮರಳಿ ತಮ್ಮ ತೆಕ್ಕೆಗೆ ತೆಗೆದುಕೊಳ್ಳಲಿದ್ದಾರೆ ಎಂದು ಹೆಚ್ಚಿನವರು ನಿರೀಕ್ಷಿಸುತ್ತಿದ್ದಾರೆ. ಆದರೆ, 5ರಿಂದ 20 ಸ್ಥಾನಗಳನ್ನು ಪಡೆಯಬಹುದು. ಇದು 2018ರ ಭಾರಿ ಗೆಲುವಿಗೆ ಹೋಲಿಸಿದರೆ ಕಡಿಮೆ. ಆಗ ಡೆಮಾಕ್ರಾಟ್‌ಗಳು 41 ಸ್ಥಾನಗಳನ್ನು ಗೆದ್ದಿದ್ದರು.

ಚುನಾವಣಾ ಪೂರ್ವ ಸಮೀಕ್ಷೆಗಳ ಪ್ರಕಾರ ಡೆಮಾಕ್ರಟ್‌ಗಳು ಮುನ್ನಡೆ ಸಾಧಿಸಿದರೆ, ಅದು ಟ್ರಂಪ್ ಅವರ ನಿರ್ಧಾರಗಳು ಮತ್ತು ಆಡಳಿತದ ಮೇಲಿನ ತನಿಖೆಯನ್ನು ತೀವ್ರಗೊಳಿಸಲಿದೆ. ಅವರ (ಟ್ರಂಪ್) ಕಾರ್ಯಸೂಚಿಗಳನ್ನು ಜಾರಿಗೊಳಿಸುವ ಸಾಮರ್ಥ್ಯಕ್ಕೆ ತಡೆ ಒಡ್ಡಲಿದೆ. ಆದಾಗ್ಯೂ, ಕಾರ್ಯಾಂಗದ ಆದೇಶಗಳ ಮೂಲಕ ಎರಡು ವರ್ಷಗಳ ಕಾಲ ಆಡಳಿತ ನಡೆಸುವ ಅಧಿಕಾರವನ್ನು ಹೊಂದಿರುತ್ತಾರೆ.

ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರು ಒಹಿಯೊ, ಮಿಚಿಗನ್ ಮತ್ತು ಜಾರ್ಜಿಯಾದಲ್ಲಿ ಬೃಹತ್

ರ‍್ಯಾಲಿಗಳನ್ನು ನಡೆಸುವ ಮೂಲಕ ಡೆಮಾಕ್ರಟಿಕ್ ಪ್ರಚಾರಕ್ಕೆ ಹೊಸ ಚೈತನ್ಯ ನೀಡಿದ್ದು, ಇದು ಟ್ರಂಪ್ ಅವರನ್ನು ಕಂಗಾಲಾಗಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani