Dailyhunt Logo
  • Light mode
    Follow system
    Dark mode
    • Play Story
    • App Story
ಅಮೆರಿಕದಲ್ಲಿ ವೀಸಾ ನಿಯಮ ಬದಲಾವಣೆ: ಭಾರತೀಯ ವಿದ್ಯಾರ್ಥಿಗಳಲ್ಲಿ ಮೂಡಿದ ಆತಂಕ

ಅಮೆರಿಕದಲ್ಲಿ ವೀಸಾ ನಿಯಮ ಬದಲಾವಣೆ: ಭಾರತೀಯ ವಿದ್ಯಾರ್ಥಿಗಳಲ್ಲಿ ಮೂಡಿದ ಆತಂಕ

ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ

ಅಮೆರಿಕದಲ್ಲಿ ವೀಸಾ ನಿಯಮ ಬದಲಾವಣೆ: ಭಾರತೀಯ ವಿದ್ಯಾರ್ಥಿಗಳಲ್ಲಿ ಮೂಡಿದ ಆತಂಕ

ಒಂದು ಸಾಲಿನಲ್ಲಿಅಮೆರಿಕದ ಹೊಸ ವೀಸಾ ನಿಯಮವು ವಿದ್ಯಾರ್ಥಿಗಳ 'ಎಫ್-1' ವೀಸಾ ಅವಧಿಯನ್ನು 4 ವರ್ಷಗಳಿಗೆ ಮಿತಿಗೊಳಿಸಿದ್ದು, ಇದು ಭಾರತೀಯ ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿಸಿದೆ.

ಪ್ರಮುಖ ಪ್ರಶ್ನೋತ್ತರ


ಅಮೆರಿಕದ ಹೊಸ ವೀಸಾ ನಿಯಮವೇನು?

ಹೊಸ ನಿಯಮದ ಪ್ರಕಾರ ಅಮೆರಿಕದಲ್ಲಿ ಎಫ್-1 ವಿದ್ಯಾರ್ಥಿ ವೀಸಾ ಹೊಂದಿರುವವರು ಗರಿಷ್ಠ 4 ವರ್ಷಗಳ ಕಾಲ ಮಾತ್ರ ಉಳಿಯಲು ಅವಕಾಶವಿರುತ್ತದೆ.


ಅವಧಿ ಮೀರಿದರೆ ಏನು ಮಾಡಬೇಕು?

ನಾಲ್ಕು ವರ್ಷಗಳಿಗಿಂತ ಹೆಚ್ಚಿನ ಅವಧಿಯ ಕೋರ್ಸ್ ಅಥವಾ ಸಂಶೋಧನೆಯಲ್ಲಿದ್ದರೆ, ವಿದ್ಯಾರ್ಥಿಗಳು ಹೋಮ್‌ಲ್ಯಾಂಡ್ ಸೆಕ್ಯುರಿಟಿ ಇಲಾಖೆಗೆ ಅರ್ಜಿ ಸಲ್ಲಿಸಿ ವೀಸಾ ವಿಸ್ತರಣೆ ಪಡೆಯುವುದು ಕಡ್ಡಾಯವಾಗಿದೆ.


ಗ್ರೇಸ್ ಪೀರಿಯಡ್‌ನಲ್ಲಿ ಆಗಿರುವ ಬದಲಾವಣೆಗಳೇನು?

ಶಿಕ್ಷಣದ ನಂತರ ದೇಶ ತೊರೆಯಲು ಅಥವಾ ವೀಸಾ ವರ್ಗಾಯಿಸಲು ನೀಡಲಾಗುತ್ತಿದ್ದ 60 ದಿನಗಳ ಗ್ರೇಸ್ ಪೀರಿಯಡ್ ಅನ್ನು ಈಗ 30 ದಿನಗಳಿಗೆ ಕಡಿತಗೊಳಿಸಲಾಗಿದೆ.


ಭಾರತೀಯ ವಿದ್ಯಾರ್ಥಿಗಳ ಮೇಲೆ ಇದರ ಪರಿಣಾಮವೇನು?

ಅಮೆರಿಕದಲ್ಲಿರುವ ಶೇ 30ರಷ್ಟು ವಿದೇಶಿ ವಿದ್ಯಾರ್ಥಿಗಳು ಭಾರತೀಯರಾಗಿದ್ದು, ಸಂಶೋಧನೆ ಮತ್ತು ಪಿಎಚ್‌ಡಿ ಮಾಡುವವರು ವೀಸಾ ವಿಸ್ತರಣೆಯ ತಾಂತ್ರಿಕ ವಿಳಂಬದಿಂದ ಕಾನೂನುಬಾಹಿರವಾಗಿ ಉಳಿಯುವ ಆತಂಕದಲ್ಲಿದ್ದಾರೆ.


ಈ ನಿಯಮ ತಕ್ಷಣವೇ ಜಾರಿಗೆ ಬರುತ್ತದೆಯೇ?

ಇಲ್ಲ, ಈ ನಿಯಮ ಅಂತಿಮಗೊಂಡಿದ್ದರೂ ಅಮೆರಿಕ ಕಾಂಗ್ರೆಸ್‌ನ ಪರಿಶೀಲನೆ ಮತ್ತು ಅನುಮೋದನೆ ಪಡೆದ ನಂತರವಷ್ಟೇ ಜಾರಿಗೆ ಬರಲಿದೆ.

ಪ್ರಮುಖ ಅಂಕಿಅಂಶಗಳು

3,31,000ಅಮೆರಿಕದಲ್ಲಿರುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆಶೇ 30ಅಮೆರಿಕದಲ್ಲಿರುವ ಒಟ್ಟು ವಿದೇಶಿ ವಿದ್ಯಾರ್ಥಿಗಳಲ್ಲಿ ಭಾರತೀಯರ ಪಾಲು4 ವರ್ಷಹೊಸ ನಿರ್ಬಂಧಿತ ವೀಸಾ ಅವಧಿ

ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ

ವಾಷಿಂಗ್ಟನ್: ಅಮೆರಿಕದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ಹಾಗೂ ಅಲ್ಲಿಗೆ ತೆರಳಲು ಬಯಸುತ್ತಿರುವ ವಿದೇಶಿ ವಿದ್ಯಾರ್ಥಿಗಳಿಗೆ ಡೊನಾಲ್ಡ್ ಟ್ರಂಪ್ ಆಡಳಿತವು ಭಾರಿ ಹೊಡೆತವನ್ನು ನೀಡಿದೆ.

ವಿದೇಶಿ ವಿದ್ಯಾರ್ಥಿಗಳ 'ಎಫ್-1' ವೀಸಾ ಅವಧಿಯನ್ನು ಗರಿಷ್ಠ 4 ವರ್ಷಗಳಿಗೆ ಮಿತಿಗೊಳಿಸುವ ಹೊಸ ನಿಯಮವನ್ನು ಅಮೆರಿಕದ ಹೋಮ್‌ಲ್ಯಾಂಡ್‌ ಸೆಕ್ಯುರಿಟಿ ಇಲಾಖೆ (ಡಿಎಚ್‌ಎಸ್) ಅಂತಿಮಗೊಳಿಸಿದೆ.

ಏನಿದು ಹೊಸ ನಿಯಮ?

ಅಮೆರಿಕ ಸರ್ಕಾರವು ಜಾರಿಗೆ ತರಲು ಉದ್ದೇಶಿಸಿರುವ ನೂತನ ನಿಯಮದ ಪ್ರಕಾರ, ಎಫ್-1 ವಿದ್ಯಾರ್ಥಿ ವೀಸಾ ಹೊಂದಿರುವ ವಿದೇಶಿ ವಿದ್ಯಾರ್ಥಿಗಳು ಅಮೆರಿಕದಲ್ಲಿ ಗರಿಷ್ಠ 4 ವರ್ಷಗಳ ಕಾಲ ಮಾತ್ರ ಇರಲು ಅವಕಾಶವಿರುತ್ತದೆ. ನಾಲ್ಕು ವರ್ಷಗಳಿಗಿಂತ ಹೆಚ್ಚಿನ ಅವಧಿಯ ಕೋರ್ಸ್ ಅಥವಾ ಸಂಶೋಧನೆಯಲ್ಲಿ ತೊಡಗಿರುವ ವಿದ್ಯಾರ್ಥಿಗಳು, ತಮ್ಮ ನಿಗದಿತ ಅವಧಿ ಮುಗಿಯುವ ಮುನ್ನವೇ ಅಮೆರಿಕದ ಹೋಮ್‌ಲ್ಯಾಂಡ್‌ ಸೆಕ್ಯುರಿಟಿ ಇಲಾಖೆಗೆ ಅರ್ಜಿ ಸಲ್ಲಿಸಿ ವೀಸಾ ವಿಸ್ತರಣೆ ಪಡೆದುಕೊಳ್ಳುವುದು ಕಡ್ಡಾಯ.

ಇದೇ ನಿಯಮವು 'ಜೆ-1' ಹಾಗೂ 'ಐ' ವೀಸಾ ಹೊಂದಿರುವವರಿಗೂ ಅನ್ವಯವಾಗಲಿದೆ.

ಹಳೆಯ-ಹೊಸ ನಿಯಮಕ್ಕೆ ಏನು ವ್ಯತ್ಯಾಸ?

ಹಳೆಯ ನಿಯಮ ಪ್ರಕಾರ ನಿರ್ದಿಷ್ಟ ಗಡುವು ಇರುತ್ತಿರಲಿಲ್ಲ. ಕೋರ್ಸ್ ಮುಗಿಯುವವರೆಗೆ ಅಮೆರಿಕದಲ್ಲೇ ಇರಬಹುದಿತ್ತು. ವಿದ್ಯಾರ್ಥಿ ಸಂಸ್ಥೆಯಲ್ಲಿ ದಾಖಲಾತಿ ಕಾಯ್ದುಕೊಂಡರೆ ಸ್ವಯಂಚಾಲಿತವಾಗಿ ವೀಸಾ ಮಾನ್ಯತೆ ಇರುತ್ತಿತ್ತು. ವಿಶ್ವವಿದ್ಯಾಲಯಗಳ ಮಟ್ಟದಲ್ಲೇ ದಾಖಲೆಗಳ ಉಸ್ತುವಾರಿ ನಡೆಯುತ್ತಿತ್ತು.

ಆದರೆ ಹೊಸ ವ್ಯವಸ್ಥೆಯಲ್ಲಿ ವೀಸಾ ನಾಲ್ಕು ವರ್ಷಗಳಿಗೆ ಮಿತಿಗೊಳಿಸಲಾಗಿದೆ. 4 ವರ್ಷ ಮೀರಿದರೆ ಡಿಎಚ್‌ಎಸ್‌ನಿಂದ ಪ್ರತ್ಯೇಕ ಅನುಮತಿ/ವಿಸ್ತರಣೆ ಪಡೆಯುವುದು ಕಡ್ಡಾಯ.

ಇನ್ನು ಶಿಕ್ಷಣ ಮುಗಿದ ನಂತರ ದೇಶ ತೊರೆಯಲು ಅಥವಾ ಕೆಲಸದ ವೀಸಾಗೆ ಬದಲಾಯಿಸಲು ಈವರೆಗೆ ನೀಡಲಾಗುತ್ತಿದ್ದ 60 ದಿನಗಳ ಗ್ರೇಸ್ ಪೀರಿಯಡ್‌ ಅನ್ನು 30 ದಿನಗಳಿಗೆ ಕಡಿತಗೊಳಿಸಲಾಗಿದೆ.

ಭಾರತೀಯ ವಿದ್ಯಾರ್ಥಿಗಳಲ್ಲಿ ಆತಂಕ?

ಅಮೆರಿಕದಲ್ಲಿ ಕಲಿಯುತ್ತಿರುವ ವಿದೇಶಿ ವಿದ್ಯಾರ್ಥಿಗಳಲ್ಲಿ ಭಾರತೀಯರ ಸಂಖ್ಯೆ ಹೆಚ್ಚಾಗಿದೆ.

'ಓಪನ್ ಡೋರ್ಸ್ 2024' ವರದಿ ಪ್ರಕಾರ, 2023-24ರ ಶೈಕ್ಷಣಿಕ ವರ್ಷದಲ್ಲಿ 3,31,000ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಅಮೆರಿಕದ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇದು ಅಮೆರಿಕದಲ್ಲಿರುವ ಒಟ್ಟು ವಿದೇಶಿ ವಿದ್ಯಾರ್ಥಿಗಳ ಪೈಕಿ ಸುಮಾರು ಶೇ 30ರಷ್ಟಾಗಿದೆ.

ಪಿಎಚ್‌ಡಿ, ವೈದ್ಯಕೀಯ ಶಿಕ್ಷಣ, ಸಂಶೋಧನಾ ಆಧಾರಿತ ಸ್ನಾತಕೋತ್ತರ ಹಾಗೂ ಎಂಜಿನಿಯರಿಂಗ್ ಕೋರ್ಸ್‌ಗಳು ಪೂರ್ಣಗೊಳ್ಳಲು ಸಾಮಾನ್ಯವಾಗಿ 4ಕ್ಕಿಂತ ಹೆಚ್ಚು ವರ್ಷಗಳು ಬೇಕಾಗುತ್ತವೆ.

ವೀಸಾ ವಿಸ್ತರಣೆಗೆ ಅರ್ಜಿ ಸಲ್ಲಿಸಿದಾಗ ಸರ್ಕಾರಿ ಹಂತದಲ್ಲಿ ವಿಳಂಬವಾದರೆ ಅಥವಾ ತಾಂತ್ರಿಕ ತೊಂದರೆ ಎದುರಾದರೆ, ವಿದ್ಯಾರ್ಥಿಗಳು ಕಾನೂನುಬಾಹಿರವಾಗಿ ನೆಲೆಸಿದಂತೆ ಪರಿಗಣಿಸುವ ಅಪಾಯವಿರುತ್ತದೆ.

ಅಮೆರಿಕ ಸರ್ಕಾರದ ವಾದವೇನು?

ವೀಸಾ ವ್ಯವಸ್ಥೆಯ ದುರ್ಬಳಕೆ ಮತ್ತು ವಂಚನೆಗಳನ್ನು ತಡೆಯಲು ಹಾಗೂ ದೇಶದ ಆಂತರಿಕ ಭದ್ರತೆಯನ್ನು ಬಲಪಡಿಸಲು ಈ ಕ್ರಮ ಅಗತ್ಯ ಎಂದು ಟ್ರಂಪ್ ಆಡಳಿತ ಪ್ರತಿಪಾದಿಸಿದೆ.

ವಿಶ್ವವಿದ್ಯಾಲಯಗಳ ಕಳವಳ:

ಈ ನಿಯಮದಿಂದಾಗಿ ಅಂತರರಾಷ್ಟ್ರೀಯ ವಿದ್ಯಾರ್ಥಿಗಳಲ್ಲಿ ಅನಗತ್ಯ ಗೊಂದಲ ಹಾಗೂ ಅಭದ್ರತೆ ಸೃಷ್ಟಿಯಾಗುತ್ತದೆ. ಇದರಿಂದಾಗಿ ಪ್ರತಿಭಾವಂತ ವಿದೇಶಿ ವಿದ್ಯಾರ್ಥಿಗಳು ಅಮೆರಿಕದ ಬದಲಿಗೆ ಕೆನಡಾ, ಯುಕೆ, ಅಥವಾ ಯುರೋಪ್ ದೇಶಗಳತ್ತ ಮುಖ ಮಾಡಬಹುದು ಎಂದು ಶಿಕ್ಷಣ ತಜ್ಞರು ಎಚ್ಚರಿಸಿದ್ದಾರೆ.

ಇದು ತಕ್ಷಣವೇ ಜಾರಿಗೆ ಬರುತ್ತದೆಯೇ?

ಇಲ್ಲ. ಅಮೆರಿಕ ಭದ್ರತಾ ಇಲಾಖೆಯು ಈ ನಿಯಮವನ್ನು ಅಂತಿಮಗೊಳಿಸಿದೆಯಾದರೂ, ಇದು ಜಾರಿಗೆ ಬರುವ ಮುನ್ನ ಅಮೆರಿಕ ಕಾಂಗ್ರೆಸ್‌ನ ಪರಿಶೀಲನೆಗೆ ಒಳಪಡಬೇಕಿದೆ. ಸಂಸತ್ತಿನ ಅನುಮೋದನೆ ದೊರೆತು ಅಧಿಕೃತ ದಿನಾಂಕ ಘೋಷಣೆಯಾಗುವವರೆಗೂ ಪ್ರಸ್ತುತ ಚಾಲ್ತಿಯಲ್ಲಿರುವ 'ಡ್ಯುರೇಷನ್ ಆಫ್ ಸ್ಟೇಟಸ್' ವ್ಯವಸ್ಥೆಯೇ ಮುಂದುವರೆಯಲಿದೆ.

ಅಮೆರಿಕದೊಂದಿಗೆ ಮಾತುಕತೆ

ವೀಸಾಕ್ಕೆ ಸಂಬಂಧಿಸಿ ಅಮೆರಿಕ ಜಾರಿಗೊಳಿಸಲಿರುವ ಹೊಸ ನಿಯಮಗಳು ಭಾರತೀಯರ ಮೇಲೆ ಪರಿಣಾಮ ಬೀರಲಿವೆ. ಈ ವಿಚಾರವಾಗಿ ಅಮೆರಿಕದೊಂದಿಗೆ ಮಾತುಕತೆ ನಡೆಸುತ್ತಿರುವುದಾಗಿ ಭಾರತದ ವಿದೇಶಾಂಗ ಇಲಾಖೆ ತಿಳಿಸಿದೆ.

'ವೀಸಾಕ್ಕೆ ಸಂಬಂಧಿಸಿದ ಹೊಸ ನಿಯಮಗಳ ಕುರಿತ ವರದಿಗಳನ್ನು ಗಮನಿಸಿದ್ದೇವೆ. ಇವುಗಳಿಂದ ಅಮೆರಿಕಕ್ಕೆ ಭೇಟಿ ನೀಡುವ ಭಾರತೀಯರು ಸಂಕಷ್ಟ ಎದುರಿಸಬೇಕಾಗುತ್ತದೆ. ನಿಯಮಗಳನ್ನು ಸರಳಗೊಳಿಸುವ ಕುರಿತಂತೆ ಅಮೆರಿಕ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ' ಎಂದು ವಿದೇಶಾಂಗ ಇಲಾಖೆಯ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.

(ಆಧಾರ: WION ನ್ಯೂಸ್)

ಜೆನೆರಿಕ್ ಔಷಧಗಳ ಮೇಲೆ ಹಂತ ಹಂತವಾಗಿ ಟ್ರಂಪ್ ಸುಂಕ: ಭಾರತದ ಮೇಲೆ ಪರಿಣಾಮ ಏನು?ಭಾರತೀಯರು ಸೇರಿ 7 ದೇಶಗಳ ಪ್ರಜೆಗಳಿಗೆ ಯುಎಇಯಲ್ಲಿ 'ವೀಸಾ ಆನ್ ಅರೈವಲ್' ಸೌಲಭ್ಯ
Dailyhunt
Disclaimer: This content has not been generated, created or edited by Dailyhunt. Publisher: Prajavani