ವಾಷಿಂಗ್ಟನ್: ಟೆಕ್ಸಾಸ್‌ನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಹೊಸ ತೈಲ ಸಂಸ್ಕರಣಾ ಘಟಕಕ್ಕೆ ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಕಂಪನಿ ಹೂಡಿಕೆ ಮಾಡಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.
ಸಾಮಾಜಿಕ ಮಾಧ್ಯಮ 'ಟ್ರೂತ್'ನಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, 'ಹೊಸ ತೈಲ ಸಂಸ್ಕರಣಾ ಘಟಕದಿಂದ ಅಮೆರಿಕದ ಮಾರುಕಟ್ಟೆಗಳಿಗೆ ಇಂಧನ ಸರಬರಾಜು ಮಾಡಲಾಗುತ್ತದೆ.
ಇಂಧನ ಉತ್ಪಾದನೆ ಹೆಚ್ಚಿಸುವುದರ ಜೊತೆಗೆ ರಾಷ್ಟ್ರೀಯ ಭದ್ರತೆಯನ್ನು ಬಲಪಡಿಸುತ್ತದೆ' ಎಂದಿದ್ದಾರೆ.
'ಅಮೆರಿಕ ನಿಜವಾದ ಇಂಧನ ಪ್ರಾಬಲ್ಯಕ್ಕೆ ಮರಳುತ್ತಿದೆ ಎಂದು ನಾನು ಹೆಮ್ಮೆಯಿಂದ ಘೋಷಿಸುತ್ತೇನೆ. ಟೆಕ್ಸಾಸ್‌ನ ಬ್ರೌನ್ಸ್‌ವಿಲ್ಲೆ ಬಂದರಿನಲ್ಲಿ ಹೊಸ ತೈಲ ಸಂಸ್ಕರಣಾ ಘಟಕ ತೆರೆಯಲಾಗುತ್ತದೆ. ಇದು ಐತಿಹಾಸಿಕ 300 ಬಿಲಿಯನ್ (₹27.50 ಲಕ್ಷ ಕೋಟಿ) ಡಾಲರ್ ಒಪ್ಪಂದವಾಗಿದೆ. ಅಮೆರಿಕದ ಇತಿಹಾಸದಲ್ಲಿಯೇ ಅತಿದೊಡ್ಡದು, ಅಮೆರಿಕದ ಕಾರ್ಮಿಕರು, ಇಂಧನ ಮತ್ತು ದಕ್ಷಿಣ ಟೆಕ್ಸಾಸ್‌ನ ಮಹಾನ್ ಜನರ ದೊಡ್ಡ ಗೆಲುವು ಎಂದರೆ ತಪ್ಪಲ್ಲ. ಈ ಅಗಾಧ ಹೂಡಿಕೆಗಾಗಿ ಭಾರತದಲ್ಲಿನ ನಮ್ಮ ಪಾಲುದಾರರು ಮತ್ತು ಅತಿದೊಡ್ಡ ಖಾಸಗಿ ಒಡೆತನದ ಇಂಧನ ಕಂಪನಿ ರಿಲಯನ್ಸ್‌ಗೆ ಧನ್ಯವಾದ' ಎಂದು ಟ್ರಂಪ್ ತಿಳಿಸಿದ್ದಾರೆ.
ಹೊಸ ತೈಲ ಸಂಸ್ಕರಣಾ ಘಟಕವು ಶತಕೋಟಿ ಡಾಲರ್‌ನಷ್ಟು ವಿಶಾಲ ಮಾರುಕಟ್ಟೆ ತೆರೆದುಕೊಳ್ಳಲಿದೆ. ಜತೆಗೆ, ಈ ಪ್ರದೇಶದಲ್ಲಿ ಸಾವಿರಾರು ಉದ್ಯೋಗಾವಕಾಶ ಸೃಷ್ಟಿಯಾಗಲಿವೆ ಎಂದು ಟ್ರಂಪ್ ಹೇಳಿದ್ದಾರೆ.
ಹೊಸ ಸಂಸ್ಕರಣಾಗಾರ ನಿರ್ಮಿಸುವುದರಿಂದ ದೇಶದಲ್ಲಿ ಇಂಧನ ಉತ್ಪಾದನೆ ಹೆಚ್ಚಿಸುತ್ತದೆ. ಆರ್ಥಿಕತೆ ಶತಕೋಟಿ ಡಾಲರ್ ತಲುಪಿಸುತ್ತದೆ. ವಿಶ್ವದ ಅತ್ಯಂತ ಸ್ವಚ್ಛವಾದ ಸಂಸ್ಕರಣಾಗಾರವಾಗಿರಲಿದ್ದು, ಜಾಗತಿಕ ರಫ್ತಿಗೆ ಶಕ್ತಿ ತುಂಬುತ್ತದೆ. ಅಮೆರಿಕ ಮೊದಲು, ಯಾವಾಗಲೂ! ಎಂದು ಅವರು ವಿವರಿಸಿದ್ದಾರೆ.
ಪಶ್ಚಿಮ ಏಷ್ಯಾ ಸಂಘರ್ಷದ ನಡುವೆಯೇ ಅಮೆರಿಕ ಮತ್ತು ರಿಲಯನ್ಸ್ ಮಧ್ಯೆ ಒಪ್ಪಂದ ಏರ್ಪಟ್ಟಿದೆ.


