ನವದೆಹಲಿ: 'ರಾಷ್ಟ್ರೀಯ ಸ್ವಯಂಸೇವಕ ಸಂಘವು (ಆರ್‌ಎಸ್‌ಎಸ್) 'ರಾಷ್ಟ್ರೀಯ ಶರಣಾಗತಿ ಸಂಘ'ವಾಗಿ ಮಾರ್ಪಟ್ಟಿದೆ. ರಾಮ್ ಮಾಧವ್ ಅವರೇ ಆರ್‌ಎಸ್‌ಎಸ್‌ನ ನಕಲಿ ರಾಷ್ಟ್ರೀಯತೆ ಹಾಗೂ ಅಮೆರಿಕದ ವಿಷಯದಲ್ಲಿ ಅದರ ಶುದ್ಧ ಗುಲಾಮಗಿರಿಯನ್ನು ಬಹಿರಂಗಪಡಿಸಿದ್ದಾರೆ' ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಅಮೆರಿಕದಲ್ಲಿ ಇತ್ತೀಚಿಗೆ ಹಡ್ಸನ್ ಇನ್‌ಸ್ಟಿಟ್ಯೂಟ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಆರ್‌ಎಸ್‌ಎಸ್ ಮುಖಂಡ ರಾಮ್ ಮಾಧವ್ ಅವರು ಮಾತನಾಡಿದ ವಿಡಿಯೊವನ್ನು ಹಂಚಿಕೊಂಡು, ರಾಹುಲ್ ಗಾಂಧಿ ಈ ಆರೋಪ ಮಾಡಿದ್ದಾರೆ.
'ಅಮೆರಿಕದ ಒತ್ತಡದಂತೆ ಇರಾನ್ ಹಾಗೂ ರಷ್ಯಾದಿಂದ ಕಚ್ಚಾತೈಲ ಖರೀದಿಯನ್ನು ನಿಲ್ಲಿಸಲು ಭಾರತ ನಿರ್ಧರಿಸಿದೆ. ಅಮೆರಿಕವು ವಿಧಿಸಿರುವ ಹೆಚ್ಚಿನ ಸುಂಕವನ್ನು ಒಪ್ಪಿಕೊಂಡಿದೆ' ಎಂದು ರಾಮ್ ಮಾಧವ್ ಅವರು ಹೇಳಿದ ಮಾತು ವಿಡಿಯೊದಲ್ಲಿದೆ.
ಈ ವಿಚಾರ ವಿವಾದ ಸ್ವರೂಪ ಪಡೆಯುತ್ತಿದ್ದಂತೆಯೇ, ರಾಮ್ ಮಾಧವ್ ಕ್ಷಮೆ ಕೋರಿ ಸ್ಪಷ್ಟನೆ ನೀಡಿದ್ದಾರೆ.
'ನಾನು ಹೇಳಿರುವುದು ವಾಸ್ತವವಾಗಿ ತಪ್ಪಾಗಿದೆ. ರಷ್ಯಾದಿಂದ ಕಚ್ಚಾತೈಲ ಖರೀದಿಯನ್ನು ಆಮದು ಮಾಡುವುದನ್ನು ನಿಲ್ಲಿಸಲು ಒಪ್ಪಿಲ್ಲ, ಅಮೆರಿಕ ವಿಧಿಸಿರುವ ಶೇಕಡ 50ರಷ್ಟು ಸುಂಕಕ್ಕೆ ಭಾರತವು ತೀವ್ರ ಪ್ರತಿಭಟನೆ ದಾಖಲಿಸಿದೆ' ಎಂದು ರಾಮ್ ಮಾಧವ್ ಹೇಳಿದ್ದಾರೆ.
ವೇಣುಗೋಪಾಲ್ ಆಕ್ರೋಶ: 'ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಹುದ್ದೆಯಲ್ಲಿ ಮುಂದುವರಿಯುವ ಅಧಿಕಾರವನ್ನು ಕಳೆದುಕೊಂಡಿದ್ದಾರೆ. ಮೋದಿ ಅವರು ವಾಷಿಂಗ್ಟನ್‌ನ ತಾಳಕ್ಕೆ ತಕ್ಕಂತೆ ನೃತ್ಯ ಮಾಡುತ್ತಿದ್ದಾರೆ ಎನ್ನುವುದು ರಾಮ್ ಮಾಧವ್ ಹೇಳಿಕೆಯಿಂದ ಸಾಬೀತಾಗಿದೆ' ಎಂದು ಕಾಂಗ್ರೆಸ್ ನಾಯಕ ಕೆ.ಸಿ.ವೇಣುಗೋಪಾಲ್ ಟೀಕಿಸಿದ್ದಾರೆ.
'ಜಾಗತಿಕ ವೇದಿಕೆಯಲ್ಲಿ ಭಾರತವು ತನ್ನ ಸ್ವತಂತ್ರ ಧ್ವನಿಯನ್ನು ಕಳೆದುಕೊಂಡಿದೆ. ಒಂದು ಕಾಲದಲ್ಲಿ ಅಮೆರಿಕ ಏಳನೇ ನೌಕಪಡೆಯು ಬಂಗಾಳದಲ್ಲಿತ್ತು. ಆಗ ಭಾರತವು ಅದಕ್ಕೆ ಮಣಿದಿರಲಿಲ್ಲ. ರಾಜಿ ಮಾಡಿಕೊಂಡ ಪ್ರಧಾನಿ ಮೋದಿ ಅವರು ಭಾರತದ ಸಾರ್ವಭೌಮತ್ವವನ್ನು ಅಮೆರಿಕಕ್ಕೆ ಹಸ್ತಾಂತರಿಸಿದ್ದಾರೆ' ಎಂದು ಕಿಡಿಕಾರಿದ್ದಾರೆ.

