ಟೆಹರಾನ್: ಅಮೆರಿಕದ ಜೊತೆ ಯಾವುದೇ ಒಪ್ಪಂದ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಇರಾನ್ ಸಂಸತ್ತಿನ ಉಪ ಸಭಾಪತಿ ಹಮೀದ್‌ರೆಜಾ ಹಾಜಿಬಾಬಾಯ್ ಸ್ಪಷ್ಟಪಡಿಸಿದ್ದಾರೆ. ಅಲ್ಲದೇ, ವಿಶ್ವದ ಪ್ರಮುಖ ತೈಲ ಸಾಗಣೆ ಮಾರ್ಗವಾಗಿರುವ ಹೊರ್ಮುಜ್ ಜಲಸಂಧಿ ತಮ್ಮ 'ಸೇನಾ ಶಕ್ತಿಯ ಪ್ರಮುಖ ಕೇಂದ್ರ' ಎಂದು ಅವರು ಬಣ್ಣಿಸಿದ್ದಾರೆ.
ಸೋಮವಾರ ನಡೆದ ಸಂಸತ್ತಿನ ಸಭೆಯಲ್ಲಿ ಮಾತನಾಡಿದ ಅವರು, 'ಹಿಜ್ಬುಲ್ಲಾ ನಮಗೆ ಬೆಂಬಲ ನೀಡಿದ್ದು, ಜಾಗತಿಕ ಮಟ್ಟದಲ್ಲಿ ಇರಾನ್‌ನ ಶಕ್ತಿಯನ್ನು ಹೆಚ್ಚಿಸಿದೆ. ಇದರಿಂದಾಗಿ ಅಮೆರಿಕ ಮತ್ತು ಇಸ್ರೇಲ್ ಹಿಂದೆ ಸರಿಯುವಂತಾಗಿದೆ' ಎಂದಿದ್ದಾರೆ. ಈ ಬಗ್ಗೆ ಇರಾನ್‌ನ ಸುದ್ದಿ ಸಂಸ್ಥೆ 'ಐಎಸ್‌ಎನ್‌ಎ' ವರದಿ ಮಾಡಿದೆ.
ಅಮೆರಿಕದ ವಿರುದ್ಧ ವಾಗ್ದಾಳಿ
ಅಮೆರಿಕದ ರಾಜಕೀಯ ನೀತಿ ವಿರುದ್ಧ ವಾಗ್ದಾಳಿ ನಡೆಸಿದ ಹಾಜಿಬಾಬಾಯ್, 'ತಮಗೆ ಬೇಕಾದಾಗ ಯುದ್ಧ ಸಾರುವುದು, ಕದನ ವಿರಾಮ ಘೋಷಿಸುವುದನ್ನು ಇರಾನ್ ಒಪ್ಪುವುದಿಲ್ಲ. ಅಮೆರಿಕದೊಂದಿಗೆ ಯುದ್ಧ ಮತ್ತು ಶಾಂತಿ ಮಾತುಕತೆ ಎರೆಡೂ ಒಂದೇ ರೀತಿಯಿದೆ. ಹೀಗಾಗಿ ನಾವು ಅದರರೊಂದಿಗೆ ಎಂದಿಗೂ ಒಪ್ಪಂದಕ್ಕೆ ಬರಲು ಸಾಧ್ಯವಿಲ್ಲ' ಎಂದಿದ್ದಾರೆ.
ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾಗಿರುವ 'ಹೊರ್ಮುಜ್ ಜಲಸಂಧಿ' ಕುರಿತು ಮಾತನಾಡಿದ ಅವರು, 'ಅದು ನಮ್ಮ ಸೇನಾ ಶಕ್ತಿಯ ಪ್ರಮುಖ ಕೇಂದ್ರವಾಗಿದೆ. ಈ ಶಕ್ತಿಯನ್ನು ಇರಾನ್ ಖಂಡಿತವಾಗಿಯೂ ರಕ್ಷಿಸಲಿದೆ' ಎಂದಿದ್ದಾರೆ.
ಉಕ್ರೇನ್‌ಗೆ ಎಚ್ಚರಿಕೆ
ಇದೇ ವೇಳೆ, ಕ್ಯಾಸ್ಪಿಯನ್ ಸಮುದ್ರದಲ್ಲಿ ಇರಾನ್ ಹಡಗುಗಳ ಮೇಲಿನ ಉಕ್ರೇನ್ ದಾಳಿಯನ್ನು ಖಂಡಿಸಿದ ಅವರು, ನಿಮ್ಮ ಕಡೆಯಿಂದ ಯಾವುದೇ ರೀತಿಯ ಕಿಡಿಗೇಡಿತನ ನಡೆದರೆ ಇರಾನ್‌ನಿಂದ ಅದಕ್ಕೆ ತಕ್ಕ ಪ್ರತ್ಯುತ್ತರ ಸಿಗಲಿದೆ ಎಂದೂ ಎಚ್ಚರಿಸಿದ್ದಾರೆ.
ಆಧಾರ: ಎಎನ್‌ಐ

