ಟೆಹರಾನ್: ಅಮೆರಿಕದೊಂದಿಗಿನ ಕದನ ವಿರಾಮದ ವಿಷಯದಲ್ಲಿ ಇರಾನ್ 'ತನ್ನ ಮಾತನ್ನು ಉಳಿಸಿಕೊಂಡಿದೆ' ಎಂದು ಅಲ್ಲಿನ ವಿದೇಶಾಂಗ ಸಚಿವ ಸೈಯದ್ ಅಬ್ಬಾಸ್ ಅರಾಘ್ಚಿ ಹೇಳಿದ್ದಾರೆ.
ನಾವು ಈಗಾಗಲೇ ಹೇಳಿರುವಂತೆ ಮಧ್ಯಂತರ ಕದನ ವಿರಾಮ ಮುಗಿದಿದೆ. ಮಾತುಕತೆ ಮುಂದುವರಿಸುವಂತೆ ಇರಾನ್ ನಮ್ಮನ್ನು ಕೇಳಿದ್ದು, ಅದಕ್ಕೆ ಒಪ್ಪಿಕೊಂಡಿದ್ದೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದರು.
ಅದರ ಬಳಿಕ ಅಬ್ಬಾಸ್ ಅರಾಘ್ಚಿ ಈ ಕುರಿತು ಮಾತನಾಡಿದ್ದಾರೆ.
'ಕದನ ವಿರಾಮ ಒಪ್ಪಂದವನ್ನು ನಾವು ಇದುವರೆಗೂ ಪಾಲಿಸಿದ್ದೇವೆ. ಆದರೆ, ಅಮೆರಿಕದ ಖಜಾನೆ ಕಾರ್ಯದರ್ಶಿಯೇ ಒಪ್ಪಂದವನ್ನು ಉಲ್ಲಂಘಿಸಿದ್ದಾರೆ' ಎಂದು ಅಬ್ಬಾಸ್ ಅರಾಘ್ಚಿ ಅವರು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಯಾವುದೇ ಪರಿಸ್ಥಿತಿಯಲ್ಲೂ ನಾವು ಅಮೆರಿಕಗೆ ಶರಣಾಗುವುದಿಲ್ಲ. ಅವರು ಮತ್ತೆ ದಾಳಿ ನಡೆಸಿದರೆ, ತಕ್ಕ ಪ್ರತ್ಯುತ್ತರ ನೀಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇರಾನ್ ಮೇಲಿನ ದಾಳಿಯನ್ನು ನಿಲ್ಲಿಸಲಾಗಿದೆ ಎಂದು ಅಮೆರಿಕ ಸೇನೆ ಘೋಷಣೆ ಮಾಡಿದ ಬಳಿಕವೂ, ಹಲವೆಡೆ ಸ್ಫೋಟದ ಸದ್ದು ಕೇಳಿಬಂದಿವೆ. ಹಾಗಾಗಿ, ಪಶ್ಚಿಮ ಏಷ್ಯಾ ಭಾಗದಲ್ಲಿ ಮತ್ತೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ.

