ವಾಷಿಂಗ್ಟನ್: 'ಲೆಬೆನಾನ್ ದಕ್ಷಿಣಕ್ಕಿರುವ ಪ್ರದೇಶಗಳ ಮೇಲೆ ಇಸ್ರೇಲ್ ಪಡೆಗಳು ಭಾನುವಾರ ನಡೆಸಿದ ದಾಳಿಯಿಂದ, ಇರಾನ್ ಜತೆಗೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕುವ ಪ್ರಕ್ರಿಯೆ ವಿಳಂಬವಾಗಿದೆ. ಆದರೆ ಅದು ಕೆಲವೇ ಗಂಟೆಗಳಲ್ಲಿ ನಡೆಯಲಿದೆ' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ಹೇಳಿದ್ದಾರೆ.
ಇಸ್ರೇಲ್ ಹೊಸದಾಗಿ ದಾಳಿ ಮಾಡಿದ್ದರಿಂದ ಸಹಿ ಮಾಡುವುದು ಕೆಲ ಗಂಟೆಗಳ ಕಾಲ ವಿಳಂಬವಾಗಿದೆ. ಇಷ್ಟರಲ್ಲಾಗಲೇ ಈ ಪ್ರಕ್ರಿಯೆ ಮುಗಿಯಬೇಕಿತ್ತು ಎಂದು ಟ್ರಂಪ್ 'ಆಕ್ಸಿಯಾಸ್' ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
'ಲೆಬನಾನ್ ಸೇರಿದಂತೆ ಪಶ್ಚಿಮ ಏಷ್ಯಾದಲ್ಲಿ ಶಾಂತಿ ತರುವ ಒಪ್ಪಂದಕ್ಕೆ ನಾವು ತುಂಬಾ ಸನಿಹದಲ್ಲಿದ್ದೇವೆ. ಎಲ್ಲ ಕಡೆಯವರೂ ಸಂಯಮ ಕಾಯ್ದು
ಕೊಳ್ಳಬೇಕು' ಎಂದು ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಹೇಳಿದ್ದಾರೆ.
ಬೆಂಜಮಿನ್ ವಿರುದ್ಧ ಕಿಡಿ: 'ಇಸ್ರೇಲ್ ನಡೆಸಿದ ಹೊಸ ದಾಳಿಯಿಂದ ಆಘಾತಕ್ಕೊಳಗಾಗಿದ್ದೇನೆ. ಅದು ನನ್ನನ್ನು ಬೆಚ್ಚಿಬೀಳಿಸಿದೆ. ಇದಕ್ಕಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧ ಕೋಪಗೊಂಡಿದ್ದೇನೆ' ಎಂದು ಟ್ರಂಪ್ ಆಕ್ರೋಶ ಹೊರಹಾಕಿದ್ದಾರೆ.
'ನೀವು ಏನು ಮಾಡುತ್ತಿದ್ದೀರಿ? ಇಂತಹ ದಾಳಿ ಏಕೆ ಮಾಡಿದಿರಿ? ನಿಮ್ಮ ಈ ನಡೆಯಿಂದ ನನಗೆ ಕೋಪ ಬಂದಿದೆ. ಇದು ಸರಿಯಲ್ಲ' ಎಂದು ನೆತನ್ಯಾಹು ಅವರಿಗೆ ಕರೆ ಮಾಡಿ ಬೇಸರ ವ್ಯಕ್ತ
ಪಡಿಸಿದ್ದಾಗಿ ಟ್ರಂಪ್ ಹೇಳಿದ್ದಾರೆ' ಎಂದು 'ಆಕ್ಸಿಯಾಸ್' ವರದಿ ಮಾಡಿದೆ. ಈ ವೇಳೆ ಟ್ರಂಪ್ ಅವರು ಅವಾಚ್ಯ ಪದಗಳನ್ನೂ ಬಳಸಿದ್ದಾರೆ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ಅಮೆರಿಕದ ಬದ್ಧತೆ ಪ್ರಶ್ನಿಸಿದ ಇರಾನ್
'ಅಮೆರಿಕದ ಮಿತ್ರ ರಾಷ್ಟ್ರ ಇಸ್ರೇಲ್, ಬೈರೂತ್ ಮೇಲೆ ದಾಳಿ ನಡೆಸಿದೆ. ಹೀಗಾಗಿ ಅಮೆರಿಕದೊಂದಿಗೆ ಶಾಂತಿ ಒಪ್ಪಂದ ಕುರಿತ ಮಾತುಕತೆ ನಡೆಸುವುದರಲ್ಲಿ ಯಾವುದೇ ಅರ್ಥ ಇಲ್ಲ' ಎಂದು ಇರಾನ್‌ನ ಮುಖ್ಯ ಮಧ್ಯಸ್ಥಿಕೆದಾರ ಮೊಹಮ್ಮದ್ ಬಾಖಿರ್ ಖಾಲೀಬಾಫ್ ಹೇಳಿದ್ದಾರೆ.
ಈ ಕುರಿತು 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಅವರು, 'ತಾನು ಕೊಟ್ಟ ಭರವಸೆಗಳನ್ನು ಈಡೇರಿಸಲು ಅಮೆರಿಕಕ್ಕೆ ಇಚ್ಛಾಶಕ್ತಿ ಅಥವಾ ಸಾಮರ್ಥ್ಯ ಇಲ್ಲ ಎಂಬುದನ್ನು ಇಸ್ರೇಲ್ ಪಡೆಗಳು ನಡೆಸಿರುವ ಈ ದಾಳಿ ತೋರಿಸಿದೆ' ಎಂದು ಟೀಕಿಸಿದ್ದಾರೆ.
'ಶಾಂತಿ ಒಪ್ಪಂದಕ್ಕೆ ಭಾನುವಾರ ಸಹಿ ಹಾಕಲಾಗುತ್ತದೆ' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಮಧ್ಯಸ್ಥಿಕೆ ವಹಿಸಿರುವ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಹೇಳಿದ್ದರು.
ಅಂತಿಮ ಕರಡು ಸಿದ್ಧಪಡಿಸಿರುವ ಇರಾನ್
ಅಮೆರಿಕದೊಂದಿಗೆ ಮಾಡಿಕೊಳ್ಳಲಿರುವ ಒಪ್ಪಂದದ ಅಂತಿಮ ಕರಡುವನ್ನು ಇರಾನ್ ಸಿದ್ಧಪಡಿಸಿದ್ದಾಗಿ ಹಿರಿಯ ಅಧಿಕಾರಿಯೊಬ್ಬರು ಭಾನುವಾರ ಹೇಳಿದ್ದಾರೆ. ಅಣ್ವಸ್ತ್ರ ಕಾರ್ಯಕ್ರಮದಲ್ಲಿ ಯಥಾಸ್ಥಿತಿ ಕಾಪಾಡಿಕೊಳ್ಳುವುದು ಹಡಗುಗಳ ಸಂಚಾರಕ್ಕೆ ಹೊರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸುವುದು ಸೇರಿ ಹಲವಾರು ಅಂಶಗಳನ್ನು ಕರಡು ಒಳಗೊಂಡಿದೆ. ಎರಡೂ ದೇಶಗಳು ಒಪ್ಪಿದ ಬಳಿಕ 60 ದಿನಗಳಲ್ಲಿ ಒಪ್ಪಂದವನ್ನು ಅಂತಿಮಗೊಳಿಸುವ ಕುರಿತು ಚರ್ಚೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಕರಡುವಿನಲ್ಲಿರುವ ಪ್ರಮುಖ ಅಂಶಗಳು
ಎಲ್ಲ ವಾಣಿಜ್ಯ ಹಡಗುಗಳ ಸಂಚಾರಕ್ಕೆ ಹೊರ್ಮುಜ್ ಜಲಸಂಧಿಯನ್ನು ಇರಾನ್ ತಕ್ಷಣವೇ ಮುಕ್ತಗೊಳಿಸುವುದು. ಇರಾನ್‌ನ ಬಂದರುಗಳ ಮೇಲೆ ವಿಧಿಸಿರುವ ನಿರ್ಬಂಧವನ್ನು ಅಮೆರಿಕ ತೆರವುಗೊಳಿಸಬೇಕು. ಈ ಪ್ರಕ್ರಿಯೆಯನ್ನು ಒಪ್ಪಂದಕ್ಕೆ ಸಹಿ ಹಾಕಿದ 30 ದಿನಗಳ ಒಳಗಾಗಿ ಪೂರ್ಣಗೊಳಿಸಬೇಕು
ಒಪ್ಪಂದ ಅಂತಿಮಗೊಳ್ಳುವವರೆಗೆ ಇರಾನ್ ಮೇಲೆ ಅಮೆರಿಕ ಯಾವುದೇ ರೀತಿಯ ಹೊಸ ನಿರ್ಬಂಧಗಳನ್ನು ಹೇರಬಾರದು
ಅಂತಿಮ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಅಮೆರಿಕ ಹಾಗೂ ವಿಶ್ವಸಂಸ್ಥೆ ವಿಧಿಸಿರುವ ಎಲ್ಲ ನಿರ್ಬಂಧಗಳನ್ನು ಎಲ್ಲರಿಗೂ ಒಪ್ಪಿತವಾದ ಕಾಲಮಿತಿಯೊಳಗಾಗಿ ತೆರವು ಮಾಡಬೇಕು
ಇರಾನ್ ತನ್ನ ತೈಲ ಮಾರಾಟ ಮಾಡಿ ಆದಾಯ ಗಳಿಸುವುದಕ್ಕೆ ಅನುಕೂಲವಾಗುಂತೆ ಅಮೆರಿಕ ವಿಧಿಸಿರುವ ನಿರ್ಬಂಧವನ್ನು ತೆಗೆದು ಹಾಕಬೇಕು
ಇರಾನ್‌ಗೆ ಸೇರಿದ 25 ಶತಕೋಟಿ ಡಾಲರ್ (ಅಂದಾಜು ₹2377 ಕೋಟಿ) ಮೌಲ್ಯದ ಸ್ವತ್ತುಗಳನ್ನು ಅಮೆರಿಕ ಮುಟ್ಟುಗೋಲು ಹಾಕಿಕೊಂಡಿದ್ದು ಇವುಗಳನ್ನು ಬಿಡುಗಡೆ ಮಾಡಬೇಕು
ಅಮೆರಿಕ ತನ್ನ ಮಿತ್ರ ರಾಷ್ಟ್ರಗಳ ಸಮನ್ವಯದೊಂದಿಗೆ ಇರಾನ್‌ನ ಪುನರ್‌ಅಭಿವೃದ್ಧಿ ಮತ್ತು ಪುನರ್‌ನಿರ್ಮಾಣಕ್ಕೆ ಯೋಜನೆ ರೂಪಿಸಿಸಬೇಕು. ಈ ಕುರಿತು 60 ದಿನಗಳಲ್ಲಿ ಮಾತುಕತೆ ನಡೆಸಿ ಒಮ್ಮತಕ್ಕೆ ಬರಬೇಕು ದಿಯನ್ನು ಇರಾನ್ ಕೈಬಿಡಲಿದೆ
ಅಂತಿಮ ಒಪ್ಪಂದಕ್ಕೆ ಒಳಪಟ್ಟಂತೆ ಇರಾನ್ ತನ್ನ ಅಣ್ವಸ್ತ್ರ ಕಾರ್ಯಕ್ರಮದಲ್ಲಿ 'ಯಥಾಸ್ಥಿತಿ' ಕಾಪಾಡಲಿದೆ. ಅಂದರೆ ಯುರೇನಿಯಂ ಸಮೃದ್ಧೀಕರಣ ಮತ್ತು ಇದಕ್ಕೆ ಸಂಬಂಧಿಸಿದ ಸೌಲಭ್ಯಗಳ ವಿಸ್ತರಣೆ ಕೈಬಿಡಲಿದೆ

