ಮುಂಬೈ: 107 ದಿನಗಳ ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧಕ್ಕೆ ಅಂತ್ಯಹಾಡಲು ಉಭಯ ದೇಶಗಳು ಒಪ್ಪಂದಕ್ಕೆ ಬಂದಿವೆ. ಈ ಹಿನ್ನೆಲೆಯಲ್ಲಿ ತೈಲ ಬೆಲೆಯಲ್ಲಿ ದಿಢೀರ್ ಕುಸಿತ ಕಂಡುಬಂದಿದ್ದು, ದೇಶೀಯ ಷೇರು ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಸತತ ಎರಡನೇ ದಿನವೂ ಚೇತರಿಕೆ ಕಂಡಿವೆ.
30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 736.38 ಅಂಶಗಳಷ್ಟು ಏರಿಕೆ ಕಂಡು 76,264 ರಲ್ಲಿ ವಹಿವಾಟು ಮುಗಿಸಿದೆ. ದಿನದ ವಹಿವಾಟಿನಲ್ಲಿ 1,293.12 ಅಂಶಗಳಷ್ಟು ಏರಿಕೆ ಕಂಡು 76,821 ವರೆಗೆ ಹೋಗಿತ್ತು.
ಇತ್ತ, 50 ಷೇruಗಳ ಎನ್‌ಎಸ್‌ಇ ನಿಫ್ಟಿಯು 231 ಅಂಶಗಳಷ್ಟು ಏರಿಕೆ ಕಂಡು 23,853.90ರಲ್ಲಿ ವಹಿವಾಟು ಮುಗಿಸಿದೆ. ದಿನದ ವಹಿವಾಟಿನಲ್ಲಿ 388.5 ಅಂಶಗಳಷ್ಟು ಏರಿಕೆ ಕಂಡು 24,011 ವರೆಗೆ ತಲುಪಿತ್ತು.
ಕಳೆದ ಶುಕ್ರವಾರ ಸೆನ್ಸೆಕ್ಸ್ 1,695 ಅಂಶಗಳಷ್ಟು ಏರಿಕೆ ಕಂಡರೆ, ನಿಫ್ಟಿ 461 ಅಂಶಗಳಷ್ಟು ಜಿಗಿದಿತ್ತು.
ಅಮೆರಿಕ ಮತ್ತು ಇರಾನ್ ನಡುವೆ ಯುದ್ಧ ಅಂತ್ಯಕ್ಕೆ ಒಪ್ಪಂದ ಮತ್ತು ಹೊರ್ಮುಜ್ ಜಲಸಂಧಿ ಮರುತೆರೆಯುವ ಬಗ್ಗೆ ಒಮ್ಮತಕ್ಕೆ ಬಂದಿರುವುದು ಹೂಡಿಕೆದಾರರಲ್ಲಿ ಆಶಾಭಾವನೆ ಮೂಡಿಸಿದೆ. ಜೂನ್ 19ರಂದು ಉಭಯ ರಾಷ್ಟ್ರಗಳು ಸ್ವಿಡ್ಜರ್‌ಲೆಂಡ್‌ನಲ್ಲಿ ಒಪ್ಪಂದಕ್ಕೆ ಸಹಿ ಹಾಕಲಿವೆ.
ಒಪ್ಪಂದದ ಬೆನ್ನಲ್ಲೇ ತೈಲ ಬೆಲೆ ಮೂರು ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಜಾಗತಿಕ ತೈಲ ಮಾನದಂಡ ಬ್ರೆಂಟ್ ಕಚ್ಚಾ ತೈಲ ದರ ಶೇ 5ರಷ್ಟು ಕುಸಿದು, ಪ್ರತಿ ಬ್ಯಾರಲ್‌ಗೆ 82.90 ಡಾಲರ್ ಆಗಿದೆ.
ಸೆನ್ಸೆಕ್ಸ್ ಸಂಸ್ಥೆಗಳ ಪೈಕಿ ಟ್ರೆಂಟ್ ಷೇರು ಬೆಲೆ ಅತ್ಯಧಿಕ ಶೇ 5.35ರಷ್ಟು ಏರಿಕೆ ಕಂಡಿದೆ. ಉಳಿದಂತೆ ಇಂಟರ್‌ಗ್ಲೋಬ್ ಏವಿಯೇಷನ್ ಷೇರು ಶೇ 3.62ರಷ್ಟು, ಬಜಾಜ್ ಫಿನ್‌ಸರ್ವ್ ಷೇರು ಬೆಲೆ ಶೇ 3.58, ಎಟರ್ನಲ್ ಷೇರು ಬೆಲೆ ಶೇ 3.26ರಷ್ಟು ಮತ್ತು ಅಲ್ಟ್ರಾಟೆಕ್ ಸಿಮೆಂಟ್ ಷೇರುಗಳ ಬೆಲೆ ಶೇ. 3.29ರಷ್ಟು ಏರಿಕೆ ಕಂಡಿವೆ.
ಎನ್‌ಟಿಪಿಸಿ, ಐಸಿಐಸಿಐ ಬ್ಯಾಂಕ್, ಏಷಿಯನ್ ಪೇಂಟ್ಸ್ ಮತ್ತು ಹಿಂದೂಸ್ಥಾನ್ ಯುನಿಲಿವರ್ ಷೇರುಗಳು ಕುಸಿತ ಕಂಡಿವೆ.
ಏಷ್ಯಾ ಷೇರುಪೇಟೆಗಳ ಪೈಕಿ ದಕ್ಷಿಣ ಕೊರಿಯಾದ ಕಾಸ್ಪಿ ಶೇ 5ರಷ್ಟು, ಜಪಾನ್‌ನ ನಿಕ್ಕಿ ಶೇ 5ರಷ್ಟು ಏರಿಕೆ ದಾಖಲಿಸಿವೆ. ಶಾಂಘೈನ ಎಸ್‌ಎಸ್‌ಇ ಕಾಂಪೋಸಿಟ್ ಇಂಎಕ್ಸ್ ಮತ್ತು ಹಾಂಗ್‌ಕಾಂಗ್‌ನ ಹ್ಯಾಂಗ್‌ಸೆಂಗ್ ಸಹ ಏರಿಕೆ ಕಂಡಿವೆ.

