ಟೆಹರಾನ್: 'ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಇರಾನ್ ವಿರುದ್ಧ ಮತ್ತೆ ಯುದ್ಧ ಆರಂಭಿಸುವ ಸಾಧ್ಯತೆ ಇದೆ' ಎಂದು ಇರಾನ್ ಸೇನೆ ಶನಿವಾರ ಹೇಳಿದೆ.
'ದೇಶದ ಮೇಲೆ ನಡೆಯುವ ಯಾವುದೇ ಹೊಸ ಆಕ್ರಮಣ ಅಥವಾ ಅಮೆರಿಕನ್ನರು ತೋರುವ ಅವಿವೇಕದ ನಡೆಗೆ ಎದಿರೇಟು ನೀಡಲು ಇರಾನ್ ಸಂಪೂರ್ಣ ಸನ್ನದ್ಧವಾಗಿದೆ' ಎಂದೂ ಹೇಳಿದೆ.
'ಯುದ್ಧ ಕೊನೆಗೊಳಿಸಿ, ಶಾಂತಿ ಸ್ಥಾಪಿಸುವ ಸಂಬಂಧ ಇರಾನ್ ಮುಂದಿಟ್ಟಿದ್ದ ಹೊಸ ಪ್ರಸ್ತಾವದಿಂದ ನಾನು ತೃಪ್ತನಾಗಿಲ್ಲ' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ ಬೆನ್ನಲ್ಲೇ ಇರಾನ್‌ನಿಂದ ಈ ಹೇಳಿಕೆ ಹೊರಬಿದ್ದಿದೆ.
'ಅಮೆರಿಕ ತಾನು ನೀಡಿದ ಯಾವುದೇ ಭರವಸೆ ಅಥವಾ ಮಾಡಿಕೊಂಡ ಒಪ್ಪಂದಕ್ಕೆ ಬದ್ಧವಾಗಿಲ್ಲ ಎಂಬುದು ಹಲವಾರು ಬಾರಿ ಸಾಬೀತಾಗಿದೆ. ಈಗ, ಟ್ರಂಪ್ ಅವರು ಇರಾನ್‌ನ ಹೊಸ ಪ್ರಸ್ತಾವವನ್ನು ತಿರಸ್ಕರಿಸಿದ್ದಾರೆ. ಹೀಗಾಗಿ, ಉಭಯ ದೇಶಗಳ ನಡುವೆ ಹೊಸದಾಗಿ ಸಂಘರ್ಷ ಆರಂಭವಾಗುವ ಎಲ್ಲ ಸಾಧ್ಯತೆಗಳಿವೆ' ಎಂದು ಸೇನೆಯ ಕೇಂದ್ರ ಕಮಾಂಡ್‌ನ ಹಿರಿಯ ಅಧಿಕಾರಿ ಮೊಹಮ್ಮದ್ ಜಾಫರ್ ಅಸಾದಿ ಶನಿವಾರ ತಿಳಿಸಿದ್ದಾಗಿ ಇರಾನ್‌ನ ಸುದ್ದಿಸಂಸ್ಥೆ ಫಾರ್ಸ್ ವರದಿ ಮಾಡಿದೆ.
ಏನಿದು ಹೊಸ ಪ್ರಸ್ತಾವ?: 'ಹೊರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸಂಚಾರಕ್ಕೆ ಇರಾನ್ ಮುಕ್ತ ಅವಕಾಶ ನೀಡಬೇಕು. ಇರಾನ್ ಮೇಲೆ ವಿಧಿಸಿರುವ ದಿಗ್ಬಂಧನವನ್ನು ಅಮೆರಿಕ ರದ್ದುಪಡಿಸಬೇಕು. ಇರಾನ್‌ನ ಅಣ್ವಸ್ತ್ರ ಯೋಜನೆ ಕುರಿತ ಮಾತುಕತೆಯನ್ನು ಆನಂತರ ನಡೆಸಬೇಕು ಎಂಬ ಅಂಶಗಳನ್ನು ಹೊಸ ಪ್ರಸ್ತಾವ ಒಳಗೊಂಡಿದೆ.
ಶಸ್ತ್ರಾಸ್ತ್ರ ಮಾರಾಟಕ್ಕೆ ಅನುಮೋದನೆ
ವಾಷಿಂಗ್ಟನ್: ಪಶ್ಚಿಮ ಏಷ್ಯಾದ ಮಿತ್ರರಾಷ್ಟ್ರಗಳಿಗೆ ಪ್ರಮುಖ ಶಸ್ತ್ರಾಸ್ತ್ರಗಳ ಮಾರಾಟಕ್ಕೆ ಅಮೆರಿಕ ಅನುಮೋದನೆ ನೀಡಿದೆ. ಕತಾರ್‌ಗೆ 400 ಕೋಟಿ ಡಾಲರ್ (ಸುಮಾರು ₹37964 ಕೋಟಿ) ಮೊತ್ತದ ಪೇಟ್ರಿಯಾಟ್ ಕ್ಷಿಪಣಿ ಮಾರಾಟ ಇಸ್ರೇಲ್‌ಗೆ ಸುಮಾರು 100 ಕೋಟಿ ಡಾಲರ್ (ಸುಮಾರು ₹9491 ಕೋಟಿ) ಮೊತ್ತದ ಶಸ್ತ್ರಾಸ್ತ್ರ ವ್ಯವಸ್ಥೆಗಳ ಮಾರಾಟಕ್ಕೆ ಅನುಮೋದನೆ ನೀಡಲಾಗಿದೆ.

