Thursday, 29 Oct, 6.26 pm ಪ್ರಜಾವಾಣಿ

ಜಿಲ್ಲೆ
ಅನಧಿಕೃತ ಜೈವಿಕ ಕೀಟನಾಶಕದಿಂದ ಅಪಾಯ: ಡಾ.ಡಿ. ಡಬ್ಲ್ಯೂ.ರಾಜಶೇಖರ್ ಎಚ್ಚರಿಕೆ

ವಿಜಯಪುರ: ನಿಷೇಧಿತ ಜೈವಿಕ ಔಷಧಗಳ ಬಳಕೆಯಿಂದ ಕೇವಲ ಬೆಳೆಗಳು ಹಾಳಾಗುವುದಷ್ಟೇ ಅಲ್ಲ, ಇವುಗಳನ್ನು ಬಳಸುವ ರೈತರ ಮತ್ತು ಉತ್ಪನ್ನಗಳನ್ನು ಸೇವಿಸುವ ಜನರ ಆರೋಗ್ಯದ ಮೇಲು ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಜಂಟಿ ಕೃಷಿ ನಿರ್ದೇಶಕ ಡಾ.ಡಿ. ಡಬ್ಲ್ಯೂ.ರಾಜಶೇಖರ್ ಹೇಳಿದರು.

ಕೃಷಿ ಇಲಾಖೆಯಿಂದ ಗುರುವಾರ ಹಮ್ಮಿಕೊಂಡಿದ್ದ ಅನಧಿಕೃತ ಜೈವಿಕ ಕೀಟನಾಶಕಗಳ ಬಗ್ಗೆ ರೈತರಿಗೆ ಅರಿವು ಮೂಡಿಸುವ ಜಾಗೃತಿ ಜಾಥಾದಲ್ಲಿ ಅವರು ಮಾತನಾಡಿದರು.

ನಿಷೇಧಿತ ರಸಾಯನಿಕ ಅಂಶಗಳಿರುವ ವಿಷಭರಿತ ಜೈವಿಕ ಉತ್ಪನ್ನಗಳು ಅನಧಿಕೃತವಾಗಿ ವಿವಿಧ ಜೈವಿಕ ಕೀಟನಾಶಕ (ಬಯೋ ಪೆಸ್ಟಿಸೈಡ್) ಹೆಸರಿನಲ್ಲಿ ಮಾರಾಟವಾಗುತ್ತಿದ್ದು, ಅವುಗಳ ಕುರಿತು ರೈತರಲ್ಲಿ ಅರಿವು ಮೂಡಿಸಲು ಕೃಷಿ ಇಲಾಖೆ ಜಾಥಾ ಹಮ್ಮಿಕೊಂಡಿದೆ ಎಂದರು.

ಅನಧಿಕೃತವಾಗಿ ಮಾರಾಟವಾಗುತ್ತಿರುವ ಈ ಔಷಧಗಳಲ್ಲಿ ಈಗಾಗಲೇ ಕೃಷಿ ಬಳಕೆಗೆ ನಿಷೇಧಿಸಲಾಗಿರುವ ಹಲವಾರು ರಸಾಯನಿಕಗಳು ಇರುವುದು ಪ್ರಯೋಗಾಲಯಗಳ ವಿಶ್ಲೇಷಣಾ ವರದಿಗಳಲ್ಲಿ ಸಾಭೀತಾಗಿದೆ ಎಂದು ಹೇಳಿದರು.

ಯಾವುದೇ ಅಂಗಡಿಯಲ್ಲಿ ಅಥವಾ ನಿಮ್ಮ ಮನೆಗೆ ಯಾವುದೇ ವ್ಯಕ್ತಿ ಇಂತಹ ಬಯೋ ಔಷಧಗಳನ್ನು ಮಾರಾಟ ಮಾಡಲು ಬಂದರೆ ಖರೀದಿಸಬೇಡಿ ಮತ್ತು ಮೋಸಹೋಗಬೇಡಿ. ಜೊತೆಗೆ ಅಂತಹ ಅಂಗಡಿ ಮತ್ತು ವ್ಯಕ್ತಿಯ ವಿವರಗಳನ್ನು ನಿಮ್ಮ ಹೋಬಳಿ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳಿಗೆ ಅಥವಾ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರಿಗೆ ತಿಳಿಸಿ ಎಂದು ಜಿಲ್ಲೆಯ ರೈತರಲ್ಲಿ ವಿನಂತಿಸಿದರು.

ರೈತರು ನಿಜವಾಗಿಯೂ ಜೈವಿಕ ಕೀಟನಾಶಕಗಳನ್ನು ಬಳಸಲು ಇಚ್ಚಿಸಿದರೆ ಟ್ರೈಕೋಡರ್ಮ್‌, ಸುಡೋಮೊನಾಸ್ ಅಥವಾ ಮೆಟಾರೈಜಿಯಂನಂತಹ ಜೀವಾಣುಗಳನ್ನು ಬಳಸಬಹುದು ಎಂದು ಸಲಹೆ ನೀಡಿದರು.

ರೈತರು ರಾಸಾಯನಿಕ ಔಷಧ ಸಿಂಪಡಿಸುವುದಾದರೆ, ಔಷಧ ಬಾಟಲಿ ಮೇಲೆ ಹಸಿರು, ಹಳದಿ, ನೀಲಿ ಅಥವಾ ಕೆಂಪು ಬಣ್ಣದ ತ್ರಿಕೋನಾಕಾರದ ಚಿಹ್ನೆ ಇರುವಂತಹ ಔಷಧಗಳನ್ನು ಲೈಸನ್ಸ್ ಹೊಂದಿರುವ ಅಧಿಕೃತ ಮಾರಾಟಗಾರರಿಂದ ಮಾತ್ರ ಖರೀದಿಸಿ ಮತ್ತು ಬಿಲ್‌ ಅಥವಾ ರಶೀದಿಯನ್ನು ತಪ್ಪದೇ ಪಡೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಬಯೋ ಹೆಸರಿನಲ್ಲಿ ಮಾರಾಟವಾಗುತ್ತಿರುವ ಇಂತಹ ಕಲಬೆರಿಕೆ ಔಷಧಗಳನ್ನು ಕೊಳ್ಳಬೇಡಿ ಎಂದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಜಾಗೃತಿ ಜಾಥಾ ವಾಹನಕ್ಕೆ ಚಾಲನೆ ನೀಡಿದರು. ಉಪ ಕೃಷಿ ನಿರ್ದೇಶಕ ಪ್ರಕಾಶ್ ಆರ್. ಚವ್ಹಾಣ್‌ ‌ಮತ್ತು ಸಹಾಯಕ ಕೃಷಿ ನಿರ್ದೇಶಕರಾದ ಅರಿಫಾ ಅತ್ತಾರ್, ದೊಡ್ಡಮನಿ, ಎಂ.ಎಚ್.ಯರಜರಿ ಉಪಸ್ಥಿತರಿದ್ದರು.

ರೈತರು ನಿಷೇಧಿತ ಬಯೋ ಔಷಧಗಳ ಬದಲಿಗೆ ಬೇವಿನ ಎಣ್ಣೆ, ಬೇವಿನ ಹಿಂಡಿ, ಮೆಣಸಿನ ಕಾಯಿ, ಬೆಳ್ಳುಳ್ಳಿ ಕಷಾಯ, ಅಗ್ನಿ ಅಸ್ತ್ರಗಳಂತಹ ಸಾವಯವ ಕೀಟ ನಾಶಕಗಳನ್ನು ಬಳಸಬಹುದು
-ಡಾ.ಡಿ. ಡಬ್ಲ್ಯೂ.ರಾಜಶೇಖರ್
ಜಂಟಿ ಕೃಷಿ ನಿರ್ದೇಶಕ, ವಿಜಯಪುರ

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Prajavani
Top