ಮಾರ್ಚ್ - ಏಪ್ರಿಲ್ ತಿಂಗಳಲ್ಲಿ ಯಾದಗಿರಿ ಭಾಗದ ಕೃಷಿಕ ಮಿತ್ರ ದೇವೇಂದ್ರಪ್ಪ ಭೋಯಿ, ತನ್ನ ಭತ್ತದ ಗದ್ದೆಗಳ ಫೋಟೊಗಳನ್ನು ಹಂಚಿಕೊಂಡರು. ಆ ಫೋಟೊಗಳಲ್ಲಿ ಎತ್ತರಕ್ಕೆ ಬೆಳೆದ ಭತ್ತದ ಸಸಿಗಳ ಕೆಳಗೆ ಹಸಿರ ಚಾಪೆಯಂತೆ ಅಜೋಲಾ ಹರಡಿಕೊಂಡಿರುವ ದೃಶ್ಯವಿತ್ತು. ಇದಾಗಿ ಒಂದೂವರೆ ತಿಂಗಳಿಗೆ ಗದ್ದೆಗಳ ಇನ್ನಷ್ಟು ಚಿತ್ರಗಳನ್ನು ಕಳಿಸಿದರು. ಅದರಲ್ಲಿ ಅದೇ ಸಸಿಗಳಲ್ಲಿ ಭತ್ತದ ತೆನೆಗಳು ತೊನೆದಾಡುತ್ತಿದ್ದವು.
'ಇದು ಅಜೋಲಾ ಹಾಕಿದ ಗದ್ದೆಯಲ್ಲಿ ಬೆಳೆದ ಅಂಬೆಮೊಹರೆ ಭತ್ತದ ತಳಿಯ ತೆನೆಗಳು. ಎಷ್ಟು ಸಮೃದ್ಧವಾಗಿವೆ ನೋಡಿ' - ಎಂದು ಕಾಳುಗಳು ಮೈದುಂಬಿರುವ ಭತ್ತದ ತೆನೆಗಳ ಚಿತ್ರಗಳೊಂದಿಗೆ ಸಂಭ್ರಮದಿಂದ ಮೆಸೇಜ್ ಹಾಕಿದರು ದೇವೇಂದ್ರಪ್ಪ.
ಅಜೋಲಾ, ನೀರಿನಲ್ಲಿ ಬೆಳೆಯುವ ನೀಲಿ ಹಸಿರು ಪಾಚಿ/ಜರಿ ಸಸ್ಯ. ಇದನ್ನು ಹೆಚ್ಚಾಗಿ ಜಾನುವಾರುಗಳಿಗೆ ಮೇವಾಗಿ, ಕೃಷಿಯಲ್ಲಿ ಜೈವಿಕ ಗೊಬ್ಬರವಾಗಿಯೂ ಬಳಸುತ್ತಾರೆ. ಸಾವಯವ ಕೃಷಿ ಪದ್ಧತಿಯಲ್ಲಿ ಹತ್ತಾರು ದೇಸಿ ತಳಿಗಳ ಭತ್ತ ಬೆಳೆಯುತ್ತಿರುವ ದೇವೇಂದ್ರಪ್ಪ ಭೋಯಿ, ಇದೇ ಅಜೋಲಾವನ್ನು 16 ವರ್ಷಗಳಿಂದ ಭತ್ತದ ಕೃಷಿಯಲ್ಲಿ 'ಕಳೆ ನಿಯಂತ್ರ'ಕವಾಗಿ ಮತ್ತು ಜೈವಿಕ ಗೊಬ್ಬರವಾಗಿ ಬಳಸುತ್ತಿದ್ದಾರೆ.
ದೇವೇಂದ್ರಪ್ಪ ಅವರದ್ದು 5 ಎಕರೆ ಸ್ವಂತ ಜಮೀನಿದೆ(4 ಎಕರೆ ಬಳಕೆ) ಜೊತೆಗೆ 13 ಎಕರೆ ಭೋಗ್ಯಕ್ಕೂ ಹಾಕಿಸಿಕೊಂಡು, ಒಟ್ಟು 17 ಎಕರೆಯಲ್ಲಿ ಭತ್ತದ ಕೃಷಿ ಮಾಡುತ್ತಾರೆ. ಇವರ ಕೃಷಿ ಕಾಯಕಕ್ಕೆ ಬಸವ ಸಾಗರ ಜಲಾಶಯದ ನೀರಿನ ನೆರವಿದೆ. ವರ್ಷಕ್ಕೆ ಎರಡು ಭತ್ತದ ಬೆಳೆ ತೆಗೆಯುವ ದೇವೇಂದ್ರಪ್ಪ ಅವರು ಬೆಳೆಯುವ ತಳಿಗಳಲ್ಲಿ ಮುಕ್ಕಾಲುಪಾಲು ದೇಸಿ ತಳಿಗಳು, ಉಳಿದ ಪಾಲು ಸುಧಾರಿತ ತಳಿಗಳದ್ದು.
ದೇವೇಂದ್ರಪ್ಪ 2005ರಿಂದ ರಾಸಾಯನಿಕ ಪದ್ಧತಿಯಲ್ಲಿ ಭತ್ತದ ಕೃಷಿ ಮಾಡುತ್ತಿದ್ದರು. ಹೈಬ್ರಿಡ್ ಬೀಜ ಹಾಗೂ ರಸಗೊಬ್ಬರಗಳ ಸಾಂಗತ್ಯವಿತ್ತು. ನೀರು ನಿಲ್ಲಿಸಿ ಕಳೆ ನಿರ್ವಹಣೆ ಮಾಡುತ್ತಿದ್ದರು, ಜತೆಗೆ ಕಾರ್ಮಿಕರನ್ನೂ ಬಳಸಿಕೊಳ್ಳುತ್ತಿದ್ದರು. ಆದಾಯದ ಜತೆ ಖರ್ಚು ಹೆಚ್ಚುತ್ತಿತ್ತು. ಇದೇ ವೇಳೆ ಸ್ನೇಹಿತರಾದ ರಾಮಮೂರ್ತಿ ಅವರು ನೈಸರ್ಗಿಕ ಕೃಷಿ ಪದ್ಧತಿಯ ಚಟುವಟಿಕೆಗಳಿಂದ ಪ್ರೇರೇಪಿತರಾಗಿ 2010ರಿಂದ ತಾವೂ ಕೂಡ ರಾಸಾಯನಿಕ ಮುಕ್ತ ಕೃಷಿ ಪದ್ಧತಿಯಲ್ಲಿ ಭತ್ತದ ಕೃಷಿ ಆರಂಭಿಸಿದರು.
ಇದಕ್ಕೂ ಮುನ್ನ 2009 ರಲ್ಲಿ ರಾಜ್ಯದಾದ್ಯಂತವಿರುವ ಸಾವಯವ ಕೃಷಿಕರ ಜಮೀನುಗಳನ್ನು ಸುತ್ತಾಡಿದರು. ಕೃಷಿ ವಿಜ್ಞಾನ ಕೇಂದ್ರಗಳನ್ನು(ಕೆವಿಕೆ) ಹೊಕ್ಕಿ ಬಂದರು. ಪ್ರಗತಿಪರ ಕೃಷಿಕರನ್ನು ಭೇಟಿ ಮಾಡಿ ಮಾತಾಡಿದರು. ಈ ಅಧ್ಯಯನದ ಸುತ್ತಾಟ ಸಾವಯವ ಕೃಷಿಗೆ ಹಸಿರೆಲೆ ಗೊಬ್ಬರ, ಜೀವಾಮೃತ, ಸಾವಯವ ಔಷಧಗಳು ಮತ್ತು ಕಳೆ ನಿಯಂತ್ರಣಕ್ಕೆ ಅಜೋಲಾ ದಂತಹ ಜೈವಿಕ ಕಳೆ ನಿಯಂತ್ರಕದ ಅಗತ್ಯವನ್ನು ಮನದಟ್ಟು ಮಾಡಿಕೊಟ್ಟವು.
ಈ ಸುತ್ತಾಟದಲ್ಲಿ ದಾವಣಗೆರೆಯ ತರಳಬಾಳು ಕೃಷಿ ಕೆವಿಕೆಗೆ ಹೋದಾಗ, ಅಲ್ಲಿ ಅಜೋಲಾ ಬೆಳೆಸು ವುದನ್ನು ಕಂಡು, ಅದನ್ನು ಬೆಳೆಯುವ ವಿಧಾನ ಕಲಿತರು. ಬರುವಾಗ ಒಂದಷ್ಟು ಕೆಜಿ ಅಜೋಲಾ ಸಂಗ್ರಹಿಸಿ ತಂದರು. ಜತೆಗೆ ಸಮೀಪದ ಅಂದನೂರಿನ ದೇಸಿ ಭತ್ತದ ತಳಿ ಸಂರಕ್ಷ ಆಂಜನೇಯ ಅವರಿಂದ ಒಂದಷ್ಟು ದೇಸಿ ತಳಿಗಳ ಭತ್ತದ ಬೀಜಗಳನ್ನು ಚೀಲಕ್ಕೇರಿಸಿಕೊಂಡು ಬಂದರು.
ದೇವೇಂದ್ರಪ್ಪ ಸಾವಯವ ಪದ್ಧತಿಯಲ್ಲಿ ದೇಸಿ ತಳಿಗಳ ಭತ್ತದ ಕೃಷಿ ಆರಂಭಿಸಿದರು. ಭತ್ತದ ಸಸಿ ನಾಟಿಗೂ ಎರಡು ತಿಂಗಳು ಮುನ್ನ ಗದ್ದೆಯ ಎಲ್ಲ ಮಡಿಗಳಲ್ಲೂ ಹಸಿರೆಲೆ ಗೊಬ್ಬರವಾಗಿ ಡಯಂಚ ಬೆಳೆಸಿದರು. ಅದು ಬೆಳೆದ ಮೇಲೆ ಭೂಮಿಗೆ ಹರಗಿಸಿದರು. ನಂತರ, ನೀರು ನಿಲ್ಲಿಸಿ, ಭತ್ತದ ಸಸಿಗಳನ್ನು ನಾಟಿ ಮಾಡಿ, ಒಂದು ಇಂಚು ಎತ್ತರದವರೆಗೂ ನೀರು ನಿಲ್ಲಿಸಿದರು.
ಕೆವಿಕೆಯಿಂದ ತಂದಿದ್ದ 5 ಕೆ.ಜಿ ಯಷ್ಟು ಅಜೋಲಾವನ್ನು ಸಸಿ ನಾಟಿ ಮಾಡಿದ ಒಂದು ತಿಂಗಳ ನಂತರ ಗದ್ದೆಗೆ ಹರಿಯುವ ನೀರಿಗೆ ಸೇರಿಸಿದರು. ಜೊತೆಗೆ, ಜೀವಾಮೃತವನ್ನು ಬೆರೆಸಿದರು. ಜೀವಾಮೃತ ಅಜೋಲಾ ಬೆಳವಣಿಗೆಗೆ ಪೂರಕ ಪೋಶಕಾಂಶವಾಗುತ್ತದೆ. ಹೀಗಾಗಿ, ಹರಿಯುವ ನೀರಿನ ಜೊತೆಗೆ, ಜೀವಾಮೃತ ಸೇರಿಸಿ ಅಜೋಲಾ ಬಿಟ್ಟರು. 20 ದಿನ ಕಳೆಯುವುದ ರೊಳಗೆ, ಅಜೋಲಾ ನಾಲ್ಕು ಪಟ್ಟು ಹೆಚ್ಚಾಯಿತು, ಗದ್ದೆಗಳ ಅಷ್ಟೂ ಮಡಿಗಳಿಗೆ ಹರಡಿಕೊಂಡಿತು.
'ತಿಂಗಳು ಕಳೆಯುವುದರೊಳಗೆ ಎಲ್ಲ ಗದ್ದೆಯ ಮಡಿಗಳಲ್ಲಿ ಹಸಿರು ಚಾಪೆ ಹೊದಿಸಿದಂತೆ ಅಜೋಲಾದ ಎಲೆಗಳು ದಟ್ಟವಾಗಿ ಹರಡಿಕೊಂಡಿದ್ದವು. ಒಂದು ರೀತಿ ಜೀವಂತ ಮುಚ್ಚಿಗೆ ಯಾಗಿದ್ದವು' ಎಂದು ವಿವರಿಸುತ್ತಾರೆ ದೇವೇಂದ್ರಪ್ಪ.
ಸೂರ್ಯನ ಕಿರಣ ಭೂಮಿಗೆ ತಾಗದಷ್ಟು ದಟ್ಟವಾಗಿ ಚಾಪೆಯಂತೆ ಗದ್ದೆ ತುಂಬಾ ಹರಡಿಕೊಂಡಿತ್ತು. ಬೆಳಕು, ಬಿಸಿಲು ಬೀಳದ ಕಾರಣ ಮಣ್ಣಿನಲ್ಲಿದ್ದ ಕಳೆ ಬೀಜಗಳು ಮೊಳೆಯಲಿಲ್ಲ. ಬೆಳೆಯಲಿಲ್ಲ. ಕಳೆ ನಿಯಂತ್ರಿಸಲು ಅಜೋಲಾ ಒಂದು ಉತ್ತಮ ಮಾಧ್ಯಮ ಎಂಬುದು ಅವರ ಅರಿವಿಗೆ ಬಂತು.
ಬೇಸಿಗೆಯಲ್ಲೂ ಭತ್ತ ಬೆಳೆಯುವಾಗ (ಎರಡನೇ ಬೆಳೆ) ಇದೇ ರೀತಿ ಅಜೋಲಾವನ್ನು ಗದ್ದೆಗೆ ಬಿಟ್ಟರು. ಈ ಬಾರಿ ಕಳೆ ನಿಯಂತ್ರಣವಾಗುವ ಜೊತಗೆ, ಗದ್ದೆಯಲ್ಲಿ ಒಂದು ವಾರ ನೀರು ಖಾಲಿಯಾಗಿದ್ದರೂ ಮಣ್ಣಿನಲ್ಲಿ ತೇವಾಂಶ ಉಳಿದಿತ್ತು. 'ಇದಕ್ಕೆ ಅಜೋಲಾ ಹೊದಿಕೆಯೇ ಕಾರಣ' ಎಂಬುದು ನನ್ನ ಅರಿವಿಗೆ ಬಂತು ಎಂದರು ದೇವೇಂದ್ರಪ್ಪ.
ಅಜೋಲಾ ಬಳಸಿದ ಮೇಲೆ ಮೇಲ್ಗೊಬ್ಬರವಾಗಿ ಸಾರಜನ(ಯೂರಿಯಾ) ಕೊಡುವುದನ್ನು ನಿಲ್ಲಿಸಿದ್ದರು. ಅಜೋಲಾ ಬೆಳೆಯುತ್ತಾ, ತನ್ನ ಬೇರಿನಿಂದ ಮಣ್ಣಿಗೆ ಸಾರಜನಕ ಪೂರೈಸುತ್ತದೆ. ಇದು ಜೈವಿಕ ಗೊಬ್ಬರವಾಗುತ್ತದೆ ಎಂಬುದನ್ನು ವಿಜ್ಞಾನಿಗಳಿಂದ ತಿಳಿದುಕೊಂಡಿದ್ದ ದೇವೇಂದ್ರಪ್ಪ ಅವರಿಗೆ ತನ್ನ ಗದ್ದೆಯಲ್ಲೇ ಆ ಬದಲಾವಣೆ ಗಮನಕ್ಕೆ ಬಂತು. 'ಅಜೋಲಾ ಮಣ್ಣಿನಲ್ಲಿ ಸಾರಜನಕವನ್ನು ಸ್ಥಿರೀಕರಿಸುವುದರಿಂದ ಮಣ್ಣು ಫಲವತ್ತತೆ ಸುಧಾರಿಸಿತು. ಇದರಿಂದ ತಕ್ಕಮಟ್ಟಿಗೆ ಭತ್ತದ ಇಳುವರಿಯೂ ಹೆಚ್ಚಾಯಿತು' ಎಂಬುದನ್ನು ಇವರು ಕಂಡ ಕೊಂಡರು.
ನೀರು, ಗೊಬ್ಬರ, ವೆಚ್ಚ ಉಳಿತಾಯ
ಹದಿನಾರು ವರ್ಷಗಳಿಂದ ಇದೇ ರೀತಿ ಅಜೋಲಾ, ಡಯಂಚಾದಂತಹ ಹಸಿರೆಲೆ ಗೊಬ್ಬರ, ಜೀವಾಮೃತ, ಎರೆಹುಳು ಗೊಬ್ಬರದಂತಹ ಜೈವಿಕ ಗೊಬ್ಬರ, ಕೊಟ್ಟಿಗೆ ಗೊಬ್ಬರ, ಕೋಳಿಗೊಬ್ಬರ,ಕೀಟನಿರ್ವಹಣೆಗೆ ಟ್ರೈಕೊಗ್ರಾಮ (ಪರತಂತ್ರ ಜೀವಿ),ಶಿಲೀಂಧ್ರ ನಿರ್ವಹಣೆಗೆ ಸೂಡೊಮಾನಸ್, ಟ್ರೈಕೋಡರ್ಮಾ ದಂತಹ ಸಾವಯವ ಔಷಧಗಳನ್ನು ಬಳಕೆ ಮಾಡಿಕೊಂಡು ಭತ್ತದ ಕೃಷಿ ಮಾಡುತ್ತಿರುವ ದೇವೇಂದ್ರಪ್ಪ, ಇದರಿಂದಾಗುತ್ತಿರುವ ಉಪಯೋಗಗ ಳನ್ನು ನೆನಪಿಟ್ಟುಕೊಂಡಿದ್ದಾರೆ. ಆದರೆ ಇವುಗಳಲ್ಲಿ ಅಜೋಲಾ ಬಳಕೆಯ ಪರಿಣಾಮ ಕಣ್ಣಿಗೆ ಕಂಡರೆ, ಉಳಿದವು ಅಗೋಚರವಾಗಿ ಬೇರೆ ರೂಪದಲ್ಲಿ ಕಾಣಿಸುತ್ತವೆ.
ಒಂದು ಎಕರೆ ಭತ್ತದ ಬೆಳೆಗೆ ಸಾರಜನಕ ಪೂರೈಕೆಗಾಗಿ ನಾಲ್ಕು ಚೀಲ ಯೂರಿಯಾವಾದರೂ ಬೇಕು. ಚೀಲಕ್ಕೆ ಅಂದಾಜು ₹300 ಇದ್ದರೂ, ಎಕರೆಗೆ ಒಂದೂವರೆ ಸಾವಿರ ರೂಪಾಯಿಯಷ್ಟು ಬೇಕಾದೀತು. ಇನ್ನು, ಕಳೆ ನಿರ್ವಹಣೆಗೆ ಇಬ್ಬರು ಕಾರ್ಮಿಕರಿಗೆ ಕೂಲಿ. ಇವೆಲ್ಲ ಸೇರಿಸಿದರೆ ಎಕರೆಗೆ ಸುಮಾರು ನಾಲ್ಕೈದು ಸಾವಿರ ರೂಪಾಯಿವರೆಗೆ ಖರ್ಚಾಗಬಹುದು. ಆದರೆ, ಭತ್ತದ ಗದ್ದೆಗೆ ಅಜೋಲಾ ಬಿಡುವುದರಿಂದ, ಇಷ್ಟೆಲ್ಲ ಖರ್ಚು ಉಳಿತಾಯುತ್ತದೆ ಎಂದು ಲೆಕ್ಕಾಚಾರ ನೀಡುತ್ತಾರೆ ದೇವೇಂದ್ರಪ್ಪ.
ಮಾತ್ರವಲ್ಲ, ಅಜೋಲಾ ಮಣ್ಣಿನ ತೇವಾಂಶ ರಕ್ಷಿಸುವುದರಿಂದ ಮತ್ತು ಜೈವಿಕ ಗೊಬ್ಬರವಾಗಿ ಮಣ್ಣಿಗೆ ಶಕ್ತಿ ತುಂಬಿ, ಬೆಳೆಯ ಇಳುವರಿ ಹೆಚ್ಚಿಸುವುದರಿಂದ ರೈತರಿಗೆ ಪರೋಕ್ಷ ಲಾಭಗಳು ಹೆಚ್ಚಾಗುತ್ತವೆ. ಗದ್ದೆಗೆ ಕಳೆ ನಾಶಕ, ರಸಗೊಬ್ಬರ ಬಳಸದಿರುವುದರಿಂದ, ಮಣ್ಣು ಆರೋಗ್ಯವಾಗಿ ರುತ್ತದೆ, ಪರಿಶುದ್ಧ ಭತ್ತ/ಅಕ್ಕಿಯೂ ಲಭ್ಯವಾಗುತ್ತದೆ. ಹಾಗಾಗಿ, ಅಜೋಲಾ ಬಳಕೆಯಿಂದ ಹಣವಷ್ಟೇ ಅಲ್ಲ, ಆಹಾರ, ಆರೋಗ್ಯ, ಪರಿಸರವೂ ರಕ್ಷಣೆಯಾಗುತ್ತದೆ ಎಂಬ ಭೌತಿಕವಾಗಿ ಗೋಚರಿಸದ ಪರೋಕ್ಷದ ಲಾಭದ ಬಗ್ಗೆಯೂ ಅವರು ಗಮನ ಸೆಳೆಯುತ್ತಾರೆ
ಒಟ್ಟಾರೆ ಅವರು ಹೇಳುವುದಿಷ್ಟು ; ಅಜೋಲಾ ಬಳಕೆಯಿಂದ ಶೇ 10 ರಷ್ಟು ನೀರು ಉಳಿಯುತ್ತದೆ. ಶೇ 50ರಷ್ಟು ಕಳೆ ನಿರ್ವಹಣೆಯ ಖರ್ಚು ಮಿಗುತ್ತದೆ. ಹೊರಗಿನಿಂದ ತರುವ ಸಾರಜನಕ(ಯೂರಿಯಾ)ದಲ್ಲಿ ಶೇ 25 ರಷ್ಟು ಉಳಿತಾಯವಾಗುತ್ತದೆ. ಅಜೋಲಾ, ಅತಿ ಸುಲಭ ಹಾಗೂ ತ್ವರಿತವಾಗಿ ಬೆಳೆಯುವುದರಿಂದ ಭತ್ತದ ಬೆಳೆಗೆ ಸಕಾಲದಲ್ಲಿ ಅಗತ್ಯವಿದ್ದಷ್ಟು ಸಾರಜನಕ ಒದಗಿಸುತ್ತದೆ. ಇದನ್ನು ನಿರಂತರವಾಗಿ ಬಳಸುವುದರಿಂದ ಮಣ್ಣು ಫಲವತ್ತಾಗಿರುತ್ತದೆ.
ಅಜೋಲಾ ಹೇಗೆ ಹಾಕಬೇಕು ?
ಅಜೋಲಾದ ಬೀಜವನ್ನು (ಬೇರು ಸಹಿತ ಅಜೋಲಾ) ನೀರಿನಲ್ಲಿ ಹಾಕಿ, ಜೀವಾಮೃತ ಅಥವಾ ಸಗಣಿ ನೀರು ಹಾಕಬೇಕು. ವಾರ ಕಳೆಯುವುದರೊಳಗೆ ಸೊಂಪಾಗಿ ಬೆಳೆದು ಅರಳುತ್ತದೆ. ಅದನ್ನು ನೀರು ಬಸಿಯುವ ಜಾಲರಿಯಿಂದ ತೆಗೆದು ಚೀಲ ಅಥವಾ ಬುಟ್ಟಿಗೆ ತುಂಬಿಕೊಳ್ಳಬೇಕು. ನಂತರ ಗದ್ದೆಗೆ ಗೊಬ್ಬರ ಚೆಲ್ಲುವಂತೆ/ ಎರಚುವಂತೆ ಪಟ್ಟೆಯ (ಮಡೆ/ಮಡಿ) ತುಂಬಾ ಚೆಲ್ಲಬೇಕು. ಆಗ ಮಡಿಯಲ್ಲಿ ನೀರು ಇರುವುದರಿಂದ ಗಾಳಿಯಲ್ಲಿ ತೇಲುತ್ತಾ, ಒಂದು ಕಡೆ ನಿಲ್ಲುತ್ತದೆ - 'ಇದು ನಾನು ಅನುಸರಿಸುವ ವಿಧಾನ. ಅಜೋಲಾವನ್ನು ಹೀಗೆ ಗದ್ದೆಗೆ ಬಿಡಬೇಕೆಂಬ ನಿಯಮಿಲ್ಲ, ಆದರೆ ಸಸಿ ನಾಟಿಯ ನಂತರ ಗದ್ದೆಗೆ ಬಿಡಬೇಕೆಂಬುದು ನಾನೇ ಮಾಡಿಕೊಂಡಿರುವ ಯೋಜನೆ ' ಎನ್ನುತ್ತಾರೆ ದೇವೇಂದ್ರಪ್ಪ.
ಅಜೋಲವನ್ನು ಒಂದು ಬಾರಿ ಬಿಟ್ಟರೆ ಸಾಕು ತನ್ನಷ್ಟಕ್ಕೆ ತಾನೇ ಬೆಳವಣಿಗೆಯಾಗುತ್ತದೆ. ಮತ್ತೆ ಮತ್ತೆ ಹಾಕುವ ಅವಶ್ಯಕತೆ ಇರುವುದಿಲ್ಲ. ಗದ್ದೆಗೆ ಅಜೋಲಾ ಸೇರಿದ ಮೇಲೆ ಮಣ್ಣಿನಲ್ಲಿ ಎರೆಹುಳುಗಳ ವೃದ್ಧಿಯಾಗಿವೆ. ಇವೆಲ್ಲ ಸೇರಿ ಭೂಮಿಯ ಫಲವತ್ತತೆ ಸುಧಾರಿಸಿದೆ. ಪ್ರತಿ ವರ್ಷ ಭತ್ತದ ಇಳುವರಿಯೂ ಹೆಚ್ಚಾಗುತ್ತಿದೆ ಎಂಬುದನ್ನು ದೇವೇಂದ್ರಪ್ಪ ಗಮನಿಸಿದ್ದಾರೆ. 'ನಾನು 16 ವರ್ಷಗಳಿಂದ ಇದೇ ವಿಧಾನ ಅನುಸರಿಸುತ್ತಿದ್ದೇನೆ. ಭತ್ತದ ಇಳುವರಿಯಲ್ಲಿ ಎಕರೆಗೆ ಎರಡರಿಂದ ಮೂರು ಕ್ವಿಂಟಲ್ ಹೆಚ್ಚಾಗಿ ಪಡೆದಿದ್ದೇನೆ' ಎನ್ನುತ್ತಾರೆ ದೇವೇಂದ್ರಪ್ಪ.
ಯಾವಾಗ ಅಜೋಲಾ ಹಾಕಬೇಕು ?
ನೀರಿನ ಅನುಕೂಲವಿದ್ದರೆ ಭತ್ತದ ಸಸಿ ನಾಟಿಗೆ ಮುನ್ನವೇ ಗದ್ದೆಯ ಮಡಿಗೆ ಅಜೋಲಾ ಬಿಡಬಹುದು. ನೀರಿನ ಕೊರತೆ ಇದ್ದರೆ, ಸಸಿಗಳನ್ನು ನಾಟಿ ಮಾಡಿದ ಒಂದು ತಿಂಗಳು ನಂತರ ಗದ್ದೆಗೆ ಅಜೋಲಾ ಬಿಡಬಹುದು. 'ಆರಂಭದಲ್ಲಿ ಭತ್ತದ ಸಸಿಗಳಲ್ಲಿರುವ ಪೋಷಕಾಂಶವನ್ನು ಹೀರಿಕೊಂಡು ಬೆಳೆಯುವ ಅಜೋಲಾ, ಒಂದು ಹಂತ ದಾಟಿದ ಮೇಲೆ, ಅದೇ ಭೂಮಿಗೆ ದುಪ್ಪಟ್ಟು ಪೋಶಕಾಂಶಗ ಳನ್ನು ನೀಡುತ್ತದೆ' ಎನ್ನುತ್ತಾರೆ ದೇವೇಂದ್ರಪ್ಪ.
'ನನ್ನ ಗದ್ದೆಯಲ್ಲಿ ಹಾಕುವ ಅಜೋಲಾ ಹರಿಯುವ ನೀರಿನೊಂದಿಗೆ ಮುಂದಿನ ಜಮೀನಿಗೂ ಸಾಗುತ್ತದೆ. ಎಷ್ಟೋ ವರ್ಷ ನಾವು ಗದ್ದೆಗೆ ಅಜೋಲಾ ಹಾಕದಿದ್ದರೂ, ಹಿಂದಿನ ಬೆಳೆಗೆ ಹಾಕಿದ್ದ ಅಜೋಲಾ ಬೀಜಗಳೇ ಮತ್ತೆ ಮೊಳೆತಿರುತ್ತವೆ. ಹಾಗಾಗಿ ಅಜೋಲಾ ಹಾಕುವುದಕ್ಕೇ ಖರ್ಚೇ ಇಲ್ಲ' - ದೇವೇಂದ್ರಪ್ಪ ಅವರ ಲೆಕ್ಕಾಚಾರ.
ಇಷ್ಟಂತೂ ಖಚಿತ; ಭತ್ತದ ಸಸಿಗಳ ನಾಟಿಯ ನಂತರ ಒಮ್ಮೆ ಗದ್ದೆಗೆ ಅಜೋಲಾ ಹಾಕಿದರೆ, ಭತ್ತದ ತೆನೆ, ಪೈರು ಕೊಯ್ಯುವವರೆಗೂ ಗದ್ದೆಯಲ್ಲಿ ಹರಡಿಕೊಂಡು ಮಣ್ಣಿನಲ್ಲಿ ತೇವಾಂಶ ಕಾಪಾಡುತ್ತದೆ.
'ಭತ್ತದ ಗದ್ದೆಯಲ್ಲಿ ಅಜೋಲಾ ಬೆಳೆಸುವುದರಿಂದ ಬಹುಪಾಲು ಕಳೆ ನಿಯಂತ್ರಣವಾಗುತ್ತದೆ. ಕಳೆ ನಿರ್ವಹಣೆ ಖರ್ಚು ಉಳಿತಾಯವಾಗುತ್ತದೆ. ಮಣ್ಣಿನ ಫಲವತ್ತತೆ ಹೆಚ್ಚುತ್ತದೆ. ಕ್ರಮೇಣ ಭತ್ತದ ಇಳುವರಿ ಹೆಚ್ಚಲು ಸಹಾಯವಾಗುತ್ತದೆ.
ಮಣ್ಣಿನಲ್ಲಿ ತೇವಾಂಶವನ್ನು ದೀರ್ಘಕಾಲ ಹಿಡಿದಿಟ್ಟುಕೊಳ್ಳುವ ಶಕ್ತಿ ಬೆಳೆಯುತ್ತದೆ. ಇದರಿಂದ ನೀರು ಉಳಿತಾಯವಾಗುತ್ತದೆ. ಮಣ್ಣಿನಲ್ಲಿ ಸಾರಜನಕ ಸ್ಥಿರೀಕರಿಸುವುದರಿಂದ ತಕ್ಕ ಮಟ್ಟಿಗೆ ಸಾರಜನಕ(ಯೂರಿಯಾ)ವನ್ನು ಕೊಡುವುದು ತಪ್ಪುತ್ತದೆ, ಇದರಿಂದ ಖರ್ಚು ಉಳಿಯುತ್ತದೆ. ಒಟ್ಟಾರೆ ಅಜೋಲಾ ಬೆಳೆಸುವುದರಿಂದ ಪ್ರತ್ಯಕ್ಷ ಮತ್ತು ಪರೋಕ್ಷ ಲಾಭವಿದೆ ಎನ್ನುತ್ತಾ ದೇವೇಂದ್ರರ ಅನುಭವವನ್ನು ನಿವೃತ್ತ ಜಂಟಿ ಕೃಷಿ ನಿರ್ದೇಶಕ ಆರ್. ಜಿ. ಗೊಲ್ಲರ್ ಅನುಮೋದಿಸುತ್ತಾರೆ.

ಭತ್ತದ ಗದ್ದೆಯಲ್ಲಿ ಚಾಪೆಯಂತೆ ಹರಡಿಕೊಂಡಿರುವ ಅಜೋಲಾ
'ದೇವೇಂದ್ರ'ರ ದೇಸಿ ಭತ್ತದ ಲೋಕ
ದೇವೇಂದ್ರಪ್ಪ, ಅಜೋಲಾ ಸೇರಿದಂತೆ ಸಾವಯವ ವಿಧಾನದಲ್ಲಿ ವಾರ್ಷಿಕವಾಗಿ 17 ಎಕರೆಯಲ್ಲಿ ಐದಕ್ಕೂ ಹೆಚ್ಚು ದೇಸೀ ಭತ್ತದ ತಳಿಗಳನ್ನು 200 ಚೀಲದಷ್ಟು ಬೆಳೆಯುತ್ತಿದ್ದಾರೆ. ಇದಲ್ಲದೇ 27ಕ್ಕೂ ಹೆಚ್ಚು ತಳಿಗಳನ್ನು ಬೀಜಕ್ಕಾಗಿ ಬೆಳೆದುಕೊಡುತ್ತಿದ್ದಾರೆ. ಇವರ ಗದ್ದೆ ವರ್ಷಕ್ಕೆ ಎರಡು ಬಾರಿ 'ದೇಸಿ ಭತ್ತದ ತಳಿಗಳ ಕಣಜ'ವಾಗುತ್ತದೆ !
ಕೊನೆ ಮಾತು: ರಸಗೊಬ್ಬರ, ರಾಸಾಯನಿಕ ಕೀಟನಾಶಕ, ಕಳೆನಾಶಕ, ಶಿಲೀಂಧ್ರನಾಶಕ ಬಳಸದೇ ಸಾವಯವ ವಿಧಾನದಲ್ಲೇ ಭತ್ತ ಬೆಳೆಯಲುವ ಸಾಧ್ಯವಿದೆ. ಆದರೆ, ಇದಕ್ಕೆ ಬೇಕಾದ ಸಾವಯವ ಒಳಸುರಿಗಳನ್ನು ಕೃಷಿ ಇಲಾಖೆ ಸಕಾಲದಲ್ಲಿ ರೈತರಿಗೆ ಒದಗಿಸಬೇಕು ಎನ್ನುತ್ತಾರೆ ದೇವೇಂದ್ರಪ್ಪ ಭೋಯಿ.
ಭತ್ತದ ಕೃಷಿಯಲ್ಲಿ ಅಜೋಲಾ ಬಳಕೆ ಕುರಿತು ಹೆಚ್ಚಿನ ಮಾಹಿತಿಗೆ ದೇವೇಂದ್ರಪ್ಪ ಭೋಯಿ: 9900833350

