Dailyhunt Logo
  • Light mode
    Follow system
    Dark mode
    • Play Story
    • App Story
ಅನ್ನದ ಬಟ್ಟಲು: ಮಳೆ ಕೊರತೆಯ ಹುಲಿಕೆರೆಯಲ್ಲಿ 'ಹಣ್ಣಿನ ತೋಟ' ಅರಳಿದ್ದು ಹೇಗೆ?

ಅನ್ನದ ಬಟ್ಟಲು: ಮಳೆ ಕೊರತೆಯ ಹುಲಿಕೆರೆಯಲ್ಲಿ 'ಹಣ್ಣಿನ ತೋಟ' ಅರಳಿದ್ದು ಹೇಗೆ?

ಬೇಲದ ಹಣ್ಣಿನ‌ ಕೃಷಿ ಹಾಗೂ ಮೌಲ್ಯವರ್ಧನೆಯಿಂದಲೇ ನಾಡಿಗೆ ಪರಿಚಯವಾಗಿರುವ ಹುಲಿಕೆರೆಯ ಸಾವಯವ ಕೃಷಿಕ ವಿಶ್ವೇಶ್ವರ‌ ಸಜ್ಜನ್, ಮೂರು ಎಕರೆಯಲ್ಲಿ 'ಮಳೆಯಾಶ್ರಿತ'ವಾಗಿ 'ಅರಣ್ಯ ಕೃಷಿ' ಮಾಡಿದ್ದಾರೆ. ಸಜ್ಜನರ‌ ಈ ಕೃಷಿಯಲ್ಲಿ 'ಲಾಭ- ನಷ್ಟ'ದ ಬಾಬತ್ತನ್ನು ಪಕ್ಕಕ್ಕಿಟ್ಟು, ಸುಸ್ಥಿರ ಕೃಷಿಯ ಲಾಭಗಳನ್ನು ಗಮನಿಸಿದರೆ, ಕಡಿಮೆ ಮಳೆ ಬೀಳುವ ಬಯಲು ಸೀಮೆಯಲ್ಲಿ ಅದ್ಭುತವಾದ ಕೃಷಿ ಅರಣ್ಯವನ್ನು ಕಟ್ಟುವುದಕ್ಕೆ ಚಂದದ ಆಲೋಚನೆ ಹೊಳೆಯುತ್ತದೆ.
ಒಮ್ಮೆ ಈ ಬರಹವನ್ನು ಓದುತ್ತಾ, ಸಜ್ಜನರ ಅರಣ್ಯ ಕೃಷಿಯನ್ನು ಒಂದು ಸುತ್ತು ಹಾಕಿ‌ ಬನ್ನಿ'

ಅದು ಮಾರ್ಚ್‌ ತಿಂಗಳ ಮಧ್ಯಾಹ್ನದ ಬಿರು ಬಿಸಿಲು. ಹೊರಗಡೆ ಮೂವತ್ತೇಳು ಡಿಗ್ರಿ. ಹುಲಿಕೆರೆಯ ವಿಶ್ವೇಶ್ವರ ಸಜ್ಜನ್ ಅವರ ಹಣ್ಣಿನ ತೋಟದೊಳಗೆ ಅದಕ್ಕಿಂತ ಒಂದೆರಡು ಡಿಗ್ರಿ ಕಡಿಮೆ, ಕೊಂಚ ತಂಪಿನ ವಾತಾವರಣ. ಗಿಡಗಳಲ್ಲೆಲ್ಲ ಹಸಿರು ಮುಕ್ಕಳಿಸುತ್ತಿದ್ದರೆ, ಮರಗಳ ತುಂಬಾ ಬೇಲ, ಸಪೋಟ ತೊನೆದಾಡತ್ತಿದ್ದವು. ಮುಳ್ಳುಗಳ ನಡುವೆ ಬಾರ್ಬಡಾಸ್ ಚೆರ‍್ರಿ ಹಣ್ಣು, ಕವಳಿ ಕಾಯಿಗಳು ಇಣುಕುತ್ತಿದ್ದರೆ, ನೇಪಿಯರ್ ಹುಲ್ಲು ನೆಲದಲ್ಲೇ ಗುಪ್ಪೆಗಳಾಗಿದ್ದವು.‌..‌

'ಬೇಸಿಗೆಯಲ್ಲೂ ತೋಟ ಹಸಿರಾಗಿ, ತಂಪಾಗಿರುವುದರ ಹಿಂದಿನ ರಹಸ್ಯವೇನು' ಎಂದು ಸಜ್ಜನರನ್ನು ಕೇಳಿದರೆ, 'ಸೂಕ್ತ ಮಣ್ಣಿನ ಸಂರಕ್ಷಣೆ, ಸಮರ್ಪಕವಾದ ಮಳೆ ನೀರು ನಿರ್ವಹಣೆ, ಸ್ಥಳೀಯ ಹವಾಮಾನಕ್ಕೆ ಒಗ್ಗಿ ಬೆಳೆಯುವ ಬೆಳೆಗಳ ನಾಟಿ..ಅಷ್ಟೇ'- ಎನ್ನುತ್ತಾ ತೋಟ ಕಟ್ಟಿದ ಸರಳ ಸೂತ್ರವನ್ನು ತೆರೆದಿಟ್ಟರು.

'ಇದನ್ನೆಲ್ಲ ಹೇಗೆ ಕಲಿತಿರಿ'- ಎಂದರೆ‌, 'ಇದು ಪ್ರಕೃತಿಯೇ ಕಲಿಸಿದ ಪಾಠ' ಎಂದು ಮುಗುಳುನಗೆ ಬೀರಿದರು ಸಜ್ಜನ್‌. 'ಬನ್ನಿ ಸುತ್ತಾಡುತ್ತಾ ಎಲ್ಲವನ್ನೂ ಮಾತಾಡೋಣ' ಎಂದು ಕರೆದುಕೊಂಡು ತೋಟದತ್ತ ಕರೆದುಕೊಂಡು ಹೊರಟರು.

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲ್ಲೂಕಿನ ಹುಲಿಕೆರೆಯ ವಿಶ್ವೇಶ್ವರ ಸಜ್ಜನ್ ಅವರು ಮೂರು ಕಾಲು ಎಕರೆಯಲ್ಲಿ ಮಳೆಯಾಶ್ರಿತವಾಗಿ ಕೃಷಿ ಅರಣ್ಯ (ಆಗ್ರೊ ಫಾರೆಸ್ಟ್ರಿ) ತೋಟ ಮಾಡಿದ್ದಾರೆ. ಈ ತೋಟಕ್ಕೆ 'ಜೀವನ ವನ' ಎಂದು ಹೆಸರಿಟ್ಟಿದ್ದಾರೆ.

ತೋಟದಲ್ಲಿ ಕಾಲು ಎಕರೆಯಷ್ಟು ಕೃಷಿ ಹೊಂಡವಿದೆ. ಉಳಿದ ಭಾಗದಲ್ಲಿ ಸ್ಥಳೀಯ ವಾತಾವರಣಕ್ಕೆ ಹೊಂದಿಕೊಳ್ಳುವ ವೈವಿಧ್ಯಮಯ ಹಣ್ಣಿನ ಬೆಳೆಗಳಿವೆ. ಒಂದೂವರೆ ಎಕರೆಯಲ್ಲಿ 30 ಬೇಲ(ವಿಶೇಷವಾಗಿ ವಾಣಿಜ್ಯ ಬೆಳೆಯಾಗಿ ಬೆಳೆಸಿದ್ದಾರೆ). ಎರಡು ಎಕರೆಯಲ್ಲಿ ಬೆಟ್ಟದ ನೆಲ್ಲಿ ಕಾಯಿ, ಒಂದು ಎಕರೆಯಲ್ಲಿ ಜಂಬು ನೇರಳೆ ಬೆಳೆದಿದ್ದಾರೆ. ಒಟ್ಟು 40 ನೇರಳೆ ಗಿಡಗಳಿವೆ‌. ಒಂದು ಸಾಲಿನಲ್ಲಿ ಬಾರ್ಬುಡಸ್ ಚರ್ರಿ, ಇನ್ನೊಂದು ಕಡೆ ಸೀತಾಫಲ, ಅಲ್ಲಲ್ಲಿ ನಿಂಬೆ ಗಿಡಗಳಿವೆ. ಜೊತೆಗೆ ಕವಳಿ ಹಣ್ಣಿನ ಗಿಡಗಳನ್ನೂ ಬೆಳೆಸಿದ್ದಾರೆ. ಜಮೀನಿನ ಗಡಿಯಲ್ಲಿ ಹುಣಸೆ ಮರಗಳಿವೆ. ನಡು ನಡುವೆ ನುಗ್ಗೆ ಮರಗಳಿವೆ. ಕ್ರಿಕೆಟ್‌ಬಾಲ್‌ ತಳಿಯ ಸಪೋಟ ಮರಗಳಿವೆ. ಅಲ್ಲಲ್ಲಿ ನೇಪಿಯರ್ ಹುಲ್ಲಿನ ಗುಪ್ಪೆಗಳಿವೆ. ಒಟ್ಟಾರೆ, ಎಲ್ಲ ಮರಗಳೂ ಬೇಸಿಗೆಯಲ್ಲೂ 'ಹಸಿರಾಗಿರುತ್ತವೆ, ಕೆಲವು ಮರಗಳು ಹಣ್ಣುಗಳನ್ನು ತುಂಬಿಸಿಕೊಂಡಿರುತ್ತವೆ.

ಮೊದಲು ನೀರು, ಆಮೇಲೆ ಉಳಿದಿದ್ದು..

ಹಸಿರು, ಫಸಲಿನ ಸಂಭ್ರಮದ ನಡುವೆ ಸಜ್ಜನ್ ಅವರ ಈ ಕೃಷಿ - ಅರಣ್ಯ ಪದ್ಧತಿ ಅಳವಡಿಸಿರುವ ಜಮೀನು ನನಗೆ ವಿಶಿಷ್ಟವಾಗಿ ಕಾಣಿಸಿದ್ದು, ಜಮೀನಿನಲ್ಲಿ ಅಳವಡಿಸಿರುವ 'ಮಣ್ಣು ನೀರಿನ ಸಂರಕ್ಷಣೆ'ಯ ತಂತ್ರಜ್ಞಾನ, ಹಣ್ಣಿನ ಬೆಳೆಗಳ ಸಂಯೋಜನೆ ಮತ್ತು ಮುಖ್ಯವಾಗಿ ಗಾಳಿ, ನೀರು, ಬಿಸಿಲು ಸೇರಿ ಪಂಚಭೂತಗಳನ್ನು ಸಮರ್ಪಕವಾಗಿ ಬಳಸಿಕೊಂಡಿರುವ ಪರಿ.

ಹುಲಿಕೆರೆಯ ವಾರ್ಷಿಕ ಮಳೆ ಪ್ರಮಾಣ 400 ರಿಂದ 450 ಮಿ.ಮೀ. ಅದೂ ಅನಿಶ್ಚಿತತೆ. ಆ ಪ್ರದೇಶದಲ್ಲಿ ಸಜ್ಜನ್‌ ಮಳೆಯಾಧಾರಿತವಾಗಿ ಕೃಷಿ ಮಾಡಿದ್ದಾರೆ. ಮಳೆ ನೀರನ್ನು ಸಮರ್ಪಕವಾಗಿ ಸಂಗ್ರಹಿಸಿ, ಭೂಮಿಗೆ ಇಂಗಿಸುತ್ತಿದ್ದಾರೆ. ಇಂಗಿದ ನೀರು ಮಣ್ಣಿನಲ್ಲೇ ತೇವಾಂಶವಾಗಿ ದೀರ್ಘಕಾಲ ಉಳಿಯುವಂತಾಗಲು ಮಣ್ಣಿಗೆ ಕೃಷಿ ತ್ಯಾಜ್ಯಗಳು, ಬೆಳೆಯುಳಿಕೆಗಳು ಸೇರಿದಂತೆ ಸಾವಯವ ಅಂಶಗಳನ್ನು ತುಂಬಿಸಿ ಫಲವತ್ತತೆ ಹೆಚ್ಚಿಸಿದ್ದಾರೆ.

'ಕೃಷಿಯಲ್ಲಿ ನೀರಿಗೆ ಮೊದಲ ಆದ್ಯತೆ. ಎರಡನೆಯದು ಭೂಮಿಗೆ, ಆಮೇಲೆ ಉಳಿದ ಪಂಚಭೂತಗಳಿಗೆ' ಎನ್ನುವುದು ಸಜ್ಜನ್ ಸಿದ್ದಾಂತ. ಅದಕ್ಕಾಗಿಯೇ ತೋಟದಲ್ಲಿ ಟ್ರಂಚ್‌ ಕಮ್ ಬಂಡ್‌ ವಿಧಾನದಲ್ಲಿ ಹಣ್ಣಿನ ಬೆಳೆಗಳನ್ನು ಬೆಳೆಸಿದ್ದಾರೆ. ಹತ್ತು ಅಡಿಗೆ ಒಂದರಂತೆ ಟ್ರಂಚ್ ತೆಗೆಸಿದ್ದಾರೆ. ಟ್ರಂಚ್‌ ತೆಗೆದ ಮಣ್ಣನ್ನು ಬದುವಾಗಿಸಿ, ಅದರ ಮೇಲೆ ಹಣ್ಣಿನ ಗಿಡಗಳನ್ನು ನಾಟಿ ಮಾಡಿದ್ದಾರೆ.

ವಿಶ್ವೇಶ್ವರ ಸಜ್ಜನರ ಮಳೆಯಾಶ್ರಿಯ‌ತ 'ಅರಣ್ಯ ಕೃಷಿ'ಯ ತೋಟ

ಮೂರು ಎಕರೆಯೂ ಇಂಗು ಗುಂಡಿಯೇ!

ಈ ಜಮೀನಿನ ಮೇಲ್ಭಾಗದಲ್ಲಿ ಸುಮಾರು 400 ಎಕರೆಯಷ್ಟು ಕ್ಯಾಚ್‌ಮೆಂಟ್ ಪ್ರದೇಶವಿದೆಯಂತೆ. ಅಲ್ಲಿ ಸುರಿಯುವ ಮಳೆ ನೀರು ಇವರ ತೋಟದ ಬದಿಯಲ್ಲಿ ಕಾಲುವೆ ಮೂಲಕ ಹಾದು ಹೋಗುತ್ತದೆ, ಕಾಲುವೆಯಲ್ಲಿ ಹರಿವ ಮಳೆ ನೀರನ್ನು ತೋಟಕ್ಕೆ ಹರಿಸಲು ತಿರುಗು ಗಾಲುವೆ ಮಾಡಿದ್ದಾರೆ.

ಜಮೀನಿನ ಮೇಲೆ ಸುರಿಯುವ ಮಳೆ ನೀರು ಹಾಗೂ ಜಮೀನಿಗೆ ಹರಿಯುವ ಮಳೆ ನೀರು ಟ್ರಂಚ್‌ಗಳಲ್ಲಿ ಇಂಗುತ್ತದೆ. ಹೆಚ್ಚಾದ ನೀರು ಕೃಷಿ ಹೊಂಡಕ್ಕೆ ಹರಿದು ಹೋಗುತ್ತದೆ. ಕೃಷಿ ಹೊಂಡ 9 ಲಕ್ಷ ಲೀಟರ್ ನೀರು ಹಿಡಿಯುತ್ತದೆ. ಅದು ಜಮೀನಿನ ನೀರಿನ ಬ್ಯಾಂಕ್‌ ಎನ್ನುವಾಗ ಸಜ್ಜನ್‌ ಮೊಗದಲ್ಲಿ ಕಿರು ನಗೆ. 'ಈ ಜಮೀನಿನಿಂದ ಒಂದು ಹನಿ ನೀರು ಹೊರ ಹೋಗುವುದಿಲ್ಲ. ಅದಕ್ಕೆ ಬಿಸಿಲುಗಾಲದಲ್ಲೂ ಇಲ್ಲಿನ ಗಿಡಗಳು ಹಸಿರಾಗಿವೆ, ವಾತಾವರಣ ಸ್ವಲ್ಪ ತಂಪಾಗಿರುತ್ತದೆ' ಎನ್ನುವಾಗ ಧ್ವನಿಯಲ್ಲಿ‌ ವಿಶ್ವಾಸ.‌

ಸಜ್ಜನ್‌ ಅವರಿಗೆ ನೀರಿನ ಬಗ್ಗೆ ಬಲು ಪ್ರೀತಿ. ಅದನ್ನು ಮಿತವಾಗಿ ಬಳಸಬೇಕೆಂಬ ಕಾಳಜಿ. ಇತ್ತೀಚೆಗೆ ಹವಾಮಾನ ವೈಪರೀತ್ತ್ಯದ ಕಾರಣ, ಮಳೆಯಾಗಲಿ, ನೀರಾಗಲಿ ನಮಗೆ ಬೇಕಾದಾಗ ಸಿಗುವುದಿಲ್ಲ. ಯಾವಾಗಲೋ ಬಂದು, ಯಾವಗಲೋ ಹೋಗುವ ಮಳೆಯನ್ನು, ಹಿಡಿದಿಟ್ಟು ಬಳಸುವುದೊಂದೇ ಪರಿಹಾರ‌' ಎಂಬುದು ಅವರ ಪ್ರತಿಪಾದನೆ.

'ಶಿವನ ತಲೆ ಮೇಲೆ ಗಂಗೆ ಇರುವುದು, ನೆಲದಲ್ಲಲ್ಲ. ವಿಜ್ಞಾನ ಬಂದ ಮೇಲೆ ನಾವು ಪಾತಾಳದಿಂದ ನೀರು ದೋಚುವ ಸಂಸ್ಕೃತಿ ಕಲಿತೆವು, ಅಂತರ್ಜಲ ಹಾಳು ಮಾಡಿದೆವು. ಅದಕ್ಕೆ ನಾನು ನಮ್ಮ ಜಮೀನಿನಲ್ಲಿ 'ಓಡುವ ನೀರಿನ ನಡೆಯುವಂತೆ, ನಡೆಯುವ ನೀರುವನ್ನು ತೆವಳುವಂತೆ, ತೆವಳುವ ನೀರನ್ನು ನಿಲ್ಲುವಂತೆ, ನಿಂತ ನೀರನ್ನು ಇಂಗುವಂತೆ ಮಾಡಿದ್ದೇನೆ' ಎನ್ನುತ್ತಾ ತಾನು ಪಾಲಿಸುತ್ತಿರುವ 'ಜಲಸಾಕ್ಷರತೆ'ಯ ಪ್ರಾಥಮಿಕ ಪಾಠವನ್ನು ಸಜ್ಜನ್ ವಿವರಿಸಿದರು. ಇದನ್ನೆಲ್ಲ ಕೇಳುವಾಗ ಇವರ ಜಮೀನೇ ದೊಡ್ಡ ಇಂಗುಗುಂಡಿಯಂತೆ ಭಾಸವಾಗುತ್ತದೆ.‌

ಮಳೆ, ನೀರಿಗೆ ತಕ್ಕ ಬೆಳೆ

'ಯಾರೇ ಅಗಲಿ, ತಮ್ಮ ಪ್ರದೇಶದಲ್ಲಿ ವಾರ್ಷಿಕವಾಗಿ ಬೀಳುವ ಮಳೆ ಪ್ರಮಾಣ ಬೇರೆ ಮೂಲಗಳಿಂದ ಸರಾಸರಿ ಎಷ್ಟು ನೀರು ಲಭ್ಯವಿರುತ್ತದೆ ಎಂಬುದನ್ನು ಆಧರಿಸಿ, ಅದಕ್ಕೆ ತಕ್ಕಂತೆ ಬೆಳೆ ವಿನ್ಯಾಸ ಮಾಡಬೇಕು' ಎಂಬುದು ಸಜ್ಜನ್ ಕೃಷಿ ನೀತಿ. ಇದೇ ರೀತಿಯಲ್ಲೇ ಹುಲಿಕೆರೆಯಲ್ಲಿ ಬೀಳುವ ವಾರ್ಷಿಕ ಮಳೆಗೆ ತಕ್ಕಂತೆ, ಜಮೀನಿನಲ್ಲಿ ಬೆಳೆ ವಿನ್ಯಾಸ ಮಾಡಿದ್ದಾರೆ. ಆ ಬೆಳೆ ಆಯ್ಕೆ ಮಾಡಿಕೊಂಡಿದ್ದು ಮತ್ತು ಅವುಗಳನ್ನು ಗೆಲ್ಲಿಸಿರುವ ಹಿಂದಿನ ಕಾರಣವೂ ಸ್ವಾರಸ್ಯಕರವಾಗಿದೆ.

80-90ರ ದಶಕದಲ್ಲಿ ಬರ ಬಂದಾಗ ಹುಲಿಕೆರೆಯ ಸುತ್ತಮುತ್ತಲಿನ ಕೆರೆಗಳು ಬತ್ತಿದ್ದವು. ಹಳ್ಳಗಳು ಒಣಗಿದ್ದವು.ಇವುಗಳನ್ನು ಆಧರಿಸಿ ಕೃಷಿ ಮಾಡುತ್ತಿದ್ದ ತೆಂಗಿನ ತೋಟಗಳೆಲ್ಲ ಒಣಗಿದವು. ಆದರೆ‌ ಆಗ, ತೆಂಗಿನ ಮರಗಳು ಸತ್ತರೂ, ಹುಲಿಕೆರೆ ಸುತ್ತವಿದ್ದ ಬೇಲ, ಹುಣಸೆಯಂತಹ ಮರಗಳು ಮಾತ್ರ ಬದುಕಿದ್ದವು.

ಇದು ರೈತರಿಗೆ 'ಪ್ರಕೃತಿ ಹೇಳಿದ ಪಾಠ'. ಈ ಪಾಠವನ್ನು ನೆನಪಿಟ್ಟುಕೊಂಡಿದ್ದ ಸಜ್ಜನ್, ಅರಣ್ಯ ಕೃಷಿ ತೋಟದ ಪ್ರಯೋಗಕ್ಕಿಳಿದಾಗ,‌ ತಮ್ಮೂರಿನಲ್ಲಿ ಬರಗಾಲದಲ್ಲೂ ಯಾವ ಹಣ್ಣಿನ ಗಿಡಗಳು ಬದುಕಿದ್ದವೋ, ಅವುಗಳನ್ನೇ ಜಮೀನಿನಲ್ಲಿ ನಾಟಿ ಮಾಡಲು ತೀರ್ಮಾನಿಸಿದರು. ಮೊದಲಿಗೆ ಕಡಿಮೆ ನೀರಿನಲ್ಲಿ ಬೆಳೆಯುವ, ಬರ ಸಹಿಷ್ಣು ಬೇಲದ ಹಣ್ಣಿನ ಗಿಡಗಳ ನಾಟಿ ಮಾಡಿಸಿದರು. ಸ್ಥಳೀಯ ವಾಗಿ ಬೆಳೆಯುವ ಸೀತಾಫಲ, ಕಡಿಮೆ ನೀರಿನಲ್ಲಿ ದೀರ್ಘಕಾಲ ಉಳಿಯುವ ಬಾರ್ಬಡಸ್‌ ಚರ್ರಿ ಗಿಡಗಳನ್ನು ತಂದು ಬೆಳೆಸಿದರು. ಇದೇ ತರಹದ ಮುಳ್ಳಿನ ಜಾತಿಯ ಕವಳೆ ಹಣ್ಣು, ತೋಟದ ಗಡಿಯಲ್ಲಿ ಹುಣಸೆ, ಸಿಹಿ ಹುಣಸೆ, ಬೆಟ್ಟದ ನೆಲ್ಲಿ ಗಿಡಗಳನ್ನು ಬೆಳೆಸಿದರು. ಆರಂಭದಲ್ಲಿ ನೀರು ಕೊಟ್ಟು ಆರೈಕೆ ಮಾಡಿದರೆ, ದೀರ್ಘಕಾಲ ಫಸಲು ಕೊಡುವ ಸಪೋಟ, ಸ್ವಲ್ಪ ನಿಂಬೆ ಗಿಡಗಳನ್ನು ಹಾಕಿದರು.

'ನೋಡಿ, ಇವೆಲ್ಲವೂ 450 ಮಿ.ಮೀ ಮಳೆ ಬೀಳುವ ನಮ್ಮ ಊರಿನ ಹವಾಮಾನಕ್ಕೆ ಒಗ್ಗಿ ಬೆಳೆಯುವ ಮಳೆಯಾಶ್ರಿತ ಹಣ್ಣಿನ ಬೆಳೆಗಳು. ಇವುಗಳಿಗೆ ನಾಟಿ ಮಾಡಿದ ಆರಂಭದಲ್ಲಿ ನೀರು ಕೊಟ್ಟು, ಗೊಬ್ಬರ ಹಾಕಿದೆ. ಆಗಾಗ್ಗೆ ಜೀವಾಮೃತ, ಗೋನಂದಾಜಲ ಕೊಟ್ಟು ಆರೈಕೆ ಮಾಡಿದೆ. ಗಿಡಗಳು ಸೊಂಪಾಗಿ ಬೆಳೆದವು. ಕ್ರಮೇಣ ಜಮೀನಿನ ಮಣ್ಣು ಸುಧಾರಣೆಯಾಯಿತು, ಜಮೀನಿನ ವಾತಾವರಣವೇ ಬದಲಾಯಿತು. ಇದೆಲ್ಲ ಮಾಡಿ ಆರೇಳು ವರ್ಷದ ಮೇಲಾಯಿತು. ಈಗ ಅಂಥದ್ದೇನೂ ಆರೈಕೆ ಮಾಡಲ್ಲ, ವಾರ್ಷಿಕವಾಗಿ ಫಸಲು‌ ನಿರಂತರವಾಗಿದೆ' - ಸಜ್ಜನ್ ವಿವರಣೆ.

ಅರಣ್ಯ ಕೃಷಿ ಪದ್ಧತಿ ಅಳವಡಿಸಿರುವ ಈ ಜಮೀನಿಗೆ ಒಂದಿನಿತೂ ರಾಸಾಯನಿಕ, ಕೀಟ ನಾಶಕ‌ ಸೋಕಿಸಿಲ್ಲ‌. ಇವರದ್ದು ಪ್ರಕೃತಿಪೂರಕ ಕೃಷಿ. 'ಸಾವಯವ ಕೃಷಿ ಅಂದ್ರೆ‌ಬಹಳ ದೊಡ್ಡದಂತ ತಿಳ್ಕೋಬೇಡ್ರಿ, 'ಮರದಿಂದ ಬಿದ್ದಿರುವ ಎಲೆಯನ್ನು ಬೇರಿಗೆ ಉಣ್ಣಿಸುವ ಕಲೆಯೇ ಸಾವಯವ ಕೃಷಿ' ಎಂದು ಸರಳವಾಗಿ ಸಾವಯವ ಕೃಷಿಯ ಅರ್ಥವನ್ನು ಒಂದೇ‌ ಸಾಲಿನಲ್ಲಿ‌ ಹೇಳಿ ಮುಗಿಸಿದರು ಸಜ್ಜನ್.‌

ಬೇಲದಿಂದ ಒಳ್ಳೆ ಆದಾಯ

ಈ ಜಮೀನಿನ ನೆಲದಲ್ಲಿ ಬೇಲದ ಗಿಡಗಳು ಚೆನ್ನಾಗಿ ಬೆಳೆಯುತ್ತವೆ ಎಂದು ಗೊತ್ತಾದ ಮೇಲೆ ಆಂಧ್ರದ ರಾಜಮಂಡ್ರಿಯಿಂದ ಕಸಿ ಬೇಲದ ಗಿಡಗಳನ್ನು ತಂದು ಬೆಳೆಸಿದ್ದಾರೆ. ಇವುಗಳಿಗೆ ಮಳೆ ನೀರೇ ಆಶ್ರಯ. ಫಲವತ್ತಾದ ಭೂಮಿಯಲ್ಲಿ ಸಿಗುವ ಕೃಷಿ ತ್ಯಾಜ್ಯವೇ ಗೊಬ್ಬರ. ಒಂದೂವರೆ ಎಕರೆಯಲ್ಲಿ ನೂರಕ್ಕೂ ಹೆಚ್ಚು ಬೇಲದ ಗಿಡಗಳನ್ನು ಬೆಳೆಸಿದ್ದರು. ಸದ್ಯ 30 ಗಿಡಗಳು ಮರಗಳಾಗಿ, ಕೆಲವು ವರ್ಷಕ್ಕೊಮ್ಮೆ, ಇನ್ನೂ ಕೆಲವು ವರ್ಷಕ್ಕೆರಡು ಬಾರಿ, ಕೆಲವು ಮರಗಳು ವರ್ಷಪೂರ್ತಿ ಹಣ್ಣು ಕೊಡುತ್ತಿವೆ. 'ಬೇಲ ಒಂದರಿಂದಲೇ ವರ್ಷಕ್ಕೆ ₹ 3 ಲಕ್ಷದಿಂದ ₹4 ಲಕ್ಷದವರೆಗೆ ಆದಾಯವಿದೆ' ಎನ್ನುತ್ತಾರೆ ಸಜ್ಜನ್.

'ಬೇಲ ಬರ ಸಹಿಷ್ಣು ಮರ. 2021-22 ರಲ್ಲಿ ಕೂಡ್ಲಿಗೆ ತಾಲ್ಲೂಕು ಬರದಿಂದ ಕಂಗೆಟ್ಟಿತ್ತು. ಆದರೆ ನಮ್ಮ ತೋಟದ ಬೇಲದ ಮರಗಳು ಸಮೃದ್ಧಿಯಾಗಿ ಹಣ್ಣು ನೀಡುತ್ತಿದ್ದವು' ಎಂದು‌ ಸಜ್ಜನ್ ಮೆಲುಕು ಹಾಕುತ್ತಾರೆ. ಇದೇ ರೀತಿ ಸೀತಾಫಲ, ಸಪೋಟ, ನೆಲ್ಲಿ, ಹುಣಸೆ, ನೇರಳೆ ಸೇರಿದಂತೆ ಹೆಚ್ಚು ಸ್ಳಳೀಯ ಹವಾಮಾನಕ್ಕೆ ಹೊಂದುವ‌ 50 ಕ್ಕೂ ಹೆಚ್ಚು ಜಾತಿಯ ಮರಗಳನ್ನು ತೋಟದಲ್ಲಿ ಬೆಳೆಸಿದ್ದಾರೆ.

'ಮಾವು ವರ್ಷಕ್ಕೊಮ್ಮೆ ಫಸಲು ಕೊಟ್ಟರೆ, ಈ ಬಾರ್ಬಡಾಸ್‌ ಚರ್‍ರಿ ವರ್ಷಕ್ಕೆ ಎರಡು ಬೆಳೆ ಗ್ಯಾರಂಟಿ. ಸ್ವಲ್ಪ ನೀರಿನಾಶ್ರಯ ಕೊಟ್ಟರೆ ವರ್ಷಕ್ಕೆ ಮೂರು ಬಾರಿ ಫಸಲು ಕೊಡುತ್ತದೆ. ಒಂದು ಗಿಡ 15 ರಿಂದ 20 ಕೆಜಿ ಹಣ್ಣು ಕೊಡುತ್ತದೆ(ಮೂರು ಅವಧಿ ಸೇರಿದರೆ 30 ಕೆಜಿ ವರೆಗೂ ಆಗಬಹುದು). 20 ಗಿಡ ಇದ್ದರೆ ಸಾಕು. ಜತೆಗೆ ಮೌಲ್ಯವರ್ಧನೆ ಮಾಡಿದರೆ ಒಳ್ಳೆಯ ಲಾಭ‌' ಎಂದು ಮಳೆಯಾಶ್ರಿತ ಬೆಳೆಗಳ ಅನುಕೂಲಗಳನ್ನು ಉದಾಹರಣೆಯೊಂದಿಗೆ ವಿಶ್ಲೇಷಿಸುತ್ತಾರೆ ಸಜ್ಜನ್‌.

ಅರಣ್ಯ ಕೃಷಿ - ಸೋವಿ ಕೃಷಿ

'ಅರಣ್ಯ ಕೃಷಿ ಪರಿಕಲ್ಪನೆಯ ತೋಟ ಬಯಲು ಸೀಮೆಗೆ ಹೊಂದಿಕೆಯಾಗುತ್ತದೆ, ಈ ಹೊತ್ತಿನ ಅಗತ್ಯವೂ ಕೂಡ. ತೋಟ ಕಟ್ಟುವುದಕ್ಕೆ ಮಾತ್ರವಲ್ಲ, ನಿರ್ವಹಣೆಯೂ ಸುಲಭ, ಖರ್ಚು ಕಡಿಮೆ‌. ಕೂಲಿ ಕಾರ್ಮಿಕರ ಸಮಸ್ಯೆ ಇರುವುದಿಲ್ಲ, ಪ್ರತಿ‌ದಿನ ನಿರ್ವಹಣೆಯ ತಲೆನೋವಿಲ್ಲ. ಒಮ್ಮೆ ನೆಟ್ಟ ಗಿಡ‌ ಮರವಾಗಿ, ಫಸಲು ಆರಂಭವಾದರೆ ಸಾಕು. ಒಂದು ಎಚ್ಚರಿಕೆ ಏನೆಂದರೆ ಆಯಾ ಪ್ರದೇಶಕ್ಕೆ‌ ಹೊಂದಿ ಬೆಳೆಯುವ ಹಣ್ಣು, ಕಾಡು‌ ಮರಗಳನ್ನು ಮಾತ್ರ ಬೆಳೆಸಿದರೆ ಎಂಥ ಹವಾಮಾನ ವೈಪರೀತ್ಯವನ್ನು ಸಹಿಸಿ ಬೆಳೆಯುತ್ತವೆ' ಎಂದು ಉದಾಹರಣೆಗಳೊಂದಿಗೆ ಸಜ್ಜನ್ ವಿವರಿಸುತ್ತಾರೆ.

ಕೃಷಿ ಅರಣ್ಯ ವಿಷಯದಲ್ಲಿ 'ಬೆಟ್ಟದ ಮೇಲೊಂದು ಹುಟ್ಟಿದ ವೃಕ್ಷಕ್ಕೆ ನೀರೆರೆದವರು ಯಾರು..' ಎಂಬ ಶರಣರ ಮಾತು ಬಯಲು ಸೀಮೆ ರೈತರಿಗೆ ಪಾಠವಾಗ ಬೇಕು ಎನ್ನುವುದು ಸಜ್ಜನ್ ಅಭಿಪ್ರಾಯ. 'ನೋಡಿ, ಕಾಡಿನಲ್ಲಿ ಸ್ವಾಭಾವಿಕ ವಾಗಿ ಬೆಳೆಯುವ ಗಿಡಗಳಿಗೆ ಯಾರು ನೀರು ಎರೆಯುತ್ತಾರೆ, ಆರೈಕೆ ಮಾಡುತ್ತಾರೆ? ಹಾಗಾಗಿ ನಮ್ಮ ಜಮೀನಿನಲ್ಲಿ, ನಮ್ಮ ಹವಾಮಾನಕ್ಕೆ ಒಗ್ಗಿ ಬೆಳೆಯುವ ಬೆಳೆಗಳನ್ನೇ ಹಾಕಬೇಕು. ನಾನು ಬೇಲ, ನಿಂಬೆ, ಸೀಬೆ, ಸಪೋಟ, ಹುಣಸೆ ಹಾಕಿದ್ದು ಇದೇ ಕಾರಣಕ್ಕೆ' ಎನ್ನುತ್ತಾರೆ ಅವರು.

ಈ ಪ್ರದೇಶದಲ್ಲಿ ಮಳೆ ಅನಿಶ್ಚಿತತೆ ಹೆಚ್ಚು. ಇವರ ತೋಟದಲ್ಲಿ ಕೃಷಿ ಹೊಂಡ ತೆಗೆಸಿದಾಗಿನಿಂದ ಎರಡು ವರ್ಷ ಮಳೆ ಬಂದಿರಲಿಲ್ಲ. ಆದರೆ, ಯಾವುದೋ ಒಂದು ವರ್ಷದಲ್ಲಿ ಎರಡು ಬಾರಿ ತುಂಬುವಷ್ಟು ಮಳೆ‌ ಬಂದಿತ್ತು.‌ ಮಾತ್ರವಲ್ಲ ಬೆಳೆಗಾಗುವಷ್ಟು ಮಳೆ ಬಂತು. ಮಣ್ಣು- ನೀರಿನ ಸಂರಕ್ಷಣೆ ಮಾಡಿರುವ, ಮಣ್ಣಿಗೆ ಸಾವಯವ ಪದಾರ್ಥಗಳನ್ನು ಉಣಿಸಿ ಫಲವತ್ತಾಗಿಸುವ ಇವರ ಜಮೀನು, ಹಲವು ಬರಗಾಲಗಳನ್ನು ತಡೆದುಕೊಂಡಿದೆ.

'ಇಡೀ ತಾಲ್ಲೂಕಿಗೆ ಬರ ಬಂದಾಗ, ನನಗೆ ಬರ ಇರಲಿಲ್ಲ. ಈಗಲೂ ಇಲ್ಲ. ಏಕೆಂದರೆ, ಬರವನ್ನು ಸಹಿಸಿಕೊಂಡು ಬೆಳೆಯುವ ಸ್ಥಳೀಯ ಬೆಳೆಗಳನ್ನು ನಾನು‌ ಆಯ್ಕೆ ಮಾಡಿಕೊಂಡು ಬೆಳೆದಿದ್ದೇನೆ' ಎಂದು ಹೆಮ್ಮೆಯಿಂದ‌ ಹೇಳುತ್ತಾರೆ ವಿಶ್ವೇಶ್ವರ ಸಜ್ಜನ್.

ಮಾರಾಟವಿಲ್ಲ, ಮೌಲ್ಯವರ್ಧನೆಯೇ ಎಲ್ಲ…

ಸಜ್ಜನ್‌ ಅವರು ಜಮೀನಿನಲ್ಲಿ ಇಷ್ಟೆಲ್ಲ ಹಣ್ಣಿನ ಮರಗಳನ್ನು ಬೆಳೆಸಿದ್ದರೂ, ಯಾವ ಹಣ್ಣುಗಳನ್ನೂ ಮಾರಾಟ ಮಾಡುವುದಿಲ್ಲ. ಬದಲಿಗೆ, ಎಲ್ಲ ಹಣ್ಣುಗಳನ್ನು ಮೌಲ್ಯವರ್ದಿಸಿ, ಜ್ಯೂಸ್, ಜ್ಯಾಮ್, ಸ್ಕ್ವಾಷ್ ಸೇರಿದಂತೆ ವಿವಿಧ ರೂಪಗಳಿಗೆ ಪರಿವರ್ತಿಸಿ ಮಾರಾಟ ಮಾಡುತ್ತಾರೆ. ಉತ್ಪನ್ನಗಳ ತಯಾರಿಕೆಗಾಗಿ ಮನೆಯಲ್ಲಿಯೇ 'ಮೌಲ್ಯವರ್ಧನೆ ಘಟಕ' ತೆರೆದಿದ್ದಾರೆ. 30ಕ್ಕೂ ಹೆಚ್ಚು ಸ್ಥಳೀಯ ಮಹಿಳೆಯರು, ಯುವಜನರಿಗೆ ಉದ್ಯೋಗ ನೀಡಿದ್ದಾರೆ. ಇದರ ಜೊತೆಗೆ, ಕೂಡ್ಲಿಗಿ ಹೈವೇ ರಸ್ತೆಯ ಬದಿ ತಮ್ಮದೇ ಆದ 'ಆನಂದ ವಿಹಾರ' ಎಂಬ ಹೋಟೆಲ್ ತೆರೆದಿದ್ದಾರೆ. ಈ ಹೋಟೆಲ್‌ನಲ್ಲಿ ತಮ್ಮ ಜಮೀನಿನಲ್ಲಿ ಆಯಾ ಕಾಲದಲ್ಲಿ ಬೆಳೆಯುವ ಹಣ್ಣುಗಳನ್ನು ಜ್ಯೂಸ್ ಮಾಡಿ ಗ್ರಾಹಕರಿಗೆ ಕೊಡುತ್ತಾರೆ.

'ನಾನು ಹಣ್ಣನ್ನು ಮಾರುವುದಿಲ್ಲ. ಹಣ್ಣನ್ನು ಮೌಲ್ಯವರ್ಧಿಸಿ ಸ್ಕ್ವಾಶ್, ಜ್ಯೂಸ್, ಜಾಮ್ ಮಾಡಿ ನನ್ನದೇ ಬ್ರ್ಯಾಂಡ್‌ನಲ್ಲಿ ಮಾರುತ್ತೇನೆ. ಒಂದು ಬೇಲದ‌ ಹಣ್ಣು ಮಾರಿದರೆ ₹40 ಸಿಗುತ್ತದೆ. ಅದನ್ನೇ ಜ್ಯೂಸ್ ಮಾಡಿದರೆ ₹120 ರೂ (ಮೂರು ಲೊಟ ಜ್ಯೂಸ್, ಒಂದು‌ ಲೋಟಕ್ಕೆ ₹40). ಈ ಸೂತ್ರವನ್ನು ನಾನು ಚರ್ರಿ, ಸಪೋಟ, ಸೀತಾಫಲ ಸೇರಿ ನನ್ನಲ್ಲಿ ಬೆಳೆಯುವ ಎಲ್ಲ ಹಣ್ಣುಗಳಿಗೂ ಅನ್ವಯಿಸುತ್ತೇನೆ. ಅದಕ್ಕಾಗಿಯೇ ಮೌಲ್ಯವರ್ಧಿಸಿ ಮಾರಾಟ ಮಾಡುತ್ತೇನೆ' - ಇದು ಸಜ್ಜನ್ ಅವರ ಲೆಕ್ಕಾಚಾರ.

ಬೇಲವನ್ನು‌ ಹಣ್ಣಾಗಿಸಿ, ಪಲ್ಪ ಅನ್ನು ಒಣಗಿಸುವ ನೈಸರ್ಗಿಕ ಡ್ರೈಯರ್

ಬೇಲದ ಹಣ್ಣಿನ ರಾಯಭಾರಿ

ವಿಶ್ವೇಶ್ವರ ಸಜ್ಜನ್‌ ನಾಡಿಗೆ ಪರಿಚಯವಾಗಿದ್ದೇ 'ಬೇಲದ ಹಣ್ಣಿನ' ಮೂಲಕ. ಅವರಿಗೆ ಈ ಬೇಲದ ಹಣ್ಣಿನ ಮರಗಳನ್ನು‌ ವಾಣಿಜ್ಯ ಕೃಷಿಯನ್ನಾಗಿ ಮುಂದುವರಿಸಲು ಉತ್ತೇಜನ‌ ನೀಡಿದ್ದು, ವಿಶ್ವಾಸ ಮೂಡಿಸಿದ್ದು, ಅವರ ಮನೆ ಮುಂದೆ ಸ್ವಾಭಾವಿಕವಾಗಿ ಬೆಳೆದಿದ್ದ ಸುಮಾರು 100 ವರ್ಷಗಳಷ್ಟು ಹಳೆಯದಾದ ಬೇಲದ ಮರ.

ಅದು ಹೇಗೆ ಎನ್ನುತ್ತೀರಾ ?

ಹಿಂದೊಮ್ಮೆ ಕೂಡ್ಲಿಗಿ ತಾಲ್ಲೂಕಿಗೆ ಬರ ಬಂದಿತ್ತು. ಎಲ್ಲ ತೋಟಗಾರಿಕೆ ಬೆಳೆಗಳು ಸೋತಿದ್ದವು. ಇವರ ಮನೆಯ ಎದುರು ಸ್ವಾಭಾವಿಕವಾಗಿ ಬೆಳೆದಿದ್ದ ಪುರಾತನ ಬೇಲದ ಮರದಲ್ಲಿ ಹಣ್ಣುಗಳು ಸಮೃದ್ಧಿಯಾಗಿದ್ದವು. 'ಅರೆ, ಯಾವ ಬೆಳೆಗಳು ಬರ ಸಹಿಸಿಕೊಳ್ಳಲಾರದೇ, ನೆಲಕಚ್ಚಿದ್ದರೆ, ಈ ಮರದಲ್ಲಿ ಇಷ್ಟು ಹಣ್ಣುಗಳಿವೆಯಲ್ಲಾ' ಎಂದು ಯೋಚಿಸಿದರು ಸಜ್ಜನ್‌. ಆಗಲೇ ನಿರ್ಧರಿಸಿದರು, 'ಬೇಲ, ಈ ನೆಲದ ಬೆಳೆ' ಎಂದು. ಈ ಒಂದು ಘಟನೆಯೇ ಅವರಿಗೆ ಕಸಿ ಬೇಲದ ಗಿಡಗಳ ತೋಟವನ್ನೇ ಮಾಡುವಂತೆ ಪ್ರೇರೇಪಿಸಿತು.

ಸಜ್ಜನ್ ಬೇಲದ ಹಣ್ಣಿನ ಎಲ್ಲ ಗುಣಗಳನ್ನೂ ಮನಸ್ಸಿಗಿಳಿಸಿಕೊಂಡಿದ್ದಾರೆ. 'ಕಪಿತ್ತ ಜಂಬೂಫಲ ಸಾರ ಭಕ್ಷಿತಂ' ಎಂಬ ಶ್ಲೋಕದಲ್ಲಿ ಬೇಲ ಮತ್ತು ನೇರಳೆ ಪ್ರಸ್ತಾಪವಿದೆ. ಇವೆರಡರಲ್ಲಿ ಭಾರಿ‌ ಔಷಧಿ ಗುಣಗಳಿವೆ. ಮಾತ್ರವಲ್ಲ, ಮಳೆ ಆಧಾರಿತವಾಗಿ ಬೆಳೆಯುವ ಮರಗಳು. ಒಂದು ಕಾಲದಲ್ಲಿ ಕೂಡ್ಲಿಗಿಯಿಂದ ನೇರಳೆ ಮತ್ತು ಬೇಲ ಆಂಧ್ರಕ್ಕೆ ಮಾರಾಟವಾಗುತ್ತಿತ್ತು. ಈಗಲೂ ಅಲ್ಲಲ್ಲಿ ಮಾರಾಟವಾಗುತ್ತಿರಬಹುದು. ಇವೆಲ್ಲ ಲೆಕ್ಕಾಚಾರ ಮಾಡಿಯೇ ಸಜ್ಜನ್ ಬೇಲದ ಹಣ್ಣಿನಿಂದ ಸ್ಕ್ವಾಶ್, ಜಾಮ್‌ ತಯಾರಿಸಿ ಮಾರುಕಟ್ಟೆ ಮಾಡುತ್ತಿದ್ದಾರೆ, ಕರ್ನಾಟಕದ ಪಾಲಿಗೆ ಅಘೋಷಿತ 'ಬೇಲದ‌ ಹಣ್ಣಿನ ರಾಯಭಾರಿ' ಯಾಗಿದ್ದಾರೆ.

ತಮ್ಮದೇ ಮಾರ್ಕೆಟ್, ತಾವೇ ಮಾರಾಟಗಾರರು

ಸಜ್ಜನ್ ಅವರ ಪತ್ನಿಯೂ ಇವರ ಕೃಷಿ ಚಟುವಟಿಕೆಯಲ್ಲಿ ಜತೆಯಾಗುತ್ತಾರೆ. ಇಬ್ಬರು ಪುತ್ರರು ಪದವೀಧರರು. ಅವರು ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕಾ ಘಟಕಗಳು ಮತ್ತು ಹೋಟೆಲ್‌ ಜವಾಬ್ದಾರಿ ತೆಗೆದುಕೊಂಡಿದ್ದಾರೆ. 'ಬೆಳೆಯುವವರು ತಮ್ಮ ಉತ್ಪನ್ನಗಳನ್ನು ತಾವೇ ಮೌಲ್ಯವರ್ಧಿಸಿ ಉತ್ಫನ್ನಗಳಾಗಿಸಿ ತಾವೇ ಮಾರುಕಟ್ಟೆ ಮಾಡಲು ನಿಲ್ಲಬೇಕು' - ಈ ತತ್ವನ್ನೇ ಸಜ್ಜನ್‌ ಪಾಲಿಸುತ್ತಿದ್ದಾರೆ. ಬೇಲ, ಹುಣಸೆ‌ ಸೇರಿದಂತೆ ತಾವು ಬೆಳೆಯುವ ಎಲ್ಲ‌ ಹಣ್ಣುಗಳನ್ನೂ ಮೌಲ್ಯರ್ಧನೆ ಮಾಡಿ ತಮ್ಮದೇ ಬ್ರ್ಯಾಂಡ್‌' ಅಡಿಯಲ್ಲಿ ಉತ್ಪನ್ನಗಳನ್ನು ತಯಾರಿಸಿ, ಬೆಂಗಳೂರಿನಲ್ಲಿ ವಾರಕ್ಕೊಮ್ಮೆ, ತಿಂಗಳಿಗೊಮ್ಮೆ ನಡೆಯುವ ಸಸ್ಯ‌ಸಂತೆ, ರೈತ ಸಂತೆ, ವರ್ಷಕ್ಕೊಮ್ಮೆ ನಡೆಯುವ ಕೃಷಿ ಮೇಳಗಳಲ್ಲಿಟ್ಟು, ತಾವೇ ನಿಂತು ಮಾರಾಟ ಮಾಡುತ್ತಾರೆ. ಪ್ರತಿ ವಸ್ತುವನ್ನು ಮಾರಾಟ ಮಾಡುವಾಗ, ಆ ಪದಾರ್ಥಗಳ ಔಷಧೀಯ ಗುಣ, ಆರೋಗ್ಯದ ಗುಣವನ್ನು ಗ್ರಾಹಕರಿಗೆ ಮನದಟ್ಟು ಮಾಡಿಕೊಡುತ್ತಾರೆ.

'ನಮಗಿರುವ ಉತ್ಪನ್ನಗಳ ಬೇಡಿಕೆಯನ್ನು ಪೂರೈಸಲು ನಾವು ಬೆಳೆಯುವ ಬೇಲ, ನೇರಳೆ ಮತ್ತಿತರ ಹಣ್ಣುಗಳು ಸಾಕಾಗುವುದಿಲ್ಲ. ಎಷ್ಟೋ ಸಾರಿ, ಬೇಲದ ಹಣ್ಣನ್ನು ಹೊರಗಿನಿಂದ ಖರೀದಿಸಿ ತರುತ್ತೇವೆ. ಈ ಉತ್ಪನ್ನಗಳಿಗೆ ಅಷ್ಟು ಬೇಡಿಕೆ ಇದೆ' ಎನ್ನುತ್ತಾರೆ ಸಜ್ಜನ್‌.

ಕೊನೆಯದಾಗಿ…

ಮಳೆ ಆಧಾರಿತ ಕೃಷಿಗೆ ಮರ ಆಧಾರಿತ ಕೃಷಿಯೇ ಸೂಕ್ತ. ಆದರೆ, ಶ್ರೀಗಂಧ, ರಕ್ತಚಂದನದಂತಹ ಮರಗಳನ್ನಷ್ಟೇ ನಾಟಿ ಮಾಡಿ ಮರ ಆಧಾರಿತ ಕೃಷಿ ಮಾಡುತ್ತೇನೆ ಎನ್ನುವುದು ಸರಿಯಾದ ಕ್ರಮವಲ್ಲ. ಬದಲಿಗೆ ಅಂಥ ಮರಗಳು ಶೇ 20 ರಷ್ಟಿರಲಿ, ವಿಮೆಯಂತೆ. ಉಳಿದಂತೆ ಆಯಾ ಪ್ರದೇಶಗಳಿಗೆ ಒಗ್ಗಿ‌ ಬೆಳೆಯುವ ಹಣ್ಣಿನ ಮರಗಳಿರಲಿ ಎಂಬುದು ಸಜ್ಜನ್ ಆಶಯ ಮತ್ತು ಸಲಹೆ.

ಇಂಥ ಆಶಯವನ್ನಿಟ್ಟುಕೊಂಡೇ, ಹೊಸದಾಗಿ ತೋಟ ಕಟ್ಟುವವರಿಗೆ ಸಜ್ಜನ್ ಮಾರ್ಗದರ್ಶನ ನೀಡುತ್ತಿದ್ದಾರೆ. 'ಯುವರ್ ಡ್ರೀಮ್ / 'ನಿಮ್ಮ ಕನಸು' ಎಂಬ ಯೋಜನೆ ಮೂಲಕ, ಹೊಸದಾಗಿ ತೋಟ ಮಾಡುವವರು, ಅವರಿಷ್ಟದಂತೆ ತೋಟ ಕಟ್ಟಿಕೊಳ್ಳುವ ತಂತ್ರಗಳನ್ನು ಹೇಳಿಕೊಡುತ್ತಿದ್ದಾರೆ. 'ಕೆಲವರಿಗೆ ತೋಟ ಮಾಡುವ ಉತ್ಸಾವಿರುತ್ತದೆ, ಬೆಳೆ ಸಂಯೋಜನೆ ಹಾಗೂ ತೋಟ ಕಟ್ಟುವ ಬಗೆ ಗೊತ್ತಿರುವುದಿಲ್ಲ. ಯಾವ ಬೆಳೆ ಹಾಕಬೇಕು ಎಂಬ ದ್ವಂದ್ವ ದಲ್ಲಿರುತ್ತಾರೆ. ಅಂತಹವರ ಜಮೀನುಗಳಿಗೆ ಖುದ್ದು ಭೇಟಿ ನೀಡಿ ಮಣ್ಣಿನ ಮತ್ತು ವಾತಾವರಣದ ಗುಣಧರ್ಮ ನೋಡಿ ಬೆಳೆ ಸಂಯೋಜನೆಯ ಸಲಹೆ ನೀಡುತ್ತಾರೆ. ಅಗತ್ಯವೆನಿಸಿದರೆ, ಸ್ವಲ್ಪ ಕಾಲ ಆ ತೋಟವನ್ನು ಮೇಲು ಉಸ್ತುವಾರಿ ಸಹ ಮಾಡುತ್ತಿದ್ದಾರೆ.

ಬಿಡುವಿಲ್ಲದೇ, 'ಅರಣ್ಯ ಕೃಷಿ' ಮೂಲಕ 'ಜೀವನ ವನ'ದಂತಹ ತೋಟಗಳ ನಿರ್ಮಾಣಕ್ಕೆ ಸಂಕಲ್ಪ ಮಾಡಿರುವ ವಿಶ್ವೇಶ್ವರ ಸಜ್ಜನ್ ಅಂಥವರ ಸಂತತಿ ಹೆಚ್ಚಾಗಬೇಕಿದೆ.

ಅರಣ್ಯ‌ ಕೃಷಿ ಕುರಿತ ಹೆಚ್ಚಿನ ಮಾಹಿತಿಗೆ ವಿಶ್ವೇಶ್ವರ ಸಜ್ಜನ್, ಹುಲಿಕೆರೆ - ಮೊಬೈಲ್: +91 99026 61597

Dailyhunt
Disclaimer: This content has not been generated, created or edited by Dailyhunt. Publisher: Prajavani