Dailyhunt Logo
  • Light mode
    Follow system
    Dark mode
    • Play Story
    • App Story
ಅನ್ನದ ಬಟ್ಟಲು: 'ಪಿಎಂಡಿಎಸ್‌' ಕನಿಷ್ಠ ವೆಚ್ಚದಲ್ಲಿ ಗರಿಷ್ಠ ಗೊಬ್ಬರ

ಅನ್ನದ ಬಟ್ಟಲು: 'ಪಿಎಂಡಿಎಸ್‌' ಕನಿಷ್ಠ ವೆಚ್ಚದಲ್ಲಿ ಗರಿಷ್ಠ ಗೊಬ್ಬರ

ಮುಂಗಾರು ಪೂರ್ವದಲ್ಲಿ ಒಂದು ಎಕರೆ ಜಮೀನಿನಲ್ಲಿ 10 ಕೆಜಿ ದ್ವಿದಳ, ಏಕದಳ, ಎಣ್ಣೆಕಾಳು ಸೇರಿ 10- 15 ತರಹದ ಧಾನ್ಯಗಳನ್ನು ಬಿತ್ತಿದರೆ, ಎರಡು ತಿಂಗಳ ನಂತರ ಅದೇ ಜಮೀನಿನ ಮಣ್ಣಿಗೆ ಭರಪೂರ ಸಾವಯವ ಗೊಬ್ಬರ ಸೇರುತ್ತದೆ. ಇದಕ್ಕೆ 'ಪಿಎಂಡಿಎಸ್' ಎನ್ನುತ್ತಾರೆ. ಹಸಿರೆಲೆ ಗೊಬ್ಬರದ ಮುಂದುವರಿಕೆಯಂತಿರುವ ಈ ವಿಧಾನ ಮಳೆಯಾಶ್ರಿತ ಪ್ರದೇಶಗಳ ಸಣ್ಣ ಹಿಡುವಳಿದಾರರಿಗೆ ಕೃಷಿ ವೆಚ್ಚವನ್ನು ಗಣನೀಯವಾಗಿ ತಗ್ಗಿಸುವ ಸುಸ್ಥಿರ ಮಾರ್ಗವೂ ಹೌದು.

ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನ ಬಿಸಲೇಹಳ್ಳಿಯ ಕೃಷಿಕ ಪಂಚಾಕ್ಷರಿ ಅವರು ಕಳೆದ ವರ್ಷ ಮುಂಗಾರು ಆರಂಭಕ್ಕೆ ಎರಡು ತಿಂಗಳ ಮುಂಚೆಯೇ ತಮ್ಮ ಒಂದು ಎಕರೆ ಅಡಿಕೆ ತೋಟದಲ್ಲಿ ಜೋಳ, ಹೆಸರು, ಅಲಸಂದೆ, ಎಳ್ಳು, ಅವರೆ ಸೇರಿದಂತೆ ಹತ್ತರಿಂದ ಹನ್ನೆರಡು ತರಹದ ಧಾನ್ಯಗಳನ್ನು ಬಿತ್ತನೆ ಮಾಡಿದ್ದರು. 45 ದಿನಗಳಲ್ಲೇ ಈ ಧಾನ್ಯಗಳು ಸೊಂಪಾಗಿ ಬೆಳೆದು ನಿಂತವು. ಕೆಲವು ತಳಿಗಳು ತೆನೆ ಒಡೆದರೆ, ಇನ್ನು ಕೆಲವು ಎದೆಯುದ್ದಕ್ಕೆ ಬೆಳೆದು ಇಡೀ ತೋಟವೇ ಹಸಿರು ಹೊದ್ದಂತೆ ಕಂಗೊಳಿಸಿತು.

ಕಡು ಬೇಸಿಗೆಯಲ್ಲೂ ತೋಟದ ಒಡಲಲ್ಲಿ ಹಸಿರು ಹಾಸು ಪಸರಿಸಿದ್ದರಿಂದ ಮಣ್ಣಿನಲ್ಲಿ ತೇವಾಂಶ ಸುಸ್ಥಿರವಾಗಿ ಉಳಿದುಕೊಂಡಿತ್ತು. ತೋಟದೊಳಗೆ ಹೆಜ್ಜೆಯಿಟ್ಟರೆ ಮೆತ್ತನೆಯ ಹಾಸಿಗೆಯ ಮೇಲೆ ನಡೆದಂತಹ ಅನುಭವ. 'ಇದೇನಿದು, ಒಂದೇ ಜಾಗದಲ್ಲಿ ಇಷ್ಟೊಂದು ವೈವಿಧ್ಯಮಯ ಬೆಳೆಗಳು?' ಎಂದು ಜೋಳದ ತೆನೆ ಕೊಯ್ಯುತ್ತಾ ಕಾಳು ಬಿಡಿಸುತ್ತಿದ್ದ ಪಂಚಾಕ್ಷರಿ ಅವರ ಬಳಿ ವಿಚಾರಿಸಿದಾಗ, ಅವರು ಈ ಕೃಷಿ ಕಾಯಕದ ವಿವರವನ್ನು ಬಿಚ್ಚಿಟ್ಟರು.

'ಇದನ್ನು ಪಿಎಂಡಿಎಸ್‌, ಅಂದರೆ 'ಪ್ರೀ ಮಾನ್ಸೂನ್ ಡ್ರೈ ಸೋಯಿಂಗ್' ಎನ್ನುತ್ತಾರೆ. ಮುಂಗಾರು ಪೂರ್ವದಲ್ಲಿ ವಿವಿಧ ಧಾನ್ಯಗಳನ್ನು ನೇರವಾಗಿ ಒಣ ಬಿತ್ತನೆ ಮಾಡುವ ಪದ್ಧತಿ ಇದು. ಈಗ ಎಲ್ಲ ಬೆಳೆಗಳು ಕಟಾವಿಗೆ ಬಂದಿವೆ. ನಮಗೆ ಅಗತ್ಯವಿರುವ ತೆನೆ, ಕಾಳು ಹಾಗೂ ಫಸಲನ್ನು ಮಾತ್ರ ಪಡೆದು, ಉಳಿದ ಇಡೀ ಜೀವರಾಶಿಯನ್ನು ಮಣ್ಣಿಗೆ ಸೇರಿಸಿ ಹರಗಿಸುತ್ತೇನೆ' ಎಂದು ಪಂಚಾಕ್ಷರಿ ವಿವರಿಸಿದರು.

'ಮುಂಗಾರು ಆರಂಭಕ್ಕೂ ಎರಡು ತಿಂಗಳು ಮುನ್ನ ಸಾಧಾರಣ ಮಳೆಯಾದಾಗ ತೋಟವನ್ನು ಹದಗೊಳಿಸಿ, ಅದರ ಒಂದು ಭಾಗದಲ್ಲಿ ಈ ವಿವಿಧ ಬೀಜಗಳನ್ನು ಬಿತ್ತಿದ್ದೆ. ಎರಡೂವರೆ ತಿಂಗಳ ನಂತರ ಬೆಳೆಗಳು ಅತಿ ಸೊಂಪಾಗಿ ಬೆಳೆದವು. ಇದರ ಸತ್ಪರಿಣಾಮವಾಗಿ ಅಡಿಕೆ ಮರಗಳ ಗರಿಗಳು ಹಸಿರು ಕಳೆಗಟ್ಟಿವೆ; ಮುಖ್ಯವಾಗಿ ತೋಟದ ಮರಗಳು ಅತ್ಯಂತ ಆರೋಗ್ಯವಂತವಾಗಿವೆ' ಎಂದು ಹೇಳುವಾಗ ಅವರ ಮುಖದಲ್ಲಿ ತೃಪ್ತಿಯ ನಸುನಗು ಮೂಡಿತು.

ರಾಗಿ‌ ಬಿತ್ತುವ ಹೊಲದಲ್ಲಿ ಪೂರ್ವ ಮುಂಗಾರಿನಲ್ಲಿ 15 ವೆರೈಟಿಯ ಬೆಳೆಗಳನ್ನು ಬಿತ್ತನೆ ಮಾಡುತ್ತಿರುವುದು.

ಪ್ರಾಯೋಗಿಕ ಅನುಷ್ಠಾನದ ಯಶೋಗಾಥೆ

'ಭೂಮಿ ಸುಸ್ಥಿರ ಅಭಿವೃದ್ಧಿ ಸಂಸ್ಥೆ'ಯು ಕಳೆದ ಮೂರು ವರ್ಷಗಳಿಂದ ಲಕ್ಷ್ಮೀಪುರ, ಬಿಸಲೇಹಳ್ಳಿ ಹಾಗೂ ದೊಡ್ಡ ಬುಕ್ಕಸಾಗರ ಭಾಗದಲ್ಲಿ ನಬಾರ್ಡ್ ಪ್ರಾಯೋಜಿತ 'ಜೀವಾ - ನೈಸರ್ಗಿಕ ಕೃಷಿ ಯೋಜನೆ'ಯನ್ನು ಅತ್ಯಂತ ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿದೆ. ಇದರ ಭಾಗವಾಗಿ ಎರಡು ವರ್ಷಗಳಿಂದ ಆಯ್ದ ಕೃಷಿಕರಿಗೆ 'ಪಿಎಂಡಿಎಸ್' ಕುರಿತು ತರಬೇತಿ ನೀಡಿ, ಅಗತ್ಯ ಬಿತ್ತನೆ ಬೀಜಗಳನ್ನು ವಿತರಿಸುತ್ತಿದೆ. ಮೊದಲ ಹಂತದಲ್ಲಿ ಬಿಸಲೇಹಳ್ಳಿಯ ಪಂಚಾಕ್ಷರಿ, ಲಕ್ಷ್ಮೀಪುರದ ರುದ್ರೇಶ, ಶಂಕ್ರಪ್ಪ ಹಾಗೂ ಹನುಮನಹಳ್ಳಿಯ ಸುರೇಶ ಸೇರಿದಂತೆ 50 ರೈತರಿಗೆ ವಿವಿಧ ಬೆಳೆಗಳ ಬೀಜಗಳನ್ನು ಒದಗಿಸಲಾಗಿತ್ತು. ಈ ರೈತರೆಲ್ಲರೂ ಕಳೆದ ವರ್ಷ ಮುಂಗಾರು ಪೂರ್ವದಲ್ಲಿ ತಂತಮ್ಮ ರಾಗಿ ಹೊಲಗಳಲ್ಲಿ ಇದೇ ಮಾದರಿಯಲ್ಲಿ ಏಕದಳ, ದ್ವಿದಳ ಮತ್ತು ಎಣ್ಣೆಕಾಳುಗಳು ಸೇರಿದಂತೆ 15 ವೈವಿಧ್ಯಮಯ ಬೆಳೆಗಳನ್ನು ಯಶಸ್ವಿಯಾಗಿ ಬೆಳೆದಿದ್ದರು.

ಪ್ರತಿ ರೈತರ ಜಮೀನಿನಲ್ಲಿ ಒಂದು ಚದರ ಅಡಿ ಪ್ರದೇಶದಲ್ಲಿ ಬೆಳೆದಿದ್ದ ಬೆಳೆಗಳನ್ನು ಕಟಾವು ಮಾಡಿ ತೂಕ ಮಾಡಲಾಗಿತ್ತು. ಆ ಅನುಪಾತದ ಆಧಾರದ ಮೇಲೆ ಒಂದು ಎಕರೆಗೆ ಸುಮಾರು 41 ಕೆ.ಜಿ ಮೇವು ಲಭ್ಯವಾಗಿದೆ ಎಂದು ಯೋಜನೆಯ ಸಿಬ್ಬಂದಿ ವಿವರಿಸುತ್ತಾರೆ.

'ಪಿಎಂಡಿಎಸ್‌ ಅನುಷ್ಠಾನದಿಂದ ಭೂಮಿ ಅತ್ಯಂತ ಫಲವತ್ತಾಗಿದ್ದು, ಅದೇ ವರ್ಷ ರಾಗಿ ಮತ್ತು ಅಕ್ಕಡಿ ಸಾಲಿನ ಬೆಳೆಗಳಲ್ಲಿ ಅತ್ಯುತ್ತಮ ಫಸಲು ಬಂದಿದೆ' ಎಂದು ಲಕ್ಷ್ಮೀಪುರದ ಕೃಷಿಕರು ಹರ್ಷ ವ್ಯಕ್ತಪಡಿಸುತ್ತಾರೆ. 'ಆ ವರ್ಷ ಇದೇ ಜಮೀನುಗಳಲ್ಲಿ ರಾಗಿ ಬಿತ್ತನೆ ಮಾಡಿದಾಗ, ಹೊರಗಿನಿಂದ ಹೆಚ್ಚುವರಿ ಗೊಬ್ಬರ ಹಾಕುವ ಪ್ರಮೇಯವೇ ಬರಲಿಲ್ಲ. ಇದರಿಂದ ಗೊಬ್ಬರ ಖರೀದಿಸುವ ದೊಡ್ಡ ಖರ್ಚು ಉಳಿಯಿತು' ಎಂದು ಯೋಜನೆಯ ಫಲಾನುಭವಿ ರೈತರೊಬ್ಬರು ಈ ಪದ್ಧತಿಯ ಆರ್ಥಿಕ ಲಾಭದ ಲೆಕ್ಕಾಚಾರವನ್ನು ಹಂಚಿಕೊಂಡರು.

ಹಸಿರೆಲೆ ಗೊಬ್ಬರದ ಸುಧಾರಿತ ರೂಪ

'ಪಿಎಂಡಿಎಸ್‌ ಎನ್ನುವುದು ನಮ್ಮ ಸಾಂಪ್ರದಾಯಿಕ ಹಸಿರೆಲೆ ಗೊಬ್ಬರ ಬಳಕೆಯ ಮುಂದುವರಿದ ಭಾಗವೇ ಆಗಿದೆ. ಈ ವಿಧಾನದಲ್ಲಿ ಅತ್ಯಂತ ಕಡಿಮೆ ವೆಚ್ಚದಲ್ಲಿ ಟನ್‌ಗಟ್ಟಲೆ ಗುಣಮಟ್ಟದ ಹಸಿರೆಲೆ ಗೊಬ್ಬರ ಮಣ್ಣಿಗೆ ಸಿಗುತ್ತದೆ. ಇದರೊಂದಿಗೆ, ರೈತರ ಮನೆ ಬಳಕೆಗೆ ಅಗತ್ಯವಿರುವ ಬೇಳೆಕಾಳುಗಳೂ ಉಚಿತವಾಗಿ ಲಭ್ಯವಾಗುತ್ತವೆ. ಇವೆಲ್ಲವನ್ನೂ ನಾವು ವ್ಯವಸ್ಥಿತ ಅಧ್ಯಯನದ ಮೂಲಕ ದಾಖಲಿಸಿದ್ದೇವೆ'ಎಂದು 'ಭೂಮಿ ಸಂಸ್ಥೆ'ಯ ಯೋಜನಾ ನಿರ್ದೇಶಕರಾದ ಕೆ. ರವಿ ಅವರು ಸರಳವಾಗಿ ವಿವರಿಸುತ್ತಾರೆ.

'ಕಳೆದ ವರ್ಷ ಬಿತ್ತನೆ ಮಾಡಿದ ಬಹುತೇಕ ರೈತರ ಹೊಲಗಳಲ್ಲಿ ಈ ಬೆಳೆಗಳು ಅತ್ಯಂತ ಸೊಂಪಾಗಿ ಬಂದಿದ್ದವು. ರೈತರು ತಾವು ಬೆಳೆದ ಫಸಲಿನಲ್ಲಿ ಒಂದಷ್ಟು ಬೇಳೆಕಾಳುಗಳನ್ನು ಮನೆ ಬಳಕೆಗೆ ಇಟ್ಟುಕೊಂಡು, ಇನ್ನುಳಿದ ಕಾಳುಗಳನ್ನು ಮುಂದಿನ ವರ್ಷದ ಬಿತ್ತನೆಗಾಗಿ ಬೀಜ ರೂಪದಲ್ಲಿ ಸಂಗ್ರಹಿಸಿಟ್ಟುಕೊಂಡಿದ್ದರು. ಈ ವರ್ಷದ ಮುಂಗಾರು ಪೂರ್ವದಲ್ಲಿ ಅವುಗಳನ್ನೇ ಮರುಬಿತ್ತನೆಗೆ ಬಳಸಿದ್ದಾರೆ. ಪ್ರಸ್ತುತ ವರ್ಷದಲ್ಲಿ ಹೊಸದಾಗಿ ಇನ್ನೂ 26 ರೈತರಿಗೆ ಬಿತ್ತನೆ ಬೀಜಗಳನ್ನು ವಿತರಿಸಿದ್ದು, ಅವರು ಕೂಡ ಎರಡು ತಿಂಗಳ ಹಿಂದೆ ತಮ್ಮ ಹೊಲಗಳಲ್ಲಿ ಬಿತ್ತನೆ ಮಾಡಿದ್ದಾರೆ. ಸದ್ಯ ಈ ಬೆಳೆ ಹಚ್ಚಹಸಿರಾಗಿ ಕಂಗೊಳಿಸುತ್ತಿದೆ' ಎನ್ನುತ್ತಾರೆ ಸಂಸ್ಥೆಯ ಯೋಜನಾಧಿಕಾರಿ ಶ್ವೇತಾ.

ಒಂದು ಚದರ ಅಡಿಯಲ್ಲಿ ಬೆಳೆದಿರುವ ಜೀವ ರಾಶಿ(biomass) ಯನ್ನು ಅಳತೆ ಮಾಡುತ್ತಿರುವುದು.

ವೆಚ್ಚ ಕನಿಷ್ಠ; ಲಾಭ ಗರಿಷ್ಠ

ಒಂದು ಎಕರೆ ಜಮೀನಿಗೆ 15 ವಿವಿಧ ತಳಿಯ ಬೆಳೆಗಳನ್ನು ಬಿತ್ತಲು ಕೇವಲ 10 ರಿಂದ 12 ಕೆ.ಜಿ ಬಿತ್ತನೆ ಬೀಜ ಸಾಕಾಗುತ್ತದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಒಂದು ಕೆ.ಜಿ ಬೀಜಕ್ಕೆ ₹100 ಎಂದು ಅಂದಾಜಿಸಿದರೂ, ಗರಿಷ್ಠ ₹1,000 ರಿಂದ ₹2,000 ಕ್ಕಿಂತ ಹೆಚ್ಚು ಖರ್ಚಾಗುವುದಿಲ್ಲ. ಆದರೆ ಇದರಿಂದ ಕೃಷಿಕರಿಗೆ ದೊರೆಯುವ ಅಂತಿಮ ಫಲಿತಾಂಶ ಮಾತ್ರ ಅತ್ಯಂತ ಲಾಭದಾಯಕವಾಗಿದೆ.

ಸಾಮಾನ್ಯವಾಗಿ ಸೆಣಬು ಅಥವಾ ಡಯಂಚದಂತಹ ಹಸಿರೆಲೆ ಗೊಬ್ಬರದ ಬೀಜಗಳನ್ನು ಮಾತ್ರ ಬಿತ್ತನೆ ಮಾಡಿದರೆ ಕೇವಲ ಗೊಬ್ಬರವಷ್ಟೇ ಲಭ್ಯವಾಗುತ್ತದೆ. ಆದರೆ ಈ ವಿಧಾನದಲ್ಲಿ ವಿವಿಧ ಬೇಳೆಕಾಳುಗಳನ್ನು ಮಿಶ್ರಬೆಳೆಯಾಗಿ ಬಿತ್ತನೆ ಮಾಡುವುದರಿಂದ, ಕುಟುಂಬಕ್ಕೆ ವರ್ಷವಿಡೀ ಬೇಕಾಗುವ ಪೌಷ್ಟಿಕ ಬೇಳೆಕಾಳುಗಳು ಸಿಗುತ್ತವೆ. ಸಾಲದ್ದಕ್ಕೆ ಜಾನುವಾರುಗಳಿಗೆ ಟನ್‌ಗಟ್ಟಲೆ ಪೌಷ್ಟಿಕ ಮೇವೂ ಲಭ್ಯವಾಗುತ್ತದೆ. ಇದರಿಂದ ಇವೆರಡನ್ನೂ ಹೊರಗಿನಿಂದ ಖರೀದಿಸುವ ಅನಗತ್ಯ ವೆಚ್ಚ ತಪ್ಪುತ್ತದೆ. "ಇಲ್ಲಿ ಎಲ್ಲ ಬೆಳೆಗಳು 45 ದಿನಗಳಿಗೇ ಬೆಳೆಯುವುದಿಲ್ಲ. ಅವುಗಳ ಸಾಮರ್ಥ್ಯಕ್ಕೆ ತಕ್ಕಂತೆ ಫಸಲು ಬಿಡುತ್ತವೆ. ಆದರೆ ಈ ವಿಧಾನದಿಂದ ಬೇಸಿಗೆಯಲ್ಲಿ ನೆಲಕ್ಕೆ ಹಸಿರು ಮುಚ್ಚಿಗೆಯಾಗುತ್ತದೆ. ಹೆಚ್ಚು ಹಸಿರೆಲೆ(ಜೀವರಾಶಿ) ಲಭ್ಯವಾಗುತ್ತದೆ. ಮುಖ್ಯವಾಗಿ, ಈ ಬೆಳೆಗಳ ಬೇರುಗಳು ಮಣ್ಣಿನಲ್ಲಿ ಸಾರಜನಕವನ್ನು ಸ್ಥಿರೀಕರಿಸುವುದರಿಂದ, ಇದು ಮುಂದಿನ ಮುಖ್ಯ ಬೆಳೆಗೆ ನೈಸರ್ಗಿಕ ಪೋಷಕಾಂಶವಾಗಿ ಪರಿಣಮಿಸುತ್ತದೆ. ಬೆಳೆಯುಳಿಕೆಗಳನ್ನು ಭೂಮಿಗೆ ಸೇರಿಸಿ ಹರಗಿಸುವುದರಿಂದ ಮಣ್ಣಿನ ಜೈವಿಕ ಗುಣಮಟ್ಟ ಸುಧಾರಿಸುತ್ತದೆ," ಎನ್ನುತ್ತಾರೆ ರವಿ.

'ಒಂದು ಎಕರೆಯಲ್ಲಿ ನಾವು ಎಷ್ಟು ಹೆಚ್ಚು ವೈವಿಧ್ಯಮಯ ಬೆಳೆಗಳನ್ನು ಬಿತ್ತುತ್ತೇವೆಯೋ, ಮಣ್ಣಿನಲ್ಲಿ ಕೃಷಿ ಸ್ನೇಹಿ ಸೂಕ್ಷ್ಮಾಣು ಜೀವಿಗಳ ಚಟುವಟಿಕೆ ಅಷ್ಟೇ ತೀವ್ರಗೊಳ್ಳುತ್ತದೆ' ಎಂಬುದು ಕೃಷಿ ತಜ್ಞರ ಅಭಿಮತ.

ಈ 'ಪಿಎಂಡಿಎಸ್' ವಿಧಾನವು ಈಗಾಗಲೇ ಆಂಧ್ರಪ್ರದೇಶದಲ್ಲಿ ಅತ್ಯಂತ ಜನಪ್ರಿಯವಾಗಿದೆ. ಅಲ್ಲಿನ ಕೃಷಿಕರು ಒಂದು ಎಕರೆಗೆ ಸುಮಾರು 40 ತರಹದ ಬೆಳೆಗಳನ್ನು ಮಿಶ್ರ ಮಾಡಿ ಹೊಲಕ್ಕೆ ಚಲ್ಲುತ್ತಾರೆ ಎಂದು 'ಜೀವಾ' ಯೋಜನೆಯ ಫಲಾನುಭವಿಗಳಿಗೆ ಪ್ರಾಯೋಗಿಕ ತರಬೇತಿ ನೀಡಿರುವ ಸಂಪನ್ಮೂಲ ವ್ಯಕ್ತಿ ರಂಗಸ್ವಾಮಿ ಉಲ್ಲೇಖಿಸುತ್ತಾರೆ.

'ಎಂಡಿಪಿಎಸ್ - ಇದೊಂದು ಉತ್ತಮ ವಿಧಾನ. ಸೂಕ್ತವೆನಿಸಿದ ಸ್ಥಳಗಳಲ್ಲಿ ಬಳಸಬಹುದು. ಈ ಬೆಳೆಗಳಲ್ಲಿ ಹಸಿರೆಲೆ ಗೊಬ್ಬರದ ಬೀಜಗಳನ್ನು ಸೇರಿಸಿಕೊಂಡರೆ ಉತ್ತಮ. ಇದಕ್ಕೆ ಒತ್ತು ನೀಡಿದರೆ ಒಳ್ಳೆಯದು' ಎನ್ನುತ್ತಾರೆ ಬೇಸಾಯ ಶಾಸ್ತ್ರಜ್ಞ ಪ್ರೊ. ಎನ್. ದೇವಕುಮಾರ್.

ಒಂದು ಚ.ಅಡಿಯಲ್ಲಿನ ಜೀವರಾಶಿ ತೂಕ ಮಾಡುತ್ತಿರುವುದು

ಪ್ರಮುಖ ಪ್ರಯೋಜನಗಳು

'ಭೂಮಿ ಸುಸ್ಥಿರ ಅಭಿವೃದ್ಧಿ ಸಂಸ್ಥೆ'ಯು ಈ 'ಪಿಎಂಡಿಎಸ್' ವಿಧಾನವನ್ನು ಸುದೀರ್ಘವಾಗಿ ಅಧ್ಯಯನ ಮಾಡಿ ಕಟಾವಿನ ಫಲಿತಾಂಶಗಳನ್ನು ವ್ಯವಸ್ಥಿತವಾಗಿ ಪಟ್ಟಿ ಮಾಡಿದೆ:

  • ಮಣ್ಣಿನ ತೇವಾಂಶ ರಕ್ಷಣೆ: ಕಡು ಬೇಸಿಗೆಯಲ್ಲೂ ಜಮೀನು ಅಥವಾ ತೋಟಕ್ಕೆ ಇದು ಹಸಿರು ಹೊದಿಕೆಯಾಗಿ ಕಾರ್ಯನಿರ್ವಹಿಸುವುದರಿಂದ, ಮಣ್ಣಿನಲ್ಲಿ ತೇವಾಂಶ ದೀರ್ಘಕಾಲ ಸಂರಕ್ಷಿಸಲ್ಪಡುತ್ತದೆ.

  • ಸಾರಜನಕ ಸ್ಥಿರೀಕರಣ: ದ್ವಿದಳ ಧಾನ್ಯದ ಸಸ್ಯಗಳು ವಾತಾವರಣದಲ್ಲಿರುವ ಮುಕ್ತ ಸಾರಜನಕವನ್ನು ಹೀರಿಕೊಂಡು ಬೇರುಗಳ ಮೂಲಕ ಮಣ್ಣಿನಲ್ಲಿ ಸ್ಥಿರೀಕರಿಸುತ್ತವೆ ಹಾಗೂ ಕಳೆಗಳನ್ನು ನೈಸರ್ಗಿಕವಾಗಿ ನಿಯಂತ್ರಿಸುತ್ತವೆ.

  • ಉತ್ತಮ ಕಾಂಪೋಸ್ಟ್: ಮುಖ್ಯ ಬೆಳೆಯ ಬಿತ್ತನೆಗೆ ಕೇವಲ ಹದಿನೈದು ದಿನಗಳ ಮುಂಚೆ, ಈ ಇಡೀ ಜೀವರಾಶಿಯನ್ನು ಭೂಮಿಗೆ ಸೇರಿಸಿ ಉಳುಮೆ ಮಾಡುವುದರಿಂದ ಅತ್ಯುತ್ತಮ ಕಾಂಪೋಸ್ಟ್ ಗೊಬ್ಬರ ಸಿದ್ಧವಾಗಿ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ.

  • ಗೊಬ್ಬರದ ವೆಚ್ಚಕ್ಕೆ ಮುಕ್ತಿ: ಒಂದು ಅಂದಾಜಿನ ಪ್ರಕಾರ, ಒಂದು ಎಕರೆಯಲ್ಲಿ ಇಷ್ಟು ಧಾನ್ಯಗಳನ್ನು ಬೆಳೆಸಿ ಮಣ್ಣಿಗೆ ಹರಗಿಸಿದರೆ ಸುಮಾರು 10 ಟನ್‌ನಷ್ಟು ನೈಸರ್ಗಿಕ ಗೊಬ್ಬರ ದೊರೆಯುತ್ತದೆ. ಇದರಿಂದ ಮುಂದಿನ ಮುಖ್ಯ ಬೆಳೆಗೆ ರಾಸಾಯನಿಕ ಗೊಬ್ಬರ ಕೊಡುವ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡಬಹುದು.

  • ಆರ್ಥಿಕ ಸ್ವಾವಲಂಬನೆ: ಕೇವಲ ₹2 ಸಾವಿರ ವೆಚ್ಚದಲ್ಲಿ 15 ರಿಂದ 20 ಕೆ.ಜಿಯಷ್ಟು ವೈವಿಧ್ಯಮಯ ಬೀಜಗಳನ್ನು ಬಿತ್ತಿ, ಅಂದಾಜು 10 ಟನ್‌ನಷ್ಟು ಸಾವಯವ ಜೀವರಾಶಿಯನ್ನು ಮಣ್ಣಿಗೆ ಉಡುಗೊರೆಯಾಗಿ ನೀಡಬಹುದು.

  • ಸೂಕ್ತ ತಳಿ ಆಯ್ಕೆ: ಈ ವಿಧಾನದಿಂದ ಕೇವಲ ಹಸಿರೆಲೆ ಗೊಬ್ಬರ ಸಿಗುವುದಷ್ಟೇ ಅಲ್ಲ, ನೀವು ಮಿಶ್ರಣ ಮಾಡಿರುವ ವಿವಿಧ ಬೆಳೆಗಳಲ್ಲಿ ನಿಮ್ಮ ಮಣ್ಣಿನ ಗುಣಕ್ಕೆ ತಕ್ಕಂತೆ ಯಾವ ಬೆಳೆ ಚೆನ್ನಾಗಿ ಇಳುವರಿ ನೀಡಿದೆ ಎಂಬುದನ್ನು ಗಮನಿಸಿ, ಮುಂದಿನ ದಿನಗಳಲ್ಲಿ ಅದನ್ನೇ ಪ್ರಮುಖ ಉಪಬೆಳೆಯಾಗಿ ಆಯ್ಕೆ ಮಾಡಿಕೊಳ್ಳಲು ನೆರವಾಗುತ್ತದೆ.

ಕೊನೆಯದಾಗಿ...

ಜಾಗತಿಕ ರಾಜಕೀಯ ವಿದ್ಯಮಾನಗಳು ಹಾಗೂ ಯುದ್ಧದ ಸನ್ನಿವೇಶಗಳಿಂದಾಗಿ ಪ್ರಸಕ್ತ ವರ್ಷದಲ್ಲಿ ರಾಸಾಯನಿಕ ರಸಗೊಬ್ಬರಗಳ ಅಭಾವ ಮತ್ತು ಬೆಲೆ ಏರಿಕೆ ಸೃಷ್ಟಿಯಾಗಿರುವುದು ಜಗಜ್ಜಾಹೀರಾಗಿದೆ. ಮುಂದಿನ ದಿನಗಳಲ್ಲೂ ಇಂತಹ ಬಿಕ್ಕಟ್ಟುಗಳು ಎದುರಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಇಂತಹ ವಿಷಮ ಪರಿಸ್ಥಿತಿಯಲ್ಲಿ, ಬರಗಾಲದ ಬವಣೆಯನ್ನು ನೀಗಿಸಲು ಕೃಷಿ ಭೂಮಿಯನ್ನು ಜೀವಂತವಾಗಿಡುವ 'ಪಿಎಂಡಿಎಸ್' ನಂತಹ ಸುಸ್ಥಿರ ಮತ್ತು ನೈಸರ್ಗಿಕ ಪದ್ಧತಿಗಳು ನಮ್ಮ ಮಳೆಯಾಶ್ರಿತ ಸಣ್ಣ ಹಿಡುವಳಿದಾರರ ಪಾಲಿಗೆ ನಿಜಕ್ಕೂ ಸಂಜೀವಿನಿಯಾಗಬಲ್ಲವು.

*ಜೋಳ, ರಾಗಿ, ಮೇವಿನ ಜೋಳ, ನವಣೆ, ಸಜ್ಜೆ, ಕೊತ್ತಂಬರಿ, ಎಳ್ಳು, ಹುಚ್ಚೆಳ್ಳು, ಅಲಸಂದೆ(ಕೆಂಪು ಮತ್ತು ಬಿಳಿ), ಅವರೆ, ತೊಗರಿ, ಹೆಸರು, ಉದ್ದು, ಸೆಣಬು, ಡಯಂಚ, ಹುರುಳಿ*ರಾಗಿ, ಜೋಳ, ಮೇವಿನ ಜೋಳ, ಸೆಣಬು, ಡಯಂಚ, ಹುರುಳಿ- ಇವುಗಳನ್ನು ತಲಾ‌ ಒಂದು ಕೆ.ಜಿಯಷ್ಟು ವಿತರಿಸಲಾಗುತ್ತದೆ. ಉಳಿದವುಗಳನ್ನು ಕನಿಷ್ಠ ಕಾಲು ಕೆಜಿ, ಗರಿಷ್ಠ ಅರ್ಧ ಕೆಜಿವರೆಗೂ ಕೊಡಲಾಗುತ್ತಿದೆ. ಎಲ್ಲ ಬೀಜಗಳನ್ನು ಸಮ ಪ್ರಮಾಣದಲ್ಲಿ ಚೆಲ್ಲುವುದಿಲ್ಲ.ಪಿಎಂಡಿಎಸ್‌ಗೆ ವಿತರಿಸಿದ ಬೆಳೆಗಳು

(ಪಿಎಂಡಿಎಸ್ ವಿಧಾನದ ಕುರಿತ ಹೆಚ್ಚಿನ ಮಾಹಿತಿಗಾಗಿ ಭೂಮಿ ಸಂಸ್ಥೆಯ ಯೋಜನಾ ನಿರ್ದೇಶಕರಾದ ರವಿ ಕೆ. ಅವರನ್ನು ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ: 9448805001(ವಾಟ್ಸ್‌ಆಯಪ್ ನಲ್ಲಿ ಮಾತ್ರ)

Dailyhunt
Disclaimer: This content has not been generated, created or edited by Dailyhunt. Publisher: Prajavani