ಪ್ರಜಾವಾಣಿ

1.4M Followers

ಅಂತರಜಿಲ್ಲಾ ವರ್ಗಾವಣೆಗೆ 9,090 ಶಿಕ್ಷಕರ ಕೋರಿಕೆ

24 Sep 2021.06:07 AM

ಬೆಂಗಳೂರು: ಆರೋಗ್ಯ, ವಿಧವೆ, ವಿಚ್ಛೇದಿತ, ಪತಿ-ಪತ್ನಿ, ಅಂಗವಿಕಲತೆ ಹೀಗೆ ನಾನಾ ಕಾರಣಗಳಿಗೆ, ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿರುವ ಶಿಕ್ಷಕರಲ್ಲಿ 9,090 ಮಂದಿ ಒಂದು ಬಾರಿ ಅಂತರಜಿಲ್ಲಾ ವರ್ಗಾವಣೆ ಬಯಸಿದ್ದಾರೆ.

ಈ ಪೈಕಿ, ಕಲ್ಯಾಣ ಕರ್ನಾಟಕ ಭಾಗದ 2,931 ಶಿಕ್ಷಕರಿದ್ದಾರೆ.

ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಾಲಾ ಶಿಕ್ಷಕರ ಸಮಸ್ಯೆಗಳ ಬಗ್ಗೆ ಸೆ. 9ರಂದು ಸಭೆ ನಡೆಸಿದ್ದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌, ಅಂತರಜಿಲ್ಲಾ ವರ್ಗಾವಣೆ ಬಯಸುವ ಶಿಕ್ಷಕರ ನಿಖರ ಮತ್ತು ವಾಸ್ತವಾಂಶದ ಮಾಹಿತಿ ಸಲ್ಲಿಸುವಂತೆ ಸೂಚಿಸಿದ್ದರು. ಅದರಂತೆ ರಾಜ್ಯ ಸರ್ಕಾರಿ ನೌಕರರ ಸಂಘ ರಾಜ್ಯದಾದ್ಯಂತ ಎಲ್ಲ ಜಿಲ್ಲೆಗಳಿಂದ ಅಂತರ ಜಿಲ್ಲಾ ವರ್ಗಾವಣೆ ಬಯಸುವ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ಜಿಲ್ಲಾವಾರು ಮಾಹಿತಿ ಸಂಗ್ರಹಿಸಿ ಸಚಿವರಿಗೆ ಸಲ್ಲಿಸಿದೆ.

ದಾವಣಗೆರೆ (512), ವಿಜಯಪುರ (501), ತುಮಕೂರು (362), ಹಾವೇರಿ (353), ಬೆಳಗಾವಿ (330) ಜಿಲ್ಲೆಗಳಲ್ಲಿರುವ ಪ್ರಾಥಮಿಕ ಶಾಲೆಗಳ ಶಿಕ್ಷಕರು ಹಾಗೂ ವಿಜಯಪುರ (217), ದಾವಣಗೆರೆ (186), ಬಾಗಲಕೋಟೆ (182), ಕಲಬುರ್ಗಿ (169), ಬಳ್ಳಾರಿ (163) ಜಿಲ್ಲೆಯ ಪ್ರೌಢ ಶಾಲೆಗಳ ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ವರ್ಗಾವಣೆ ಬಯಸಿದ್ದಾರೆ.

'ಕುಟುಂಬ ಸದಸ್ಯರಿಂದ 10- 15 ವರ್ಷಗಳಿಂದ ದೂರ ಇದ್ದು ದೂರದ ಜಿಲ್ಲೆಗಳಲ್ಲಿ ಸಾವಿರಾರು ಶಿಕ್ಷಕರು ಕೆಲಸ ನಿರ್ವಹಿಸುತ್ತಿದ್ದಾರೆ. ವರ್ಗಾವಣೆ ನಿಯಮಗಳ ನ್ಯೂನತೆಯ ಕಾರಣಕ್ಕೆ ಹಲವು ಶಿಕ್ಷಕರು ಮಾನಸಿಕ ಸ್ವಾಸ್ಥ್ಯವನ್ನೇ ಕಳೆದುಕೊಂಡಿದ್ದಾರೆ. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಪಶ್ಚಿಮ ಬಂಗಾಳ ಸರ್ಕಾರ, ಅಲ್ಲಿನ ಶಿಕ್ಷಕರಿಗೆ ಅವರು ಇಚ್ಚಿಸಿರುವ ಜಿಲ್ಲೆಗೆ ಒಂದು ಬಾರಿ ವರ್ಗಾವಣೆ ಅವಕಾಶ ನೀಡಿದೆ. ಅದೇ ಮಾದರಿಯಲ್ಲಿ ರಾಜ್ಯದಲ್ಲೂ ವರ್ಗಾವಣೆಯ ಅವಕಾಶ ಮಾಡಿಕೊಡಬೇಕು' ಎಂದು ಸಂಘದ ಅಧ್ಯಕ್ಷ ಸಿ.ಎಸ್‌. ಷಡಾಕ್ಷರಿ ಒತ್ತಾಯಿಸಿದ್ದಾರೆ.

**

ಶಿಕ್ಷಕರಿಗೆ ಒಂದು ಬಾರಿಗೆ ಸೀಮಿತವಾಗಿ ಅಂತರಜಿಲ್ಲಾ ವರ್ಗಾವಣೆಗೆ ಅವಕಾಶ ಕಲ್ಪಿಸಲು ರಾಜ್ಯ ಸರ್ಕಾರ ವಿಶೇಷ ನಿಯಮ ರೂಪಿಸಬೇಕು. ಆ ಮೂಲಕ, ವರ್ಗಾವಣೆಗೆ ಅವಕಾಶ ಕಲ್ಪಿಸಬೇಕು.
-ಸಿ.ಎಸ್‌. ಷಡಾಕ್ಷರಿ ಅಧ್ಯಕ್ಷ, ರಾಜ್ಯ ಸರ್ಕಾರಿ ನೌಕರರ ಸಂಘ

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Prajavani

#Hashtags