Dailyhunt
ಅನುಭವ ಮಂಟಪ: ಹಣ ಕೊಟ್ಟು ಹುದ್ದೆ ಪಡೆಯಿರಿ...

ಅನುಭವ ಮಂಟಪ: ಹಣ ಕೊಟ್ಟು ಹುದ್ದೆ ಪಡೆಯಿರಿ...

'ಅಮೃತ ಮಹೋತ್ಸವ' ಸಂಭ್ರಮದಲ್ಲಿರುವ ಕೆಪಿಎಸ್‌ಸಿ, ಕಳೆದ ಏಳು ದಶಕಗಳಲ್ಲಿ ಹೆಚ್ಚು ಸುದ್ದಿಯಾಗಿರುವುದು, ಸದ್ದು ಮಾಡಿರುವುದು ವಿವಾದಗಳಿಂದಲೇ. ಈ ಸಾಂವಿಧಾನಿಕ ಸಂಸ್ಥೆ ಸ್ವಜನ ಪಕ್ಷಪಾತ, ಭ್ರಷ್ಟಾಚಾರ, ಅಕ್ರಮ ನೇಮಕಗಳ ಆರೋಪಗಳಿಂದ ಈಗಾಗಲೇ ತನ್ನ ಘನತೆಯನ್ನು ಮಣ್ಣುಪಾಲು ಮಾಡಿಕೊಂಡಿದೆ.

ಇದರ ಚರಿತ್ರೆಯನ್ನು ಕೆದಕಿದರೆ ಒಳಿತಿಗಿಂತ ಕೆಟ್ಟದ್ದೇ ಹೆಚ್ಚು ಕಾಣಿಸುತ್ತದೆ. ಜೈಲು ಸೇರಿದ ಅಧ್ಯಕ್ಷರು, ಅಮಾನತುಗೊಂಡ ಸದಸ್ಯರು, ಒಳಗಿನವರಿಂದಲೇ ಪ್ರಶ್ನೆಪತ್ರಿಕೆ ಸೋರಿಕೆ, ಹುದ್ದೆಗಳ ಬಿಕರಿ, ಕೋರ್ಟ್ ಮೆಟ್ಟಿಲೇರಿದ ವ್ಯಾಜ್ಯಗಳು... ಹೀಗೆ. ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕವಂತೂ ಸದಾಕಾಲ ಗೊಂದಲಗಳ ಗೂಡು; ವಿವಾದಗಳ ಬೀಡು. ಅದರಲ್ಲೂ 1998ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ 383 ಹುದ್ದೆಗಳ ನೇಮಕಾತಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರವೇ ನಡೆದಿದೆ. ನಂತರದ ಅವಧಿಗಳಲ್ಲಿ ಅಧ್ಯಕ್ಷ-ಸದಸ್ಯರಾಗಿ ಅಧಿಕಾರ ಅನುಭವಿಸಿದ ಬಹುತೇಕರು ತಿಂದು ತೇಗಿದ್ದೇ ಹೆಚ್ಚು.

ಕೆಎಟಿ, ಹೈಕೋರ್ಟ್‌, ಸುಪ್ರೀಂ ಕೋರ್ಟ್‌ನ ಅಡಕತ್ತರಿಯಲ್ಲಿ ಸಿಲುಕಿದ್ದ 1998ರ ಸಾಲಿನ ಅಂತಿಮ ಆಯ್ಕೆ ಪಟ್ಟಿ ಮೂರು ಬಾರಿ ಪರಿಷ್ಕರಣೆಯಾಗಿದೆ. ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಕಾರಣ, ಅನರ್ಹರನ್ನು ಕೈಬಿಟ್ಟು ಅರ್ಹರಿಗೆ ನೇಮಕಾತಿ ಆದೇಶ ನೀಡುವಂತೆ ಹೈಕೋರ್ಟ್‌ ತೀರ್ಪು ನೀಡಿತ್ತು. ಅದನ್ನು ಸುಪ್ರೀಂ ಕೋರ್ಟ್‌ ಎತ್ತಿಹಿಡಿದಿತ್ತು. ಪಟ್ಟಿ ಪರಿಷ್ಕರಣೆಯಾದ ಸಂದರ್ಭಗಳಲ್ಲೆಲ್ಲ ಪಟ್ಟಿಯಲ್ಲಿದ್ದ ಅಭ್ಯರ್ಥಿಗಳ ಪೈಕಿ, ಕೆಲವರು ಹುದ್ದೆ ಕಳೆದುಕೊಂಡರೆ ಇನ್ನೂ ಕೆಲವರ ಹುದ್ದೆ ಸ್ಥಾನಪಲ್ಲಟ ಆಗಿದ್ದವು. ಹೊರಗುಳಿದವರು ಮತ್ತು ಹುದ್ದೆ ಬದಲಾದವರು ಕೋರ್ಟ್‌ ಮೆಟ್ಟಿಲೇರಿದ ಪರಿಣಾಮ ನೇಮಕಾತಿ ಪ್ರಕ್ರಿಯೆ ತಾರ್ಕಿಕ ಅಂತ್ಯ ಕಾಣಲೇ ಇಲ್ಲ. ಈ ಸಾಲಿನಲ್ಲಿ ವಾಮಮಾರ್ಗದಲ್ಲಿ ಉಪವಿಭಾಗಾಧಿಕಾರಿಗಳಾಗಿ (ಎ.ಸಿ) ನೇಮಕಗೊಂಡು ಐಎಎಸ್‌ ಹುದ್ದೆಗೇರಿದ್ದವರು ನಿವೃತ್ತರಾದರೂ, ಪ್ರಕರಣ ಇನ್ನೂ ಹೈಕೋರ್ಟ್‌ನಲ್ಲಿದೆ.

ಮೊದಲ ಅಂತಿಮ ಆಯ್ಕೆ ಪಟ್ಟಿಯಲ್ಲಿ ಎ.ಸಿ ಹುದ್ದೆಗೆ ಆಯ್ಕೆಯಾಗಿದ್ದ ಒಂಬತ್ತು ಅಭ್ಯರ್ಥಿಗಳು, ಹೈಕೋರ್ಟ್‌ನ ನಿರ್ದೇಶನದ ಅನ್ವಯ 2021ರ ಜ. 30ರಂದು ಮೂರನೇ ಬಾರಿಗೆ ಕೆಪಿಎಸ್‌ಸಿ ಪರಿಷ್ಕರಿಸಿದ್ದ ಅಂತಿಮ ಆಯ್ಕೆ ಪಟ್ಟಿಯಲ್ಲಿ ಎ.ಸಿ ಹುದ್ದೆ ಕಳೆದುಕೊಂಡಿದ್ದರು. ಆಗ ಆಯ್ಕೆಯಾಗಿದ್ದವರೆಲ್ಲರೂ ಐಎಎಸ್ ಹುದ್ದೆಗೆ ಬಡ್ತಿ ಪಡೆದಿದ್ದು, ಈ ಪೈಕಿ ಇಬ್ಬರು ಈಗಾಗಲೇ ನಿವೃತ್ತರಾಗಿದ್ದಾರೆ. ಎ.ಸಿ ಹುದ್ದೆ ಕಳೆದುಕೊಂಡವರ ಪ್ರಕರಣ ಹೈಕೋರ್ಟ್‌ನಲ್ಲಿದ್ದು, ಕೋರ್ಟ್‌ ನೀಡಿರುವ 'ಯಥಾಸ್ಥಿತಿ' ಆದೇಶ ಐದು ವರ್ಷಗಳಿಂದ ಮುಂದುವರಿದಿದೆ.

1998ನೇ ಸಾಲಿನ ವಿವಾದಿತ ನೇಮಕಾತಿಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ್ದ ಹೈಕೋರ್ಟ್, 'ಕೆಪಿಎಸ್‌ಸಿಯನ್ನು ಮುಚ್ಚಲು ಇದು ಸಕಾಲ' ಎಂದು ಚಾಟಿ ಬೀಸಿತ್ತು. ಆದರೆ, ನ್ಯಾಯಾಲಯದ ಇಂತಹ ಕಟು ಮಾತುಗಳು ಕೂಡಾ ಆಯೋಗದ ಕಾರ್ಯವೈಖರಿಯನ್ನು ಸುಧಾರಿಸಿದಂತೆ ಕಾಣಿಸುತ್ತಿಲ್ಲ.

ವಿಚಾರಣೆಯ ಪ್ರಸ್ತಾವವನ್ನೇ ಕೈಬಿಟ್ಟ ಸರ್ಕಾರ

2011ನೇ ಸಾಲಿನ 362 ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ಆಯ್ಕೆ ಪ್ರಕ್ರಿಯೆ ವೇಳೆ ನಡೆದಿದೆ ಎನ್ನಲಾದ ಅಕ್ರಮಗಳಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿದ್ದ ಕೆಪಿಎಸ್‌ಸಿಯ ಅಂದಿನ ಅಧ್ಯಕ್ಷರಾಗಿದ್ದ ಗೋನಾಳ್ ಭೀಮಪ್ಪ, ಸದಸ್ಯರಾಗಿದ್ದ ಮಂಗಳಾ ಶ್ರೀಧರ್, ಎಸ್.ಆರ್.ರಂಗಮೂರ್ತಿ, ಬಿ.ಎಸ್.ಕೃಷ್ಣಪ್ರಸಾದ್, ಎನ್. ಮಹದೇವ್, ಎಚ್.ವಿ.ಪಾರ್ಶ್ವನಾಥ್, ಎಸ್.ದಯಾಶಂಕರ್, ಎಚ್.ಡಿ.ಪಾಟೀಲ, ಎನ್.ರಾಮಕೃಷ್ಣ ಹಾಗೂ ಬಿ.ಪಿ.ಕನಿರಾಮ್ ಅವರ ವಿರುದ್ಧದ ವಿಚಾರಣೆಯ ಪ್ರಸ್ತಾವವನ್ನೇ ಸಿದ್ದರಾಮಯ್ಯ ಸರ್ಕಾರ ಕೈಬಿಟ್ಟಿದೆ.

'ಕೆಪಿಎಸ್‌ಸಿ ಸಾಂವಿಧಾನಿಕ ಸಂಸ್ಥೆಯಾಗಿದ್ದು, ನಾವು ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಒಂದು ವೇಳೆ ಆರೋಪ ಹೊತ್ತವರು ಅಧಿಕಾರದಲ್ಲಿ ಇದ್ದಿದ್ದರೆ, ಅಲ್ಲಿಂದ ಇಳಿಸುವುದಕ್ಕೆ ಮಾತ್ರ ಸಾಧ್ಯವಿತ್ತು. ಈಗ ಯಾರೂ ಅಧಿಕಾರದಲ್ಲಿ ಇಲ್ಲ. ಆದ್ದರಿಂದ ಪ್ರಕರಣವನ್ನು ಮುಕ್ತಾಯಗೊಳಿಸಲಾಗಿದೆ' ಎನ್ನುವುದು ಪ್ರಸ್ತಾವ ಕೈಬಿಡಲು ಸರ್ಕಾರ ನೀಡಿರುವ ಕಾರಣ.

ಅಭ್ಯರ್ಥಿಗಳ ವ್ಯಕ್ತಿತ್ವವನ್ನು (ಸಂದರ್ಶನ) ಅಳೆಯುವುದಕ್ಕೆ ಕೆಪಿಎಸ್‌ಸಿ ಬಳಸುವ ಮಾನದಂಡಕ್ಕೆ ಯಾವ ಪ್ರಮಾಣವೂ ಇಲ್ಲ. ಖಚಿತ ವಿಧಾನವೂ ಇಲ್ಲ. ರೂಪುರೇಷೆಗಳು ಮೊದಲೇ ಇಲ್ಲ. ಈ ಸಾಲಿನ ಆಯ್ಕೆಯಲ್ಲಿ ಅಕ್ರಮ ನಡೆದಿದೆ ಎಂದು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ದೂರಿನ ಮೇಲೆ ತನಿಖೆ ನಡೆಸಿದ್ದ ಸಿಐಡಿ, ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಅನೇಕ ಅಭ್ಯರ್ಥಿಗಳು ಎ.ಸಿ ಹುದ್ದೆಗೆ ₹1.5 ಕೋಟಿ, ಡಿವೈಎಸ್‌ಪಿ ಹುದ್ದೆಗೆ ₹80 ಲಕ್ಷ, ತಹಶೀಲ್ದಾರ್ ಹುದ್ದೆಗೆ ₹60 ಲಕ್ಷ ಲಂಚ ನೀಡಿದ್ದರು ಎಂದು ತನ್ನ ವರದಿಯಲ್ಲಿ ಸಿಐಡಿ ಹೇಳಿತ್ತು. ಕರಡು ದೋಷಾರೋಪ ಪಟ್ಟಿಯನ್ನೂ ಸಿದ್ಧ‍ಪಡಿಸಿದ್ದ ಸಿಐಡಿ, ಆರೋಪಿಗಳನ್ನು ವಿವಿಧ ಕಲಂಗಳಡಿ ಪ್ರಾಸಿಕ್ಯೂಷನ್‌ಗೆ ಒಳಪಡಿಸಲು ರಾಷ್ಟ್ರಪತಿಯ ಅನುಮೋದನೆ ಪಡೆಯಲು ಸರ್ಕಾರಕ್ಕೆ ಪ್ರಸ್ತಾವವನ್ನೂ ಸಲ್ಲಿಸಿತ್ತು. ವಿಪರ್ಯಾಸವೆಂದರೆ, ಅಕ್ರಮದ ಕಾರಣಕ್ಕೆ ಹೈಕೋರ್ಟ್‌, ಸುಪ್ರೀಂ ಕೋರ್ಟ್‌ನಿಂದ ರದ್ದುಗೊಂಡಿದ್ದ ಈ ಸಾಲಿನ ಆಯ್ಕೆ ಪಟ್ಟಿಯನ್ನು 2022ರಲ್ಲಿ ಕಾಯ್ದೆ ರೂಪಿಸಿ 'ಸಕ್ರಮ'ಗೊಳಿಸಿರುವ ರಾಜ್ಯ ಸರ್ಕಾರ, ಸಿಐಡಿ ತನಿಖೆಯಲ್ಲಿ ಕಳಂಕಿತರೆಂದು ಗುರುತಿಸಿಕೊಂಡಿದ್ದ 46 ಅಭ್ಯರ್ಥಿಗಳನ್ನೂ ಸೇರಿಸಿ ಅಂತಿಮ ಆಯ್ಕೆ ಪಟ್ಟಿಯಲ್ಲಿದ್ದ ಎಲ್ಲರಿಗೂ ನೇಮಕಾತಿ ಆದೇಶ ನೀಡಿತ್ತು.

ಈ ಸಾಲಿನ ಹಗರಣದ ಆರೋಪಿ ಮಂಗಳಾ ಶ್ರೀಧರ್‌ 20 ಅಭ್ಯರ್ಥಿಗಳಿಗೆ 450ಕ್ಕೂ ಹೆಚ್ಚು ಕರೆಗಳನ್ನು ಮಾಡಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಸಿಐಡಿ ತನ್ನ ತನಿಖಾ ವರದಿಯಲ್ಲಿ ಉಲ್ಲೇಖಿಸಿತ್ತು. ಈ ಕಾರಣಕ್ಕೆ ಸರ್ಕಾರದ ಶಿಫಾರಸು ಆಧರಿಸಿ ಮಂಗಳಾ ಅವರನ್ನು ಹಿಂದಿನ ರಾಜ್ಯಪಾಲ
ಎಚ್‌.ಆರ್‌.ಭಾರದ್ವಾಜ್‌ ಅವರು ಕೆಪಿಎಸ್‌ಸಿ ಸದಸ್ಯ ಸ್ಥಾನದಿಂದ ಅಮಾನತುಗೊಳಿಸಿದ್ದರು. ಸಾಂವಿಧಾನಿಕ ಹುದ್ದೆಯಲ್ಲಿರುವ ತನ್ನನ್ನು ಅಮಾನತುಗೊಳಿಸುವ ಅಧಿಕಾರ ರಾಜ್ಯಪಾಲರಿಗೆ ಇಲ್ಲ ಎಂದು ಮಂಗಳಾ ಹೈಕೋರ್ಟ್‌ ಮೊರೆಹೋಗಿದ್ದರು. ಏಕಸದಸ್ಯ ಪೀಠ ರಾಜ್ಯಪಾಲರ ಕ್ರಮ ಸರಿ ಎಂದು ಆದೇಶ ನೀಡಿತ್ತು. ಅದನ್ನು ಪ್ರಶ್ನಿಸಿ ಮಂಗಳಾ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್‌ನ ಅಂದಿನ ಮುಖ್ಯ ನ್ಯಾಯಮೂರ್ತಿ ಎಸ್‌.ಕೆ.ಮುಖರ್ಜಿ ನೇತೃತ್ವದ ವಿಭಾಗೀಯ ಪೀಠ, ರಾಜ್ಯಪಾಲರ ಆದೇಶವನ್ನು ರದ್ದುಪಡಿಸಿತ್ತು.

ರಾಷ್ಟ್ರಪತಿ ಮಾತ್ರ ಆದೇಶಿಸಬಹುದು: 'ಸಂವಿಧಾನದ 317(1) ವಿಧಿ ಅನ್ವಯ ಯಾವುದೇ ಲೋಕಸೇವಾ ಆಯೋಗದ ಸದಸ್ಯರನ್ನು ವಜಾಗೊಳಿಸಬೇಕಾದರೆ, ಅದಕ್ಕೆ ಸಂಬಂಧಿಸಿದಂತೆ ರಾಷ್ಟ್ರಪತಿ ಮಾತ್ರ ಆದೇಶ ಹೊರಡಿಸಬೇಕು. ದುರ್ನಡತೆ ಮತ್ತಿತರ ಕಾರಣಗಳನ್ನು ಮುಂದಿಟ್ಟುಕೊಂಡು ರಾಷ್ಟ್ರಪತಿ ವಜಾ ಮಾಡಬಹುದು. ಆದರೆ, ಅದಕ್ಕೂ ಮೊದಲು ಸದಸ್ಯರ ಮೇಲಿನ ಆರೋಪದ ಬಗ್ಗೆ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗೆ ಉಲ್ಲೇಖ (ರೆಫರೆನ್ಸ್‌) ಕಳುಹಿಸಬೇಕು. ತನಿಖೆಯಲ್ಲಿ ಆರೋಪ ಸಾಬೀತಾದರೆ ಸದಸ್ಯರನ್ನು ವಜಾಗೊಳಿಸಬಹುದು' ಎಂದು ನ್ಯಾಯಪೀಠ ಹೇಳಿತ್ತು.

ಆಯೋಗವೇ ಪತ್ತೆ ಹಚ್ಚಿದ ತನ್ನೊಳಗಿನ ಹುಳುಕು

2024ರಲ್ಲಿ ನಡೆದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ (ಎಇಇ) ಹುದ್ದೆಗಳ ನೇಮಕಾತಿಯಲ್ಲಿ ಅಭ್ಯರ್ಥಿಗಳು ಒಎಂಆರ್ ಶೀಟ್‌ ತಿದ್ದಿ ಹುದ್ದೆ ಗಿಟ್ಟಿಸಿಕೊಂಡಿರುವ ಭಾರಿ ಅಕ್ರಮವನ್ನು ಕೆಪಿಎಸ್‌ಸಿ ಸದಸ್ಯರ ಆಂತರಿಕ ತನಿಖಾ ಸಮಿತಿಯೇ ಪತ್ತೆ ಹಚ್ಚಿತ್ತು. ಆದರೆ, ಆಯೋಗ ಮತ್ತು ಆಯೋಗದ ಒಳಗಿನ ಸಿಬ್ಬಂದಿಯ ಕೈವಾಡ ಇಲ್ಲದೆ ಇಂಥದ್ದೊಂದು ಅಕ್ರಮ ಸಾಧ್ಯ ಇಲ್ಲ ಎನ್ನುವುದನ್ನು ನಂತರದ ಬೆಳವಣಿಗೆಗಳು ಸಾಬೀತುಪಡಿಸಿದ್ದವು. ಎಇಇ ತಾತ್ಕಾಲಿಕ ಆಯ್ಕೆ ಪಟ್ಟಿಗೆ ಆಕ್ಷೇಪಣೆ ವ್ಯಕ್ತಪಡಿಸಿ ಮತ್ತು ಅಕ್ರಮ ನಡೆದಿದೆ ಎಂದು ಅನುಮಾನ ವ್ಯಕ್ತಪಡಿಸಿ ಪಟ್ಟಿಯಲ್ಲಿಲ್ಲದ ಅಭ್ಯರ್ಥಿಯೊಬ್ಬರು ಸಲ್ಲಿಸಿದ್ದ ದೂರಿನಲ್ಲಿದ್ದ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿದ್ದ ಕೆಪಿಎಸ್‌ಸಿ, ತನಿಖೆಗೆ ಸಮಿತಿ ರಚಿಸಿತ್ತು. ಈ ಸಮಿತಿಯು ಆಯೋಗಕ್ಕೆ ಸಲ್ಲಿಸಿರುವ 500ಕ್ಕೂ ಹೆಚ್ಚು ಪುಟಗಳ ತನಿಖಾ ವರದಿಯಲ್ಲಿ ಪರೀಕ್ಷಾ ಅಕ್ರಮ ನಡೆದಿರುವುದನ್ನು ಸಾಕ್ಷ್ಯಗಳ ಸಹಿತ ಉಲ್ಲೇಖಿಸಿದೆ. ಈ ಪ್ರಕರಣದಲ್ಲಿ ಕಳಂಕಿತ ಅಭ್ಯರ್ಥಿಗಳ ಆಯ್ಕೆಯನ್ನು ರದ್ದುಪಡಿಸಲು ನಿರ್ಧರಿಸಿದ್ದ ಕೆಪಿಎಸ್‌ಸಿ, ಪೊಲೀಸ್ ದೂರು ದಾಖಲಿಸಲು ಮತ್ತು ಇಡೀ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸುವಂತೆ ರಾಜ್ಯ ಸರ್ಕಾರಕ್ಕೆ ಕೋರಿಕೆ ಸಲ್ಲಿಸಲು ಆಯೋಗದ ಸಭೆಯಲ್ಲಿ ನಿರ್ಧರಿಸಿತ್ತು. ಆದರೆ, ಪ್ರಕರಣ ಕೋರ್ಟ್‌ನಲ್ಲಿದ್ದು, ಕಳಂಕಿತರೂ ಸೇರಿದಂತೆ ಆಯ್ಕೆಯಾದ ಎಲ್ಲ ಅಭ್ಯರ್ಥಿಗಳು ಹುದ್ದೆಯಲ್ಲಿದ್ದಾರೆ. ಈ ಪ್ರಕರಣದಲ್ಲಿ ಹೈಕೋರ್ಟ್‌, 'ಎರಡು ದಶಕಗಳಿಂದ ಈಚೆಗೆ ನಡೆದಿರುವ ಕೆಪಿಎಸ್‌ಸಿಯಲ್ಲಿನ ನೇಮಕಾತಿ ಪ್ರಕ್ರಿಯೆಗಳು ಅದರ ಗೌರವವನ್ನು ಅಧೋಗತಿಗೆ ತಂದುನಿಲ್ಲಿಸಿವೆ' ಎಂದು ಸಿಡಿಮಿಡಿಗೊಂಡಿತ್ತು.

ಇದು 'ಚಮತ್ಕಾರ'

ಬೆಂಗಳೂರು ಮಹಾನಗರ ಪಾಲಿಕೆಯ ಸಹಾಯಕ ಎಂಜಿನಿಯರ್ ಸೇರಿದಂತೆ ವಿವಿಧ ಇಲಾಖೆಗಳ ಗ್ರೂಪ್ 'ಬಿ' ಹುದ್ದೆಗಳ ನೇಮಕಾತಿಗೆ ಕೆಪಿಎಸ್‌ಸಿ ಇತ್ತೀಚೆಗೆ ನಡೆಸಿದ ಪರೀಕ್ಷೆಯಲ್ಲಿ 600 ಅಂಕಗಳಿಗೆ 500ಕ್ಕೂ ಹೆಚ್ಚು ಅಂಕ ಪಡೆದು ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಅಭ್ಯರ್ಥಿಗಳು ಸ್ಥಾನ ಪಡೆದಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಶೇ 50ರಿಂದ ಶೇ 70 ಅಂಕಗಳು ಗಳಿಸುವುದೇ ಕಷ್ಟ. ಅಂಥದ್ದರಲ್ಲಿ ಶೇ 80 ಅಂಕಕ್ಕೂ ಹೆಚ್ಚು ಪಡೆಯಲು ಹೇಗೆ ಸಾಧ್ಯ ಎನ್ನುವುದು ಚೋದ್ಯ. ಜೊತೆಗೆ, ಜಲಸಂಪನ್ಮೂಲ ಇಲಾಖೆಯಲ್ಲಿ ಸಹಾಯಕ ಎಂಜಿನಿಯರ್, ಭೂ ದಾಖಲೆಗಳ ಸಹಾಯಕ ನಿರ್ದೇಶಕರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪತ್ರಾಂಕಿತ ವ್ಯವಸ್ಥಾಪಕರು, ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಸಹಾಯಕ ನಿರ್ದೇಶಕರ ಹುದ್ದೆಗಳಿಗೆ ನಡೆದ ಪರೀಕ್ಷೆಗಳಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಗಳಿಸಿದ ಅಂಕಗಳೂ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿವೆ. ಅಭ್ಯರ್ಥಿಗಳ ಜೊತೆ ಕೆಪಿಎಸ್‌ಸಿ ಕೈಜೋಡಿಸಿದರಷ್ಟೆ ಈ ರೀತಿಯ ಅಕ್ರಮ ಸಾಧ್ಯ ಎನ್ನುವುದು ಪ್ರತಿಭಾವಂತ ವಿದ್ಯಾರ್ಥಿಗಳ ಆಕ್ರೋಶ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸುವ ವಿವಿಧ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಿ ಎರಡಂಕಿ, ಅದಕ್ಕೂ ಕಡಿಮೆ ಅಂಕ ಪಡೆದ ಅಭ್ಯರ್ಥಿಗಳು, ಕೆಪಿಎಸ್‌ಸಿ ನಡೆಸಿದ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಪಡೆದು ಆಯ್ಕೆಯಾಗುವ 'ಪವಾಡ' ಇತರ ಅಭ್ಯರ್ಥಿಗಳ ಶಂಕೆಗೆ ಕಾರಣವಾಗಿದೆ. ವಾಣಿಜ್ಯ ತೆರಿಗೆ ಪರಿವೀಕ್ಷಕ (ಸಿಟಿಐ) ಹುದ್ದೆಗಳ ಆಯ್ಕೆಗೆ 2024ರ ಜನವರಿಯಲ್ಲಿ ಕೆಪಿಎಸ್‌ಸಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿತ್ತು. ವಿವಿಧ ನಿಗಮಗಳಲ್ಲಿನ ವಿವಿಧ ವೃಂದಗಳ ಹುದ್ದೆಗಳಿಗೆ ಕೆಇಎ 2023ರ ಅಕ್ಟೋಬರ್‌ನಲ್ಲಿ ಪರೀಕ್ಷೆ ನಡೆಸಿತ್ತು. ಕೆಇಎ ಪರೀಕ್ಷೆಯಲ್ಲಿ 95 ಸಾವಿರಕ್ಕೂ ಕೆಳಗಿನ ಸ್ಥಾನ ಪಡೆದ ಅಭ್ಯರ್ಥಿಗಳು ಸಿಟಿಐ ಪ‍ರೀಕ್ಷೆಯಲ್ಲಿ ಉನ್ನತ ಅಂಕ ಪಡೆದು ಆಯ್ಕೆ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಕೇವಲ ಎರಡು ತಿಂಗಳ ಅಂತರದಲ್ಲಿ ಈ ಚಮತ್ಕಾರ ಹೇಗೆ ಸಾಧ್ಯ? 'ಈ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಹೀಗಾಗಿ, ಅಭ್ಯರ್ಥಿಗಳ ಒಎಂಆರ್ ಶೀಟ್ ಮತ್ತು ಅವರು ಪರೀಕ್ಷೆ ಬರೆದ ಕೇಂದ್ರ‌ದ ವಿಡಿಯೊ ತುಣುಕು ಪರಿಶೀಲಿಸಬೇಕು' ಎನ್ನುವುದು ಅಭ್ಯರ್ಥಿಗಳ ಆಗ್ರಹ.

ನೌಕರರೇ 'ಸೋರಿಕೆ'ಧಾರರು

2021ರಲ್ಲಿ 1,112 ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಹುದ್ದೆಗಳ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಕೆಪಿಎಸ್‌ಸಿಯ ಇಬ್ಬರು ನೌಕರರು ಸಿಕ್ಕಿಬಿದ್ದಿದ್ದರು. ಪ್ರಶ್ನೆ ಪತ್ರಿಕೆ ಕದ್ದು ಮಾರಾಟ ಮಾಡಿದ್ದ ಆ ಹಗರಣದಲ್ಲಿ ಅವರೇ ಸಂಚುಕೋರರು ಎನ್ನುವುದು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿತ್ತು. ಪರೀಕ್ಷಾ ನಿಯಂತ್ರಕರ ವಿಭಾಗದ ಶೀಘ್ರ ಲಿಪಿಗಾರ್ತಿ, ಅದೇ ಪರೀಕ್ಷೆ ಬರೆಯಲು ಮುಂದಾಗಿದ್ದ ಮತ್ತೊಂದು ವಿಭಾಗದ ದ್ವಿತೀಯ ದರ್ಜೆ ಸಹಾಯಕನ (ಎಸ್‌ಡಿಎ) ಆಮಿಷಕ್ಕೆ ಬಲಿಯಾಗಿ ಪರೀಕ್ಷೆಗೂ ಎರಡು ದಿನ ಮುನ್ನ ಪ್ರಶ್ನೆಪತ್ರಿಕೆಯ ದತ್ತಾಂಶವನ್ನು ಕದ್ದು ಪೆನ್‌ಡ್ರೈವ್‌ನಲ್ಲಿ ಸಂಗ್ರಹಿಸಿ ಕೊಟ್ಟಿದ್ದಳು. ಪೆನ್‌ಡ್ರೈವ್ ಕೈಗೆ ಸಿಗುತ್ತಿದ್ದಂತೆ ಪ್ರಶ್ನೆಪತ್ರಿಕೆಗಳನ್ನು ಮುದ್ರಿಸಿದ್ದ ಆತ ತನ್ನ ಪರಿಚಯಸ್ಥರಿಗೆ ₹24 ಲಕ್ಷಕ್ಕೆ ಮಾರಿದ್ದ. ಹೀಗೆ ಮಾರಾಟ ಮಾಡಿದವನ ಮನೆ ಮೇಲೆ ಪರೀಕ್ಷೆಯ ಹಿಂದಿನ ದಿನ ದಾಳಿ ನಡೆಸಿದಾಗಲೇ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಬಯಲಿಗೆ ಬಂದಿತ್ತು. ಈ ಅಕ್ರಮದ ನಂತರ ಪರೀಕ್ಷೆಯನ್ನು ರದ್ದುಗೊಳಿಸಿ, ಮರುಪರೀಕ್ಷೆ ನಡೆಸಲಾಗಿತ್ತು. ಆದರೆ, ಒಂದೇ ತಿಂಗಳ ಒಳಗೆ ನಡೆದಿದ್ದ ಮರುಪರೀಕ್ಷೆಯ ಬಳಿಕ ಕೆಪಿಎಸ್‌ಸಿ ಪ್ರಕಟಿಸಿದ್ದ ಅರ್ಹತಾ ಪಟ್ಟಿಯಲ್ಲಿ ಒಂದೇ ಸಮುದಾಯಕ್ಕೆ ಸೇರಿದ 70ಕ್ಕೂ ಹೆಚ್ಚು ಅಭ್ಯರ್ಥಿಗಳ ಹೆಸರಿರುವ ಬಗ್ಗೆ ಕೆಲವು ಅಭ್ಯರ್ಥಿಗಳು ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದರು.

ಆಪ್ತ ಸಹಾಯಕ, ಚಾಲಕರಿಂದಲೂ ದಂಧೆ

ಕೆಪಿಎಸ್‌ಸಿಯ ಪರೀಕ್ಷಾ ವಿಭಾಗದಲ್ಲಿ ಹಲವು ವರ್ಷಗಳಿಂದ ಸಿಬ್ಬಂದಿ ಬೇರೂರಿದ್ದಾರೆ. ಮಾಹಿತಿ ಸೋರಿಕೆಯಲ್ಲಿ ಈ ಸಿಬ್ಬಂದಿಯ ದೊಡ್ಡ ಪಾಲಿದೆ ಎನ್ನುವುದು ಸೂರ್ಯಸ್ಪಷ್ಟ. ಈ ಬಗ್ಗೆ ಹಲವು ದೂರುಗಳು ಬಂದಿದ್ದರೂ ಕೆಪಿಎಸ್‌ಸಿ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇತ್ತೀಚಿನ ಬೆಳವಣಿಗೆಯೆಂದರೆ, ಕೆಪಿಎಸ್‌ಸಿ ಸಿಬ್ಬಂದಿಯೇ ಪಶುಸಂಗೋಪನಾ ಇಲಾಖೆಯ ಪಶು ವೈದ್ಯಾಧಿಕಾರಿ ತಾತ್ಕಾಲಿಕ ಪಟ್ಟಿಯಲ್ಲಿರುವ ಅಭ್ಯರ್ಥಿಗಳಿಗೆ ಕರೆ ಮಾಡಿ ಹುದ್ದೆಯನ್ನು ಬಿಕರಿಗೆ ಇಟ್ಟಿರುವುದು. ಕೆಪಿಎಸ್‌ಸಿ ಅಧ್ಯಕ್ಷರು ಮತ್ತು ಸದಸ್ಯರ ಹೆಸರಿನಲ್ಲಿ ಅವರ ವಾಹನ ಚಾಲಕರೂ ದಂಧೆಗೆ ಇಳಿದಿದ್ದಾರೆ. ಸದ್ಯ ನೇಮಕಾತಿ ಪ್ರಕ್ರಿಯೆ ನಡೆಯುತ್ತಿರುವ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳಿಗೆ ಸಂದರ್ಶನಕ್ಕೆ ಅರ್ಹರಾದ ಅಭ್ಯರ್ಥಿಗಳನ್ನು ಸಂಸ್ಥೆಯ ಗುರುತಿನ ಚೀಟಿ ಬಳಸಿಕೊಂಡು ಆಪ್ತ ಸಹಾಯಕರು, ಚಾಲಕರು ಸಂಪರ್ಕಿಸಿ ಹಣಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ಕೆಪಿಎಸ್‌ಸಿಗೆ ಪೋಷಕರೇ ದೂರು ನೀಡಿದ್ದಾರೆ.

ರಾಷ್ಟ್ರಪತಿ ಅಂಗಳದಲ್ಲಿ ತಿದ್ದುಪಡಿ ಕಾಯ್ದೆ ಮಸೂದೆ

ಸಂಪೂರ್ಣ ಹದಗೆಟ್ಟಿರುವ ಕೆಪಿಎಸ್‌ಸಿಗೆ ತಕ್ಷಣದ 'ಚಿಕಿತ್ಸೆ' ನೀಡಲು ರಾಜ್ಯ ಸರ್ಕಾರ 'ಕರ್ನಾಟಕ ಲೋಕಸೇವಾ ಆಯೋಗ (ವ್ಯವಹಾರ ನಿರ್ವಹಣೆ ಮತ್ತು ಹೆಚ್ಚುವರಿ ಪ್ರಕಾರ್ಯಗಳು) ಕಾಯ್ದೆ-1959ಕ್ಕೆ ತಿದ್ದುಪಡಿ ತರಲು ವರ್ಷದ ಹಿಂದೆಯೇ ಮಸೂದೆಯನ್ನು ರೂಪಿಸಿತ್ತು. ಈ ತಿದ್ದುಪಡಿ ಮಸೂದೆಯಲ್ಲಿ ಕಾಯ್ದೆಯ ಸೆಕ್ಷನ್‌ 18 ಅನ್ನು ಕೈಬಿಡುವುದೂ ಸೇರಿದಂತೆ ಕೆಲವು ಮಹತ್ವದ ಪ್ರಸ್ತಾವಗಳಿದ್ದವು. ಸೆಕ್ಷನ್‌ 18 ಅನ್ನು ಕೈಬಿಟ್ಟರೆ, ಕೆಪಿಎಸ್‌ಸಿ ಜೊತೆ ಸಮಾಲೋಚನೆ ನಡೆಸದೆ ಸರ್ಕಾರ ನಿಯಮಗಳನ್ನು ರೂಪಿಸಲು ಅಧಿಕಾರ ಸಿಗುತ್ತಿತ್ತು. ಆದರೆ, ಪ್ರಸ್ತಾವಿತ ಈ ತಿದ್ದುಪಡಿಯು ಸಂವಿಧಾನದ 320ನೇ ವಿಧಿಗೆ ವ್ಯತಿರಿಕ್ತವಾಗಿದ್ದು, ಆಯೋಗದ ಸ್ವಾಯತ್ತೆಯನ್ನು ಮೊಟಕುಗೊಳಿಸಲಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋಥ್‌, ರಾಷ್ಟ್ರಪತಿ ಅಂಕಿತಕ್ಕೆ ಕಾದಿರಿಸಿದ್ದರು. ಈ ತಿದ್ದುಪಡಿ ಮಸೂದೆ ಹಲವು ತಿಂಗಳುಗಳಿಂದ ರಾಷ್ಟ್ರಪತಿ ಅಂಗಳದಲ್ಲಿದೆ. ಕೆಪಿಎಸ್‌ಸಿಯ ಒಟ್ಟು ಸದಸ್ಯ ಬಲವನ್ನು ತಗ್ಗಿಸುವುದು, ಆಯೋಗದ ಸದಸ್ಯರ ನೇರ ನೇಮಕದ ಹಾಲಿ ವ್ಯವಸ್ಥೆ ಬದಲಿಗೆ ಆಯ್ಕೆಗೆ ಶೋಧನಾ ಸಮಿತಿ ರಚಿಸುವುದು, ಆಯೋಗದ ಕಾರ್ಯದರ್ಶಿ ಹಾಗೂ ಪರೀಕ್ಷಾ ನಿಯಂತ್ರಕರಿಗೆ ಹೊಣೆಗಾರಿಕೆ ನಿಗದಿ ಸೇರಿ ಕೆಲವು ಪ್ರಮುಖ ಅಂಶಗಳು ಈ ತಿದ್ದುಪಡಿ ಮಸೂದೆಯಲ್ಲಿವೆ.

Dailyhunt
Disclaimer: This content has not been generated, created or edited by Dailyhunt. Publisher: Prajavani