Dailyhunt Logo
  • Light mode
    Follow system
    Dark mode
    • Play Story
    • App Story
ಅನುದಾನಕ್ಕೆ ಕಾಯದೆ ಕಾಮಗಾರಿ ಆರಂಭಿಸಿ: ಸಚಿವ ಯು.ಟಿ.ಖಾದರ್ ತಾಕೀತು

ಅನುದಾನಕ್ಕೆ ಕಾಯದೆ ಕಾಮಗಾರಿ ಆರಂಭಿಸಿ: ಸಚಿವ ಯು.ಟಿ.ಖಾದರ್ ತಾಕೀತು

ಮಂಗಳೂರು: ಮಳೆಗಾಲದಲ್ಲಿ ಸಂಭವಿಸಬಹುದಾದ ದುರ್ಘಟನೆಗಳಿಗೆ ಸ್ಪಂದಿಸಲು ಮತ್ತು ಹಾನಿ ಆದಲ್ಲಿ ಪರಿಹಾರ ಕೊಡಲು ಹಣಕಾಸಿನ ಕೊರತೆ ಇಲ್ಲ. ಜಿಲ್ಲಾಧಿಕಾರಿ ವೈಯಕ್ತಿಕ ಠೇವಣಿಯಲ್ಲಿ ಸಾಕಷ್ಟು ಮೊತ್ತ ಇದ್ದು ಹೆಚ್ಚು ಅನುದಾನ ಅಗತ್ಯವಿದ್ದರೆ ಬಿಡುಗಡೆ ಮಾಡಲು ಸರ್ಕಾರ ಸಿದ್ಧ.

ಹೀಗಾಗಿ ಅಗತ್ಯ ಕಾಮಗಾರಿಗಳನ್ನು ಕೈಗೊಳ್ಳಲು ವಿಳಂಬ ಮಾಡಬಾರದು ಎಂದು ಪ್ರಕೃತಿ ವಿಕೋಪ ಪರಿಹಾರ ಉಸ್ತುವಾರಿ, ಆರೋಗ್ಯ ಸಚಿವ ಯು.ಟಿ ಖಾದರ್ ತಾಕೀತು ಮಾಡಿದರು.

ದಕ್ಷಿಣ ಕನ್ನಡ ಜಿಲ್ಲೆ ವಿಪತ್ತು ನಿರ್ವಹಣೆ ಮತ್ತು ಕುಡಿಯುವ ನೀರಿನ ಲಭ್ಯತೆ ಕುರಿತು ಭಾನುವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸಮಸ್ಯೆಗಳು ಆದಾಗ ತೊಂದರೆಗೆ ಸಿಲುಕಿದವರಿಗೆ ಮಾನಸಿಕ ಧೈರ್ಯ ಮತ್ತು ಭರವಸೆ ತುಂಬಲು ಅಧಿಕಾರಿಗಳು ಹಾಗೂ ನಾಗರಿಕರ ಅಗತ್ಯವಿದೆ. ಆದ್ದರಿಂದ ಪ್ರಕೃತಿ ವಿಕೋಪ ಆದರೆ ತಕ್ಷಣ ಸ್ಥಳಕ್ಕೆ ಧಾವಿಸುವ ಮನಸ್ಸು ಮಾಡಬೇಕು ಎಂದರು.

ಜಿಲ್ಲೆಯಲ್ಲಿ ಮುಂಗಾರುಪೂರ್ವದಲ್ಲಿ ಶೇಕಡ 32 ಮತ್ತು ಜನವರಿಯಿಂದ ಜುಲೈ 5ರವರೆಗೆ ಶೇ 41ರಷ್ಟು ಮಳೆ ಕೊರತೆಯಾಗಿದೆ. ಪ್ರಕೃತಿ ವಿಕೋಪ ನಿರ್ವಹಣೆ ನಿಧಿಯಲ್ಲಿ ₹ 3.74 ಕೋಟಿ ಮೊತ್ತ ಇದೆ. ಅಗತ್ಯವಿದ್ದಲ್ಲಿ ತಾಲ್ಲೂಕು ಮಟ್ಟದಲ್ಲಿ ಹಂಚಿಕೆ ಮಾಡಲು ಸಾಕಷ್ಟು ಹಣ ಇದೆ ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್‌.ವಿ ತಿಳಿಸಿದಾಗ 'ಎಲ್ಲರೂ ಕೈಜೋಡಿಸಿ ಕೆಲಸ ಮಾಡಬೇಕು. ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ, ಅರಣ್ಯ ಇಲಾಖೆ ಮತ್ತು ಮೆಸ್ಕಾಂ ಕಾರ್ಯನಿರ್ವಹಣೆಗಾಗಿ ನೋಡಲ್ ಅಧಿಕಾರಿಯೊಬ್ಬರನ್ನು ನೇಮಕ ಮಾಡುವಂತೆ ಸಚಿವರು ಸೂಚಿಸಿದರು.

ಜಿಲ್ಲೆಯ ಮಳೆ ಮಾಪನಗಳ ಕುರಿತು ಸಭೆಯಲ್ಲಿ ಅಸಮಾಧಾನ ವ್ಯಕ್ತವಾಯಿತು. ಮಾಪನಗಳು ಇಲ್ಲದ್ದರಿಂದ ಮತ್ತು ಇದ್ದಲ್ಲಿ ಅಸಮರ್ಪಕವಾಗಿಲ್ಲದ್ದರಿಂದ ರೈತರಿಗೆ ಬೆಳೆ ಪರಿಹಾರ ಸರಿಯಾಗಿ ಸಿಗುತ್ತಿಲ್ಲ ಶಾಸಕರಾದ ಭಾಗೀರಥಿ ಮುರುಳ್ಯ ಮತ್ತು ಕಿಶೋರ್ ಕುಮಾರ್ ದೂರಿದರು. ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಒಟ್ಟು 274 ಮಾಪನಗಳು ಇದ್ದು ಅವುಗಳ ಪೈಕಿ 108 ಕಾರ್ಯನಿರ್ವಹಿಸುತ್ತಿವೆ. ಅವುಗಳ ಜಾಗದಲ್ಲಿ ಉಪಕರಣಗಳನ್ನು ಅಳವಡಿಸಲು ಟೆಂಡರ್ ಆಗಿದೆ. ಕೆಲವು ಕಡೆಗಳಲ್ಲಿ ಉಪಕರಣಗಳನ್ನು ಮಂಗಗಳು ಹಾಳು ಮಾಡುತ್ತಿದ್ದು ಕೈಗೆ ಸಿಗುವಲ್ಲಿ ಮನುಷ್ಯರೂ ಹಾನಿ ಮಾಡುತ್ತಾರೆ. ಆದ್ದರಿಂದ ಹೊಸ ಉಪಕರಣಗಳ ರಕ್ಷಣೆಗೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

'ಕೃಷಿ ಚಟುವಟಿಕೆಗೆ ತೊಂದರೆ ಆಗಿಲ್ಲ'

ಜಿಲ್ಲೆಯಲ್ಲಿ 10 ಸಾವಿರ ಹೆಕ್ಟೇರ್ ಭತ್ತದ ಕೃಷಿ ಇದ್ದು ಜೂನ್‌ನಲ್ಲಿ ನಿರೀಕ್ಷಿತ ಪ್ರಮಾಣದ ಮಳೆ ಆಗದೇ ಇದ್ದುದರಿಂದ ಬಿತ್ತನೆಗೆ ಹಿನ್ನಡೆಯಾಗಿದೆ. ಈಗ ತಗ್ಗು ಪ್ರದೇಶಗಳಲ್ಲಿ ನೀರು ಇದೆ. ಆದ್ದರಿಂದ ಬಿತ್ತನೆ ಆರಂಭವಾಗುತ್ತಿದೆ. ಎತ್ತರದ ಪ್ರದೇಶಗಳಲ್ಲಿ ಇನ್ನಷ್ಟೇ ಆರಂಭವಾಗಬೇಕಿದೆ. ಜುಲೈ 9ರ ವರೆಗೆ ವಾಡಿಕೆಗಿಂತ ಹೆಚ್ಚು ಮಳೆ ಸುರಿಯುವ ಮುನ್ಸೂಚನೆ ಇರುವುದರಿಂದ ಕೃಷಿ ಚಟುವಟಿಕೆ ಚೇತರಿಕೆ ಕಾಣುವ ನಿರೀಕ್ಷೆ ಇದೆ. ಬೀಜ ಮತ್ತು ಗೊಬ್ಬರ ಸಾಕಷ್ಟು ದಾಸ್ತಾನು ಇದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಹೊನ್ನಪ್ಪ ಗೌಡ ತಿಳಿಸಿದರು. ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಹಾನಿಯಾದರೆ ತಕ್ಷಣ ಪರಿಹಾರ ನೀಡಬೇಕು ಎಂದು ಸಚಿವರು ಸೂಚಿಸಿದರು.

ಡೊಂಗರಕೇರಿ ಭಾಗದಲ್ಲಿ 15 ಮಂದಿಯಲ್ಲಿ ಜಾಂಡಿಸ್ ಲಕ್ಷಣಗಳು ಕಂಡುಬಂದಿದೆ ಎಂದು ಆರೋಗ್ಯಾಧಿಕಾರಿ ಡಾ.ತಿಮ್ಮಯ್ಯ ತಿಳಿಸಿದರು. ಈ ಭಾಗದಲ್ಲಿ ಇನ್ನೂ ಅನೇಕ ಮಂದಿಗೆ ಸೋಂಕು ತಗುಲಿದೆ. ಅದಕ್ಕೆ ಏನು ಕಾರಣ ಎಂದು ಶಾಸಕ ವೇದವ್ಯಾಸ ಕಾಮತ್ ಪ್ರಶ್ನಿಸಿದರು. ಅಲ್ಲಿನ ನೀರಿನ ಮಾದರಿಯನ್ನು ಪರೀಕ್ಷೆ ಮಾಡಿದ್ದು ಮಾಲಿನ್ಯ ಕಂಡುಬಂದಿಲ್ಲ ಎಂದು ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ತಿಳಿಸಿದರು.

ಶಾಸಕ ಮಂಜುನಾಥ ಭಂಡಾರಿ, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ ಗಫೂರ್‌, ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ, ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕೆ ಪಾಲ್ಗೊಂಡಿದ್ದರು. ನಾಗುರಿಯಲ್ಲಿ ಗೋಡೆ ಕುಸಿದು ಮೂವರು ಸಾವಿಗೀಡಾದ ಸ್ಥಳದಲ್ಲಿ ನೆರವು ನೀಡಿದ ಸುರೇಖಾ, ಮೇರಿ ಡಿಸೋಜ ಮತ್ತು ಅಧಿಕಾರಿಗಳನ್ನು ಗೌರವಿಸಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260706-29-1812432042

Dailyhunt
Disclaimer: This content has not been generated, created or edited by Dailyhunt. Publisher: Prajavani