Dailyhunt Logo
  • Light mode
    Follow system
    Dark mode
    • Play Story
    • App Story
ಅನುಮತಿ ಪಡೆಯದೆ ಆಕಾಶವಾಣಿ ಭವನ ಪ್ರವೇಶ: ರಾಹುಲ್, ಪ್ರಿಯಾಂಕಾ ವಿರುದ್ಧ ಎಫ್‌ಐಆರ್

ಅನುಮತಿ ಪಡೆಯದೆ ಆಕಾಶವಾಣಿ ಭವನ ಪ್ರವೇಶ: ರಾಹುಲ್, ಪ್ರಿಯಾಂಕಾ ವಿರುದ್ಧ ಎಫ್‌ಐಆರ್

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಅನುಮತಿ ಪಡೆಯದೆ ಆಕಾಶವಾಣಿ ಭವನ ಪ್ರವೇಶಿಸಿದ್ದಕ್ಕಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಿರುದ್ಧ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ರಾಹುಲ್, ಪ್ರಿಯಾಂಕಾ ಸೇರಿದಂತೆ ಇತರ ಸಂಸದರು ಅನುಮತಿಯಿಲ್ಲದೆ ಆಕಾಶವಾಣಿ ಭವನದ ಆವರಣವನ್ನು ಪ್ರವೇಶಿಸಿದ್ದಾರೆ ಎಂದು ಆರೋಪಿಸಿ ದೂರು ಬಂದ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಚುನಾವಣಾ ಆಯೋಗದ ಕಚೇರಿಯತ್ತ ತೆರಳುತ್ತಿದ್ದ 'ಇಂಡಿಯಾ' ಮೈತ್ರಿಕೂಟದ ನಾಯಕರನ್ನು ಪೊಲೀಸರು ಆಕಾಶವಾಣಿ ಭವನದ ಬಳಿ ಮಂಗಳವಾರ ತಡೆದಿದ್ದರು. ಆಗ ಅವರು ಅಲ್ಲೇ ಪ್ರತಿಭಟನೆ ನಡೆಸಿದ್ದರು. ಒಂದು ಹಂತದಲ್ಲಿ, ಬೆಂಬಲಿಗರು ಹುರಿದುಂಬಿಸಿದಾಗ ಉತ್ತೇಜಿತರಾದ ರಾಹುಲ್‌ ಅವರು ಬ್ಯಾರಿಕೇಡ್‌ಗಳ ಮೇಲೆ ಹತ್ತಿ ತ್ರಿವರ್ಣ ಧ್ವಜ ಬೀಸಿದ್ದರು.

ಆಕಾಶವಾಣಿ ಭವನದೊಳಗೆ ಎಂಟು ಗಂಟೆಗೂ ಹೆಚ್ಚು ಕಾಲ ಧರಣಿ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ರಾಹುಲ್, ಪ್ರಿಯಾಂಕಾ ಸೇರಿದಂತೆ 260ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ಇಂಡಿಯಾ ಮೈತ್ರಿಕೂಟದ ಪಕ್ಷಗಳು ಮಂಗಳವಾರ ಸಂಸತ್ ಭವನದಿಂದ ಚುನಾವಣಾ ಆಯೋಗದವರೆಗೆ ಮೆರವಣಿಗೆ ನಡೆಸಲು ಯೋಜಿಸಿದ್ದವು. ಮೆರವಣಿಗೆಗೆ ಅನುಮತಿ ಕೋರಿ ದೆಹಲಿಯ ಉಪ ಪೊಲೀಸ್ ಕಮಿಷನರ್ ಕಚೇರಿಗೆ ಯಾವುದೇ ಅರ್ಜಿ ಸಲ್ಲಿಕೆಯಾಗಿರಲಿಲ್ಲ ಮತ್ತು ಅನುಮತಿಯನ್ನು ನೀಡಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದರು.

Dailyhunt
Disclaimer: This content has not been generated, created or edited by Dailyhunt. Publisher: Prajavani