ಬಂಧುಗಳಲ್ಲಿ ಮನಸ್ತಾಪಗಳು ಸಹಜ. ಇಂಥ ಕದನಗಳ ತುದಿಯಲ್ಲಿ ನಾವು ನಮ್ಮವರನ್ನು ಕುರಿತು ಹೇಳುವುದುಂಟು: 'ನೀನು ಸತ್ತರೂ ನಿನ್ನನ್ನು ನೋಡಲು ಬರುವುದಿಲ್ಲ.' ನಮ್ಮ ರಕ್ತಸಂಬಂಧಿಗಳು ಎಂಥವರಾದರೂ, ಅವರು ಶಾಶ್ವತವಾಗಿ ನಮ್ಮಿಂದ ಅಗಲಿದಮೇಲೆ ಅವರೊಂದಿಗೆ ನಮ್ಮ ಹಗೆತನ ಸಲ್ಲದು; ಅವರನ್ನೊಮ್ಮೆ ಕೊನೆಯ ಸಲ ನೋಡಿ ಬರಬೇಕು ಎಂಬುದು ಶಿಷ್ಟಾಚಾರ. 'ಈ ಶಿಷ್ಟಾಚಾರವನ್ನೂ ಪಕ್ಕಕ್ಕೆ ನೂಕುವಷ್ಟು ನಿನ್ನ ಮೇಲೆ ನನಗೆ ಕ್ರೋಧ ಇದೆ' ಎಂದು ತೋರಿಕೊಳ್ಳುವ ಉಮೇದು ಮೇಲಿನ ಮಾತಿನಲ್ಲಿದೆ. ಆದರೆ ವ್ಯಕ್ತಿಯ ಮರಣದೊಂದಿಗೆ ಅವರ ಮೇಲಿನ ಹಗೆತನವೂ ಕೊನೆಯಾಗತಕ್ಕದ್ದು ಎಂಬುದು ಸಂಸ್ಕೃತಿಯ ಅಲಿಖಿತ ಸಂವಿಧಾನ. ರಾವಣನು ಸತ್ತ ಬಳಿಕ ರಾಮನು ವಿಭೀಷಣನೊಂದಿಗೆ ಆಡುವ ಮಾತುಗಳಿಲ್ಲಿ ಸ್ಮರಣೀಯ.
ಇತ್ತೀಚೆಗೆ ನಡೆದ ಘಟನೆಯೊಂದರ ಬಗ್ಗೆ ಪರ-ವಿರೋಧಗಳ ಚರ್ಚೆಗಳು ನಡೆದವು. ತಂದೆ ತೀರಿಕೊಂಡಾಗ ಅವರ ಅಂತಿಮ ದರ್ಶನಕ್ಕೆ ಬಾರದ ಮಗಳೊಬ್ಬಳು ವಿಡಿಯೊ ಮೂಲಕ ಅಂತ್ಯಸಂಸ್ಕಾರವನ್ನು ನೋಡಿದ ಪ್ರಸಂಗ. ಇದು ಹಲವರ ಭಾವಲೋಕವನ್ನು ಕದಡಿದ್ದು ವಾಸ್ತವ. ಇಂಥ ಘಟನೆಗಳು ಈಗ ಸಾಮಾನ್ಯವಾಗುತ್ತಿವೆ. ಇವುಗಳಿಗೆ ಕಾರಣವಾದರೂ ಏನು? ಸದ್ಯದ ಬರೆಹದ ಉದ್ದೇಶ ಆ ಘಟನೆಯ ಬಗ್ಗೆ ತನಿಖಾವರದಿಯನ್ನು ಸಿದ್ಧಪಡಿಸುವುದಾಗಲೀ, ನೈತಿಕತೆಯ ಪಠ್ಯವನ್ನು ಅಣಿಗೊಳಿಸುವುದಾಗಲೀ ಅಲ್ಲ; ನಮ್ಮ ಕಾಲ ಸೃಷ್ಟಿಸುತ್ತಿರುವ ಭಾವಶೂನ್ಯಸಿದ್ಧಾಂತದ ನಾಡಿಯನ್ನು ಹಿಡಿಯಲು ಸಾಧ್ಯವೆ ಎಂಬ ರೋಗನಿದಾನದ ಪ್ರಯತ್ನವಷ್ಟೆ.
ಮೇಲಣ ಪ್ರಸಂಗದ ವಾಸ್ತವ ಸಂಗತಿಗಳು ನಮಗೆ ಅಲಭ್ಯ. ತಂದೆಯ ಅಂತಿಮದರ್ಶನಕ್ಕೂ ಬರಲಾಗದಷ್ಟು ಎದುರಾದ ಒತ್ತಡದ ಸಂದರ್ಭ ಅಥವಾ ಮನೋಧರ್ಮ; ಇದು ನಮಗಿಲ್ಲಿ ಲಭ್ಯವಾಗಿರುವ ಬಾಹ್ಯಲಕ್ಷಣ. ಈ ಘಟನೆಯನ್ನು 'ರೂಪಕ'ವಾಗಿ ಸ್ವೀಕರಿಸಿ ಮುಂದುವರಿಯಲಾಗಿದೆ; ಹೆಣ್ಣುಮಕ್ಕಳು, ಗಂಡುಮಕ್ಕಳು ಎಂದು ವಿಭಾಗಿಸದೆ, 'ಮಕ್ಕಳು' ಎಂದಷ್ಟೆ ಇಲ್ಲಿ ಗ್ರಹಿಸಲಾಗಿದೆ. ಈಗ ನಮಗೆ ಎದುರಾಗುವ ಮೊದಲ ಪ್ರಶ್ನೆ: ಮಕ್ಕಳು ಮನೆಯಿಂದ ದೂರ ಸರಿಯುವುದಾದರೂ ಏಕೆ? ಆಧುನಿಕ 'ನಾಗರಿಕತೆ'ಗೂ, ಕುಟುಂಬಗಳಿಗೆ ಒದಗುತ್ತಿರುವ ತಬ್ಬಲಿತನಕ್ಕೂ ನೇರ ನಂಟಿದೆ. ನಮ್ಮ ಯುಗಧರ್ಮವನ್ನು ರೂಪಿಸುವ ಹೊಣೆಗಾರಿಕೆಯನ್ನು ನಾವು ಶಿಕ್ಷಣಪದ್ಧತಿಗೆ ಒಪ್ಪಿಸಿ, ಅದಕ್ಕೊಂದು ಗುರಿಯನ್ನೂ ನಿಗದಿ ಮಾಡಿದ್ದೇವೆ. ಹಣವನ್ನು ಗಳಿಸುವುದೇ ಅಕ್ಷರಜ್ಞಾನದ ಮಹಾಫಲ ಎಂದು ನಮ್ಮ ಸಮಾಜ ತೀರ್ಮಾನಿಸಿಕೊಂಡಿದೆ. ಹಣದ ತೋರಣ ಎಲ್ಲಿ ಕಂಡರೂ ಅಲ್ಲಿಗೆ ಹಾರಬಲ್ಲಂತೆ ನಮ್ಮನ್ನು ಸನ್ನದ್ಧಗೊಳಿಸುವುದೇ ಶಿಕ್ಷಣದ ಮೂಲಭೂತತತ್ತ್ವವನ್ನಾಗಿ ಅಪ್ಪಿಕೊಂಡಿದ್ದೇವೆ. ಹೀಗಾಗಿ ಇಂದಿನ ಶಿಕ್ಷಣದ ಸ್ವರೂಪದಲ್ಲಿಯೇ 'ವಲಸೆ'ಯ ಆಮಿಷವಿದೆ. ಚಿಂತಕ ವೆಂಡೆಂಲ್ ಬೆರ್ರಿ ಶಿಕ್ಷಣದ ಈ ಮೂಲೋತ್ಪಾಟನ ಉದ್ಯಮದ ಬಗ್ಗೆ ಹೇಳಿರುವ 'Our children are educated to leave home, not to stay home ' - 'ನಮ್ಮ ಮಕ್ಕಳು ವಿದ್ಯಾವಂತರಾಗುತ್ತಿರುವುದು ಮನೆಯಲ್ಲಿ ನಿಲ್ಲಲು ಅಲ್ಲ, ಮನೆಯನ್ನು ತೊರೆಯಲು' ಎಂಬ ಮಾತು ಚಿಂತನೀಯ. ಈ ನಿರ್ಗಮನದಿಂದಾಗಿ ಉಂಟಾಗುತ್ತಿರುವ ದುರಂತಕ್ಕೆ ಮೂರು ಮುಖ
ಗಳು; ಮಾನಸಿಕವಾದುದು, ಪಾರಿಸರಿಕವಾದುದು ಮತ್ತು ಸಾಂಸ್ಕೃತಿಕವಾದುದು.
ಶಿಕ್ಷಣಪದ್ಧತಿಯು ದಿಕ್ಕುತಪ್ಪಿರುವುದಕ್ಕೆ ಸರ್ಕಾರವನ್ನು ಟೀಕಿಸುವುದರಲ್ಲೇ ನಮಗೆ ತೃಪ್ತಿ! ಆದರೆ, ನಾವೇ ಈ ಅಧೋಗತಿಯ ಮೂಲಪುರುಷರು ಎಂಬ ಆತ್ಮಾವಲೋಕನಕ್ಕೆ ನಾವಿನ್ನೂ ಸಿದ್ಧವಾಗಿಲ್ಲ. 'ಭೀತಿಗೊಂಡು ಸರ್ಕಾರವನ್ನು ದೂರುತ್ತೇವೆ, ರಾಜಕಾರಣಿಗಳನ್ನು ದೂರುತ್ತೇವೆ, ವಿದ್ಯಾಭ್ಯಾಸವನ್ನು ದೂರುತ್ತೇವೆ. ಕಂಡದ್ದನ್ನೆಲ್ಲಾ ದೂರುತ್ತ ಕೈ ಹಿಸುಕಿಕೊಳ್ಳುತ್ತೇವೆ. ಆದರೆ ಇದೆಲ್ಲಕ್ಕೆ ನಿಜವಾದ ಬೀಜ ನೆಟ್ಟುಕೊಂಡವರು ನಾವೇ, ಇನ್ಯಾರಲ್ಲ. ನಮ್ಮ ಪುಟ್ಟಮಕ್ಕಳು ಅದೇ ಹೊಸದಾಗಿ ಹೆಗಲಿಗೆ ಚೀಲ ನೇತುಹಾಕಿಕೊಂಡು 'ಅ' 'ಆ' ತರಗತಿಗೆ ಹೊರಡುತ್ತಿರುವಾಗಲೇ ಮನೆಯಲ್ಲಿ ವಾಗ್ವಾದ ಶುರುವಾಗುತ್ತದೆ - ಮುಂದೆ ಆ ಮಗುವನ್ನು ಡಾಕ್ಟರ್ ಮಾಡುವುದೋ, ಎಂಜಿನಿಯರ್ ಮಾಡುವುದೋ, ವಕೀಲಿಗೆ ಹಾಕುವುದೋ, ಐ.ಎ.ಎಸ್.ಗೆ ಸೇರಿಸುವುದೋ ಅನ್ನುವ ಬಗ್ಗೆ. ಆಗಲೇ ನಾವು ಮಕ್ಕಳ ಮುಂದಣ ದಾರಿಯನ್ನು ಪ್ರಪಂಚ ಭೂಪಟದಲ್ಲಿ ಇಂಗ್ಲಂಡ್ ಅಮೇರಿಕಾದ ಮಹಾನಗರಗಳ ಕಡೆಗೆರೆಯೆಳೆದು ಗುರುತಿಸತೊಡಗುತ್ತೇವೆ' - ಕೆ. ವಿ. ಸುಬ್ಬಣ್ಣನವರ ಈ ಮಾತುಗಳು ನಮ್ಮ ಹೊಣೆಗೇಡಿತನದ ಬಗ್ಗೆ ಬೆಳಕನ್ನು ಚೆಲ್ಲುವಂತಿವೆ.
ಶಿಕ್ಷಣದ ಉದ್ದೇಶವನ್ನು ಕಂಡುಕೊಳ್ಳುವುದರಲ್ಲಿಯೇ ನಮ್ಮ ಕಾಲ ಸೋತಿದೆ. ಜೀವನದ ಸಾರ್ಥಕತೆಯನ್ನು ಕಂಡುಕೊಳ್ಳಲು ಮಕ್ಕಳನ್ನು ಪ್ರಚೋದಿಸಬೇಕಾಗಿದ್ದ ಶಿಕ್ಷಣವ್ಯವಸ್ಥೆಯು ಹಣವನ್ನು ಗಳಿಸುವ ಯಂತ್ರಗಳನ್ನಾಗಷ್ಟೆ ಅವರನ್ನು ತಯಾರು ಮಾಡುತ್ತಿದೆ. ಇಂಥ 'ವ್ಯಾಪಾರ'ವನ್ನು ಒಪ್ಪಿಕೊಂಡಿರುವ ಸಮಾಜದಲ್ಲಿ ಜೀವನಮೌಲ್ಯಗಳ ಬಗ್ಗೆ ಮಾತನಾಡುವುದು ಕೂಡ ಅಸಂಗತ ಎನಿಸಿಕೊಳ್ಳುತ್ತದೆ. ಮಾತೃ ದೇವೋ ಭವ, ಪಿತೃ ದೇವೋ ಭವ - ಎಂಬಂಥ ಜೀವನಸೂತ್ರ
ಗಳಂತೂ ಮೌಢ್ಯದ ಉಗ್ಗಡಗಳಾಗಿ ಅಪಹಾಸ್ಯಕ್ಕೆ ತುತ್ತಾಗುತ್ತವೆ. ಹಾಗಾದರೆ ನಾವು ಆರಾಧಿಸುತ್ತಿರುವ ಡಿಗ್ರಿಗಳು, ಸಂಬಳಗಳು, ಸ್ವಾತಂತ್ರ್ಯ - ಇವುಗಳ ಉದ್ದೇಶವಾದರೂ ಏನು? ಅವುಗಳ ನೆಲೆ ಎಲ್ಲಿ? ನಮ್ಮ ಜಮೀನುಗಳನ್ನು ಮಾರಿಕೊಂಡು, ಮುಂದೆ ಅದೇ ಜಮೀನುಗಳಲ್ಲಿ ತಲೆಯೆತ್ತುವ ಫ್ಯಾಕ್ಟರಿಗಳಲ್ಲಿ ಜೀತದಾಳಿನಂತೆ ದುಡಿಯವುದನ್ನೇ ಆರ್ಥಿಕ ಸ್ವಾವಲಂಬನೆ, ಪ್ರಗತಿ ಎಂದು ಸಂಭ್ರಮಿಸುವಂತೆ ನಾವು ಪಡೆದ ಶಿಕ್ಷಣ ನಮ್ಮನ್ನು ವಂಚಿಸುತ್ತಿದೆ. ಹೀಗೆಯೇ ತಂದೆ-ತಾಯಿಗಳನ್ನು ವೃದ್ಧಾಶ್ರಮಕ್ಕೆ ಒಪ್ಪಿಸಿ, ಮನೆಯಲ್ಲಿ ನಾಯಿ-ಬೆಕ್ಕುಗಳನ್ನು ಸಾಕಿ ಅವುಗಳಿಗೆ ಪ್ರೀತಿಯ ಧಾರೆಯನ್ನೆರೆಯುವುದೇ ಮಾನವತೆ ಎಂದೂ ಹಿಗ್ಗುವಂತೆ ಮೋಹಗೊಳಿಸುತ್ತಿದೆ. ಪ್ರಶ್ನಪತ್ರಿಕೆಯ ಸೋರುವಿಕೆಯೊಂದೇ ಶಿಕ್ಷಣವ್ಯವಸ್ಥೆಯ ಭ್ರಷ್ಟಾಚಾರಕ್ಕೆ ನಿದರ್ಶನವಲ್ಲ, ವಿದ್ಯಾವಂತರಲ್ಲಿ ಸಾಗಿರುವ ಮೌಲ್ಯಗಳ ಜಾರುವಿಕೆ ಕೂಡ ಇದಕ್ಕೆ ನಿದರ್ಶನವೇ ಹೌದು.
ಗ್ಲೋಬಲೈಸೇಷನ್ ಇಡಿಯ ಜಗತ್ತನ್ನು ಒಂದು ಮನೆಯಂತೆ ಕಾಣಿಸುವುದರಲ್ಲಿ ಯಶಸ್ಸನ್ನು ಕಂಡಿದೆ ಎಂದು ನಾವೇನಾದರೂ ಭಾವಿಸಿಕೊಂಡರೆ, ಅದರ ಛದ್ಮವೇಷದ ಆಕರ್ಷಣೆ ನಮ್ಮ ಬುದ್ಧಿಯನ್ನು ಮಂಕುಗೊಳಿಸಿದೆ ಎಂದೇ ಅರ್ಥ. ದಿಟ, ಅದು ಇಡಿಯ ಜಗತ್ತಿಗೆ ಒಂದು ಬೇಲಿಯನ್ನು ಹಾಕುವುದರ ಮೂಲಕ ಅದನ್ನು ಒಂದೇ ಮನೆ ಎಂಬಂತೆ ತೋರಿಸುತ್ತಿದೆ. ಆದರೆ ಈ 'ಕೂಡು-ಕುಟುಂಬ'ದಲ್ಲಿ ಸೌಹಾರ್ದವೇ ಇಲ್ಲದಂತೆ ಮಾಡಿದೆ. ದೇಶ-ದೇಶಗಳ ನಡುವೆ, ಕಂಪನಿ-ಕಂಪನಿಗಳ ನಡುವೆ, ಅಣ್ಣ-ತಮ್ಮಂದಿರ ನಡುವೆ, ಹೆತ್ತವರು-ಮಕ್ಕಳ ನಡುವೆ, ಎಂದರೆ ಪ್ರತಿ ಸಂಬಂಧದಲ್ಲಿಯೂ, ಅಷ್ಟೇಕೆ ನಮ್ಮಲ್ಲಿಯೇ ಸದಾ ಉದ್ವೇಗದ ವಾತಾವರಣವನ್ನು ಉಂಟುಮಾಡುತ್ತಿದೆ. ಭೌತಿಕವಾಗಿ ಹತ್ತಿರ ನಿಲ್ಲಿಸಿ, ಭಾವನಾತ್ಮಕವಾಗಿ ದೂರ ಮಾಡುವುದೇ ಇಂದಿನ ನಾಗರಿಕತೆಯ ಜಾಣ್ಮೆ. ಗೊತ್ತಿಲ್ಲದ ಗುರಿಯ ಕಡೆಗೆ ನಿರಂತರವಾಗಿ ನಮ್ಮನ್ನು ಓಡಿಸಿ, ಓಡಿಸಿ ಸತ್ತ್ವಹೀನರನ್ನಾಗಿಸುವುದು ಅದರ ಕಲೆ. ನಾವು ನಿಂತಿರುವ ನೆಲದ ಬಗ್ಗೆ ಗೌರವವನ್ನು ಅಳಿಸಿ, ನಮ್ಮ ಆಚಾರ-ವಿಚಾರಗಳ ಬಗ್ಗೆ ವಿಶ್ವಾಸವನ್ನು ಇಲ್ಲವಾಗಿಸಿ, ಸಂಬಂಧಗಳ ಬಗ್ಗೆ ಭರವಸೆಯನ್ನು ಕೊಂದು ನಮ್ಮನ್ನು ಅನಾಥಪ್ರಜ್ಞೆಗೆ ತಳ್ಳುವುದು ಅದರ ಹವಣು. ಅನಾಥಪ್ರಜ್ಞೆಯು ಕರ್ತವ್ಯದ ಯಾವುದೇ ಹೊಣೆಗಾರಿಕೆಯನ್ನು ಸ್ವೀಕರಿಸಲು ಸಿದ್ಧವಾಗದು; ಯಾಂತ್ರಿಕತೆಯೇ ಅದರ ಜೀವಾಳ. ಈ ಅನಾಥಪ್ರಜ್ಞೆಯ ಬೀಜ ಇರುವುದೇ 'ವಲಸೆ'ಯಲ್ಲಿ. ಈ ವಲಸೆಯೇ ನಮ್ಮ ಪ್ರಾಚೀನ ಮಹಾಕಾವ್ಯಗಳು ನಿರೂಪಿಸಿದ ವನವಾಸದ ಕಲ್ಪನೆ. ಹದಿನಾಲ್ಕು ವರ್ಷಗಳ ವನವಾಸಕ್ಕೆ ಒಬ್ಬನನ್ನು ಅವನ ಮೂಲಸ್ಥಾನದಿಂದ ಭೌತಿಕವಾಗಿ ದೂರವಾಗಿಸುವುದಷ್ಟೆ ಮೂಲೋದ್ದೇಶವಲ್ಲ, ಕರಳುಸಂಬಂಧದ ಎಲ್ಲ ಜೀವನಾಡಿಗಳನ್ನೂ ಕತ್ತರಿಸಿ ಮಾನಸಿಕವಾಗಿಯೂ ಅವನನ್ನು ಆ ನೆಲದಿಂದ ದೂರ ಮಾಡಿ ಅನಾಥನನ್ನಾಗಿಸುವುದು ಅದರ ಹುನ್ನಾರ. ಇಂದಿನ ಶಿಕ್ಷಣ ನಮ್ಮನ್ನು ಇಂಥ ವನವಾಸಕ್ಕೆ ತಳ್ಳುತ್ತಿದೆ.
ನಮ್ಮ ನೆಲದಲ್ಲಿಯೇ ನಮಗೆ ಬೇಕಾದ 'ಶ್ರೀ', ಎಂದರೆ ಎಲ್ಲ ವಿಧದ ಸಂಪತ್ತುಗಳನ್ನೂ ಒದಗಿಸಿಕೊಂಡು, ನಮಗೆ ಅನಿವಾರ್ಯವಿರುವಷ್ಟು ಅದನ್ನು ನೆಮ್ಮದಿಯಿಂದ ಅನುಭವಿಸಲು ನಮ್ಮನ್ನು ಸಿದ್ಧಗೊಳಿಸಬಲ್ಲದ್ದೇ ದಿಟವಾದ ಶಿಕ್ಷಣ. ಸಂಪತ್ತು ಎಂದರೆ ಕೇವಲ ಉದ್ಯೋಗ, ಸಂಬಳ, ಕಟ್ಟಡಗಳಷ್ಟೆ ಅಲ್ಲ; ಪ್ರೀತಿ, ವಿಶ್ವಾಸ, ಸ್ನೇಹ, ಕರುಣೆ, ಸಂತೋಷ, ಕರ್ತವ್ಯಗಳೂ ಸಂಪತ್ತುಗಳೇ. ಹೊರಗಿನ ಮತ್ತು ಒಳಗಿನ ಈ ಸಂಪತ್ತುಗಳ ಸಂಪುಟವೇ ಆತ್ಮಶ್ರೀ. ಕುಮಾರವ್ಯಾಸಭಾರತದ ಮೊದಲ ಪದ್ಯವೇ ಇಲ್ಲಿ ಮಾರ್ಗದರ್ಶಕವಾಗಿದೆ:
'ಶ್ರೀವನಿತೆಯರಸನೆ ವಿಮಲ ರಾ / ಜೀವಪೀಠನ ಪಿತನೆ ಜಗಕತಿ / ಪಾವನನೆ ಸನಕಾದಿ ಸಜ್ಜನನಿಕರ ದಾತಾರ / ರಾವಣಾಸುರಮಥನ ಶ್ರವಣ ಸು / ಧಾವಿನೂತನ ಕಥನಕಾರಣ/ ಕಾವುದಾನತ ಜನವ ಗದುಗಿನ ವೀರನಾರಯಣ //'
ಎಲ್ಲ ಸಂಪತ್ತುಗಳ ಒಡತಿ 'ಶ್ರೀ', ಎಂದರೆ ಲಕ್ಷ್ಮಿಯ ಒಡೆಯನಾದ ನಾರಾಯಣನ ಸ್ತುತಿ ಇದು. ಅವನ ವಾಸಸ್ಥಾನ ವೈಕುಂಠಲೋಕ ಹೌದು. ಆದರೆ ಅವನು ನನಗೆ ಒದಗಬೇಕಾದದ್ದು ನನ್ನೂರು ಗದುಗಿನಲ್ಲಿಯೇ ಹೌದು - ಎಂದು ಕುಮಾರವ್ಯಾಸ ಇಲ್ಲಿ ಹಂಬಲಿಸುತ್ತಿದ್ದಾನೆ. ಇದೊಂದು ಅರ್ಥದಲ್ಲಿ 'ಗ್ಲೋಬಲ್' ಅನ್ನು 'ಲೋಕಲ್' ಮಾಡಿಕೊಳ್ಳುವ ಸ್ವಾವಲಂಬನೆ-ಸ್ವಾತಂತ್ರ್ಯಗಳಂತೆ. ಆತ್ಮಶ್ರೀಯನ್ನು ಹೀಗೆ ನಮ್ಮಲ್ಲಿ ಅವತರಣಮಾಡಿಸಿಕೊಡಬಲ್ಲದ್ದೇ ದಿಟವಾದ ಶಿಕ್ಷಣ. ಇಂಥ ಶಿಕ್ಷಣದ ಬೆಳಕಿನಲ್ಲಿ ಬೆಳೆದ ಮಕ್ಕಳಷ್ಟೆ ಜನನಿ ಮತ್ತು ಜನ್ಮಭೂಮಿಯಿಂದ ನಮಗೇನು ದೊರೆತಿದೆ ಎಂಬ ಲೆಕ್ಕಾಚಾರಕ್ಕೆ ಸೋಲದೆ, ನಮ್ಮಿಂದ ಏನು ಸಂದಾಯವಾಗಬೇಕಿದೆ ಎಂದು ಕರ್ತವ್ಯೋನ್ಮುಖರಾಗಬಲ್ಲರು.

