ಅಮರಾವತಿ: ಅಪರೂಪದ ಆನುವಂಶಿಕ ಕಾಯಿಲೆಯಿಂದ ಬಳಲುತ್ತಿದ್ದ ಬಾಲಕನನ್ನು ಆಂಧ್ರಪ್ರದೇಶದ ಉಪಮುಖ್ಯಮಂತ್ರಿ, ನಟ ಪವನ್ ಕಲ್ಯಾಣ್ ಭೇಟಿಯಾಗಿದ್ದಾರೆ.
ನಿರಂಜನ್ ಎನ್ನುವ ಪುಟ್ಟ ಅಭಿಮಾನಿಯನ್ನು ಭೇಟಿಯಾಗಲು ಪವನ್ ಅವರು ಹನುಮಕೊಂಡಕ್ಕೆ ತೆರಳಿದ್ದರು. ನಿರಂಜನ್ ಮತ್ತು ಅವರ ಕುಟುಂಬದೊಂದಿಗೆ ಮಾತುಕತೆ ನಡೆಸಿ, ಚಿಕಿತ್ಸೆಯ ಬಗ್ಗೆ ವಿಚಾರಿಸಿ, ವೈದ್ಯಕೀಯ ವೆಚ್ಚಕ್ಕಾಗಿ ₹1 ಲಕ್ಷ ಆರ್ಥಿಕ ಸಹಾಯ ಮಾಡಿದ್ದಾರೆ.
ಜತೆಗೆ 'ಇಂತಹ ಸಮಯದಲ್ಲಿ ಧೈರ್ಯದಿಂದ ಇರಬೇಕು' ಎಂದಿದ್ದಾರೆ.
ಇತ್ತೀಚಿಗೆ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಪವನ್ ಕಲ್ಯಾಣ್, ನಿರಂಜನ್ ಬೇಗ ಗುಣಮುಖವಾಗುವಂತೆ ಅವರ ಹೆಸರಿನಲ್ಲಿ ಪೂಜೆ ಮಾಡಿಸಿದ್ದರು. ಅದರ ಪ್ರಸಾದವನ್ನೂ ಬಾಲಕನಿಗೆ ನೀಡಿದ್ದಾರೆ.
ಭೇಟಿಯ ವೇಳೆ ನಿರಂಜನ್ ಅವರು ಪವನ್ ಕಲ್ಯಾಣ್ ಬಳಿ, 'ನಾನು ನಿಮ್ಮ ದೊಡ್ಡ ಅಭಿಮಾನಿ' ಎಂದು, ಅವರಿಂದ ಪ್ರೇರಿತನಾಗಿ ಮಾಡಿದ್ದ ಡ್ಯಾನ್ಸ್ ವಿಡಿಯೊಗಳನ್ನೂ ತೋರಿಸಿ ಖುಷಿ ಪಟ್ಟಿದ್ದಾರೆ.
ಪವನ್ ಕಲ್ಯಾಣ್ ಅವರ ಈ ನಡೆಯನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಟೊ ಹಂಚಿಕೊಂಡಿರುವ ಪವನ್ ಅವರು, 'ಕೆಲವು ದಿನಗಳ ಹಿಂದೆ, ವಾರಂಗಲ್‌ನ ಹನುಮಕೊಂಡದ ನಿರಂಜನ್ ಅವರ ವಿಡಿಯೊವನ್ನು ನಾನು ನೋಡಿದೆ, ಅವರು ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾರೆ ಎನ್ನುವ ವಿಚಾರ ತಿಳಿಯಿತು. ಜತೆಗೆ ನನ್ನನ್ನು ಭೇಟಿಯಾಗಲು ಬಯಸಿದ್ದಾರೆ ಎಂದು ಗೊತ್ತಾಯಿತು. ಅವರನ್ನು ಭೇಟಿ ಮಾಡಿ, ಅವರ ಕುಟುಂಬದೊಂದಿಗೆ ಸಮಯ ಕಳೆಯುವ ಸೌಭಾಗ್ಯ ನನಗೆ ಸಿಕ್ಕಿತು' ಎಂದು ಬರೆದುಕೊಂಡಿದ್ದಾರೆ.
'ಅವರ ಆಸೆಯನ್ನು ನಾನು ಈಡೇರಿಸುತ್ತಿದ್ದೇನೆ ಎಂದು ನಂಬಿ ನಾನು ಅಲ್ಲಿಗೆ ಹೋಗಿದ್ದೆ. ಆದರೆ ನನಗೆ ಸ್ಫೂರ್ತಿ ನೀಡಿದವರು ನಿರಂಜನ್. ಅನಾರೋಗ್ಯ ಪರಿಸ್ಥಿತಿಯಲ್ಲಿಯೂ ಅವರ ಧೈರ್ಯ ಮತ್ತು ಅಚಲ ಮನೋಭಾವ ನಿಜಕ್ಕೂ ಪ್ರೇರಣಾದಾಯಕ' ಎಂದಿದ್ದಾರೆ.

