ಬೆಂಗಳೂರು: 'ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ವೇಳೆ ಅರ್ಹ ಮತದಾರರ ಹೆಸರುಗಳು ಕೈತಪ್ಪದಂತೆ ಮುನ್ನೆಚ್ಚರಿಕೆ ವಹಿಸಬೇಕು' ಎಂದು ಭಾರತೀಯ ಚುನಾವಣಾ ಆಯೋಗಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮನವಿ ಮಾಡಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರಿಗೆ ಮಂಗಳವಾರ ಈ ಪತ್ರ ಬರೆದಿದ್ದಾರೆ.
'ರಾಜ್ಯದ ಜನರು ವಿಶ್ವಾಸ ಇಡಬಹುದಾದ ರೀತಿಯಲ್ಲಿ ಮತದಾರರ ಪಟ್ಟಿ ಸಿದ್ಧವಾಗಬೇಕು. ಪ್ರತಿಯೊಬ್ಬ ಅರ್ಹ ನಾಗರಿಕನ ಹೆಸರು ಪಟ್ಟಿಯಲ್ಲಿ ಇರಬೇಕು, ಅನರ್ಹರ ಹೆಸರನ್ನು ತೆಗೆದುಹಾಕಬೇಕು. ಆದರೆ, ಸಾಕಷ್ಟು ಸಮಯ, ಮಾಹಿತಿ ಅಥವಾ ತಮ್ಮ ಅರ್ಹತೆ ಸಾಬೀತುಪಡಿಸುವ ಅವಕಾಶದ ಕೊರತೆಯಿಂದ ಯಾವುದೇ ನಾಗರಿಕ ತನ್ನ ಮತದಾನದ ಹಕ್ಕು ಕಳೆದುಕೊಳ್ಳುವಂತೆ ಆಗಬಾರದು' ಎಂದು ಮನವಿ ಮಾಡಿದ್ದಾರೆ.
'ರಾಜ್ಯದ 5.54 ಕೋಟಿ ಮತದಾರರ ಪೈಕಿ 1.08 ಕೋಟಿ ಮತದಾರರನ್ನು ಗೈರು, ಸ್ಥಳಾಂತರ, ನಿಧನ, ಈಗಾಗಲೇ ನೋಂದಣಿ, ಇತರ (ಎಎಸ್ಡಿಡಿಒ) ವರ್ಗಕ್ಕೆ ಸೇರಿಸಲಾಗಿದೆ. ಇದು ಒಟ್ಟು ಮತದಾರರ ಪೈಕಿ ಸುಮಾರು ಐದನೇ ಒಂದರಷ್ಟಿದೆ' ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
'ಎಎಸ್ಡಿಡಿಒ ವರ್ಗಕ್ಕೆ ಸೇರಿರುವ ಅರ್ಹ ಮತದಾರರಿಗೆ ಅರ್ಜಿ ನಮೂನೆ- 6ರ ಮೂಲಕ ಹಕ್ಕು ಸಲ್ಲಿಸಲು ಸಾಕಷ್ಟು ಕಾಲಾವಕಾಶ ನೀಡಬೇಕು. 2023ರ ಚುನಾವಣಾ ಆಯೋಗದ ಕೈಪಿಡಿಯ ಪ್ಯಾರಾ 11.3.1ರ ಅನ್ವಯ ಅವಧಿ ವಿಸ್ತರಿಸಲು ಅವಕಾಶವಿದ್ದು, ಕರ್ನಾಟಕದಲ್ಲಿ ಸದ್ಯ ಯಾವುದೇ ಚುನಾವಣೆ ಸಮೀಪದಲ್ಲಿಲ್ಲದ ಕಾರಣ ಅವಧಿ ವಿಸ್ತರಣೆ ಸಾಧ್ಯ' ಎಂದು ಶಿವಕುಮಾರ್ ಪ್ರತಿಪಾದಿಸಿದ್ದಾರೆ.
'ನಗರ ಪ್ರದೇಶಗಳಲ್ಲಿ ವಾರ್ಡ್ ಸಮಿತಿ ಸಭೆಗಳನ್ನು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮಸಭೆಗಳನ್ನು ನಡೆಸಿ ಕರಡು ಮತದಾರರ ಪಟ್ಟಿಯನ್ನು ಓದಿ ಹೇಳಬೇಕು. ಹೆಸರುಗಳ ಸೇರ್ಪಡೆ, ಕೈಬಿಡುವಿಕೆ ಹಾಗೂ ತಪ್ಪುಗಳನ್ನು ಸಾರ್ವಜನಿಕವಾಗಿ ಗುರುತಿಸುವ ವ್ಯವಸ್ಥೆ ಮಾಡಬೇಕು. ತಾರ್ಕಿಕ ವ್ಯತ್ಯಾಸ ಮತ್ತು 2002ರ ಪಟ್ಟಿಯೊಂದಿಗೆ ಮ್ಯಾಪಿಂಗ್ ಇಲ್ಲದ ಪ್ರಕರಣಗಳಲ್ಲಿ ದಾಖಲೆಗಳನ್ನು ಸಂಗ್ರಹಿಸಲು, ಅಗತ್ಯವಿದ್ದಲ್ಲಿ ಪ್ರಯಾಣಿಸಲು ಮತ್ತು ತಮ್ಮ ಅರ್ಹತೆ ಸಾಬೀತುಪಡಿಸಲು ಪ್ರತಿ ಮತದಾರನಿಗೂ ಕನಿಷ್ಠ ಮೂರರಿಂದ ನಾಲ್ಕು ವಾರಗಳ ಕಾಲಾವಕಾಶ ನೀಡಬೇಕು' ಎಂದು ಮನವಿ ಮಾಡಿದ್ದಾರೆ.
'ಅರ್ಜಿಗಳು ಮತ್ತು ಆಕ್ಷೇಪಗಳ ಸಂಖ್ಯೆ ಹೆಚ್ಚಾಗುವ ಕಾರಣ ಹೆಚ್ಚುವರಿ ಮತದಾರರ ನೋಂದಣಾಧಿಕಾರಿಗಳ (ಇಆರ್ಒ) ಈಗಿರುವ ಸಂಖ್ಯೆ ಸಾಕಾಗುವುದಿಲ್ಲ. ಎಎಸ್ಡಿಡಿಒ ಹಾಗೂ ತಾರ್ಕಿಕ ವ್ಯತ್ಯಾಸದ ಪ್ರಕರಣಗಳು ಹೆಚ್ಚಾಗಿ ಇರುವ ಜಿಲ್ಲೆಗಳಲ್ಲಿ ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿಗಳನ್ನು (ಡಿಇಒ) ನೇಮಿಸಬೇಕು' ಎಂದೂ ಒತ್ತಾಯಿಸಿದ್ದಾರೆ.
ಎಸ್ಐಆರ್ ಪ್ರಕ್ರಿಯೆಗೆ ರಾಜ್ಯ ಸರ್ಕಾರದಿಂದ ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿರುವ ಮುಖ್ಯಮಂತ್ರಿ, 'ಗ್ರಾಮಸಭೆ ಹಾಗೂ ವಾರ್ಡ್ ಸಮಿತಿ ಸಭೆಗಳನ್ನು ನಡೆಸುವುದು, ಮತದಾರರನ್ನು ತಲುಪಲು ವ್ಯಾಪಕ ಪ್ರಚಾರ ಕೈಗೊಳ್ಳುವುದು ಸೇರಿದಂತೆ ಚುನಾವಣಾ ಆಯೋಗಕ್ಕೆ ಅಗತ್ಯ ಆಡಳಿತಾತ್ಮಕ ಹಾಗೂ ತಾಂತ್ರಿಕ ನೆರವು ನೀಡಲು ಸರ್ಕಾರ ಸಿದ್ಧವಿದೆ' ಎಂದು ಹೇಳಿದ್ದಾರೆ.
'ಕರಡು ಮತದಾರರ ಪಟ್ಟಿ ಆ. 24ರಂದು ಪ್ರಕಟಗೊಂಡ ಬಳಿಕ ತಾರ್ಕಿಕ ವ್ಯತ್ಯಾಸ ಅಥವಾ 2002ರ ಮತದಾರರ ಪಟ್ಟಿಯೊಂದಿಗೆ ಮ್ಯಾಪಿಂಗ್ ಆಗದಿರುವ ಕಾರಣಕ್ಕಾಗಿ ಸುಮಾರು 43.8 ಲಕ್ಷ ಮತದಾರರಿಗೆ ಪರಿಶೀಲನಾ ನೋಟಿಸ್ ನೀಡುವ ಸಾಧ್ಯತೆಯಿದೆ. ಬೆಂಗಳೂರು ಒಂದರಲ್ಲೇ ಸುಮಾರು 46.88 ಲಕ್ಷ ಮತದಾರರನ್ನು ಎಎಸ್ಡಿಡಿಒ ವರ್ಗದಲ್ಲಿ ಗುರುತಿಸಲಾಗಿದೆ. ಹೀಗಾಗಿ, ರಾಜ್ಯದಲ್ಲಿ ಸುಮಾರು 1.5 ಕೋಟಿ ಮತದಾರರು ತಮ್ಮ ಹೆಸರು ಮುಂದುವರಿಸಲು ಅಥವಾ ಹೊಸದಾಗಿ ಸೇರ್ಪಡೆಗೊಳಿಸಲು ಹಕ್ಕು ಮಂಡಿಸಬೇಕಾದ ಪರಿಸ್ಥಿತಿ ಎದುರಾಗಿದೆ' ಎಂದು ಅವರು ತಿಳಿಸಿದ್ದಾರೆ.
'ಕೆಲಸ, ಆರೋಗ್ಯ ಸೇರಿದಂತೆ ವಿವಿಧ ಕಾರಣಗಳಿಂದ ಮನೆಗೆ ಬೀಗ ಹಾಕಿ ಹೊರಗಿದ್ದ ಸಂದರ್ಭದಲ್ಲಿ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್ಒ) ಭೇಟಿ ನೀಡಿದ್ದರೆ, ನೈಜ ಮತದಾರರು ಎಣಿಕೆ ನಮೂನೆ ಸಲ್ಲಿಸಲು ಸಾಧ್ಯ ಆಗದಿರಬಹುದು. ಇಂತಹವರನ್ನು 'ಎಎಸ್ಡಿಡಿಒ' ಎಂದು ಗುರುತಿಸುವ ಸಾಧ್ಯತೆಯಿದೆ. ಅಲ್ಲದೆ, ಒಂದು ಮತಗಟ್ಟೆ ವ್ಯಾಪ್ತಿಯಿಂದ ಮತ್ತೊಂದು ಪ್ರದೇಶಕ್ಕೆ ಸ್ಥಳಾಂತರಗೊಂಡಿರುವ ಮತದಾರರಿಗೆ ಹೊಸ ವಿಳಾಸದಲ್ಲಿ ನಮೂನೆ ಸಲ್ಲಿಸಲು ಅವಕಾಶ ಸಿಗದೆ, ಹಳೆಯ ವಿಳಾಸದ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಿರುವ ಸಾಧ್ಯತೆಯೂ ಇದೆ. ಬೆಂಗಳೂರಿನಂತಹ ನಗರಗಳಲ್ಲಿ ಒಂದು ರಸ್ತೆಯಿಂದ ಮತ್ತೊಂದು ರಸ್ತೆಗೆ ಸ್ಥಳಾಂತರಗೊಂಡರೂ ಮತಗಟ್ಟೆ ಬದಲಾಗುವ ಸಂದರ್ಭವಿದೆ' ಎಂದು ಹೇಳಿದ್ದಾರೆ.
ವಿಶೇಷವಾಗಿ, ಬಡವರು ಮತ್ತು ಅಂಚಿನಲ್ಲಿರುವ ಜನರು ಪದೇಪದೇ ಸ್ಥಳಾಂತರಗೊಳ್ಳುವುದರಿಂದ ಅಗತ್ಯ ದಾಖಲೆಗಳನ್ನು ಹೊಂದಿಸುವುದು ಕಷ್ಟ ಆಗಬಹುದು. ಹೀಗಾಗಿ, ಅರ್ಹ ನಾಗರಿಕರ ಮತದಾನದ ಹಕ್ಕನ್ನು ರಕ್ಷಿಸುವುದು ಎಸ್ಐಆರ್ ಪ್ರಕ್ರಿಯೆಯ ಪ್ರಮುಖ ಉದ್ದೇಶವಾಗಬೇಕು' ಎಂದು ಶಿವಕುಮಾರ್ ಹೇಳಿದ್ದಾರೆ.
'ಸೆ. 1ರಿಂದ ಚುನಾವಣಾ ಆಯೋಗ ಚಲೋ'
'ಎಸ್ಐಆರ್ ಮೂಲಕ ರಾಜ್ಯದ 1.08 ಕೋಟಿ ಮತದಾರರ ಹಕ್ಕನ್ನು ಕಸಿದಿದ್ದು ಇದನ್ನು ವಿರೋಧಿಸಿ ಸೆ.1ರಿಂದ ಸ್ವಾತಂತ್ರ್ಯ ಉದ್ಯಾನದಲ್ಲಿ 'ಚುನಾವಣಾ ಆಯೋಗ ಚಲೋ' ನಡೆಸಲಾಗುವುದು' ಎಂದು ನಟ ಪ್ರಕಾಶ್ ರಾಜ್ ಹೇಳಿದರು. ಕೇಂದ್ರ ಚುನಾವಣಾ ಆಯೋಗದ ವಿರುದ್ಧ ವಿವಿಧ ಸಂಘಟನೆಗಳು ನಾಗರಿಕರು ಸಿದ್ಧಪಡಿಸಿದ್ದ ದೂರುಗಳ 'ಎಫ್ಐಆರ್' ಅನ್ನು ಮಂಗಳವಾರ ಬಿಡುಗಡೆ ಮಾಡಿ ಅವರು ಮಾತನಾಡಿದರು.
'ಒಂದು ತಿಂಗಳಲ್ಲಿ ಇಷ್ಟು ಜನರ ಮತಹಕ್ಕು ಕಸಿದಿರುವುದು ಅಪರಾಧ. ಎಲ್ಲ ಮತದಾರರು ಪಟ್ಟಿಯಲ್ಲಿ ಸೇರ್ಪಡೆ ಆಗುವವರೆಗೂ ಹೋರಾಟ ನಿಲ್ಲುವುದಿಲ್ಲ' ಎಂದರು. 'ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲು ಎರಡು ವರ್ಷವಿದ್ದರೂ ಮತದಾರರಲ್ಲಿ ಯಾವುದೇ ಜಾಗೃತಿ ಮೂಡಿಸದೇ ತರಾತುರಿಯಲ್ಲಿ ಎಸ್ಐಆರ್ ಕೈಗೊಳ್ಳಲಾಗಿದೆ. ಆಯೋಗದ ಕಾರ್ಯಸೂಚಿ ಏನೆಂಬುದು ಗೊತ್ತಾಗಿದೆ' ಎಂದರು. 'ಪಶ್ಚಿಮ ಬಂಗಾಳದಲ್ಲಿ ಎಸ್ಐಆರ್ನಿಂದ 67 ಲಕ್ಷ ಜನ ಮತದಾನದ ಹಕ್ಕು ಕಳೆದುಕೊಂಡರು. ಅವರಲ್ಲಿ 27 ಲಕ್ಷ ಜನ ಕೋರ್ಟ್ ಮೆಟ್ಟಿಲೇರಿದ್ದರು. 30 ಸಾವಿರ ಜನರ ವಿಚಾರಣೆಯಷ್ಟೇ ನಡೆದಿದೆ. ಮತ್ತೆ ಹೊಸದಾಗಿ 34 ಲಕ್ಷ ಜನರು ಹಕ್ಕು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಇವೆಲ್ಲ ಮುಗಿಯಲು ವರ್ಷಗಳೇ ಬೇಕಾಗುತ್ತದೆ. ಕರ್ನಾಟಕದಲ್ಲೂ ಹೀಗೆ ಆಗಬೇಕೇ' ಎಂದು ಪ್ರಶ್ನಿಸಿದರು.
80 ವರ್ಷದವರೂ ಹೊಸ ಮತದಾರರೇ:
'ಮತದಾರರನ್ನು ಎಎಸ್ಡಿಡಿಒ ಎಂದು ವರ್ಗೀಕರಿಸಿ ಅವರ ಹಕ್ಕನ್ನು ಕಿತ್ತುಕೊಳ್ಳಲಾಗಿದೆ. ಇವರಿಗೆ ನಮೂನೆ- 8ರ ಅಡಿ ಅರ್ಜಿ ಸಲ್ಲಿಸಿ ಹಕ್ಕು ಪಡೆಯುವ ಅವಕಾಶ ನೀಡುತ್ತಿಲ್ಲ. 18 ವರ್ಷ ತುಂಬಿದ ಮೊದಲ ಮತದಾರರಂತೆ ಸರದಿ ಸಾಲಿನಲ್ಲಿ ನಿಂತು ನಮೂನೆ-6ರ ಅಡಿ ಅರ್ಜಿ ಸಲ್ಲಿಸಬೇಕಿದೆ. 80 ವರ್ಷದವರು ಹೊಸದಾಗಿ ಹಕ್ಕು ಪಡೆದರೆ ಅವರೂ ಮೊದಲ ಮತದಾರರೇ' ಎಂದು ಪ್ರಕಾಶ್ ರಾಜ್ ಪ್ರಶ್ನಿಸಿದರು.
ಗೋಷ್ಠಿಯಲ್ಲಿ ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಎದ್ದೇಳು ಕರ್ನಾಟಕ ಸಂಘಟನೆಯ ನೂರ್ ಶ್ರೀಧರ್ ಕೆ.ಎಲ್.ಅಶೋಕ್ ರೈತ ಸಂಘದ ಕಾರ್ಯಾಧ್ಯಕ್ಷ ಜೆ.ಎಂ.ವೀರಸಂಗಯ್ಯ ಆಮ್ ಆದ್ಮಿ ಪಕ್ಷದ ಸೀತಾರಾಮ್ ಗುಂಡಪ್ಪ ಮುಖಂಡರಾದ ರವಿ ಅನೀಸ್ ಪಾಷಾ ನಾಗೇಶ್ ಅರಳೇಕುಪ್ಪ ಪಾಲ್ಗೊಂಡಿದ್ದರು.

