Dailyhunt Logo
  • Light mode
    Follow system
    Dark mode
    • Play Story
    • App Story
ಅರ್ಥಾತ್‌: ಕೊಲ್ಲಿ ಯುದ್ಧದಿಂದ ಜಗತ್ತಿಗೆ ಏಕೆ ಆರ್ಥಿಕ ಹೊರೆ?

ಅರ್ಥಾತ್‌: ಕೊಲ್ಲಿ ಯುದ್ಧದಿಂದ ಜಗತ್ತಿಗೆ ಏಕೆ ಆರ್ಥಿಕ ಹೊರೆ?

ಸ್ರೇಲ್‌-ಇರಾನ್‌ ನಡುವಿನ ಯುದ್ಧ 28ನೇ ದಿನಕ್ಕೆ ಕಾಲಿಟ್ಟಿದೆ. ಇದರ ಪರಿಣಾಮ ಭಾರತವೂ ಸೇರಿದಂತೆ ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಕಾಣಿಸುತ್ತಿದೆ. ಭಾರತದಲ್ಲಿ ಎಲ್‌ಪಿಜಿ ಸಿಲಿಂಡರ್‌ ಕೊರತೆ ಉಂಟಾಗಿರುವುದು ಗೊತ್ತೇ ಇದೆ. ಜಾಗತಿಕವಾಗಿ ಕಚ್ಚಾತೈಲ ಬೆಲೆ ಏರಿಕೆ ಕಂಡಿದ್ದು, ಟ್ರಂಪ್‌ ಯುದ್ಧ ನಿಲ್ಲಿಸುವ ಸೂಚನೆ ನೀಡಿದ ಬಳಿಕ ತುಸು ಇಳಿಕೆ ಕಂಡಿದೆ.

ಸದ್ಯಕ್ಕೆ ಪೆಟ್ರೋಲ್‌, ಡಿಸೆಲ್‌ ಪೂರೈಕೆ, ಬೆಲೆ ಮೇಲೆ ಈ ಯುದ್ಧ ಪರಿಣಾಮ ಬೀರಿಲ್ಲ. ಆದರೆ ಭವಿಷ್ಯದಲ್ಲಿ ಯುದ್ಧದ ಕರಿನೆರಳು ಇಂಧನ ತೈಲಗಳ ಮೇಲೂ ಬೀಳುವ ಸಾಧ್ಯತೆ ದಟ್ಟವಾಗಿದೆ.

ಜಾಗತಿಕ ತೈಲ ಪೂರೈಕೆಯ ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು ಇರಾನ್‌ ತಡೆಹಿಡಿದಿರುವುದು ಸದ್ಯದ ಅಡುಗೆ ಅನಿಲ ಸಮಸ್ಯೆಗೆ ಮೂಲ ಕಾರಣ. ಜಾಗತಿಕ ತೈಲ ಉತ್ಪಾದಕ ರಾಷ್ಟ್ರಗಳ ಪಟ್ಟಿ ನೋಡಿದರೆ, ಅಮೆರಿಕ ಮತ್ತು ರಷ್ಯಾ ಮುಂಚೂಣಿಯಲ್ಲಿ ನಿಲ್ಲುತ್ತವೆ. ಸೌದಿ ಅರೇಬಿಯಾ ನಂತರದ ಸ್ಥಾನದಲ್ಲಿದೆ. ಉಳಿದ ಕೊಲ್ಲಿ ರಾಷ್ಟ್ರಗಳು ತೈಲ ಉತ್ಪಾದನೆಯಲ್ಲಿ ಪ್ರಬಲ ಪಾಲು ಹೊಂದಿವೆ.

ವಿಶ್ವದ ಶೇ 20ರಷ್ಟು ಇಂಧನ ಮತ್ತು ಎಲ್‌ಎನ್‌ಜಿ ಪೂರೈಕೆಗೆ ಹಡುಗಳು ಹಾರ್ಮುಜ್ ಜಲಸಂಧಿಯನ್ನು ದಾಟಿ ಹೋಗಬೇಕು. ಯುದ್ಧದ ಪರಿಣಾಮವಾಗಿ ಇರಾನ್‌ ಈ ಮಾರ್ಗವನ್ನು ತಡೆಹಿಡಿದುಕೊಂಡು ಕುಳಿತಿದೆ. ಹೀಗಾಗಿ ಕೊಲ್ಲಿ ರಾಷ್ಟ್ರಗಳಲ್ಲಿ ಉತ್ಪಾದನೆಯಾಗುವ ಇಂಧನ ಬೇರೆ ದೇಶಗಳಿಗೆ ತಲುಪುತ್ತಿಲ್ಲ. ಈ ಮಾರ್ಗದಲ್ಲಿ ದಿನಕ್ಕೆ 20 ದಶಲಕ್ಷ ಬ್ಯಾರೆಲ್‌(44 ಶತಕೋಟಿ ಯೂರೋ ಮೌಲ್ಯ) ಇಂಧನ ಸಾಗಣೆಯಾಗುತ್ತದೆ. ಅದಕ್ಕೆ ಕುತ್ತು ಬಿದ್ದಿದ್ದು ಇಡೀ ತೈಲ ಬೇಡಿಕೆ ಮತ್ತು ಪೂರೈಕೆ ಕೊಂಡಿ ತಪ್ಪಿದಂತಾಗಿದೆ.

ತಿಂಗಳಿಗೆ ಬೇರೆ ಬೇರೆ ದೇಶಗಳ 3000 ಹಡಗುಗಳು ಈ ಮಾರ್ಗದಲ್ಲಿ ಸಂಚರಿಸುತ್ತಿದ್ದವು. ಯುದ್ಧದಿಂದ ಆ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಜತೆಗೆ 18 ಹಡಗುಗಳಿಗೆ ಹಾನಿಯಾಗಿದೆ ಎಂದು ಯುಎಇ ಅಂದಾಜಿಸಿದೆ. ಇದರಾಚೆಗೆ ಇರಾನ್‌ ಶೇ.90ರಷ್ಟು ಆದಾಯ ತೈಲ ವಹಿವಾಟು ಆಧರಿಸಿದೆ. ಇರಾನ್‌ನ ತೈಲವನ್ನು ನಂಬಿಕೊಂಡು ಹಲವು ದೇಶಗಳಿವೆ. ಇಸ್ರೇಲ್‌ ಕೂಡ ಕಚ್ಛಾತೈಲ ರಫ್ತು ಮಾಡುವ ಪ್ರಮುಖ ದೇಶ. ಈ ಎರಡೂ ದೇಶಗಳ ತೈಲ ಘಟಕಗಳ ಮೇಲೆ ಯುದ್ಧದಿಂದ ಸಾಕಷ್ಟು ಹಾನಿಯಾಗಿದೆ. ನೆರೆಹೊರೆಯ ಯುಎಇ, ಒಮಾನ್‌, ಇರಾಕ್‌ ರಾಷ್ಟ್ರಗಳಿಗೂ ಯುದ್ಧದ ಬಿಸಿ ತಲುಪಿದ್ದು, ಅಲ್ಲಿನ ಕೆಲ ತೈಲ ಉತ್ಪಾದನೆ ಘಟಕಗಳಿಗೆ ಹಾನಿಯಾಗಿದೆ. ಹೀಗಾಗಿ ತಕ್ಷಣಕ್ಕೆ ಅಲ್ಲದಿದ್ದರೂ ನಿಧಾನಕ್ಕೆ ತೈಲ ಮಾರುಕಟ್ಟೆಯ ಮೇಲೆ ಈ ಎಲ್ಲ ಅಂಶಗಳು ಪರಿಣಾಮ ಬೀರಲಿವೆ ಎಂದು ಅಂದಾಜಿಸಲಾಗಿದೆ.

ಬೇಡಿಕೆ ಮತ್ತು ಪೂರೈಕೆ ನಡುವಣ ಕೊಂಡಿ ಕಳಚಿ ಸದ್ಯಕ್ಕೆ ಸಿಲಿಂಡರ್‌ ಸಮಸ್ಯೆ ಉದ್ಭವವಾಗಿದೆ. ತೈಲ ಉತ್ಪನ್ನಗಳ ಮೇಲೆ ಸರ್ಕಾರದ ರಿಯಾಯಿತಿ ಹೆಚ್ಚಿರುವುದರಿಂದ ಬೆಲೆ ಏರಿಕೆ ಬರೆ ತಕ್ಷಣಕ್ಕೆ ನೇರವಾಗಿ ಗ್ರಾಹಕನ ಮೇಲೆ ಬೀಳಲಾರದು. ಆದರೆ ಆರ್ಥಿಕತೆ ಯಾವತ್ತಿಗೂ ಒಂದು ವರ್ತುಲ ವ್ಯವಸ್ಥೆ. ಈ ಸರಪಳಿಯ ಒಂದು ಕೊಂಡಿಯಲ್ಲಿನ ಬೆಲೆ ವ್ಯತ್ಯಯ ಎಲ್ಲ ಕ್ಷೇತ್ರಗಳ ಮೇಲೂ ಬೀರಲಿದೆ. ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಅದರ ಸಂಬಂಧಿ ಉದ್ಯಮಗಳು, ರಸಗೊಬ್ಬರ ಕ್ಷೇತ್ರ ಮೊದಲಾದ ಉದ್ಯಗಳ ಮೇಲೆ ಈ ಯುದ್ಧದ ಪರಿಣಾಮ ಖಂಡಿತ ಇರುತ್ತದೆ. ಒಮ್ಮೆ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿದರೆ, ಸಾರಿಗೆ, ಸಾಗಣಿಕೆ ಉದ್ಯಮದಲ್ಲಿಯೂ ಬೆಲೆ ಏರಿಕೆ ಬಿಸಿ ಉಂಟಾಗುತ್ತದೆ. ಕೊನೆಗಿದು ನಾವು ದಿನನಿತ್ಯ ಖರೀದಿಸುವ ತರಕಾರಿ, ಕಾಳು, ಬೇಳೆಗಳ ಮೇಲೂ ಪರಿಣಾಮ ಬೀರುತ್ತದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani