Dailyhunt Logo
  • Light mode
    Follow system
    Dark mode
    • Play Story
    • App Story
Asian Games | ಆಡದೇ ಸೆಮಿಫೈನಲ್‌ಗೇರಿದ ಭಾರತ: ಮಳೆಯ ಪಾಲಾದ ಎಂಟರ ಘಟ್ಟದ ಪಂದ್ಯ

Asian Games | ಆಡದೇ ಸೆಮಿಫೈನಲ್‌ಗೇರಿದ ಭಾರತ: ಮಳೆಯ ಪಾಲಾದ ಎಂಟರ ಘಟ್ಟದ ಪಂದ್ಯ

ನಾಗೋಯಾ (ಪಿಟಿಐ): ಭಾರತ ಮತ್ತು ಅಫ್ಗಾನಿಸ್ಥಾನ ತಂಡಗಳ ನಡುವೆ ಏಷ್ಯನ್ ಗೇಮ್ಸ್‌ ಕ್ರಿಕೆಟ್‌ ಕ್ವಾರ್ಟರ್‌ಫೈನಲ್‌ ಪಂದ್ಯ ಸೋಮವಾರ ಜಿಟಿಜಿಟಿ ಮಳೆಯ ಕಾರಣ ಒಂದೂ ಎಸೆತ ಸಾಧ್ಯವಾಗದೇ ರದ್ದಾಯಿತು. ಆದರೆ ಉನ್ನತ ರ್‍ಯಾಂಕಿಂಗ್ ಆಧಾರದಲ್ಲಿ ಭಾರತ ಸೆಮಿಫೈನಲ್‌ಗೆ ಮುನ್ನಡೆಯಿತು.

ಹಾಲಿ ಚಾಂಪಿಯನ್ ಭಾರತ ತಂಡವು ಐಸಿಸಿ ಟಿ20 ಕ್ರಮಾಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಅಫ್ಗಾನಿಸ್ತಾನ ಹತ್ತನೇ ಸ್ಥಾನದಲ್ಲಿದೆ.

ನೇಪಾಳ- ಶ್ರೀಲಂಕಾ ತಂಡಗಳ ನಡುವಣ ಮಂಗಳವಾರ ಕ್ವಾರ್ಟರ್‌ಫೈನಲ್ ನಡೆಯಲಿದ್ದು, ಈ ಪಂದ್ಯದ ವಿಜೇತರನ್ನು ಭಾರತ ಸೆಮಿಫೈನಲ್‌ನಲ್ಲಿ ಎದುರಿಸಲಿದೆ.

ಕೆಲವು ದಿನಗಳಿಂದ ಇಲ್ಲಿ ನಿಯಮಿತವಾಗಿ ಮಳೆಯಾಗುತ್ತಿದೆ. ಓವರು ಮೊಟಕುಗೊಳಿಸಿ ಪಂದ್ಯ ಆಡಿಸುವ ಸಾಧ್ಯತೆಯೂ ದೂರವಾಗಿತ್ತು.

ಪಾಕಿಸ್ತಾನ ಮತ್ತು ಹಾಂಗ್‌ಕಾಂಗ್ ನಡುವಣ ಮೊದಲ ಕ್ವಾರ್ಟರ್‌ಫೈನಲ್ ಪಂದ್ಯವೂ ಮಳೆಗೆ ಕೊಚ್ಚಿಹೋಗಿತ್ತು. ಪಾಕಿಸ್ತಾನ ಹೆಚ್ಚಿನ ರ‍್ಯಾಂಕಿಂಗ್ ಆಧಾರದಲ್ಲಿ ನಾಲ್ಕರ ಘಟ್ಟ ತಲುಪಿತ್ತು.

'ಮುಂಬರುವ ಪಂದ್ಯಗಳಲ್ಲಿ ನಮಗೆ ಆಡುವ ಮತ್ತು ಆ ಮೂಲಕ ಜಪಾನಿನ ಪ್ರೇಕ್ಷಕರಿಗೆ ನಮ್ಮ ಆಟ ತೋರಿಸಲು ಅವಕಾಶ ಸಿಗುವ ವಿಶ್ವಾಸವಿದೆ' ಎಂದು ಭಾರತ ತಂಡದ ಲೆಗ್‌ ಸ್ಪಿನ್ನರ್ ರವಿ ಬಿಷ್ಣೋಯಿ ಅವರು ಪಂದ್ಯ ರದ್ದಾದ ನಂತರ ಪ್ರತಿಕ್ರಿಯಿಸಿದರು.

ಗೌತಮ್ ಗಂಭೀರ್ ಅವರು ವೆಸ್ಟ್‌ ಇಂಡೀಸ್ ಎದುರು ಏಕದಿನ ಸರಣಿ ಆಡುವ ತಂಡಕ್ಕೆ ಕೋಚ್ ಆಗಿರುವ ಕಾರಣ ವಿ.ವಿ.ಎಸ್‌. ಲಕ್ಷ್ಮಣ್ ಅವರು ಇಲ್ಲಿನ ತಂಡಕ್ಕೆ ಕೋಚ್ ಆಗಿದ್ದಾರೆ. ಶ್ರೇಯಸ್ ಅಯ್ಯರ್ ನಾಯಕತ್ವದ ತಂಡದಲ್ಲಿ ಅನುಭವಿ ವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾ ಮತ್ತು ಹದಿಹರೆಯದ ಸ್ಫೋಟಕ ಬ್ಯಾಟರ್ ವೈಭವ್ ಸೂರ್ಯವಂಶಿ ಅವರು ತಂಡದಲ್ಲಿ ಇದ್ದಾರೆ.

ಏಷ್ಯನ್ ಗೇಮ್ಸ್‌ನ ಬೇರೆ ಕೆಲವು ಕ್ರೀಡೆಗಳನ್ನು ಆಡಲು ಆಟಗಾರರು ಕಾತರರಾಗಿದ್ದಾರೆ. ಆದರೆ ನಾವು ಸ್ವಲ್ಪ ದೂರದಲ್ಲಿರುವ ಕಾರಣ ನಮಗೆ ಇಲ್ಲಿಯವರೆಗೆ ಬೇರೆ ಆಟಗಳನ್ನು ನೋಡಲು ಆಗಿಲ್ಲ. ಮಂಗಳವಾರ ಬಿಡುವು ಇರುವ ಕಾರಣ ಇತರ ಕೆಲವು ಕ್ರೀಡೆಗಳನ್ನು ವೀಕ್ಷಿಸಲು ಅವಕಾಶವಿದೆ ಎಂದು ಬಿಷ್ಣೋಯಿ ಹೇಳಿದರು.

Dailyhunt
Disclaimer: This content has not been generated, created or edited by Dailyhunt. Publisher: Prajavani