Dailyhunt Logo
  • Light mode
    Follow system
    Dark mode
    • Play Story
    • App Story
ಅಸ್ಸಾಂ ಬೇಗುದಿ ಹೆಚ್ಚಿಸಿದ ಕರ್ನಾಟಕ

ಅಸ್ಸಾಂ ಬೇಗುದಿ ಹೆಚ್ಚಿಸಿದ ಕರ್ನಾಟಕ

ಗುವಾಹಟಿ (ಪಿಟಿಐ): ಕರ್ನಾಟಕದ ಬ್ಯಾಟರ್‌ಗಳು ಅಸ್ಸಾಂ ದಾಳಿಯನ್ನು ದಂಡಿಸಿ ರನ್ನುಗಳ ಸೌಧ ಕಟ್ಟಿದರು. ಲಯದಲ್ಲಿರುವ ಕೆ.ವಿ.ಅನೀಶ್ (ಔಟಾಗದೇ 142, 248 ಎಸೆತ) ತಮ್ಮ ಮೊದಲ ಪ್ರಥಮ ದರ್ಜೆ ಶತಕ ದಾಖಲಿಸಿದರು. ಕರ್ನಾಟಕ ತಂಡವು ರಣಜಿ ಟ್ರೋಫಿ ಎಲೀಟ್ ಬಿ ಗುಂಪಿನ ಈ ಪಂದ್ಯದ ಎರಡನೇ ದಿನವೇ ಸಂಪೂರ್ಣ ಹಿಡಿತ ಸಾಧಿಸಿತು.

ಬರ್ಸಾಪರ ಕ್ರೀಡಾಂಗಣದಲ್ಲಿ ಮಂಗಳವಾರ ದಿನದಾಟ ಮುಗಿದಾಗ ಕರ್ನಾಟಕ 5 ವಿಕೆಟ್‌ಗೆ 496 ರನ್ ಗಳಿಸಿದೆ. ಅಂದರೆ 361 ರನ್‌ಗಳ ಭಾರಿ ಮುನ್ನಡೆ. ಅಸ್ಸಾಂ ಮೊದಲ ದಿನದಾಟದಲ್ಲಿ 135 ರನ್‌ಗಳಿಗೆ ಉರುಳಿತ್ತು. ಅನೀಶ್ ಜೊತೆ ಎಲ್‌.ಮನ್ವಂತ್ ಕುಮಾರ್ 53 ರನ್‌ಗಳೊಡನೆ ಅಜೇಯರಾಗುಳಿದಿದ್ದು ಮುರಿಯದ ಆರನೇ ವಿಕೆಟ್‌ಗೆ 95 ರನ್ ಸೇರಿಸಿದ್ದಾರೆ.

ಇನ್ನೂ ಎರಡು ದಿನಗಳ ಆಟ ಉಳಿದಿದ್ದು, ಆತಿಥೇಯ ತಂಡ ಸೋಲಿನ ಭೀತಿ ಎದುರಿಸುತ್ತಿದೆ.

2 ವಿಕೆಟ್‌ಗೆ 180 ರನ್‌ಗಳೊಡನೆ ದಿನದಾಟ ಮುಂದುವರಿಸಿದ ಕರ್ನಾಟಕ ತಂಡವು ಮಯಂಕ್ ಅಗರವಾಲ್ (72, 121 ಎಸೆತ, 4x10) ಅವರನ್ನು ಬೇಗ ಕಳೆದುಕೊಂಡಿತು. ಮೊದಲ ದಿನ 57 ರನ್ ಗಳಿಸಿದ್ದ ಅವರು ಆ ಮೊತ್ತಕ್ಕೆ 15 ರನ್ ಸೇರಿಸಲಷ್ಟೇ ಶಕ್ತರಾದರು. ದೊಡ್ಡ ಇನಿಂಗ್ಸ್‌ ಆಡುವ ಯೋಜನೆಯಲ್ಲಿ ಕ್ರೀಸಿಗಿಳಿದಿದ್ದ ಅವರು ನಿರಾಶರಾದರು.

ಆದರೆ, 25 ವರ್ಷ ವಯಸ್ಸಿನ ಅನೀಶ್‌ (ಸೋಮವಾರ ಔಟಾಗದೇ 7) ವಿಶ್ವಾಸದಿಂದ ಆಟವಾಡಿದರು. ಅನುಭವಿ ಕರುಣ್ ನಾಯರ್ (21, 45 ಎಸೆತ) ಅವರು ಎಡಗೈ ಸ್ಪಿನ್ನರ್ ರೋಶನ್ ಆಲಂ ಬೌಲಿಂಗ್‌ನಲ್ಲಿ ಎಲ್‌ಬಿ ಬಲೆಗೆ ಬಿದ್ದರು.

ಆದರೆ ಅನೀಶ್‌ ಜೊತೆಗೂಡಿದ ಎಡಗೈ ಬ್ಯಾಟರ್‌ ಅನೀಶ್ವರ್ ಗೌತಮ್ (83, 125 ಎಸೆತ, 4x9, 6x3) ಅವರು ತಂಡದ ಮೊತ್ತವನ್ನು ಬೆಳೆಸಿದರು. ಐದನೇ ವಿಕೆಟ್‌ಗೆ 148 ರನ್ನುಗಳು ಹರಿದುಬಂದವು. ತ್ರಿಪುರ ವಿರುದ್ಧ ಪಂದ್ಯದಲ್ಲಿ ಶತಕ ಬಾರಿಸಿದ್ದ ಅನೀಶ್ವರ್ ಇಲ್ಲೂ ಉತ್ತಮ ಆಟದಿಂದ ಗಮನ ಸೆಳೆದರು. ಆದರೆ ಅವರನ್ನೂ ಆಲಂ ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದರು. ನಂತರ ಅನೀಶ್ ಜೊತೆಗೂಡಿದ ಮನ್ವಂತ್, ಅಸ್ಸಾಂ ತಂಡದ ಬೇಗುದಿ ಹೆಚ್ಚಿಸಿದರು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್‌: ಅಸ್ಸಾಂ: 48.1 ಓವರುಗಳಲ್ಲಿ 135; ಕರ್ನಾಟಕ: 117 ಓವರುಗಳಲ್ಲಿ 5 ವಿಕೆಟ್‌ಗೆ 496 (ಅನೀಶ್‌ ಕೆ.ವಿ. ಔಟಾಗದೇ 142, ಕರುಣ್ ನಾಯರ್ 21, ಅನೀಶ್ವರ್‌ ಗೌತಮ್ 83, ಮನ್ವಂತ್ ಕುಮಾರ್ ಔಟಾಗದೇ 53; ಅಮ್ಲನ್‌ಜ್ಯೋತಿ ದಾಸ್‌ 121ಕ್ಕೆ2, ರೋಶನ್ ಆಲಂ 126ಕ್ಕೆ2).

ಬಿ ಗುಂಪಿನ ಇತರ ಪಂದ್ಯಗಳ ಸ್ಕೋರು

‌‌ಮುಲ್ಲನಪುರ: ಮೊದಲ ಇನಿಂಗ್ಸ್‌: ಪಂಜಾಬ್‌:156 ಓವರ್‌ಗಳಲ್ಲಿ 9 ವಿಕೆಟ್‌ಗೆ 592 ಡಿಕ್ಲೇರ್ಡ್‌ (ಸೋಮವಾರ 5 ವಿಕೆಟ್‌ಗೆ 276) (ಸಲೀಲ್‌ ಅರೋರಾ 144, ಸನ್ವೀರ್‌ ಸಿಂಗ್‌ 205, ಎಮನ್‌ಜೋತ್ ಸಿಂಗ್ ಚಾಹಲ್ 122; ಕವುರಿ ಸಾಯಿತೇಜ 110ಕ್ಕೆ 3). ಆಂಧ್ರ: 9 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 20.

ಅಗರ್ತಲಾ: ಮೊದಲ ಇನಿಂಗ್ಸ್‌: ತ್ರಿಪುರಾ: 92 ಓವರ್‌ಗಳಲ್ಲಿ 268 (ಸೋಮವಾರ 7 ವಿಕೆಟ್‌ಗೆ 219) (ಬಿಕ್ರಮ್‌ಜಿತ್ ದೇಬನಾಥ್ 61; ಚೇತನ್‌ ಸಕಾರಿಯಾ 39ಕ್ಕೆ 3, ಪಾರ್ಥ್‌ ಭುತ್‌ 65ಕ್ಕೆ 5). ಸೌರಾಷ್ಟ್ರ: 45.5 ಓವರ್‌ಗಳಲ್ಲಿ 118 (ಅರ್ಪಿತ್‌ ವಾಸುದೇವ 38, ಚೇತನ್ ಸಕಾರಿಯಾ ಔಟಾಗದೇ 31; ಪರ್ವೇಜ್‌ ಸುಲ್ತಾನ್‌ 25ಕ್ಕೆ 5, ಸಂದೀಪ್‌ ಸರ್ಕಾರ್‌ 48ಕ್ಕೆ 4). ಎರಡನೇ ಇನಿಂಗ್ಸ್‌: ತ್ರಿಪುರಾ: 22 ಓವರ್‌ಗಳಲ್ಲಿ 4 ವಿಕೆಟ್‌ಗೆ 54 (ಬಿಕ್ರಮ್‌ಕುಮಾರ್ ದಾಸ್ 27; ಪಾರ್ಥ್‌ ಭುತ್‌ 20ಕ್ಕೆ 2, ಯುವರಾಜ್‌ಸಿಂಹ ದೋಡಿಯಾ 24ಕ್ಕೆ 2).

ಸಿಕಂದರಾಬಾದ್: ಮೊದಲ ಇನಿಂಗ್ಸ್‌: ಛತ್ತೀಸಗಢ: 90.1 ಓವರ್‌ಗಳಲ್ಲಿ 284 (7 ವಿಕೆಟ್‌ಗೆ 279) (ಜಯಂತ್‌ ಯಾದವ್‌ 36; ಚಮಾ ಮಿಲಿಂದ್ 19ಕ್ಕೆ 3). ಹೈದರಾಬಾದ್‌: 83 ಓವರ್‌ಗಳಲ್ಲಿ 9 ವಿಕೆಟ್‌ಗೆ 275 (ಅಭಿರತ್ ರೆಡ್ಡಿ 35, ರಾಹುಲ್‌ ರಾದೇಶ್‌ 72, ಕೆ. ಹಿಮತೇಜ 46; ಧರ್ಮೇಂದ್ರಸಿಂಹ ಜಡೇಜ 84ಕ್ಕೆ 5).

261104-51-2046812805

Dailyhunt
Disclaimer: This content has not been generated, created or edited by Dailyhunt. Publisher: Prajavani