ನಾಗೋಯಾ (ಪಿಟಿಐ): ಗುಲ್ವೀರ್ ಸಿಂಗ್ ಅವರು ಹಾಲಿ ಏಷ್ಯನ್ ಗೇಮ್ಸ್‌ನಲ್ಲಿ ಎರಡನೇ ಬೆಳ್ಳಿ ಪದಕ ಗೆದ್ದುಕೊಂಡರೆ, ಲಾಂಗ್‌ಜಂಪ್‌ನಲ್ಲಿ ಮುರಳಿ ಶ್ರೀಶಂಕರ್ ಮತ್ತು ಜಾವೆಲಿನ್ ಎಸೆತದಲ್ಲಿ ಯಶವೀರ್ ಸಿಂಗ್ ಸಹ ತಮ್ಮ ಸ್ಪರ್ಧೆಗಳಲ್ಲಿ ಎರಡನೇ ಸ್ಥಾನ ಪಡೆದರು. ಮಿಝುಹೊ ಪಾರ್ಕ್ ಕ್ರೀಡಾಂಗಣದಲ್ಲಿ ಅಥ್ಲೆಟಿಕ್ಸ್ ಸ್ಪರ್ಧೆಗಳು ಮುಗಿಯಲು ಒಂದು ದಿನ ಉಳಿದಿರುವಾಗ ಭಾರತ ಸೋಮವಾರ ಆರು ಪದಕಗಳನ್ನು ಗೆದ್ದುಕೊಂಡಿತು.
ವಿದ್ಯಾ ರಾಮರಾಜ್ ಅವರು 400 ಮೀ. ಹರ್ಡಲ್ಸ್‌ನಲ್ಲಿ ಸತತ ಎರಡನೇ ಬಾರಿ ರಜತ ಗೆದ್ದರು. ಮಾತ್ರವಲ್ಲ, ಆ ಹಾದಿಯಲ್ಲಿ ದಿಗ್ಗಜ ಅಥ್ಲೀಟ್ ಪಿ.ಟಿ.ಉಷಾ ಹೆಸರಿನಲ್ಲಿದ್ದ 42 ವರ್ಷಗಳಷ್ಟು ಹಳೆಯ ದಾಖಲೆ ಮುರಿದರು.
ಪುರುಷರ ಜಾವೆಲಿನ್ ಥ್ರೊ ಸ್ಪರ್ಧೆಯಲ್ಲಿ ರೋಹಿತ್ ಯಾದವ್ ಕಂಚು ಗೆಲ್ಲುವ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಮೊದಲ ಪದಕ ಜಯಿಸಿದರು. ಅದರೊಂದಿಗೆ ಎರಡು- ಮೂರನೇ ಸ್ಥಾನ ಭಾರತದ ಪಾಲಾಯಿತು. 2023ರ ಹಾಂಗ್‌ಝೌ ಕ್ರೀಡೆಗಳ 5,000 ಮೀ. ಓಟದಲ್ಲಿ ಚಿನ್ನ ಗೆದ್ದಿದ್ದ ಪಾರುಲ್ ಈ ಕೂಟದಲ್ಲಿ ಅದನ್ನು ಉಳಿಸಿಕೊಳ್ಳಲಾಗಲಿಲ್ಲ. ಆದರೆ ಮಳೆಯಿಂದ ತೇವಗೊಂಡಿದ್ದ ಟ್ರ್ಯಾಕ್‌ನಲ್ಲಿ ಕಂಚಿನ ಪದಕದೊಡನೆ ಓಟ ಮುಗಿಸಿದರು. ಸತತ ಮೂರನೇ ದಿನವೂ ಬಹುಭಾಗ ಮಳೆಯ ಸಿಂಚನವಾಯಿತು.
ಭಾರತ ಒಂದೇ ದಿನ ಆರು ಪದಕ ಗೆದ್ದರೂ, ಚಿನ್ನ ಮಾತ್ರ ಕೈಗೆಟುಕಲಿಲ್ಲ. ಹಾಂಗ್‌ಝೌ ಆವೃತ್ತಿಯಲ್ಲಿ ಭಾರತ ಅಥ್ಲೆಟಿಕ್ಸ್‌ನಲ್ಲಿ ಆರು ಚಿನ್ನಗಳನ್ನು ಗೆದ್ದಿತ್ತು. ಹಾಲಿ ಕ್ರೀಡೆಗಳಲ್ಲಿ ಇದುವರೆಗೆ 19 ಪದಕಗಳನ್ನು ಜಯಿಸಿದ್ದರೂ, ಚಿನ್ನದ ಹೊಳಪು ಕಂಡಿಲ್ಲ.
ನೋವಿನಲ್ಲೂ ಬೆಳ್ಳಿ:
ಕಳೆದ ಆವೃತ್ತಿಯಲ್ಲೂ ಬೆಳ್ಳಿ ಜಯಿಸಿದ್ದ ಮುರಳಿ ಶ್ರೀಶಂಕರ್ ಅವರಿಗೆ ದುರದೃಷ್ಟ ಕಾಡಿತು. ಲಾಂಗ್‌ಜಂಪ್‌ನಲ್ಲಿ ನಾಲ್ಕನೇ ಯತ್ನದಲ್ಲಿ ಜಿಗಿಯುವಾಗ ಪಾದದ ನೋವಿಗೆ ಒಳಗಾದರು. ಹೀಗಾಗಿ ಅವರು ಕೊನೆಯ ಎರಡು ಯತ್ನಗಳನ್ನು ತೆಗೆದುಕೊಳ್ಳಲಿಲ್ಲ. ಆದರೆ ಎರಡನೇ ಜಿಗಿತದಲ್ಲಿ 8.07 ಮೀ. ದಾಖಲಿಸಿದ್ದು ಅವರಿಗೆ ಬೆಳ್ಳಿ ಗೆಲ್ಲಲು ಸಾಕಷ್ಟಾಯಿತು.
ಚೀನಾದ ಶಿ ಯುಹಾವೊ ಅವರು 8.17 ಮೀ. ದೂರ ಜಿಗಿಯುವ ಮೂಲಕ ಚಿನ್ನ ಗೆದ್ದರೆ, ಉಜ್ಬೇಕಿಸ್ತಾನದ ಅನ್ವರ್ ಅನ್ವರೋವ್ (8.06 ಮೀ.) ಕಂಚಿನ ಪದಕ ತಮ್ಮದಾಗಿಸಿಕೊಂಡರು.
28 ವರ್ಷ ವಯಸ್ಸಿನ ಗುಲ್ವೀರ್ ಅವರು 1,500 ಮೀ. ಓಟವನ್ನು ವೈಯಕ್ತಿಕ ಶ್ರೇಷ್ಠ ಅವಧಿ 3 ನಿಮಿಷ 36.72 ಸೆಕೆಂಡುಗಳಲ್ಲಿ ಪೂರೈಸುವ ಮೂಲಕ ಬೆಳ್ಳಿ ಗೆದ್ದರು. ಅವರು ಎರಡು ದಿನ ಮೊದಲು 10,000 ಮೀ. ಓಟದಲ್ಲೂ ಇದೇ ಬಣ್ಣದ ಪದಕ ಗೆದ್ದಿದ್ದರು.
ಜಪಾನ್‌ನ ಕಝುಟೊ ಈಝಾವಾ (3:36.35) ಮೊದಲ ಸ್ಥಾನ ಪಡೆದರೆ, ಅದೇ ದೇಶದ ಇನ್ನೊಬ್ಬ ಓಟಗಾರ ನಗಿಯಾ ಮೋರಿ (3:37.92) ಅವರು ಕಂಚಿನ ಪದಕ ತಮ್ಮದಾಗಿಸಿಕೊಂಡರು.
'ಇದು ನನ್ನ ವೃತ್ತಿಜೀವನದ ಬಹು ಮುಖ್ಯ ಪದಕ. ನನಗೆ ಇನ್ನಷ್ಟು ಓಟಗಳಲ್ಲಿ ಓಡಿ ಪದಕ ಗೆಲ್ಲುವುದಕ್ಕೆ ನನಗೆ ಸಮಸ್ಯೆಯಿಲ್ಲ. ಆದರೆ ಹೆಚ್ಚಾಗಿ 5,000 ಮೀ. ಮತ್ತು 10,000 ಮೀ. ಓಟಗಳಲ್ಲಿ ಓಡುವ ನನಗೆ ಅಂತಿಮ ಹಂತದಲ್ಲಿ ವೇಗ ಹೆಚ್ಚಿಸಲಾಗಲಿಲ್ಲ' ಎಂದು ಉತ್ತರ ಪ್ರದೇಶದ 28 ವರ್ಷ ವಯಸ್ಸಿನ ಅಥ್ಲೀಟ್ ಪ್ರತಿಕ್ರಿಯಿಸಿದರು.
ರುಮೇಶ್ ಪತಿರಗೆ ಮಿಂಚು:
ಜಾವೆಲಿನ್ ಥ್ರೊ ಸ್ಪರ್ಧೆಯಲ್ಲಿ ಶ್ರೀಲಂಕಾದ ರುಮೇಶ್ ಪತಿರಗೆ ಅವರು 88.55 ಮೀ. ದೂರ ದಾಖಲಿಸಿ, ನಿರೀಕ್ಷೆಯಂತೆ ತಮ್ಮ ಪ್ರಾಬಲ್ಯ ಮುಂದುವರಿಸಿದರು. ಆದರೆ ಯಶವೀರ್ (85.72 ಮೀ.) ಮತ್ತು ರೋಹಿತ್ (84.35 ಮೀ) ಎರಡು ಮತ್ತು ಮೂರನೇ ಸ್ಥಾನ ಪಡೆದರು.
ರುಮೇಶ್ ಈ ವರ್ಷ ಬಹುತೇಕ ಅಜೇಯರಾಗಿ ಉಳಿದಿದ್ದಾರೆ. 'ಹನಿಯುತ್ತಿದ್ದ ಮಳೆ, ತೇವಗೊಂಡಿದ್ದ ಟ್ರ್ಯಾಕ್‌ನಲ್ಲಿ ಸ್ಪರ್ಧಿಸುವುದು ಕಠಿಣವಾಗಿತ್ತು. ಅಂಗಣ ಜಾರುತ್ತಿದ್ದ ಕಾರಣ ನನಗೆ ಸರಿಯಾದ ಹಿಡಿತ (ಗ್ರಿಪ್) ಸಿಗಲಿಲ್ಲ. ಗಾಯಗೊಳ್ಳುವ ಆತಂಕವೂ ಇತ್ತು' ಎಂದು ಯಶವೀರ್ ಪ್ರತಿಕ್ರಿಯಿಸಿದರು.
'ಇದೆಲ್ಲದರ ನಡುವೆ ವೈಯಕ್ತಿಕ ಶ್ರೇಷ್ಠ ಸಾಧನೆ ದಾಖಲಿಸಲು ಸಾಧ್ಯವಾಗಿದ್ದು ಸಂತಸ ಮೂಡಿಸಿದೆ' ಎಂದರು. ಗಾಯಾಳಾಗಿದ್ದ ದಿಗ್ಗಜ ಥ್ರೋವರ್ ನೀರಜ್ ಚೋಪ್ರಾ ಹಿಂದೆಸರಿದ ಕಾರಣ ಯಶವೀರ್ ಅವರು ಭಾರತ ತಂಡ ಸೇರಿಕೊಂಡಿದ್ದರು.
ಎರಡು ಸುತ್ತುಗಳ ಬಳಿಕ ಯಶವೀರ್ (ಮೊದಲ ಯತ್ನದಲ್ಲಿ 83.56 ಮೀ.) ಮುನ್ನಡೆ ಸಾಧಿಸಿದ್ದರು. ಆದರೆ ಮೂರನೇ ಯತ್ನದಲ್ಲಿ ರೋಹಿತ್ 84.35 ಮೀ. ಎಸೆದು ಅಗ್ರಸ್ಥಾನಕ್ಕೇರಿದರು. ಡೈಮಂಡ್ ಲೀಗ್ ಚಾಂಪಿಯನ್ ಪತಿರಗೆ ಮೂರನೇ ಸ್ಥಾನದಲ್ಲಿದ್ದರು.
ಆದರೆ ಈ ವರ್ಷ ಮೂರು ಬಾರಿ 90 ಮೀ. ಗಡಿದಾಟಿಸಿರುವ ಲಂಕಾದ ತಾರೆ ತಮ್ಮ ನಾಲ್ಕನೇ ಯತ್ನದಲ್ಲಿ ಈಟಿಯನ್ನು 88.33 ಮೀ. ದೂರಕ್ಕೆಸೆದು ಮೊದಲ ಸ್ಥಾನಕ್ಕೇರಿದರು. ಅಂತಿಮ ಯತ್ನದಲ್ಲಿ 88.55 ಮೀ. ಎಸೆದು ಅಗ್ರಸ್ಥಾನ ಬಲಪಡಿಸಿಕೊಂಡರು.
ಸಾಬ್ಳೆಗೆ ನಿರಾಸೆ:
ಗಾಯಾಳಾಗಿದ್ದ ಅವಿನಾಶ್ ಸಾಬ್ಳೆ ಅವರು 3,000 ಮೀ. ಸ್ಟೀಪಲ್‌ಚೇಸ್‌ನಲ್ಲಿ ಈ ವರ್ಷದ ಉತ್ತಮ ಸಮಯ ದಾಖಲಿಸಿದರೂ, ಹೋದ ಸಲ ಗೆದಿದ್ದ ಚಿನ್ನ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅವರು 8 ನಿ.21.67 ಸೆ.ಗಳೊಡನೆ ನಾಲ್ಕನೇ ಸ್ಥಾನ ಪಡೆದರು.
ಮಹಿಳೆಯರ 5,000 ಮೀ. ಓಟವನ್ನು ಪಾರುಲ್ 15 ನಿ.14.61 ಸೆ.ಗಳಲ್ಲಿ ಕ್ರಮಿಸಿದರು. ಬಹರೇನ್‌ನ ವಿನಿಫ್ರೆಡ್ ಯಾವಿ (15:10.18) ಚಿನ್ನ ಗೆದ್ದರೆ, ಆತಿಥೇಯ ಜಪಾನ್‌ನ ನೊಝೊಮಿ ತನಾಕ (15:11.65 ಸೆ.) ಬೆಳ್ಳಿ ಗೆದ್ದರು.
ಇದು 31 ವರ್ಷ ವಯಸ್ಸಿನ ಪಾರುಲ್‌ಗೆ ಇಲ್ಲಿ ಎರಡನೇ ಪದಕ. ಅವರು ಭಾನುವಾರ ನಡೆದ ಮಹಿಳೆಯರ 3,000 ಮೀ. ಸ್ಟೀಪಲ್‌ಚೇಸ್‌ನಲ್ಲೂ ಕಂಚಿನ ಪದಕ ಕೊರಳಿಗೇರಿಸಿಕೊಂಡಿದ್ದರು.
ಮಹಿಳೆಯರ 10,000 ಮೀ. ಓಟದಲ್ಲಿ ಕಂಚು ಜಯಿಸಿದ್ದ ಸೀಮಾ ಇಲ್ಲಿ (15:35.06) ಆರನೇ ಸ್ಥಾನದಲ್ಲಿ ಸ್ಪರ್ಧೆ ಮುಗಿಸಿದರು.
ಪುರುಷರ 400 ಮೀ. ಹರ್ಡಲ್ಸ್‌ನಲ್ಲಿ ಸಂತೋಷ್ ಕುಮಾರ್ ತಮಿಳರಸನ್ (49.95ಸೆ) ಏಳನೇ ಸ್ಥಾನ ಪಡೆದರು. ಮಹಿಳೆಯರ ಡಿಸ್ಕಸ್ ಥ್ರೊ ಸ್ಪರ್ಧೆಯ ಫೈನಲ್‌ನಲ್ಲಿ ಸೀಮಾ ಕೆ. ನಾಲ್ಕನೇ ಸ್ಥಾನ ಪಡೆದರು. ಅವರು ನಾಲ್ಕನೇ ಯತ್ನದಲ್ಲಿ 59.88 ಮೀ. ಎಸೆದರು. ಪೋಡಿಯಂ ಏರಿದ ಮೂವರೂ 60 ಮೀ. ಗಡಿದಾಟಿದ್ದರು.

