Dailyhunt

ಅತ್ಯಾಚಾರ ಎಸಗಿದ ಅಪರಾಧಿಗೆ 20 ವರ್ಷ ಜೈಲು

ಕೊಪ್ಪಳ: ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಸಾಬೀತಾಗಿದ್ದು, ಅಪರಾಧಿಗೆ 20 ವರ್ಷ ಜೈಲು ಹಾಗೂ ₹75 ಸಾವಿರ ದಂಡ ವಿಧಿಸಿ ಇಲ್ಲಿನ ಫೋಕ್ಸೊ ನ್ಯಾಯಾಲಯ ಆದೇಶಿಸಿದೆ.

ಬೂಕನಕಟ್ಟಿ ಗ್ರಾಮದ ಖಾದರಸಾಬ್‌ ಓಲೇಕಾರ್‌ ಎಂಬಾತ ಅಪರಾಧಿಯಾಗಿದ್ದು, ನೊಂದ ಬಾಲಕಿಯ ತಂದೆ ಉಪಜೀವನಕ್ಕಾಗಿ ಉಡುಪಿಗೆ ಹೋಗಿದ್ದರು.

ಅವರ ಮನೆ ಸಮೀಪದಲ್ಲಿ ವಾಸವಾಗಿದ್ದ ಖಾದರಸಾಬ್‌ ಬಾಲಕಿಯನ್ನು ಪರಿಚಯಿಸಿಕೊಂಡು ಸಲುಗೆಯಿಂದ ಮಾತನಾಡಿಸುತ್ತಿದ್ದ.

ಅಪರಾಧಿ 2023ರಲ್ಲಿ ಬಾಲಕಿ ಮನೆ ಬಳಿ ಬಂದು ಯಾರೂ ಇಲ್ಲದ ಸಮಯ ದುರುಪಯೋಗ ಪಡಿಸಿಕೊಂಡು ಬಾಲಕಿಯನ್ನು ಹೊಲವೊಂದಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದ. ಈ ಕುರಿತು ಮುನಿರಾಬಾದ್ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು. ಕೊಪ್ಪಳ ಗ್ರಾಮೀಣ ಪೊಲೀಸ್‌ ಠಾಣೆಯ ಆಗಿನ ಸಿಪಿಐ ಸುರೇಶ ಡಿ., ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಫೋಕ್ಸೊ ನ್ಯಾಯಾಲಯದ ನ್ಯಾಯಾಧೀಶರಾದ ಕುಮಾರ ಡಿ.ಕೆ. ಅವರು ವಿಚಾರಣೆ ನಡೆಸಿ, ಅಪರಾಧಿಗೆ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಗೌರಮ್ಮ ದೇಸಾಯಿ ವಾದ ಮಂಡಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260425-35-759160765

Dailyhunt
Disclaimer: This content has not been generated, created or edited by Dailyhunt. Publisher: Prajavani