Friday, 24 Sep, 10.55 am ಪ್ರಜಾವಾಣಿ

ರಾಷ್ಟ್ರೀಯ
ಅತ್ಯಾಚಾರ ಯತ್ನ: ಆರೋಪಿಗೆ ಮಹಿಳೆಯರ ಬಟ್ಟೆ ಒಗೆಯುವ 'ಷರತ್ತಿನ ಜಾಮೀನು'

ಪಟ್ನಾ: ಗ್ರಾಮದಲ್ಲಿ ಇರುವ ಎಲ್ಲ ಮಹಿಳೆಯರ ಬಟ್ಟೆಗಳನ್ನು ತೊಳೆಯಬೇಕು ಮತ್ತು ಇಸ್ತ್ರಿ ಮಾಡಬೇಕು ಎಂಬ ಷರತ್ತು ವಿಧಿಸಿ ಅತ್ಯಾಚಾರ ಯತ್ನ ಪ್ರಕರಣದ ಆರೋಪಿಗೆ ಜಾಮೀನು ನೀಡಲಾಗಿದೆ.

20 ವರ್ಷದ ಲಾಲನ್ ಕುಮಾರ್ ಈ ಷರತ್ತಿನನ್ವಯ ಜಾಮೀನು ಪಡೆದ ಆರೋಪಿ. ಆರು ತಿಂಗಳ ಕಾಲ ಮಹಿಳೆಯರ ಬಟ್ಟೆ ಒಗೆಯಬೇಕು, ಅದಕ್ಕೆ ಬೇಕಾದ ಡಿಟರ್ಜಂಟ್‌ ಮತ್ತು ಇತರೆ ವಸ್ತುಗಳನ್ನು ಸ್ವಯಂ ಖರೀದಿಸಬೇಕು ಎಂದೂ ಷರತ್ತಿನಲ್ಲಿ ಹೇಳಲಾಗಿದೆ. ಗ್ರಾಮದಲ್ಲಿರುವ ಮಹಿಳೆಯರ ಸಂಖ್ಯೆ ಸುಮಾರು 2000.

ಬಿಹಾರದ ಮಜ್ಹೋರ್‌ ಗ್ರಾಮದ ಕುಮಾರ್‌ ವೃತ್ತಿಯಿಂದ ಧೋಬಿ. ಅತ್ಯಾಚಾರ ಯತ್ನ ಸೇರಿ ವಿವಿಧ ಆರೋಪಗಳಡಿ ಈ ವರ್ಷದ ಏಪ್ರಿಲ್‌ ತಿಂಗಳಲ್ಲಿ ಬಂಧಿಸಲಾಗಿತ್ತು ಎಂದು ಮಧುಬನಿ ಜಿಲ್ಲೆಯ ಪೊಲೀಸ್‌ ಅಧಿಕಾರಿಯಾದ ಸಂತೋಷ್‌ ಕುಮಾರ್‌ ಸಿಂಗ್ ತಿಳಿಸಿದರು. 'ಷರತ್ತು' ಜಾರಿಗೆ ಇನ್ನೂ ದಿನಾಂಕ ನಿಗದಿಯಾಗಿಲ್ಲ.

ಕೋರ್ಟ್‌ನ ತೀರ್ಮಾನವು ಗ್ರಾಮದ ಎಲ್ಲ ಮಹಿಳೆಯರಿಗೆ ಸಂತಸ ತಂದೆ ಎನ್ನುತ್ತಾರೆ ಗ್ರಾಮ ಪರಿಷತ್‌ನ ಮುಖ್ಯಸ್ಥೆಯಾಗಿರುವ ನಸೀಮಾ ಖತೂನ್. 'ಇದು, ಐತಿಹಾಸಿಕ ನಿರ್ಧಾರ. ಇದು, ಮಹಿಳೆಯರ ಬಗೆಗಿನ ಗೌರವ ಹೆಚ್ಚಿಸಲಿದೆ' ಎಂದು ಕುಮಾರ್‌ ಕಾರ್ಯವೈಖರಿ ಪರಿಶೀಲಿಸುವವರಲ್ಲಿ ಒಬ್ಬರಾದ ಖತೂನ್‌ ಹೇಳಿದರು.

'ಈ ಆದೇಶವು ಸಕಾರಾತ್ಮಕ ಪರಿಣಾಮ ಬೀರಿದೆ. ಮಹಿಳೆಯರ ವಿರುದ್ಧ ದೌರ್ಜನ್ಯವು ಚರ್ಚೆಗೆ ಗ್ರಾಸವಾಗಿದೆ. ಇದು ಗಮನಾರ್ಹ ಹೆಜ್ಜೆ. ಸಮಾಜಕ್ಕೆ ಉತ್ತಮ ಸಂದೇಶ ನೀಡಲಿದೆ' ಎಂದು ಅಂಜುಂ ಪರ್ವೀನ್‌ ಹೇಳಿದರು.

ನಿರ್ಭಯಾ ಪ್ರಕರಣದ ಬಳಿಕ ದೇಶದಲ್ಲಿ ಅತ್ಯಾಚಾರ ಪ್ರಕರಣ ಸಂಬಂಧಿತ ಕಾಯ್ದೆ ಬಿಗಿಗೊಂಡಿವೆ. ಆದರೆ, ಕೃತ್ಯಗಳು ತಗ್ಗಿಲ್ಲ. 2020ರಲ್ಲಿ 28,000ಕ್ಕೂ ಅಧಿಕ ಪ್ರಕರಣ ದಾಖಲಾಗಿವೆ. ಪೊಲೀಸರು ಇವುಗಳ ತಡೆಗೆ ಮುಂದಾಗಿಲ್ಲ. ದೌರ್ಜನ್ಯ ಪ್ರಕರಣಗಳನ್ನು ಕೋರ್ಟ್‌ಗೆ ತರಲೂ ವಿಫಲರಾಗಿದ್ದಾರೆ ಎಂಬ ಆರೋಪಗಳಿವೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Prajavani
Top