Dailyhunt Logo
  • Light mode
    Follow system
    Dark mode
    • Play Story
    • App Story
ಬೆಂಗಳೂರು: ಸ್ಟಾರ್‌ ಹೋಟೆಲ್‌ಗಳಲ್ಲಿ ಅವಧಿ ಮೀರಿದ ಆಹಾರ ಪತ್ತೆ

ಬೆಂಗಳೂರು: ಸ್ಟಾರ್‌ ಹೋಟೆಲ್‌ಗಳಲ್ಲಿ ಅವಧಿ ಮೀರಿದ ಆಹಾರ ಪತ್ತೆ

ಬೆಂಗಳೂರು: ನಗರದ ತಾರಾ ಹೋಟೆಲ್‌ಗಳ ಮೇಲೆ ಶುಕ್ರವಾರ ದಿಢೀರ್ ದಾಳಿ ನಡೆಸಿದ ಆಹಾರ ಸುರಕ್ಷತೆ ಇಲಾಖೆ ಅಧಿಕಾರಿಗಳು, ಅಲ್ಲಿನ ಆಹಾರದ ಮಾದರಿಗಳನ್ನು ಪರಿಶೀಲಿಸಿದರು. ಈ ವೇಳೆ ಅವಧಿ ಮೀರಿದ ಆಹಾರ ಹಾಗೂ ಕೊಳೆತ ತರಕಾರಿಗಳು ಪತ್ತೆಯಾಗಿವೆ.

3 ಸ್ಟಾರ್ ಮತ್ತು 5 ಸ್ಟಾರ್ ಹೋಟೆಲ್‌ಗಳಲ್ಲಿನ ಆಹಾರದ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಇಲಾಖೆಗೆ ದೂರುಗಳು ಸಲ್ಲಿಕೆಯಾಗಿದ್ದವು.

ಇಲಾಖೆ ಆಯುಕ್ತ ಕೆ. ಶ್ರೀನಿವಾಸ ಅವರು ಅಧಿಕಾರಿಗಳ ತಂಡ ರಚಿಸಿ, ಪರಿಶೀಲನೆಗೆ ಸೂಚಿಸಿದ್ದರು. ಅದರಂತೆ ಅಧಿಕಾರಿಗಳ 30 ತಂಡವು ಬೆಂಗಳೂರು ನಗರ ಜಿಲ್ಲೆ ಹಾಗೂ ಜಿಬಿಎ ವ್ಯಾಪ್ತಿಯ 26 ತಾರಾ ಹೋಟೆಲ್‌ಗಳಲ್ಲಿ ಆಹಾರದ ಮಾದರಿಗಳನ್ನು ಪರಿಶೀಲಿಸಿತು.

ಈ ಪರಿಶೀಲನೆ ವೇಳೆ ಲೇಬಲ್ ಇಲ್ಲದಿರುವುದು, ಅವಧಿ ಮೀರಿದ ಮಾಂಸ, ಹಾಲು ಹಾಗೂ ಆಹಾರದ ಉತ್ಪನ್ನಗಳ ಮಾದರಿಗಳು, ಕೊಳೆತ ತರಕಾರಿಗಳು, ಕಳಪೆ ಗುಣಮಟ್ಟದ ಆಹಾರ ಮಾದರಿಗಳು ಪತ್ತೆಯಾಗಿವೆ. ಆಹಾರ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದ ಹೋಟೆಲ್‌ಗಳಿಗೆ ಕಾರಣ ಕೇಳಿ ನೋಟಿಸ್ ಜಾರಿಮಾಡಲಾಗಿದೆ. ಕೆಲ ಹೋಟೆಲ್‌ಗಳ ಮೇಲೆ ನ್ಯಾಯಾಲಯಗಳಲ್ಲಿ ಪ್ರಕರಣ ದಾಖಲಿಸಲೂ ಅಧಿಕಾರಿಗಳು ಶಿಫಾರಸು ಮಾಡಿದ್ದಾರೆ.

ಮಾದರಿ ರವಾನೆ: ಅಡುಗೆ ಕೊಠಡಿ, ದಾಸ್ತಾನು ಕೇಂದ್ರ ಮತ್ತು ಶುಚಿತ್ವವನ್ನು ಅಧಿಕಾರಿಗಳು ಪರಿಶೀಲಿಸಿದರು. ಚಹಾ ಪುಡಿ, ಕೋಳಿ ಮಾಂಸ, ಮಟನ್, ಮೀನು, ಅಡುಗೆ ಎಣ್ಣೆ, ಮೆಣಸಿನ ಪುಡಿ, ಅರಿಶಿನ ಪುಡಿ, ಟೊಮೆಟೊ ಸಾಸ್, ನಿಂಬೆ ರಸ, ಚೀಸ್, ಪಾಪಡ್, ಗೋಡಂಬಿ, ಶುಂಠಿ, ಕಾಳುಮೆಣಸಿನ ಪುಡಿ, ಮಸಾಲೆ ಪುಡಿ, ಹಾಲು ಸೇರಿ ವಿವಿಧ ಆಹಾರ ಪದಾರ್ಥಗಳ ಮಾದರಿಗಳನ್ನು ಅಧಿಕಾರಿಗಳು ವಿಶ್ಲೇಷಣೆಗಾಗಿ ಪ್ರಯೋಗಾಲಯಗಳಿಗೆ ಕಳಿಸಿದ್ದಾರೆ.

'ಜನರಿಗೆ ಗುಣಮಟ್ಟದ ಆಹಾರ ಸಿಗುವಂತಾಗಬೇಕು ಎನ್ನುವುದು ನಮ್ಮ ಉದ್ದೇಶ. ಆಹಾರ ಪದಾರ್ಥಗಳಿಗೆ ಬಳಸುವ ಬಣ್ಣಗಳು ಎಲ್ಲಿಂದ ಬರುತ್ತವೆ? ಎಷ್ಟು ಬಳಸುತ್ತಾರೆ ಎಲ್ಲವೂ ಜನರಿಗೆ ತಿಳಿಯಬೇಕು. ಆಹಾರಗಳು ತಿಂಗಳಾನುಗಟ್ಟಲೆ ಕೆಡದಂತೆ ಇಡಲು ಬಳಸುವ ರಾಸಾಯನಿಕ ಸೇರಿ ವಿವಿಧ ಸಂಗತಿಗಳು ಜನರಿಗೆ ಗೊತ್ತಾಗಬೇಕು. ಆ ಮೇಲೆ ತಿನ್ನಬೇಕೊ ಬೇಡವೊ ಎನ್ನುವುದನ್ನು ಅವರು ನಿರ್ಧರಿಸುತ್ತಾರೆ' ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಅಭಿಪ್ರಾಯಪಟ್ಟರು.

'ನಿಯಮ ಉಲ್ಲಂಘಿಸಿದವರಿಗೆ ಕಾನೂನಿನಡಿ ದಂಡ, ಪರವಾನಗಿ ರದ್ದತಿ ಸೇರಿ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗುವುದು. ಈ ಪರಿಶೀಲನೆ ವೇಳೆ ನೈರ್ಮಲ್ಯದ ಬಗ್ಗೆಯೂ ಪರಿಶೀಲಿಸಲಾಗಿದ್ದು, ಸ್ವಚ್ಛತೆ ಕಾಯ್ದುಕೊಳ್ಳದವರಿಗೆ ಎಚ್ಚರಿಕೆ ನೀಡಲಾಗಿದೆ. ಕಳಪೆ ಗುಣಮಟ್ಟದ, ಅವಧಿ ಮೀರಿದ ಆಹಾರ ವಿತರಣೆಯಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ಅಗತ್ಯ ಕ್ರಮಕೈಗೊಳ್ಳಲಾಗುತ್ತದೆ' ಎಂದು ಇಲಾಖೆ ಆಯುಕ್ತ ಕೆ. ಶ್ರೀನಿವಾಸ ತಿಳಿಸಿದರು.

ಯು.ಟಿ. ಖಾದರ್ ಆರೋಗ್ಯ ಸಚಿವನಾವು ಸೇವಿಸುವ ಆಹಾರ ಆರೋಗ್ಯವನ್ನು ನಿರ್ಧರಿಸುತ್ತದೆ. ತಾರಾ ಹೋಟೆಲ್‌ಗಳು ಸರಿಯಾದಲ್ಲಿ ಕೆಳ ಹಂತದ ಹೋಟೆಲ್‌ಗಳು ಸರಿಯಾಗುತ್ತವೆ ಯು.ಟಿ. ಖಾದರ್ ಆರೋಗ್ಯ ಸಚಿವ

ಏನೆಲ್ಲ ಉಲ್ಲಂಘನೆ?

*ಅಡುಗೆಮನೆ ಹಾಗೂ ಆಹಾರ ಸಂಗ್ರಹಣಾ ಸ್ಥಳಗಳಲ್ಲಿ ಸ್ವಚ್ಛತೆ ಇಲ್ಲದಿರುವುದು

*ಮಾಂಸ ಉತ್ಪನ್ನಗಳ ವಿವರವನ್ನು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್‌ಎಸ್‌ಎಸ್‌ಎಐ) ನಿಯಮಗಳಿಗೆ ಅನುಗುಣವಾಗಿ ಮುದ್ರಿಸದಿರುವುದು

*ಅವಧಿ ಮೀರಿದ ಹಾಲಿನ ಉತ್ಪನ್ನಗಳು ಬೇಕರಿ ಉತ್ಪನ್ನಗಳು ಕೋಳಿ ಮಾಂಸ ಮೀನು ಮಾಂಸ ಹಾಗೂ ತರಕಾರಿಗಳನ್ನು ಸಂಗ್ರಹಿಸಿಟ್ಟಿರುವುದು

*ಸಸ್ಯಾಹಾರಿ ಹಾಗೂ ಮಾಂಸಾಹಾರಿ ಆಹಾರ ಪದಾರ್ಥಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ಇಡದಿರುವುದು

*ಶಿಲೀಂಧ್ರ ಬಾಧಿತ ತರಕಾರಿ ಮತ್ತು ಆಹಾರ ಪದಾರ್ಥಗಳ ಸಂಗ್ರಹಣೆ

ವಶಪಡಿಸಿಕೊಂಡು ನಾಶಪಡಿಸಿದ ಆಹಾರ

* ದಿ ಲಲಿತ್ ಅಶೋಕ ಹೋಟಲ್‌ನಲ್ಲಿ (ಅನೆಕ್ಸ್ ಸೌತ್) ಒಟ್ಟು 76 ಕೆ.ಜಿ. ಮಾಂಸ 200 ಕೆ.ಜಿ. ತರಕಾರಿ ಹಾಗೂ 32 ಲೀಟರ್ ಅವಧಿ ಮೀರಿದ ಹಾಲು

* ಶಾಂಗ್ರಿ-ಲಾ ಹೋಟೆಲ್‌ನಲ್ಲಿ 15 ಕೆ.ಜಿ. ಮಾಂಸ

* ಫೋರ್ ಸೀಸನ್ಸ್ ಹೋಟೆಲ್‌ನಲ್ಲಿ 19 ಕೆ.ಜಿ. ಮಾಂಸ

* ತಾಜ್ ವಿವಾಂತಾ ವೈಟ್‌ಫೀಲ್ಡ್‌ನಲ್ಲಿ 3 ಕೆ.ಜಿ. ಅವಧಿ ಮೀರಿದ ಬೇಕರಿ ಉತ್ಪನ್ನ

* ತಾಜ್ ಯಶವಂತಪುರದಲ್ಲಿ 72 ಕೆ.ಜಿ. ಮಾಂಸ/ಸಾಲಾಮನ್ ಮೀನು

* ಹೋಟೆಲ್ ಏಟ್ರಿಯಾದಲ್ಲಿ 105 ಕೆ.ಜಿ. ಅವಧಿ ಮೀರಿದ ಆಹಾರ ಪದಾರ್ಥಗಳು 50 ಕೆ.ಜಿ. ಕೋಳಿ ಮಾಂಸ 25 ಕೆ.ಜಿ. ಮಾಂಸ 23 ಕೆ.ಜಿ. ಮೀನು ಹಾಗೂ 23 ಕೆ.ಜಿ. ಮೀನು ಹಾಗೂ 7 ಕೆ.ಜಿ. ತರಕಾರಿ

Dailyhunt
Disclaimer: This content has not been generated, created or edited by Dailyhunt. Publisher: Prajavani