ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ
ಅಯೋಧ್ಯೆ ಹಣ ದುರುಪಯೋಗ: ತಿರುಪತಿ, ಶಬರಿಮಲೆಯಲ್ಲಿ ಕಾಣಿಕೆ ರಕ್ಷಣೆ ಹೇಗೆ ಗೊತ್ತೇ?
ಒಂದು ಸಾಲಿನಲ್ಲಿಭಾರತದ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಭಕ್ತರ ಕಾಣಿಕೆಯನ್ನು ನಿರ್ವಹಿಸಲು ಜಾರಿಯಲ್ಲಿರುವ ಭದ್ರತಾ ವ್ಯವಸ್ಥೆಗಳು ಮತ್ತು ಅವುಗಳ ಪಾರದರ್ಶಕತೆಯ ಕುರಿತಾದ ವಿಶ್ಲೇಷಣೆ.
ಪ್ರಮುಖ ಅಂಶಗಳು• ಮುಜರಾಯಿ ಇಲಾಖೆಯ ಕಟ್ಟುನಿಟ್ಟಿನ ನಿಯಮಕರ್ನಾಟಕದ ದೇವಾಲಯಗಳಲ್ಲಿ ಹುಂಡಿ ಎಣಿಕೆಯ ವೇಳೆ ಸರ್ಕಾರಿ ಅಧಿಕಾರಿಗಳು, ಬ್ಯಾಂಕ್ ಪ್ರತಿನಿಧಿಗಳು ಮತ್ತು ಟ್ರಸ್ಟಿಗಳ ಸಮ್ಮುಖದಲ್ಲಿ ವಿಡಿಯೊ ರೆಕಾರ್ಡಿಂಗ್ ಮಾಡಲಾಗುತ್ತದೆ.• ತಿರುಪತಿಯ ಸುಧಾರಿತ ಎಣಿಕೆ ವಿಧಾನತಿರುಪತಿಯಲ್ಲಿ ಪರಕಾಮಣಿ ಕಟ್ಟಡದ ಮೂಲಕ ಸುಧಾರಿತ ಯಂತ್ರಗಳನ್ನು ಬಳಸಿ, ಬಿಗಿ ಭದ್ರತೆಯ ನಡುವೆ ಸ್ವಯಂಸೇವಕರು ಕಾಣಿಕೆ ಹಣವನ್ನು ಎಣಿಸುತ್ತಾರೆ.• ತಮಿಳುನಾಡಿನ ದೇವಾಲಯಗಳ ಡಿಜಿಟಲ್ ನಿಗಾತಮಿಳುನಾಡಿನ ದೇವಾಲಯಗಳಲ್ಲಿ ಎಣಿಕೆ ಪ್ರಕ್ರಿಯೆಯನ್ನು ವಿಡಿಯೊ ಮಾಡುವುದಲ್ಲದೆ, ಅನೇಕ ಪ್ರಮುಖ ದೇವಾಲಯಗಳು ಯೂಟ್ಯೂಬ್‌ನಲ್ಲಿ ನೇರ ಪ್ರಸಾರ ಮಾಡುತ್ತವೆ.• ಮಹಾರಾಷ್ಟ್ರದ ಭೂಗತ ಸುರಕ್ಷತಾ ವ್ಯವಸ್ಥೆಶಿರಡಿ ಮತ್ತು ಸಿದ್ಧಿವಿನಾಯಕ ದೇವಾಲಯಗಳಲ್ಲಿ ಸಿಸಿಟಿವಿ ಕಣ್ಗಾವಲು ಮತ್ತು ವಿಶೇಷವಾಗಿ ವಿನ್ಯಾಸಗೊಳಿಸಿದ ಭೂಗತ ಸಭಾಂಗಣಗಳಲ್ಲಿ ಕಾಣಿಕೆ ಎಣಿಕೆ ನಡೆಯುತ್ತದೆ.• ಭದ್ರತೆ ನಡುವೆಯೂ ಇರುವ ಸವಾಲುಗಳುಕಟ್ಟುನಿಟ್ಟಾದ ಭದ್ರತೆ ಇದ್ದರೂ ಶಬರಿಮಲೆ ಮತ್ತು ತಿರುಪತಿಯಂತಹ ದೇವಸ್ಥಾನಗಳಲ್ಲಿ ಸಿಬ್ಬಂದಿಯಿಂದ ಹಣ ದುರುಪಯೋಗ ಅಥವಾ ಕಳ್ಳತನದ ಆರೋಪಗಳು ಕೇಳಿಬಂದಿವೆ.ಪ್ರಮುಖ ಅಂಕಿಅಂಶಗಳು₹3 ರಿಂದ ₹4 ಕೋಟಿತಿರುಪತಿ ಹುಂಡಿಗೆ ಬರುವ ದೈನಂದಿನ ಕಾಣಿಕೆ₹350 ಕೋಟಿಗೂ ಅಧಿಕಶಬರಿಮಲೆಯ ವಾರ್ಷಿಕ ಆದಾಯ₹80 ಕೋಟಿಶಬರಿಮಲೆ ಹುಂಡಿಯ ವಾರ್ಷಿಕ ಸಂಗ್ರಹ44,000 ಕ್ಕೂ ಹೆಚ್ಚುತಮಿಳುನಾಡಿನಲ್ಲಿರುವ ನಿಯಂತ್ರಿತ ದೇವಾಲಯಗಳುಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ
ಭಾರತದ ಪ್ರಮುಖ ಧಾರ್ಮಿಕ ಕ್ಷೇತ್ರವಾದ ಅಯೋಧ್ಯೆಯ ರಾಮಮಂದಿರದ ದೇಣಿಗೆಯಲ್ಲಿ ಕೋಟ್ಯಂತರ ರೂಪಾಯಿ ನಾಪತ್ತೆಯಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಇದರ ನಡುವೆಯೇ, ಭಾರತದಲ್ಲಿ ಹಲವು ಪ್ರಮುಖ ದೇವಸ್ಥಾನಗಳು ಮತ್ತು ಪುಣ್ಯಕ್ಷೇತ್ರಗಳಿದ್ದು ಅವುಗಳು ಪ್ರತಿ ವರ್ಷ ಭಕ್ತರು ಅರ್ಪಿಸುವ ಅಪಾರ ಪ್ರಮಾಣದ ಹಣವನ್ನು ಹೇಗೆ ನಿರ್ವಹಿಸುತ್ತವೆ ಎನ್ನುವುದು ಹಲವರ ಪ್ರಶ್ನೆಯಾಗಿದೆ.
ದೇಶದ ಪ್ರಮುಖ ದೇವಾಲಯಗಳ ವ್ಯವಸ್ಥೆಯನ್ನು ಹತ್ತಿರದಿಂದ ಗಮನಿಸಿದಾಗ, ಅವುಗಳಿಗೆ ಬರುವ ಕಾಣಿಕೆಯನ್ನು ರಕ್ಷಿಸುವುದಕ್ಕಾಗಿ ಸಿಸಿಟಿವಿ ಅಳವಡಿಕೆ, ಸ್ವಯಂಸೇವಕರ ಮೇಲ್ವಿಚಾರಣೆ ಮತ್ತು ಕಟ್ಟುನಿಟ್ಟಾದ ವಸ್ತ್ರಸಂಹಿತೆಯಂತಹ ವಿಭಿನ್ನ ವ್ಯವಸ್ಥೆಗಳು ಜಾರಿಯಲ್ಲಿರುವುದು ಕಂಡುಬರುತ್ತದೆ. ಅಷ್ಟಿದ್ದರೂ ಕೂಡ ಇತ್ತೀಚೆಗೆ ಶಬರಿಮಲೆ ಮತ್ತು ತಿರುಮಲದಲ್ಲಿ ನಡೆದ ಹಗರಣಗಳು ಈ ವ್ಯವಸ್ಥೆಯಲ್ಲಿರುವ ಲೋಪಗಳ ಕಡೆಗೆ ಬೆರಳು ಮಾಡಿ ತೋರಿಸಿದ್ದವು.
ದಕ್ಷಿಣ ಭಾರತದ ಪ್ರಮುಖ ದೇವಸ್ಥಾನಗಳಲ್ಲಿ ಅಲ್ಲಿಗೆ ಬರುವ ಕಾಣಿಕೆ ಮತ್ತು ನಿಧಿಯನ್ನು ಹೇಗೆ ರಕ್ಷಿಸಲಾಗುತ್ತಿದೆ ಎನ್ನುವ ಮಾಹಿತಿ ಇಲ್ಲಿದೆ.
ಕರ್ನಾಟಕದ ಪ್ರಮುಖ ದೇವಾಲಯಗಳಿಗೆ ಮುಜರಾಯಿ ಇಲಾಖೆಯ ಮೇಲ್ವಿಚಾರಣೆ:
ಕರ್ನಾಟಕದ ಪ್ರಮುಖ ದೇವಾಲಯಗಳು ಮುಜರಾಯಿ ಇಲಾಖೆಯಡಿ ಕಾರ್ಯನಿರ್ವಹಿಸುತ್ತವೆ. ಉಡುಪಿಯ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ, ದಕ್ಷಿಣ ಕನ್ನಡದ ಕುಕ್ಕೆ ಸುಬ್ರಹ್ಮಣ್ಯ ಮತ್ತು ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನ ಸೇರಿದಂತೆ ರಾಜ್ಯದ ಪ್ರಮುಖ ಪುಣ್ಯಕ್ಷೇತ್ರಗಳ ಆಡಳಿತವನ್ನು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯ್ದೆ, 1997ರ ಅಡಿಯಲ್ಲಿ ಮುಜರಾಯಿ ಇಲಾಖೆಯು ಮೇಲ್ವಿಚಾರಣೆ ಮಾಡುತ್ತದೆ.
ದೇಣಿಗೆ ಹಣ ದುರುಪಯೋಗವಾಗುವುದನ್ನು ತಡೆಯಲು ಮತ್ತು ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಸರ್ಕಾರಿ ಅಧೀನದ ದೇವಾಲಯಗಳಲ್ಲಿ ಹುಂಡಿ ತೆರೆಯುವಿಕೆ ಮತ್ತು ಎಣಿಕೆಯ ವೇಳೆ ಬಿಗಿ ಭದ್ರತೆ ಇರುತ್ತದೆ. ದೇವಾಲಯದ ಹುಂಡಿಗಳನ್ನು ಕೇವಲ ದೇವಸ್ಥಾನದ ಸಿಬ್ಬಂದಿ ಮಾತ್ರ ತೆರೆಯುವಂತಿಲ್ಲ. ಮುಜರಾಯಿ ಇಲಾಖೆಯ ಸಹಾಯಕ ಕಮಿಷನರ್ ಅಥವಾ ತಹಶೀಲ್ದಾರ್ ಶ್ರೇಣಿಯ ನಿಯೋಜಿತ ಸರ್ಕಾರಿ ಅಧಿಕಾರಿಗಳು, ಬ್ಯಾಂಕ್ ಪ್ರತಿನಿಧಿಗಳು ಮತ್ತು ದೇವಾಲಯದ ಟ್ರಸ್ಟಿಗಳ ಸಮ್ಮುಖದಲ್ಲಿ ಮಾತ್ರವೇ ಹುಂಡಿಗಳನ್ನು ತೆರೆಯಲಾಗುತ್ತದೆ. ಈ ವೇಳೆ ಯಾವುದೇ ರೀತಿಯ ಅಕ್ರಮಗಳಿಗೆ ಆಸ್ಪದವಿರದಂತೆ ಎಣಿಕೆಯ ಆರಂಭದಿಂದ ಅಂತ್ಯದವರೆಗೆ ಸಂಪೂರ್ಣವಾಗಿ ವಿಡಿಯೊ ರೆಕಾರ್ಡ್ ಮಾಡಲಾಗುತ್ತದೆ.
ನಗದು ಮತ್ತು ನಾಣ್ಯಗಳನ್ನು ಎಣಿಕೆ ಮಾಡಿದ ತಕ್ಷಣ, ಅವುಗಳ ಮೊತ್ತವನ್ನು ದಾಖಲಿಸಿ, ದೇವಾಲಯದ ಅಧಿಕೃತ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ. ಭಕ್ತರು ಅರ್ಪಿಸುವ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ತೂಕ ಮಾಡಿ, ಪರಿಣಿತರಿಂದ ನಿಖರವಾಗಿ ಪಟ್ಟಿ ಮಾಡಲಾಗುತ್ತದೆ. ನಂತರ ಇವುಗಳನ್ನು ದೇವಾಲಯದ ಆವರಣದಲ್ಲಿ ಇಡುವ ಬದಲಾಗಿ, ಸುರಕ್ಷಿತವಾಗಿ ಬ್ಯಾಂಕ್ ಲಾಕರ್‌ಗಳಲ್ಲಿ ಇಡಲಾಗುತ್ತದೆ.
ತಿರುಪತಿಯ ತಿರುಮಲನ ಹುಂಡಿ ಕಥೆ:
ವಿಶ್ವದ ಅತ್ಯಂತ ಶ್ರೀಮಂತ ಹಿಂದೂ ದೇವಾಲಯಗಳಲ್ಲಿ ಒಂದಾಗಿರುವ ಆಂಧ್ರಪ್ರದೇಶದ ತಿರುಮಲಕ್ಕೆ ಸಾಮಾನ್ಯ ದಿನಗಳಲ್ಲಿ 70,000 ದಿಂದ 80,000 ಯಾತ್ರಿಕರು ಭೇಟಿ ನೀಡುತ್ತಾರೆ. ಹಬ್ಬಗಳ ಸಂದರ್ಭದಲ್ಲಿ ಈ ಸಂಖ್ಯೆ ಒಂದು ಲಕ್ಷವನ್ನು ದಾಟುತ್ತದೆ.
ಇಲ್ಲಿನ ಕಾಣಿಕೆ ಡಬ್ಬಿ ಅಂದರೆ 'ಹುಂಡಿ'ಗೆ ಪ್ರತಿದಿನ ₹3 ರಿಂದ ₹4 ಕೋಟಿ ರೂಪಾಯಿ ಜಮೆಯಾಗುತ್ತದೆ. ಆ ಕಾಣಿಕೆಗಳನ್ನು 'ಪರಕಾಮಣಿ' ಕಟ್ಟಡಕ್ಕೆ ಸ್ಥಳಾಂತರಿಸಲಾಗುತ್ತದೆ, ಅಲ್ಲಿ ಸುಧಾರಿತ ಯಂತ್ರಗಳ ಮೂಲಕ ಕರೆನ್ಸಿ ಮತ್ತು ನಾಣ್ಯಗಳನ್ನು ಎಣಿಕೆ ಮಾಡಲಾಗುತ್ತದೆ. ಕಟ್ಟುನಿಟ್ಟಾದ ತಪಾಸಣೆಗೆ ಒಳಪಟ್ಟ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕರ್ನಾಟಕ ಮತ್ತು ಕೇರಳದ ಸರ್ಕಾರಿ, ಬ್ಯಾಂಕಿಂಗ್ ಮತ್ತು ವಿಮಾ ಹಿನ್ನೆಲೆಯುಳ್ಳ 35 ರಿಂದ 65 ವರ್ಷದೊಳಗಿನ ಹಿಂದೂ ಪುರುಷ ಸ್ವಯಂಸೇವಕರು ಇಲ್ಲಿ ಮೂರು ಶಿಫ್ಟ್‌ಗಳಲ್ಲಿ ಕೆಲಸ ಮಾಡುತ್ತಾರೆ. ಬಿಳಿ ಧೋತಿ ಮತ್ತು ಶಲ್ಯ ಧರಿಸುವ ಇವರು ಕಟ್ಟುನಿಟ್ಟಾದ ಭದ್ರತಾ ತಪಾಸಣೆಗೆ ಒಳಗಾಗಬೇಕಾಗುತ್ತದೆ. ಇದರೊಳಗೆ ಎಲೆಕ್ಟ್ರಾನಿಕ್ ಉಪಕರಣಗಳು ಮತ್ತು ಅಮೂಲ್ಯ ವಸ್ತುಗಳನ್ನು ನಿಷೇಧಿಸಲಾಗಿದ್ದು, ಸಿಬ್ಬಂದಿ ಹೊರಹೋಗುವಾಗ ಅವರ ದೇಹ ತಪಾಸಣೆ(ಫ್ರಿಸ್ಕಿಂಗ್) ಮಾಡಲಾಗುತ್ತದೆ.
ಇಷ್ಟೆಲ್ಲ ಭದ್ರತಾ ವ್ಯವಸ್ಥೆಯ ಕಣ್ಗಾವಲಿದ್ದರೂ, ಇತ್ತೀಚೆಗೆ ತಿರುಮಲ ತಿರುಪತಿ ದೇವಸ್ಥಾನಂ(ಟಿಟಿಡಿ) ಸಿಬ್ಬಂದಿಯಿಂದ ಹಣ ದುರುಪಯೋಗ ನಡೆದಿರುವ ಆರೋಪದ ಮೇಲೆ ಸಿಐಡಿ ತನಿಖೆ ಆರಂಭಿಸಿದೆ.
ತಮಿಳುನಾಡಿನಲ್ಲಿ ಧಾರ್ಮಿಕ ಮತ್ತು ದತ್ತಿ ಇಲಾಖೆಯ ನಿಯಂತ್ರಣ:
ತಮಿಳುನಾಡಿನ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯು ಮಧುರೈನ ಮೀನಾಕ್ಷಿ ಸುಂದರೇಶ್ವರರ್ ದೇವಾಲಯ, ತಿರುವಣ್ಣಾಮಲೈನ ಅರುಣಾಚಲೇಶ್ವರರ್ ದೇವಾಲಯ ಮತ್ತು ಚೆನ್ನೈನ ಕಪಾಲೀಶ್ವರರ್ ದೇವಾಲಯ ಸೇರಿದಂತೆ 44,000 ಕ್ಕೂ ಹೆಚ್ಚು ದೇವಾಲಯಗಳನ್ನು ನಿಯಂತ್ರಿಸುತ್ತದೆ.
ಈ ದೇವಸ್ಥಾನಗಳಲ್ಲಿ ಕಟ್ಟುನಿಟ್ಟಾದ ಪರಿಶೀಲನಾ ಪ್ರಕ್ರಿಯೆಯ ನಂತರ ಆಯ್ಕೆಯಾದ ಸ್ವಯಂಸೇವಕರು, ದೇವಾಲಯದ ಅಧೀಕ್ಷಕರು, ಹಿರಿಯ ಅಧಿಕಾರಿಗಳು ಮತ್ತು ಧಾರ್ಮಿಕ ಮತ್ತು ದತ್ತಿ ಇಲಾಖೆಯ ಸಹಾಯಕ ಕಮಿಷನರ್ ಸಮ್ಮುಖದಲ್ಲಿ ದೇಣಿಗೆಯನ್ನು ಎಣಿಕೆ ಮಾಡಲಾಗುತ್ತದೆ. ಈ ಸಂಪೂರ್ಣ ಪ್ರಕ್ರಿಯೆಯನ್ನು ಫೋಟೊ ಮತ್ತು ವಿಡಿಯೊ ರೆಕಾರ್ಡ್ ಮಾಡಲಾಗುತ್ತದೆ.
ಎಣಿಕೆ ಮುಗಿದ ತಕ್ಷಣ ಎಲ್ಲವನ್ನೂ ದಾಖಲಿಸಿ, ಹಣವನ್ನು ದೇವಾಲಯದ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ದೇವಸ್ಥಾನಕ್ಕೆ ಸೇರಿದ ಚಿನ್ನ ಮತ್ತು ಬೆಳ್ಳಿಯನ್ನೂ ಬ್ಯಾಂಕಿನಲ್ಲಿ ಇಡಲಾಗುತ್ತದೆ. 48 ಹಿರಿಯ ಶ್ರೇಣಿಯ ಮತ್ತು 100 ಗ್ರೇಡ್-ಒನ್ ದೇವಾಲಯಗಳು ಕಾಣಿಕೆ ಎಣಿಕೆ ಪ್ರಕ್ರಿಯೆಯನ್ನು ಯೂಟ್ಯೂಬ್‌ನಲ್ಲಿ ನೇರ ಪ್ರಸಾರ ಮಾಡುತ್ತವೆ.
ಕಾಣಿಕೆ ಕಾಪಾಡಲು ಮಹಾರಾಷ್ಟ್ರದಲ್ಲಿ ಭೂಗತ ಸಭಾಂಗಣಗಳು:
ಮಹಾರಾಷ್ಟ್ರದ ಶಿರಡಿಯ ಶ್ರೀ ಸಾಯಿಬಾಬಾ ಸಂಸ್ಥಾನ ಮತ್ತು ಮುಂಬೈನ ಶ್ರೀ ಸಿದ್ಧಿವಿನಾಯಕ ದೇವಾಲಯಗಳು ಕಾಣಿಕೆಯನ್ನು ಕಾಪಾಡಲು ದಶಕಗಳಿಂದ ಕಟ್ಟುನಿಟ್ಟಾದ ಕಾರ್ಯವಿಧಾನಗಳನ್ನು ಜಾರಿಗೊಳಿಸಿವೆ.
ಶಿರಡಿಯ 43 ಕಾಣಿಕೆ ಪೆಟ್ಟಿಗೆಗಳನ್ನು ವಾರಕ್ಕೆ ಎರಡು ಬಾರಿ ಸಿಸಿಟಿವಿ ಕಣ್ಗಾವಲಿನಲ್ಲಿರುವ ವಿಶೇಷವಾಗಿ ವಿನ್ಯಾಸಗೊಳಿಸಲಾದ ಭೂಗತ ಸಭಾಂಗಣದಲ್ಲಿ ತೆರೆಯಲಾಗುತ್ತದೆ. ಇದರಲ್ಲಿ ಭಕ್ತರು, ಗ್ರಾಮ ಪ್ರತಿನಿಧಿಗಳು, ಟ್ರಸ್ಟ್ ಉದ್ಯೋಗಿಗಳು ಮತ್ತು ಬ್ಯಾಂಕರ್‌ಗಳು ಸೇರಿದಂತೆ 200 ಕ್ಕೂ ಹೆಚ್ಚು ಮಂದಿ ಭಾಗವಹಿಸುತ್ತಾರೆ. ಎಲ್ಲರಿಗೂ ಕಾಲರ್ ಮತ್ತು ಜೇಬುಗಳಿಲ್ಲದ ಕುರ್ತಾ-ಪೈಜಾಮಾಗಳನ್ನು ನೀಡಲಾಗುತ್ತದೆ. ವಿದೇಶಿ ಕರೆನ್ಸಿಗಳು, ಚಿನ್ನ ಮತ್ತು ಬೆಳ್ಳಿಯ ವಸ್ತುಗಳನ್ನು ಪ್ರತ್ಯೇಕವಾಗಿ ಪಟ್ಟಿ ಮಾಡಲಾಗುತ್ತದೆ.
ಸಿದ್ಧಿವಿನಾಯಕ ದೇವಾಲಯದಲ್ಲಿ ಪ್ರತಿ ಬುಧವಾರ ಸಿಸಿಟಿವಿ ಕಣ್ಗಾವಲಿನಲ್ಲಿ ಸ್ವಯಂಸೇವಕರು ದೇಣಿಗೆಯನ್ನು ಎಣಿಕೆ ಮಾಡುತ್ತಾರೆ.
ಅಯ್ಯಪ್ಪನ ಕಾಣಿಕೆ ಮೇಲಿದೆ ಭಾರಿ ಕಣ್ಗಾವಲು:
ಕೇರಳ ಸೇರಿದಂತೆ ನೆರೆಯ ಹಲವು ರಾಜ್ಯಗಳಲ್ಲಿ ಅಪಾರ ಪ್ರಮಾಣದ ಭಕ್ತರನ್ನು ಹೊಂದಿರುವ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯವು ವಾರ್ಷಿಕ ಸುಮಾರು ₹350 ಕೋಟಿ ರೂಪಾಯಿಗೂ ಅಧಿಕ ಆದಾಯ ಗಳಿಸುತ್ತದೆ. ಇದರಲ್ಲಿ ಕೇವಲ ಕಾಣಿಕೆ ಪೆಟ್ಟಿಗೆಗಳಿಂದಲೇ 80 ಕೋಟಿ ರೂಪಾಯಿ ಸಂಗ್ರಹವಾಗುತ್ತದೆ. ಎರಡು ತಿಂಗಳ ತೀರ್ಥಯಾತ್ರೆಯ ಅವಧಿಯಲ್ಲಿ ಇದರ ಎಣಿಕೆಗಾಗಿ ನೂರಾರು ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ಮುಖ್ಯ ಹುಂಡಿಯಿಂದ ಬರುವ ಕಾಣಿಕೆಗಳು ಕನ್ವೇಯರ್ ಬೆಲ್ಟ್ ಮೂಲಕ ಎಣಿಕಾ ಕೇಂದ್ರವನ್ನು ತಲುಪುತ್ತವೆ, ಅಲ್ಲಿ ನೋಟುಗಳನ್ನು ನೇರವಾಗಿ ಬ್ಯಾಂಕ್ ಅಧಿಕಾರಿಗಳಿಗೆ ಹಸ್ತಾಂತರಿಸಲಾಗುತ್ತದೆ.
ದೇಗುಲದಲ್ಲಿ ಭಾರಿ ಕಣ್ಗಾವಲಿದ್ದರೂ, ಇತ್ತೀಚೆಗೆ ನಡೆದ ಹಗರಣಗಳು ಸದ್ದು ಮಾಡುತ್ತಿವೆ. ಅದರಲ್ಲೂ ಗರ್ಭಗುಡಿಯ ಚಿನ್ನದ ಲೇಪಿತ ಕವಚಗಳ ನಿರ್ವಹಣೆ ವೇಳೆಯಲ್ಲಿನ ಚಿನ್ನ ಕಳವು ಪ್ರಕರಣ ಮತ್ತು ದೇವಾಲಯದ ಸಿಬ್ಬಂದಿ ಕಾಣಿಕೆಗಳನ್ನು ತಮ್ಮ ಬಟ್ಟೆಯೊಳಗೆ ಬಚ್ಚಿಟ್ಟುಕೊಂಡು ಕದಿಯುತ್ತಿದ್ದ ಘಟನೆಗಳು ಕಾಣಿಕೆಯ ಸುರಕ್ಷತೆಯ ಬಗ್ಗೆ ಪ್ರಶ್ನೆಗಳನ್ನು ಮೂಡಿಸಿವೆ.

