ದೇವನಹಳ್ಳಿ: 'ಅಯೋಧ್ಯೆಯಲ್ಲಿ ದೇವರ ಕಾಣಿಕೆ ಲೂಟಿ ಮಾಡಿದಂತೆ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಮೂಲಕ ಮತ ಲೂಟಿ ಮಾಡಲು ಹುನ್ನಾರ ನಡೆದಿದೆ' ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದರು.
ಜಿಲ್ಲಾಡಳಿತ ಭವನದ ಆವರಣದಲ್ಲಿ ಭಾನುವಾರ ಡಾ.ಬಿ.ಆರ್.
ಅಂಬೇಡ್ಕರ್ ಅವರ 14 ಅಡಿ ಎತ್ತರದ ಕಂಚಿನ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದರು.
'ದೇವರ ಹೆಸರಿನಲ್ಲಿ ಬಲಿತ ಸಮಾಜಗಳು ಅಯೋಧ್ಯೆಯಲ್ಲಿ ಕಾಣಿಕೆ ಲೂಟಿ ಮಾಡಿರುವುದು ಜಗಜ್ಜಾಹೀರಾಗಿದೆ. ₹20 ಸಾವಿರ ಕೋಟಿ ದರೋಡೆ ಮಾಡಿದವರು ಯಾರು? ಅವರು ಅಲ್ಪಸಂಖ್ಯಾತರಲ್ಲ. ದಲಿತರಲ್ಲ. ಧರ್ಮದ ಹೆಸರಿನಲ್ಲಿ ಮೋಸ ಮಾಡುತ್ತಿರುವ ರಾಜಕೀಯ ದಲ್ಲಾಳಿಗಳು' ಎಂದು ವಾಗ್ದಾಳಿ ನಡೆಸಿದರು.
'ಎಸ್‌ಐಆರ್ ಮೂಲಕ ಮತವನ್ನು ಲೂಟಿ ಮಾಡಲಾಗುತ್ತಿದೆ. ವೋಟ್ ಚೋರಿ ಮೂಲಕ ಪ್ರಧಾನಿ ಮೋದಿಗೆ ಮತ್ತೆ ಅಧಿಕಾರ ನೀಡಲು ಹುನ್ನಾರ ನಡೆದಿದೆ. ಕಾರ್ಯಕರ್ತರು ಕಾಣಿಕೆ ಹಣ ಚೋರಿ ಮಾಡಿದರೆ, ಮೋದಿ ಜನರ ವೋಟ್ ಚೋರಿ ಮಾಡುತ್ತಿದ್ದಾರೆ. ಅವರ ವಿರುದ್ಧ ಮಾತನಾಡಿದರೆ ಇ.ಡಿ ಪ್ರಕರಣ, ಐಟಿ ದಾಳಿ ಮಾಡಿ ಇಲ್ಲವೇ ನೇರ ಜೈಲಿಗೆ ಹಾಕುತ್ತಾರೆ' ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಂವಿಧಾನ ಆತ್ಮ ದುರ್ಬಲಗೊಳಿಸುವ ಯತ್ನ: 'ಜುಲೈ 20ರಿಂದ ಆರಂಭ ವಾಗಲಿರುವ ಸಂಸತ್ ಅಧಿವೇಶನ ದಲ್ಲಿ ಚುನಾವಣೆ ಹಾಗೂ ಸಂವಿಧಾನಾತ್ಮಕ ವ್ಯವಸ್ಥೆಯಲ್ಲಿ ಮೂಲ ಬದಲಾವಣೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಕ್ಷೇತ್ರ ಪುನರ್ ವಿಂಗಡಣೆ, ಒಂದು ರಾಷ್ಟ್ರ-ಒಂದು ಚುನಾವಣೆ ಹಾಗೂ 30 ದಿನ ಜೈಲಿನಲ್ಲಿರುವ ಜನಪ್ರತಿನಿಧಿಗಳನ್ನು ಅನರ್ಹಗೊಳಿಸುವ ಕಾನೂನು ತರಲು ಸಜ್ಜಾಗಿದೆ. ಇದು ಸಂವಿಧಾನದ ಆತ್ಮವನ್ನೇ ದುರ್ಬಲಗೊಳಿಸುವ ಪ್ರಯತ್ನ. ಈ ವಿಷಯಗಳ ಕುರಿತು ದೇಶವ್ಯಾಪಿ ಚರ್ಚೆ ನಡೆಯಬೇಕು' ಎಂದರು.
ಪ್ರವಾಸೋದ್ಯಮ ಸಚಿವ ಕೆ.ಜೆ.ಜಾರ್ಜ್, ಶಾಸಕರಾದ ಶರತ್ ಬಚ್ಚೇಗೌಡ, ಎನ್.ಶ್ರೀನಿವಾಸ್, ಶಿವಣ್ಣ, ಧೀರಜ್ ಮುನಿರಾಜು, ಸಂಸದ ಡಾ.ಕೆ.ಸುಧಾಕರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260706-51-874861020

