ವಾಷಿಂಗ್ಟನ್: ಶಸ್ತ್ರಾಸ್ತ್ರಗಳನ್ನು ಬಾಹ್ಯಾಕಾಶದಲ್ಲಿ ನಿಯೋಜಿಸಿರುವುದಾಗಿ ಇದೇ ಮೊದಲ ಬಾರಿಗೆ ಅಮೆರಿಕ ಹೇಳಿಕೊಂಡಿದೆ.
ನಾವು ಶಸ್ತ್ರಾಸ್ತ್ರಗಳನ್ನು ಬಾಹ್ಯಾಕಾಶದಲ್ಲಿ ನಿಯೋಜಿಸಿರುವುದು ನಿಜ ಎಂದು ಅಮೆರಿಕದ ವಾಯುಪಡೆ ಕಾರ್ಯದರ್ಶಿಗಳು ಖಚಿತಪಡಿಸಿದ್ದಾರೆ. ಆದರೆ ಅವುಗಳ ಕಾರ್ಯವೈಖರಿ ಬಗ್ಗೆ ಹೆಚ್ಚಿನ ವಿವರ ನೀಡಲಿಲ್ಲ.
ನಮ್ಮ ವಾಯುಪಡೆಯು ಹೆಚ್ಚು ಸ್ವಾಯತ್ತ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುತ್ತಿದ್ದು, 2032ರ ಹೊತ್ತಿಗೆ ಆಮೂಲಾಗ್ರ ಬದಲಾವಣೆ ಕಾಣಲಿದ್ದೇವೆ. ಸಂಭವನೀಯ ಬೆದರಿಕೆಯನ್ನು ಎದುರಿಸಲು ಸಿದ್ಧತೆಗಳನ್ನು ಹೆಚ್ಚಿಸುತ್ತಿದ್ದೇವೆ' ಎಂದು ಹೇಳಿದ್ದಾರೆ.
ಶತ್ರು ದೇಶಗಳ ಕ್ರಮದಿಂದ ನಮ್ಮ ಪಡೆಗಳನ್ನು ರಕ್ಷಿಸಲು ಬಾಹ್ಯಾಕಾಶದಲ್ಲಿ ಶಸ್ತ್ರಾಸ್ತ್ರವನ್ನು ನಿಯೋಜಿಸುವುದು ಅನಿವಾರ್ಯವಾಗಿತ್ತು ಎಂದು ಮಾಹಿತಿ ನೀಡಿದ್ದಾರೆ.
ಬಾಹ್ಯಾಕಾಶದಿಂದ ಉಡಾವಣೆ ಮಾಡಬಲ್ಲ ಹೊಸ ಉಪಗ್ರಹ ನಿಗ್ರಹ ಶಸ್ತ್ರಾಸ್ತ್ರಗಳನ್ನು ರಷ್ಯಾ ಅಭಿವೃದ್ಧಿಪಡಿಸುತ್ತಿದೆ ಎಂದು ಅಮೆರಿಕ 2024ರಲ್ಲಿ ಹೇಳಿತ್ತು. ಶಸ್ತ್ರಾಸ್ತ್ರಗಳನ್ನು ಬಾಹ್ಯಾಕಾಶದಲ್ಲಿ ನಿಯೋಜಿಸುವ ಯೋಜನೆಯನ್ನು 2020ರಲ್ಲಿ ಅಮೆರಿಕ ಆರಂಭಿಸಿತ್ತು ಎಂದು ಮೂಲಗಳು ತಿಳಿಸಿವೆ.

