ಪುಣೆ: 65 ವರ್ಷದ ವ್ಯಕ್ತಿಯೊಬ್ಬ ನಾಲ್ಕು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಬಳಿಕ ಆಕೆಯನ್ನು ಕಲ್ಲಿನಿಂದ ಜಜ್ಜಿ ಸಾಯಿಸಿರುವ ಘಟನೆಗೆ ಸಂಬಂಧಿಸಿದಂತೆ ನಿನ್ನೆ ರಾತ್ರಿ ಪುಣೆಯಲ್ಲಿ ಭಾರಿ ಪ್ರತಿಭಟನೆ ನಡೆದಿದೆ.
ಅಪರಾಧಿಗೆ ತಕ್ಷಣವೇ ಗಲ್ಲಿಗೆ ಹಾಕಬೇಕು ಇಲ್ಲವೇ ನಮ್ಮ ವಶಕ್ಕೆ ನೀಡಬೇಕು ಎಂದು ಆಗ್ರಹಿಸಿ ಸಾವಿರಾರು ಜನ ಪುಣೆಯ ನಾಸಿರಪುರ್ ಬಳಿಯ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ಸುಮಾರು ನಾಲ್ಕೈದು ಗಂಟೆ ತಡೆದು ಭಾರಿ ಪ್ರತಿಭಟನೆ ನಡೆಸಿದರು.
ರಸ್ತೆ ತಡೆಯಿಂದ ಪುಣೆ-ಬೆಂಗಳೂರಿನ ಹೆದ್ದಾರಿಯಲ್ಲಿ ಹತ್ತಾರು ಕಿ.ಮೀ ಟ್ರಾಫಿಕ್ ದಟ್ಟಣೆ ಉಂಟಾಗಿ ಸಾರ್ವಜನಿಕರು ತೊಂದರೆ ಅನುಭವಿಸಿದರು. ಪ್ರತಿಭಟನೆ ಮಧ್ಯರಾತ್ರಿಯವರೆಗೂ ವಿಸ್ತರಿಸಿತ್ತು. ಕಡೆಗೆ ಮಹಾರಾಷ್ಟ್ರ ಸಿಎಂ ಭರವಸೆ ನಂತರ ಪ್ರತಿಭಟನಾಕಾರರು ರಸ್ತೆ ತಡೆ ತೆರವುಗೊಳಿಸಿದರು. ಸ್ಥಳದಲ್ಲಿ ಇನ್ನೂ ಉದ್ವಿಗ್ನ ವಾತಾವರಣ ಇದ್ದು ಪೊಲೀಸರು ಬೀಡು ಬಿಟ್ಟಿದ್ದಾರೆ.
ಆರೋಪಿ ಈ ಹಿಂದೆಯೂ 2015 ರಲ್ಲಿ ಅತ್ಯಾಚಾರ ಮಾಡಿದ್ದಾನೆ ಎಂದು ಕೇಸ್ ದಾಖಲಿಸಲಾಗಿತ್ತು. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಬಾಲಕಿ ಅತ್ಯಾಚಾರ ಹಾಗೂ ಕೊಲೆ ಖಂಡಿಸಿ ಮಹಾರಾಷ್ಟ್ರದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, 'ಇದು ಅತ್ಯಂತ ಗಂಭೀರ ವಿಷಯ. ಆರೋಪಿಯನ್ನು ಬಂಧಿಸಲಾಗಿದೆ. ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದ್ದು, ಮರಣದಂಡನೆ ವಿಧಿಸಲು ಕ್ರಮ ಕೈಗೊಳ್ಳುತ್ತೇವೆ' ಎಂದು ಗೃಹಸಚಿವರೂ ಆಗಿರುವ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಹೇಳಿದ್ದಾರೆ.
ಪುಣೆ ಜಿಲ್ಲೆಯ ಭೋರ್ ತಾಲ್ಲೂಕಿನ ನಸ್ರಾಪುರದಲ್ಲಿ ಈ ದುರ್ಘಟನೆ ಕಳೆದ ಶುಕ್ರವಾರ ನಡೆದಿದೆ. ಬೇಸಿಗೆ ರಜೆಗಾಗಿ ಬಾಲಕಿಯು ಅಜ್ಜಿ ಮನೆಗೆ ಬಂದಿದ್ದಳು.
ಆರೋಪಿಯು ಬಾಲಕಿಯನ್ನು ದನದ ಕೊಟ್ಟಿಗೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ತನ್ನ ದುಷ್ಕೃತ್ಯ ಮರೆಮಾಚಲು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾನೆ. ಶವವನ್ನು ಸಗಣಿ ರಾಶಿಯೊಳಗೆ ಹೂತು ಹಾಕಿದ್ದ.
ಬಾಲಕಿಯನ್ನು ಆರೋಪಿಯು ದನದ ಕೊಟ್ಟಿಗೆಗೆ ಕರೆದೊಯ್ದ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಾವಳಿ ಸಿಕ್ಕಿವೆ.
ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಎಸ್‌ಸಿಪಿ (ಎಸ್‌ಪಿ) ಕಾರ್ಯಾಧ್ಯಕ್ಷೆ ಹಾಗೂ ಬಾರಾಮತಿ ಸಂಸದೆ ಸುಪ್ರಿಯಾ ಸುಳೆ, ಶಾಸಕ ರೋಹಿತ್ ಪವಾರ್, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ವಿಜಯ್ ವಡೆಟ್ಟಿವಾರ್ ಆಗ್ರಹಿಸಿದ್ದಾರೆ.

