ಚಂದನವನದ ತಾರಾ ನಟರಾದ ಶಿವರಾಜ್‌ಕುಮಾರ್ ಮತ್ತು ಡಾಲಿ ಧನಂಜಯ್ ಜೋಡಿಯಲ್ಲಿ ನಿರ್ಮಾಣವಾಗಿರುವ ಬಹುನಿರೀಕ್ಷಿತ '666 ಆಪರೇಷನ್ ಡ್ರೀಮ್ ಥಿಯೇಟರ್' ಸಿನಿಮಾದ ಟೀಸರ್ ಜುಲೈ 3ರಂದು ಬಿಡುಗಡೆಯಾಗಲಿದೆ.
ಹೇಮಂತ್ ಎಂ. ರಾವ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ 666 ಆಪರೇಷನ್ ಡ್ರೀಮ್ ಥಿಯೇಟರ್ ಸಿನಿಮಾದಲ್ಲಿ ಶಿವಣ್ಣ ಏಜೆಂಟ್ ಪ್ರಕಾಶ್ ಪಾತ್ರದಲ್ಲಿ ಹಾಗೂ ಡಾಲಿ ಧನಂಜಯ್ ಏಜೆಂಟ್ ಶಂಕರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ನಾಯಕಿಯಾಗಿ ಪ್ರಿಯಾಂಕಾ ಮೋಹನ್ ನಟಿಸಿದ್ದಾರೆ. ಅದಿತಿ ಬಾಲನ್ ಕೂಡ ಈ ಸಿನಿಮಾದ ಪ್ರಮುಖ ಏಜೆಂಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ವೈಶಾಖ್ ಜೆ ಗೌಡ ಅವರ ವೈಶಾಖ್ ಜೆ ಫಿಲ್ಡ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಿದ್ದು, ಕನ್ನಡ ಮತ್ತು ತೆಲುಗಿನಲ್ಲಿ ತೆರೆಕಾಣಲಿದೆ. ಮಾತ್ರವಲ್ಲದೆ, ಸಿನಿಮಾವು 70ರ ದಶಕದ ಶೈಲಿಯಲ್ಲಿದೆ. ಸದ್ಯ ಸಿನಿಮಾದ ಟೀಸರ್ ಬಿಡುಗಡೆಯ ದಿನಾಂಕವನನ್ನು ಚಿತ್ರತಂಡ ಘೋಷಿಸಿದ್ದು 2026 ಕೊನೆಯಲ್ಲಿ ಸಿನಿಮಾ ಬಿಡುಗಡೆಗೊಳ್ಳುವ ನಿರೀಕ್ಷೆ ಇದೆ.
ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಟೀಸರ್ ಬಿಡುಗಡೆಯ ಪೋಸ್ಟರ್ ಹಂಚಿಕೊಂಡಿರುವ ಶಿವಣ್ಣ, 'ಜುಲೈ 3ಕ್ಕೆ ಕನಸಿನ ಯೋಜನೆಯ ಅನಾವರಣ' ಎಂದು ಬರೆದುಕೊಂಡಿದ್ದಾರೆ.
'ಟಗರು' ಚಿತ್ರದಲ್ಲಿ ಶಿವಣ್ಣ ಪೊಲೀಸ್ ಅಧಿಕಾರಿಯಾಗಿ, ಡಾಲಿ ಅವರು ಖಳನಾಯಕನಾಗಿ ಕಾಣಿಸಿಕೊಂಡಿದ್ದರು. ಈ ಚಿತ್ರ ಭರ್ಜರಿ ಯಶ್ವಸಿ ಕಂಡಿತ್ತು. '666 ಆಪರೇಷನ್ ಡ್ರೀಮ್ ಥಿಯೇಟರ್' ಚಿತ್ರದ ಮೂಲಕ ಈ ಜೋಡಿ ಮತ್ತೆ ಒಟ್ಟಿಗೆ ತೆರೆ ಹಂಚಿಕೊಂಡಿರುವುದು ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಿಸಿದೆ.

