ರವಿಕುಮಾರ ಎಂ.ಹುಲಕುಂದ
ಬೈಲಹೊಂಗಲ: ನಗರದ ಇತಿಹಾಸ ಪ್ರಸಿದ್ಧ ಹಣಮಂತ ದೇವರ ದೇವಸ್ಥಾನ ಜಾತ್ರಾ ಮಹೋತ್ಸವದ ಅಂಗವಾಗಿ ಜುಲೈ 4 ರಂದು ಸಂಜೆ 4 ಕ್ಕೆ ಮಹಾರಥೋತ್ಸವ ನೆರವೇರಲಿದೆ.
ಭಕ್ತರ ಆರಾಧ್ಯ ದೈವವಾಗಿರುವ ಹಣಮಂತ ದೇವರ ವಾರ್ಷಿಕ ರಥೋತ್ಸವವು ಸಹಸ್ರಾರು ಭಕ್ತರ ಭಕ್ತಿಭಾವ, ಸಡಗರ, ಸಂಭ್ರಮ ಮತ್ತು ಸಾಂಸ್ಕೃತಿಕ ವೈಭವದ ನಡುವೆ ನಡೆಯಲಿದೆ.
ಈ ಭಾಗದ ಜನರ ಆರಾಧ್ಯ ದೈವವಾಗಿರುವ ಹಣಮಂತ ದೇವದ ದೇವಸ್ಥಾನವು ಜಾತ್ಯತೀತ ಸೌಹಾರ್ದದ ಸಂಕೇತವಾಗಿದೆ.
ಜಾತ್ರೆ ಅಂಗವಾಗಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಭಕ್ತರು ಮತ್ತು ಸಾರ್ವಜನಿಕರು ಉತ್ಸಾಹದಿಂದ ಭಾಗವಹಿಸಲಿದ್ದಾರೆ. ವಿಶೇಷ ಪೂಜೆ, ಭಜನೆ, ಧಾರ್ಮಿಕ ಆಚರಣೆ ಸೇರಿದಂತೆ ಅನೇಕ ಕಾರ್ಯಕ್ರಮಗಳು ಜಾತ್ರೆಯ ಮೆರುಗನ್ನು ಇನ್ನಷ್ಟು ಹೆಚ್ಚಿಸಿವೆ.
ಜಾತ್ರೆಯ ಪ್ರಮುಖ ಆಕರ್ಷಣೆಯಾಗಿ ಬೃಹತ್ ಉಯ್ಯಾಲೆಗಳು, ಮನರಂಜನಾ ಆಟಗಳು, ಕುಸ್ತಿ ಪಂದ್ಯಾಟ, ಜನರನ್ನು ಸೆಳೆಯುತ್ತಿವೆ. ದೇವಸ್ಥಾನ ಸುತ್ತಮುತ್ತ ಆಟಿಕೆಗಳು, ಗೃಹೋಪಯೋಗಿ ವಸ್ತುಗಳು, ವಿವಿಧ ವ್ಯಾಪಾರ ಮಳಿಗೆಗಳನ್ನು ಹಾಕಲಾಗಿದೆ.
ಜೀರ್ಣೋದ್ಧಾರಗೊಂಡು ನಿರ್ಮಾಣ ಹಂತದಲ್ಲಿರುವ ನೂತನ ದೇವಸ್ಥಾನವನ್ನು ಜಾತ್ರೆ ಅಂಗವಾಗಿ ವಿದ್ಯುತ್ ದೀಪಾಲಂಕಾರ, ಬಾಳೆಗಿಡಗಳು, ತಳಿರು ತೋರಣಗಳು, ಹೂವಿನ ಅಲಂಕಾರಗಳಿಂದ ಸುಂದರವಾಗಿ ಸಿಂಗರಿಸಲಾಗಿದೆ.
ಭಕ್ತಿ, ಪರಂಪರೆ, ಸಾಂಸ್ಕೃತಿಕ ವೈಭವ, ಜನಸಾಮಾನ್ಯರ ಸೌಹಾರ್ದವನ್ನು ಒಂದೇ ವೇದಿಕೆಯಲ್ಲಿ ಬೆಸೆಯುವ ಪ್ರಸಿದ್ಧ ಹಣಮಂತ ದೇವರ ರಥೋತ್ಸವವು ಈ ಭಾಗದ ಹೆಮ್ಮೆಯಾಗಿದೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260704-21-867125630

