ಕೋಲ್ಕತ್ತ: 'ಪಶ್ಚಿಮ ಬಂಗಾಳ ಪಡೆಯಬಹುದಾದ ಅತ್ಯುತ್ತಮ ಮುಖ್ಯಮಂತ್ರಿ ಸುವೇಂದು ಅಧಿಕಾರಿ. ಮುಂಬರುವ ದಿನಗಳಲ್ಲಿ ಅವರು ರಾಜ್ಯದಲ್ಲಿ ನಿಜವಾದ ಬದಲಾವಣೆಗಳನ್ನು ಮಾಡುತ್ತಾರೆ ಎಂಬ ವಿಶ್ವಾಸ ನನಗಿದೆ' ಎಂದು ಹಿರಿಯ ಬಿಜೆಪಿ ನಾಯಕ ಮಿಥುನ್ ಚಕ್ರವರ್ತಿ ಹೇಳಿದರು.
ಸುವೇಂದು ಅಧಿಕಾರಿ ಅವರು ಶನಿವಾರ ಮಿಥುನ್ ಚಕ್ರವರ್ತಿ ಅವರ ನಿವಾಸಕ್ಕೆ ಭೇಟಿ ನೀಡಿ ಒಂದು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದರು.
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಚಕ್ರವರ್ತಿ, 'ಸುವೇಂದು ಅಧಿಕಾರಿ ಅವರಿಗಿಂತ ಉತ್ತಮ ಮುಖ್ಯಮಂತ್ರಿ ಇರಲು ಸಾಧ್ಯವಿಲ್ಲ ಎಂದು ನಾನು ಜನರಿಗೆ ಭರವಸೆ ನೀಡಬಲ್ಲೆ. ಅವರೇ ಅತ್ಯುತ್ತಮ. ಪ್ರಮಾಣವಚನ ಸ್ವೀಕರಿಸಿದ ದಿನದಿಂದಲೇ ಕೆಲಸ ಮಾಡಲು ಪ್ರಾರಂಭಿಸಿದ್ದಾರೆ' ಎಂದು ತಿಳಿಸಿದರು.
'ಚಕ್ರವರ್ತಿ ಅವರು ಕಳೆದ ಐದಾರು ವರ್ಷಗಳಿಂದ ಪಕ್ಷಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ ಮತ್ತು ರಾಜ್ಯದಲ್ಲಿ ರಾಜಕೀಯ ಬದಲಾವಣೆಯನ್ನು ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ' ಎಂದು ಸುವೇಂದು ಅಧಿಕಾರಿ ಹೇಳಿದರು.
'ಚಕ್ರವರ್ತಿ ಅವರು ನನಗಿಂತ ಹಿರಿಯರು. ನಾನು ಅವರ ಆಶೀರ್ವಾದ ಪಡೆಯಲು ಬಂದಿದ್ದೆ. ಮಾಡಬೇಕಾದ ಅಭಿವೃದ್ಧಿ ಕೆಲಸಗಳ ಬಗ್ಗೆ ಚರ್ಚಿಸಿದ್ದೇವೆ. ಆದರೆ, ನಾವು ಚರ್ಚಿಸಿದ ಕಾರ್ಯಸೂಚಿ ವಿವರಗಳನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ' ಎಂದರು.
'ಚಕ್ರವರ್ತಿ ಅವರು ಯಾವುದೇ ಹುದ್ದೆಯನ್ನು ಬಯಸದ ಮಹನೀಯರಾಗಿದ್ದು, ರಾಜ್ಯದಾದ್ಯಂತ ಹೆಚ್ಚಿನ ಸಂಖ್ಯೆಯ ರ್‍ಯಾಲಿಗಳು ಮತ್ತು ಆಂತರಿಕ ಸಭೆಗಳನ್ನು ನಡೆಸುವ ಮೂಲಕ ಚುನಾವಣಾ ಪ್ರಚಾರದ ಸಮಯದಲ್ಲಿ ತಮ್ಮ ಸರ್ವಸ್ವವನ್ನೂ ಧಾರೆ ಎರೆದಿದ್ದಾರೆ' ಎಂದು ಅಧಿಕಾರಿ ಸ್ಮರಿಸಿದರು.
ಆರೋಗ್ಯ ಸಮಸ್ಯೆಗಳಿದ್ದಾಗಲೂ ಚಕ್ರವರ್ತಿ ಅವರು ಉತ್ತರ ಮತ್ತು ದಕ್ಷಿಣ ಬಂಗಾಳದಾದ್ಯಂತ ವ್ಯಾಪಕ ಪ್ರಚಾರ ನಡೆಸಿದ್ದರು. ಬಿಡುವಿಲ್ಲದ ಚುನಾವಣಾ ವೇಳಾಪಟ್ಟಿಯ ನಡುವೆ ದೈಹಿಕ ಶ್ರಮ ಉಂಟಾದರೂ ಪ್ರಚಾರವನ್ನು ಮುಂದುವರೆಸಿದ್ದರು' ಎಂದೂ ಅವರು ವಿವರಿಸಿದರು.

