ಮಂಜುನಾಥ ಎಸ್
ಬಂಗಾರಪೇಟೆ: ತಾಲ್ಲೂಕಿನಾದ್ಯಂತ ಸರ್ಕಾರಿ ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ವಿತರಿಸುವ ಕೋಳಿ ಮೊಟ್ಟೆ ದರ ಗಣನೀಯವಾಗಿ ಏರಿಕೆಯಾಗಿದ್ದು, ಶಾಲಾ ಮುಖ್ಯ ಶಿಕ್ಷಕರಿಗೆ ಮೊಟ್ಟೆ ಬಿಸಿ ತಟ್ಟಿದೆ.
ಮಾರುಕಟ್ಟೆಯಲ್ಲಿ ಮೊಟ್ಟೆಯ ಬೆಲೆ ದಿನದಿಂದ ದಿನಕ್ಕೆ ಏರುತ್ತಿದ್ದರೂ, ಸರ್ಕಾರ ಮಾತ್ರ ಹಳೆ ದರವನ್ನೇ ನಿಗದಿಪಡಿಸಿದೆ.
ಇದರಿಂದ ಮಕ್ಕಳಿಗೆ ಗುಣಮಟ್ಟದ ಮೊಟ್ಟೆ ವಿತರಿಸುವುದು ಹೇಗೆ ಎಂಬ ಚಿಂತೆ ಶಿಕ್ಷಕರು ಹಾಗೂ ಅಂಗನವಾಡಿ ಕಾರ್ಯಕರ್ತೆಯರನ್ನು ಕಾಡುತ್ತಿದೆ.
ಸರ್ಕಾರವು ಶಾಲಾ ಹಾಗೂ ಅಂಗನವಾಡಿ ಮಕ್ಕಳಿಗೆ ಪ್ರತಿ ಮೊಟ್ಟೆಗೆ ₹5 ರಿಂದ ₹5.50 ಮಾತ್ರ ಅನುದಾನ ನೀಡುತ್ತಿದೆ. ಆದರೆ, ಪ್ರಸ್ತುತ ಮಾರುಕಟ್ಟೆಯಲ್ಲಿ ₹7.50 ಗೆ ಮಾರಾಟವಾಗುತ್ತಿದೆ. ಪ್ರತಿ ಮೊಟ್ಟೆಗೆ ₹1.50 ಯಿಂದ ₹2ಕ್ಕೆ ಹೆಚ್ಚುವರಿ ಹೊರೆಯಾಗುತ್ತಿದೆ. ಮೊಟ್ಟೆ ನೀಡದಿದ್ದರೆ ಪೋಷಕರು ಹಾಗೂ ಮೇಲಧಿಕಾರಿಗಳು ಪ್ರಶ್ನಿಸುತ್ತಾರೆ. ಹೆಚ್ಚುವರಿ ಹೊರೆ ಭರಿಸಲು ಸಾಧ್ಯವಾಗುತ್ತಿಲ್ಲ ಎಂಬುದು ಮುಖ್ಯ ಶಿಕ್ಷಕರ ಅಳಲಾಗಿದೆ.
ಕೆಲವೆಡೆ ಅಂಗನವಾಡಿ ಕಾರ್ಯಕರ್ತೆಯರು ಸಾಲ ಮಾಡಿ ಮೊಟ್ಟೆ ಖರೀದಿಸುತ್ತಿದ್ದರೆ, ಇನ್ನೂ ಕೆಲವೆಡೆ ಸಣ್ಣ ಗಾತ್ರದ ಮೊಟ್ಟೆ ಖರೀದಿಸುತ್ತಿದ್ದಾರೆ. ಕೇವಲ ಮೊಟ್ಟೆ ಮಾತ್ರವಲ್ಲದೆ, ಬಿಸಿಯೂಟಕ್ಕೆ ಬಳಸುವ ತರಕಾರಿ, ಬೇಳೆ ಹಾಗೂ ಅಡುಗೆ ಅನಿಲ ದರವೂ ಗಗನಕ್ಕೇರಿದೆ. ಕ್ಷೀರಭಾಗ್ಯ ಯೋಜನೆಯಡಿ ನೀಡಲಾಗುವ ಹಾಲಿನ ನಿರ್ವಹಣೆಯೂ ದುಬಾರಿಯಾಗುತ್ತಿದೆ. ಇದರಿಂದಾಗಿ ಒಟ್ಟಾರೆ ಬಿಸಿಯೂಟದ ವ್ಯವಸ್ಥೆಯೇ ತಾಲ್ಲೂಕಿನಲ್ಲಿ ಕುಂಟುತ್ತಾ ಸಾಗುವ ಭೀತಿ ಎದುರಾಗಿದೆ.
ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಸರ್ಕಾರ ತಕ್ಷಣವೇ ಮೊಟ್ಟೆಯ ಅನುದಾನವನ್ನು ಹೆಚ್ಚಿಸಬೇಕು. ಇಲ್ಲವೇ ಸರ್ಕಾರವೇ ನೇರವಾಗಿ ಟೆಂಡರ್ ಪ್ರಕ್ರಿಯೆ ಮೂಲಕ ಶಾಲೆಗಳಿಗೆ ಮೊಟ್ಟೆ ಸರಬರಾಜು ಮಾಡುವ ವ್ಯವಸ್ಥೆ ಜಾರಿಗೆ ತರಬೇಕು ಎಂಬುದು ಪೋಷಕ ಮುನಿರಾಜು ಅವರ ಮಾತಾಗಿದೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260704-18-745720822

