Dailyhunt Logo
  • Light mode
    Follow system
    Dark mode
    • Play Story
    • App Story
ಬನ್ನಿ, ಬಿದಿರು ಬೆಳೆಯಿರಿ, ಆದಾಯ ಪಡೆಯಿರಿ: ಇಲ್ಲಿದೆ ತರಬೇತಿ

ಬನ್ನಿ, ಬಿದಿರು ಬೆಳೆಯಿರಿ, ಆದಾಯ ಪಡೆಯಿರಿ: ಇಲ್ಲಿದೆ ತರಬೇತಿ

‌ಬೆಂಗಳೂರು: ಬಿದಿರು ಬೆಳೆಯಲು ಕೇಂದ್ರ ಸರ್ಕಾರವು ವಿಶೇಷ ಯೋಜನೆಗಳನ್ನು ಜಾರಿಗೊಳಿಸಿ ಉತ್ತೇಜನವನ್ನೂ ನೀಡುತ್ತಿದೆ. ಇದಕ್ಕಾಗಿ ಪ್ರತ್ಯೇಕ ಮಿಷನ್‌ ಅನ್ನು ಪ್ರಾರಂಭಿಸಿದ್ದು, ಕರ್ನಾಟಕದಲ್ಲೂ ಇದನ್ನು ಜಾರಿಗೊಳಿಸಲಾಗಿದೆ.

ವಾಣಿಜ್ಯ ಉದ್ದೇಶಕ್ಕೆ ಸೂಕ್ತವಾದ ಬಿದಿರಿನ ತಳಿಗಳ ಪರಿಚಯ ಮತ್ತು ಬಿದಿರಿನ ಕೃಷಿಯ ಪರಿಚಯ ಮಾಡಿಕೊಡುವ ಉದ್ದೇಶದಿಂದ ಸಹಜ ಸಮೃದ್ಧ - ಸಾವಯವ ಕೃಷಿಕರ ಬಳಗವು 2026ರ ಜೂನ್‌13 ರಂದು ಮೈಸೂರಿನ ನಂಜಬಹದ್ದೂರು ಛತ್ರದಲ್ಲಿ 'ಬಿದಿರಿನ ಬೇಸಾಯ' ತರಬೇತಿ ಕಾರ್ಯಕ್ರಮ ಹಮ್ಮಿಕೊಂಡಿದೆ.

ಮೈಸೂರು, ಚಾಮರಾಜನಗರ, ಕೊಡಗಿನ ಕಾಡಂಚಿನ ರೈತರು ಕಾಡು ಪ್ರಾಣಿಗಳ ಹಾವಳಿಯಿಂದ ಸೋತಿದ್ದಾರೆ. ಅಲ್ಲೆಲ್ಲಾ ಬಿದಿರು ನೆಲೆಯೂರಿದರೆ ರೈತರಿಗೆ ಆದಾಯದ ಮೂಲ ತೆರೆದುಕೊಳ್ಳುತ್ತದೆ. ಕಾಡುಪ್ರಾಣಿಗಳಿಗೆ ಆಹಾರವೂ ಸಿಗುತ್ತದೆ. ಕನ್ನಂಬಾಡಿ ಕಾಲುವೆಗಳ ಅಂಚಿನಲ್ಲಿ ಬಿದಿರು ಬೆಳೆಯುವ ಅವಕಾಶ ವಿಪುಲವಾಗಿದೆ ಎಂದು ಸಹಜ ಸಮೃದ್ದ ಬಳಗದ ಜಿ. ಕೃಷ್ಣಪ್ರಸಾದ್‌ ತಿಳಿಸಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಮಳೆ ಕಣ್ಣಾಮುಚ್ಚಾಲೆಯಾಡುತ್ತಿದೆ. ಒಂದು ವರ್ಷ ಬರಗಾಲ; ಇನ್ನೊಂದು ವರ್ಷ ಬಿಡದೇ ಸುರಿವ ಮಳೆ. ಈ ನಡುವೆ ಕಾಡು ಪ್ರಾಣಿ, ಕೂಲಿಕಾರರ ಸಮಸ್ಯೆಯಿಂದ ಕೃಷಿ ಮಾಡಲಾಗದ ಪರಿಸ್ಥಿತಿ. ಬದಲಾದ ಪರಿಸ್ಥಿತಿಗೆ ಅನುಗುಣವಾಗಿ ಕೃಷಿ ಅರಣ್ಯ ಕಲ್ಪನೆಯನ್ನು ಸಾಕಾರಗೊಳಿಸಬೇಕಿದೆ. ಈ ನಿಟ್ಟಿನಲ್ಲಿ ಬಿದಿರು ರೈತರ ಆಶಾಕಿರಣವಾಗಿದೆ. ಒಮ್ಮೆ ನೆಟ್ಟು ಕಾಳಜಿ ಮಾಡಿದರೆ, ತನ್ನ ಪಾಡಿಗೆ ತಾನು ಬೆಳೆಯುತ್ತದೆ; ಆದಾಯ ತಂದು ಕೊಡುತ್ತದೆ.

ಸಾರವಿಲ್ಲದ ಮಣ್ಣಿನಲ್ಲೂ ಬಿದಿರು ಹುಲುಸಾಗಿ ಬೆಳೆಯುವುದರಿಂದ, ಪಾಳು ಬಿದ್ದ, ಕಲ್ಲು ಬಂಡೆ ಇರುವ ಜಾಗಗಳಲ್ಲೂ ಬಿದಿರನ್ನು ಸುಲಭನಾಗಿ ಬೆಳೆಯಬಹುದು.‌ ನೆಟ್ಟ ಮೊದಲ ಮೂರು ವರ್ಷ ಆರೈಕೆ ಮಾಡಿದರೆ, ಮುಂದಿನ 30 ರಿಂದ 100 ವರ್ಷಗಳವರೆಗೆ ನಮಗೆ ನಿರಂತರವಾಗಿ ಆದಾಯ ತರುತ್ತದೆ.

ಬಿದಿರಿನಲ್ಲಿ 1500 ಕ್ಕೂ ಹೆಚ್ಚು ತಳಿಗಳಿವೆ. ಬೇಲಿಗೆ ಬಳಕೆಯಾಗುವ ಸಣ್ಣ ಬಿದಿರಿನಿಂದ ಹಿಡಿದು ನೂರು ಅಡಿ ಮೀರಿ ನೆಳೆಯುವ ಕೊಲಂಬಿಯಾ ಬಿದಿರಿನವರೆಗೆ ಇದರ ವೈವಿಧ್ಯ ಹಬ್ಬಿದೆ. ವಾಣಿಜ್ಯ ಉದ್ದೇಶಕ್ಕೆ ಸೂಕ್ತವಾದ ಹೆಬ್ಬಿದಿರು,ಶೆಮೆ ಬಿದಿರು, ಕಪ್ಪು ಬಿದಿರು, ಬರ್ಮಾ ಬಿದಿರು,ಗೋಲ್ಡನ್ ಬಿದಿರು, ಕೊಳಲು ಬಿದಿರು, ಒಂಟಿ ಬಿದಿರು ಜನಪ್ರಿಯ ತಳಿಗಳಾಗಿವೆ. ಅಲಂಕಾರಿಕ ಬಿದಿರಿನ ತಳಿಗಳಾದ ಹಳದಿ ಬಿದಿರು ಮತ್ತು ಬುದ್ಧ ಬಿದಿರುಗಳನ್ನು ನಗರವಾಸಿಗಳೂ ಬೆಳೆಸಬಹುದು ಎನ್ನುವುದು ಕೃಷ್ಣಪ್ರಸಾದ್ ಅವರ ವಿವರಣೆ.

ಬಿದಿರಿನ ತಳಿಗಳ ಪ್ರದರ್ಶನ ಮತ್ತು ಮಾರಾಟ ಏರ್ಪಾಡಾಗಿದೆ. ಆಸಕ್ತರು ಕೋಮಲ್ 98809 08608 ಸಂಪರ್ಕಿಸಬಹುದು.

ಬಿದಿರು ಕುರಿತು ತರಬೇತಿ

Dailyhunt
Disclaimer: This content has not been generated, created or edited by Dailyhunt. Publisher: Prajavani