ಮುಂಬೈ: ಬಾಲಿವುಡ್‌ನ ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಲವ್ & ವಾರ್ ಚಿತ್ರದ ಸೆಟ್‌ನಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದ್ದಾರೆ.
ಸದ್ಯ ಈ ವಿಚಾರ ವಿವಾದ ಸೃಷ್ಟಿಸಿದೆ. ವರದಿಗಳ ಪ್ರಕಾರ, ಮುಂಬೈನ ರಾಯಲ್ ಪಂಪ್ ಸ್ಟುಡಿಯೊ ಫಿಲ್ಮ್‌ಸಿಟಿಯಲ್ಲಿ 42 ವರ್ಷದ ಚಂದ್ರಾಧರಿ ಸಿಂಗ್ ಯಾದವ್ ಎನ್ನುವ ವ್ಯಕ್ತಿ ಚಿತ್ರೀಕರಣದ ನಡೆಯಬೇಕಿದ್ದ ಜಾಗದಲ್ಲಿ ಮರದ ಕೆಲಸ ಮಾಡುತ್ತಿದ್ದಾಗ ವಿದ್ಯುತ್ ಅವಘಡ ಸಂಭವಿಸಿದೆ.
ಚಂದ್ರಾಧರಿ ಅವರಿಗೆ ಪತ್ನಿ ಮತ್ತು ಮಗಳಿದ್ದಾಳೆ. ಅವರು ಶಾರ್ಟ್ ಸರ್ಕೀಟ್‌ನಿಂದ ಮೃತಪಟ್ಟಿದ್ದಾರೆ ಎಂದೂ ಕೆಲವು ವರದಿ ತಿಳಿಸಿದೆ.
ಈ ಘಟನೆಯ ಬಳಿಕ ಬನ್ಸಾಲಿ ಪ್ರೊಡಕ್ಷನ್ಸ್ ₹40 ಲಕ್ಷ ಪರಿಹಾರ ಘೋಷಿಸಿದೆ. ಆದರೆ ಪಶ್ಚಿಮ ಭಾರತ ಸಿನಿಮಾ ನೌಕರರ ಒಕ್ಕೂಟ (ಎಫ್‌ಡಬ್ಲ್ಯೂಐಸಿಇ) ₹50 ಲಕ್ಷ ಪರಿಹಾರ ನೀಡುವಂತೆ ಆಗ್ರಹಿಸಿದೆ.
'₹50 ಲಕ್ಷ ನೀಡುವುದರಿಂದ ಮೃತ ವ್ಯಕ್ತಿಯ ಮಗಳ ಓದಿಗೆ ಅನುಕೂಲವಾಗಲಿದೆ. ಚಿತ್ರೀಕರಣದ ಸೆಟ್‌ನಲ್ಲಿ ಸರಿಯಾದ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ. ಚಂದ್ರಾಧರಿ ಪ್ರತಿಭಾವಂತ ಕೆಲಸಗಾರನಾಗಿದ್ದ. ಅವನ ಸಾವು ನೋವಿನ ಸಂಗತಿಯಾಗಿದೆ' ಎಂದು ಎಫ್‌ಡಬ್ಲ್ಯೂಐಸಿಇ ಹೇಳಿದೆ.
ಚಂದ್ರಧಾರಿ ಅವರು ಹಗಲು ಇರುಳು ಎನ್ನದೆ ಸಿನಿಮಾಕ್ಕಾಗಿ ದುಡಿಯುತ್ತಿದ್ದರು. ಸಾಯುವುದಕ್ಕಿಂತ ಮುನ್ನ ಮೂರು ದಿನಗಳಿಂದ ನಿರಂತರವಾಗಿ ಬೆಳಿಗ್ಗೆ ಏಳು ಗಂಟೆಯಿಂದ ಮರುದಿನ ಬೆಳಗಿನ ಜಾವ 3 ಗಂಟೆಯವರೆಗೂ ಕೆಲಸ ಮಾಡಿದ್ದರು ಎಂದೂ ತಿಳಿದು ಬಂದಿರುವುದಾಗಿ 'ಡೆಕ್ಕನ್ ಹೆರಾಲ್ಡ್' ವರದಿ ಮಾಡಿದೆ.
ಸದ್ಯ ಬನ್ಸಾಲಿ ಪ್ರೊಡಕ್ಷನ್ಸ್ ರಾತ್ರಿ ವೇಳೆ ಚಿತ್ರೀಕರಣವನ್ನು ಸ್ಥಗಿತಗೊಳಿಸಿದೆ.
ಲವ್ & ವಾರ್ ಸಿನಿಮಾದಲ್ಲಿ ರಣಬೀರ್ ಕಪೂರ್, ವಿಕ್ಕಿ ಕೌಶಲ್ ಮತ್ತು ಆಲಿಯಾ ಭಟ್ ನಟಿಸುತ್ತಿದ್ದಾರೆ. ಈ ಸಿನಿಮಾ 2027ರ ಜನವರಿ 21ರಂದು ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಹೇಳಿದೆ.

