Dailyhunt Logo
  • Light mode
    Follow system
    Dark mode
    • Play Story
    • App Story

'ಬರದ ಸ್ಥಿತಿ: ವಿದ್ಯುತ್ ಉತ್ಪಾದನೆಗೆ ಗಮನ ಹರಿಸಿ' - ಡಿ.ಕೆ. ಶಿವಕುಮಾರ್

ಬೆಂಗಳೂರು: 'ಮಳೆ ಕೊರತೆಯಿಂದಾಗಿ ರಾಜ್ಯದಲ್ಲಿ ಈ ವರ್ಷ ಜಲವಿದ್ಯುತ್‌ ಉತ್ಪಾದನೆ ಕುಸಿಯುವ ಸಾಧ್ಯತೆ ಇದೆ. ಇದನ್ನು ಗಮನದಲ್ಲಿಟ್ಟುಕೊಂಡು ವಿಶೇಷ ತುರ್ತು ಕಾರ್ಯಯೋಜನೆ ರೂಪಿಸಿ ಮತ್ತು ಇತರೆ ಮೂಲಗಳ ವಿದ್ಯುತ್‌ ಉತ್ಪಾದನೆಗೆ ತುರ್ತು ಗಮನ ಹರಿಸಿ' ಎಂದು ಮುಖ್ಯಮಂತ್ರಿ ಡಿ.ಕೆ.

ಶಿವಕುಮಾರ್‌ ಅವರು ಇಂಧನ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶಿವಕುಮಾರ್ ಅವರು ಶುಕ್ರವಾರ ಇಂಧನ ಇಲಾಖೆಯ ಅಧಿಕಾರಿಗಳ ಜತೆಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಹಿಂದಿನ ವರ್ಷಕ್ಕೆ ಹೋಲಿಸಿದರೆ ಸದ್ಯ ನಮ್ಮಲ್ಲಿ ವಿದ್ಯುತ್‌ ಪೂರೈಕೆ ಸುಸ್ಥಿತಿಯಲ್ಲಿದೆ. ಹಿಂದಿನ ಮೂರು ವರ್ಷ ವಿದ್ಯುತ್‌ ಕಡಿತ ಇಲ್ಲದೆ ನಿರ್ವಹಿಸಿದ್ದೇವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, 'ಬರದ ಪರಿಸ್ಥಿತಿ ಎದುರಿಸಲು ಇಲಾಖೆ ಏನೇನು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ ಎನ್ನುವ ಬಗ್ಗೆ ವಿವರಗಳನ್ನು ಪಡೆದು ಸಾರ್ವಜನಿಕ ಬಳಕೆಗೆ ತೊಂದರೆ ಆಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಇಂಧನ ಭದ್ರತೆಗಾಗಿ ಸರ್ಕಾರಕ್ಕೆ ಮೀಸಲಾದ ಕಲ್ಲಿದ್ದಲು ಗಣಿಗಳನ್ನು ಕಾರ್ಯಾರಂಭಗೊಳಿಸಿ, ಸಾಕಷ್ಟು ಕಲ್ಲಿದ್ದಲು ಸಂಗ್ರಹವನ್ನು ನಿರಂತರವಾಗಿ ಕಾಯ್ದುಕೊಳ್ಳಬೇಕು' ಎಂದರು.

'ಸದ್ಯದ ಸ್ಥಿತಿಯಲ್ಲಿ ನವೀಕರಿಸಬಹುದಾದ ಇಂಧನದ ಸಮರ್ಥ ನಿರ್ವಹಣೆಗಾಗಿ ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಮ್‌ಗಳು, ಪಂಪ್ಡ್ ಸ್ಟೋರೇಜ್ ಯೋಜನೆಗಳನ್ನು ತ್ವರಿತವಾಗಿ ಜಾರಿಗೊಳಿಸಬೇಕು ಎಂದರು.

ಬಾಕಿ ಬಿಡುಗಡೆಗೆ ಮನವಿ: 'ಗೃಹಜ್ಯೋತಿ ಯೋಜನೆಯಿಂದಾಗಿ ಯಾವುದೇ ಹೊರೆ ಆಗಿಲ್ಲ. ಆದರೆ, ಸರ್ಕಾರಿ ಇಲಾಖೆಗಳು ಎಸ್ಕಾಂಗಳಿಗೆ ಪಾವತಿಸಬೇಕಿರುವ ₹12,631 ಕೋಟಿ ಬಾಕಿಯನ್ನು ತ್ವರಿತವಾಗಿ ಪಾವತಿಸುವುದು ಅಥವಾ ಹಣಕಾಸು ಭದ್ರತೆ ಒದಗಿಸಲು ಕ್ರಮ ಕೈಗೊಳ್ಳಬೇಕು' ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್‌ ಅವರು ಮುಖ್ಯಮಂತ್ರಿಯವರಿಗೆ ಮನವಿ ಮಾಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260704-15-399531635

Dailyhunt
Disclaimer: This content has not been generated, created or edited by Dailyhunt. Publisher: Prajavani