Dailyhunt Logo
  • Light mode
    Follow system
    Dark mode
    • Play Story
    • App Story
ಬರಡು ಭೂಮಿಗೆ ಜೀವ ತುಂಬುವ ಬಿದಿರು, ಚೀನಾಗಿಂತ 40 ವರ್ಷ ಹಿಂದುಳಿದಿದ್ದೇವೆ: ಪಟೇಲ್

ಬರಡು ಭೂಮಿಗೆ ಜೀವ ತುಂಬುವ ಬಿದಿರು, ಚೀನಾಗಿಂತ 40 ವರ್ಷ ಹಿಂದುಳಿದಿದ್ದೇವೆ: ಪಟೇಲ್

ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಎದುರಿಸುವ ನಿಟ್ಟಿನಲ್ಲಿ ಬಿದಿರು ಮಹತ್ವದ ಕೊಡುಗೆ ನೀಡಬಲ್ಲದು. ಈ ವಿಚಾರದಲ್ಲಿ ನಾವು ಚೀನಾಗಿಂತ 40 ವರ್ಷ ಹಿಂದಿದ್ದೇವೆ ಎಂದು 'ಬ್ಯಾಂಬೂ ಮ್ಯಾನ್ ಆಫ್ ಇಂಡಿಯಾ' ಖ್ಯಾತಿಯ ಪಾಷಾ ಪಟೇಲ್ ಹೇಳಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ಪರಿಸರ ಮತ್ತು ಸುಸ್ಥಿರ ಅಭಿವೃದ್ಧಿ ಕ್ರಿಯಾ ಪಡೆಯ ಕಾರ್ಯಕಾರಿ ಅಧ್ಯಕ್ಷರೂ ಆಗಿರುವ ಅವರು, ಬಿದಿರು ಹೇಗೆ ಪರಿಸರ ಮತ್ತು ಸುಸ್ಥಿರ ಕೃಷಿಗೆ ಕೊಡುಗೆ ನೀಡಬಲ್ಲದು ಎಂಬುದರ ಬಗ್ಗೆಯೂ ವಿವರವಾಗಿ ಮಾತನಾಡಿದ್ದಾರೆ.

ಮುಂಬೈ: ರಾಜ್ಯದಲ್ಲಿ ಸದ್ಯ ಎದುರಾಗಿರುವ ಬರ ಪರಿಸ್ಥಿತಿಯು ಕನಿಷ್ಠ ಎರಡು ವರ್ಷಗಳವರೆಗೆ ಪರಿಣಾಮಗಳನ್ನು ಉಂಟುಮಾಡುವ ಸಾಧ್ಯತೆ ಇದೆ ಎಂದು ಮಹಾರಾಷ್ಟ್ರದ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಪಾಷಾ ಪಟೇಲ್‌ ಹೇಳಿದ್ದಾರೆ.

ಬಿದಿರು ಬೆಳೆಯ ಮೂಲಕ ಮಹಾರಾಷ್ಟ್ರದಲ್ಲಿ ಸುಸ್ಥಿರ ಕೃಷಿ ಹಾಗೂ ಜೀವನೋಪಾಯಕ್ಕೆ ಉತ್ತೇಜನ ನೀಡುವ ಮೂಲಕ 'ಬ್ಯಾಂಬೂ ಮ್ಯಾನ್ ಆಫ್ ಇಂಡಿಯಾ' ಎಂದೇ ಜನಪ್ರಿಯರಾಗಿರುವ ಪಟೇಲ್‌, 'ಸದ್ಯ (ಬರ ಪರಿಸ್ಥಿತಿಗೆ ಸಂಬಂಧಿಸಿದಂತೆ) ನಾವು ನೋಡುತ್ತಿರುವುದು ಟ್ರೇಲರ್‌ ಮಾತ್ರ; ಮುಂದೆ ಇನ್ನೂ ಆಘಾತಕಾರಿ ಬೆಳವಣಿಗೆಗಳು ನಡೆಯಲಿವೆ' ಎಂದು ಎಚ್ಚರಿಸಿದ್ದಾರೆ.

'ಹವಾಮಾನ ಬದಲಾವಣೆಯ ಪರಿಣಾಮಗಳು ಮನೆ ಬಾಗಿಲಿಗೆ ಅಲ್ಲ; ಒಳಗೇ ಬಂದಿವೆ. ಬರ ಪರಿಸ್ಥಿತಿಯ ಪರಿಣಾಮಗಳು ಇನ್ನೂ ಎರಡು ವರ್ಷ ಮುಂದುವರಿಯಲಿವೆ. ಒಟ್ಟಾರೆ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಹವಾಮಾನ ಸ್ಥಿತಿಯೂ ಅಸ್ಥಿರವಾಗಿದೆ' ಎಂದಿದ್ದಾರೆ.

ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌, ಉಪಮುಖ್ಯಮಂತ್ರಿಗಳಾದ ಏಕನಾಥ ಶಿಂದೆ, ಸುನೇತ್ರಾ ಪವಾರ್ ಮತ್ತು ಸಚಿವರು ಬರ ಪರಿಶೀಲನೆ ಸಲುವಾಗಿ ರಾಜ್ಯದಲ್ಲಿ ಪ್ರವಾಸ ಕೈಗೊಂಡಿರುವಾಗಲೇ ಈ ಹೇಳಿಕೆ ನೀಡಿರುವ ಪಟೇಲ್, ಮಹಾರಾಷ್ಟ್ರದಲ್ಲಿನ ಅತಿ ಹೆಚ್ಚು ಬರ ಪೀಡಿತ ಪ್ರದೇಶಗಳಲ್ಲಿ ಒಂದಾದ ಲಾತೂರ್‌ ಜಿಲ್ಲೆಯವರು.

ಲಾತೂರ್‌ ಜಿಲ್ಲೆಯನ್ನೊಳಗೊಂಡ ಮರಾಠವಾಡ ಪ್ರದೇಶ, ವಿದರ್ಭ ಹಾಗೂ ಪಶ್ಚಿಮ ಮಹಾರಾಷ್ಟ್ರದ ಹಲವು ಭಾಗಗಳು ಸೂಪರ್‌ ಎಲ್‌ ನಿನೊ ಪರಿಣಾಮದಿಂದಾಗಿ ಬರದ ತೀವ್ರ ಪರಿಣಾಮ ಎದುರಿಸುತ್ತಿವೆ.

ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ


ಬರಡು ಭೂಮಿಗೆ ಜೀವ ತುಂಬುವ ಬಿದಿರು, ಚೀನಾಗಿಂತ 40 ವರ್ಷ ಹಿಂದುಳಿದಿದ್ದೇವೆ: 'ಬ್ಯಾಂಬೂ ಮ್ಯಾನ್ ಆಫ್ ಇಂಡಿಯಾ' ಖ್ಯಾತಿಯ ಪಾಷಾ ಪಟೇಲ್

ಒಂದು ಸಾಲಿನಲ್ಲಿಹವಾಮಾನ ಬದಲಾವಣೆ ಮತ್ತು ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಬಿದಿರು ಕೃಷಿಯನ್ನು ಉತ್ತೇಜಿಸುವ ಮೂಲಕ ಸುಸ್ಥಿರ ಭವಿಷ್ಯ ನಿರ್ಮಿಸಲು ಪಾಷಾ ಪಟೇಲ್ ಕರೆ ನೀಡಿದ್ದಾರೆ.

ಏನು? ಏಕೆ? ಹೇಗೆ?


ಹವಾಮಾನ ಬದಲಾವಣೆಗೆ ಬಿದಿರು ಹೇಗೆ ಪರಿಹಾರವಾಗಿದೆ?

ಬಿದಿರು ವಾತಾವರಣದ ಇಂಗಾಲದ ಡೈಆಕ್ಸೈಡ್ ಅನ್ನು ಹೀರಿಕೊಂಡು ಹೆಚ್ಚಿನ ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ. ಇದು ಮಣ್ಣಿನ ಸವಕಳಿಯನ್ನು ತಡೆದು, ಬರಡು ಭೂಮಿಯನ್ನು ಫಲವತ್ತಾಗಿಸುವ ಸಾಮರ್ಥ್ಯ ಹೊಂದಿದೆ.


ಬಿದಿರು ಕೃಷಿಯಲ್ಲಿ ಭಾರತ ಮತ್ತು ಚೀನಾ ನಡುವಿನ ಅಂತರವೇನು?

ಭಾರತವು ಬಿದಿರು ಕೃಷಿ ವಲಯದಲ್ಲಿ ಚೀನಾಗಿಂತ ಸುಮಾರು 40 ವರ್ಷಗಳಷ್ಟು ಹಿಂದಿದೆ. ಚೀನಾವು 50 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿದಿರು ಬೆಳೆದು 3.2 ಲಕ್ಷ ಕೋಟಿ ರೂ. ವಹಿವಾಟು ನಡೆಸುತ್ತಿದ್ದರೆ, ಭಾರತದ ವಹಿವಾಟು ಕೇವಲ 18,000 ಕೋಟಿ ರೂ.ಗಳಷ್ಟಿದೆ.


ಮಹಾರಾಷ್ಟ್ರ ಸರ್ಕಾರದ ಬಿದಿರು ಕೈಗಾರಿಕಾ ನೀತಿಯ ಉದ್ದೇಶವೇನು?

2025ರ ನೀತಿಯಡಿ ಪ್ರತಿ ಹೆಕ್ಟೇರ್‌ಗೆ 7.5 ಲಕ್ಷ ರೂ. ಸಹಾಯಧನ ನೀಡಲಾಗುತ್ತಿದೆ. ಇದರ ಮೂಲಕ 50,000 ಕೋಟಿ ರೂ. ಹೂಡಿಕೆ ಆಕರ್ಷಿಸಿ, 5 ಲಕ್ಷಕ್ಕೂ ಅಧಿಕ ಉದ್ಯೋಗ ಸೃಷ್ಟಿಸುವ ಗುರಿ ಹೊಂದಲಾಗಿದೆ.


ಬರ ಪರಿಸ್ಥಿತಿಯು ಮುಂದಿನ ದಿನಗಳಲ್ಲಿ ಹೇಗಿರಲಿದೆ?

ಮುಂಬರುವ ದಿನಗಳಲ್ಲಿ ಬರ ಮತ್ತು ಹವಾಮಾನ ವೈಪರೀತ್ಯದ ಪರಿಣಾಮಗಳು ಇನ್ನೂ ತೀವ್ರವಾಗಲಿದ್ದು, ಈ ಸಮಸ್ಯೆಗಳು ಕನಿಷ್ಠ ಮುಂದಿನ ಎರಡು ವರ್ಷಗಳವರೆಗೆ ಮುಂದುವರಿಯುವ ಆತಂಕವಿದೆ.


ರೈತರಿಗೆ ಬಿದಿರು ಕೃಷಿ ಹೇಗೆ ಆರ್ಥಿಕ ಭದ್ರತೆ ನೀಡುತ್ತದೆ?

ಬಿದಿರು ಒಮ್ಮೆ ನೆಟ್ಟರೆ ದೀರ್ಘಕಾಲದವರೆಗೆ ಬರುತ್ತದೆ ಮತ್ತು ಅನಿರೀಕ್ಷಿತ ಹವಾಮಾನ ಬದಲಾವಣೆಗಳಿಗೆ ಅಷ್ಟು ಸುಲಭವಾಗಿ ಹಾಳಾಗುವುದಿಲ್ಲ. ಇದು ಕಡಿಮೆ ನೀರು ಹಾಗೂ ಗೊಬ್ಬರದಲ್ಲಿ ಬೆಳೆಯುವ ಸುಸ್ಥಿರ ಬೆಳೆಯಾಗಿದೆ.

ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ

ವಿಧಾನ ಪರಿಷತ್‌ನ ಮಾಜಿ ಸದಸ್ಯರೂ ಆಗಿರುವ ಪಟೇಲ್‌, 'ನಾವು ಬದುಕಬೇಕು, ಮನುಕುಲ ಉಳಿಯಬೇಕು ಎಂದರೆ ಪಳೆಯುಳಿಕೆ ಇಂಧನ ದಹಿಸುವುದನ್ನು ನಿಲ್ಲಿಸಿ ಜೈವಿಕ ಇಂಧನ ಬಳಕೆ ಹೆಚ್ಚಿಸಬೇಕು' ಎಂದು ಕರೆ ನೀಡಿದ್ದಾರೆ.

'ರೈತರು ಆಹಾರವನ್ನಷ್ಟೇ ಅಲ್ಲ, ಚೈತನ್ಯವನ್ನೂ ತುಂಬುತ್ತಿದ್ದಾರೆ' ಎಂಬ ಪ್ರಧಾನಿ ಮೋದಿ ಅವರ ಮಾತನ್ನು ಉಲ್ಲೇಖಿಸಿರುವ ಪಟೇಲ್‌, 'ಶಕ್ತಿ ಅಥವಾ ಚೈತನ್ಯವು ಭೂಮಿಯ ತಳದಿಂದಲ್ಲ, ಮೇಲಿನಿಂದ ಬರಬೇಕು. ಹವಾಮಾನ ಬದಲಾವಣೆಯನ್ನು ಪರಿಹರಿಸುವುದು ಸದ್ಯದ ತುರ್ತು. ಇಲ್ಲವಾದರೆ ಬರ, ಪ್ರವಾಹ ಸ್ಥಿತಿಗಳು ಆಗಾಗ್ಗೆ ಎದುರಾಗುತ್ತಲೇ ಇರುತ್ತವೆ' ಎಂದು ಎಚ್ಚರಿಸಿದ್ದಾರೆ.

'ಬ್ಯಾಂಬೂ ಮ್ಯಾನ್ ಆಫ್ ಇಂಡಿಯಾ' ಖ್ಯಾತಿಯಾ ಪಾಷಾ ಪಟೇಲ್

'ಗಾಳಿಯಲ್ಲಿನ ಮಾಲಿನ್ಯಕಾರಕ ಕಣಗಳ ಸಾಂದ್ರತೆಯು 350 ಪಿಪಿಎಂ ಇದ್ದರೆ ಸುರಕ್ಷಿತ ಎಂದು ಪರಿಗಣಿಸಲಾಗುತ್ತದೆ. ಆದರೆ, ಅದು ಈಗ 430 ಪಿಪಿಎಂಗೆ ತಲುಪಿದೆ. 2050ರ ವೇಳೆಗೆ 450 ಪಿಪಿಎಂಗೆ ಏರಬಹುದು ಎಂದು ಅಂದಾಜಿಸಲಾಗಿದೆ. ಆಗ ಭೂಮಿ ನರಕದಂತೆ ಅನಿಸುತ್ತದೆ. ಇಲ್ಲಿ ಬದುಕಲು ಯಾರೂ ಇಷ್ಟಪಡುವುದಿಲ್ಲ' ಎಂದು ಅಭಿಪ್ರಾಯಪಟ್ಟಿದ್ದಾರೆ.

'ಚೀನಾಗಿಂತ ಹಿಂದೆ ಇದ್ದೇವೆ'
ವಾಯುಮಾಲಿನ್ಯ, ಹವಾಮಾನ ವೈಪರೀತ್ಯಕ್ಕೆ ಸಂಬಂಧಿಸಿದ ಚರ್ಚೆಯ ನಡುವೆ, ಬಿದಿರಿನ ವಿಚಾರವನ್ನು ಪ್ರಸ್ತಾಪಿಸಿರುವ ಪಟೇಲ್‌, ಚೀನಾ ಮಾದರಿಯನ್ನು ಉದಾಹರಣೆಯಾಗಿ ನೀಡಿದ್ದಾರೆ.

'ಚೀನಾದಲ್ಲಿ 50 ಲಕ್ಷ ಹೆಕ್ಟೇರ್‌ನಷ್ಟು ಬಿದಿರು ಇದ್ದು, ₹ 3.2 ಲಕ್ಷ ಕೋಟಿ ವಹಿವಾಟು ನಡೆಯುತ್ತದೆ. ನಮ್ಮಲ್ಲಿ, 100 ಲಕ್ಷ ಹೆಕ್ಟೇರ್ ಬಿದಿರು ಇದ್ದರೂ, ವಹಿವಾಟು ₹ 18,000 ಕೋಟಿ ಅಷ್ಟೇ. ನಾವು ಅವರಿಗಿಂತ ಸುಮಾರು 40 ವರ್ಷ ಹಿಂದೆ ಇದ್ದೇವೆ' ಎನ್ನುತ್ತಲೇ, ಅಲ್ಲಿ (ಚೀನಾದಲ್ಲಿ) ಒಂದೇ ತಳಿಯ ಬಿದಿರು ಬೆಳೆಯಲು ಹೆಚ್ಚಿನ ಆಸಕ್ತಿ ವಹಿಸಲಾಗುತ್ತದೆ ಎಂದು ವಿವರಿಸಿದ್ದಾರೆ.

'ಮಹಾರಾಷ್ಟ್ರದಲ್ಲಿ ಬಿದಿರು ಬೆಳೆಗೆ ಪ್ರತಿ ಹೆಕ್ಟೇರ್‌ಗೆ ₹ 7.5 ಲಕ್ಷದವರೆಗೂ ಸಹಾಯಧನ ನೀಡಲಾಗುತ್ತಿದೆ. ಸುಮಾರು ₹ 50,000 ಕೋಟಿ ಹೂಡಿಕೆಯನ್ನು ಆಕರ್ಷಿಸುವುದು, 5 ಲಕ್ಷಕ್ಕೂ ಅಧಿಕ ಉದ್ಯೋಗ ಸೃಷ್ಟಿಸುವುದು ಮತ್ತು 15 ಬಿದಿರು ಉತ್ಪನ್ನಗಳ ಕೈಗಾರಿಕಾ ಕ್ಲಸ್ಟರ್‌ ಅಭಿವೃದ್ಧಿಪಡಿಸುವ ಗುರಿಯನ್ನು 'ಮಹಾರಾಷ್ಟ್ರ ಬಿದಿರು ಕೈಗಾರಿಕಾ ನೀತಿ 2025' ಅಡಿಯಲ್ಲಿ ಹಾಕಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಏಷ್ಯನ್‌ ಅಭಿವೃದ್ಧಿ ಬ್ಯಾಂಕ್‌ನಿಂದ ₹ 4,300 ಕೋಟಿ ಪಡೆಯಲಾಗಿದ್ದು, ರೈತರಿಗಾಗಿ ಬಿದಿರು ಖರೀದಿ ಕೇಂದ್ರಗಳನ್ನೂ ರಾಜ್ಯದಲ್ಲಿ ಸ್ಥಾಪಿಸಲಾಗುತ್ತದೆ' ಎಂದು ಮಾಹಿತಿ ನೀಡಿದ್ದಾರೆ.

'ಬಿದಿರು ಗಾಳಿಯಲ್ಲಿರುವ ಇಂಗಾಲದ ಡೈಆಕ್ಸೈಡ್ ಅನ್ನು ದೊಡ್ಡ ಪ್ರಮಾಣದಲ್ಲಿ ಹೀರಿಕೊಂಡು, ಆಮ್ಲಜನಕವನ್ನು ಹೊರಬಿಡುತ್ತದೆ. ಹವಾಮಾನ ಬದಲಾವಣೆಯ ಕೆಟ್ಟ ಪರಿಣಾಮಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ವರದಾನವಾಗಿದೆ. ಬಿದಿರಿನ ಬೇರುಗಳು ಮಣ್ಣಿನ ಸವಕಳಿಯನ್ನೂ ತಡೆದು, ಫಲವತ್ತತೆಯನ್ನು ಕಾಪಾಡುತ್ತವೆ. ಬರಡು ಭೂಮಿಗೆ ಜೀವ ತುಂಬುತ್ತವೆ. ಕಡಿಮೆ ನೀರು ಮತ್ತು ಅತಿ ಕಡಿಮೆ ಗೊಬ್ಬರದಲ್ಲಿ ಬೆಳೆಯುವ ಇದು, ಸುಸ್ಥಿರ ಕೃಷಿಗೆ ಸೂಕ್ತವಾದ ಬೆಳೆ' ಎಂದು ಪ್ರತಿಪಾದಿಸಿದ್ದಾರೆ.

'ಬಿದಿರು ಸ್ಥಿರ ಕೃಷಿಯ ಜೊತೆಗೆ ಹವಾಮಾನ ವೈಪರೀತ್ಯವನ್ನು ಹಿಮ್ಮೆಟ್ಟಿಸುವ ಸಾಮರ್ಥ್ಯವನ್ನೂ ರೈತರಿಗೆ ನೀಡುತ್ತದೆ. ಹತ್ತಿ, ಸೋಯಾಬೀನ್‌ ಅಥವಾ ಇನ್ಯಾವುದೇ ಬೆಳೆಯಂತೆ ಅನಿರೀಕ್ಷಿತ ಹವಾಮಾನದ ಕಾರಣದಿಂದಾಗಿ ಬಿದಿರು ಹಾಳಾಗುವುದಿಲ್ಲ. ಒಮ್ಮೆ ನೆಟ್ಟರೆ, ಕಡಿಮೆ ಹಾರೈಕೆಯಲ್ಲಿಯೂ ದೀರ್ಘಾವಧಿವರೆಗೆ ಬೆಳೆಯುತ್ತದೆ. ಆರ್ಥಿಕ ಭದ್ರತೆಯನ್ನೂ ನೀಡುತ್ತದೆ' ಎಂದು ವಿವರಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Prajavani