Dailyhunt Logo
  • Light mode
    Follow system
    Dark mode
    • Play Story
    • App Story
ಬರಗಾಲಕ್ಕೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಸುಧಾಕರ್ ಒತ್ತಾಯ

ಬರಗಾಲಕ್ಕೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಸುಧಾಕರ್ ಒತ್ತಾಯ

ಚಿಕ್ಕಬಳ್ಳಾಪುರ: 'ರಾಜ್ಯದಲ್ಲಿ ಮಳೆ ಕೊರತೆ ಆಗಿದ್ದು ಸರ್ಕಾರ ಬರಗಾಲಕ್ಕೆ ಸಂಬಂಧಿಸಿದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಮೋಡ ಬಿತ್ತನೆ ಅಗತ್ಯವಿದ್ದರೆ ಅದರ ಕುರಿತು ಸಮಗ್ರ ಅಧ್ಯಯನ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು' ಎಂದು ಸಂಸದ ಡಾ. ಕೆ. ಸುಧಾಕರ್ ಶನಿವಾರ ಒತ್ತಾಯಿಸಿದರು.

'ಮುಖ್ಯಮಂತ್ರಿ ಹುದ್ದೆಗೆ ಯಾರು ಬರುತ್ತಾರೆ ಎಂಬುದಕ್ಕೂ ಮಳೆ ಕೊರತೆಯಾಗುವುದಕ್ಕೂ ಯಾವುದೇ ಸಂಬಂಧ ಇಲ್ಲ. ಆದರೆ ರಾಜ್ಯದಲ್ಲಿ ಎದುರಾಗಿರುವ ಮಳೆ ಕೊರತೆಯ ಪರಿಸ್ಥಿತಿಯನ್ನು ಎದುರಿಸಲು ರಾಜ್ಯ ಸರ್ಕಾರ ಪೂರ್ವಸಿದ್ಧತೆಯನ್ನು ಮಾಡಿಕೊಳ್ಳುವುದು ಅಗತ್ಯ' ಎಂದು ಸುದ್ದಿಗಾರರ ಬಳಿ ಪ್ರತಿಕ್ರಿಯಿಸಿದರು.

ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆಗೆ ಇನ್ನೂ ಸಚಿವರನ್ನು ನೇಮಕ ಮಾಡದಿರುವುದನ್ನು ಉಲ್ಲೇಖಿಸಿದ ಅವರು, 'ರೈತರ ಹಿತದೃಷ್ಟಿಯಿಂದ ತಕ್ಷಣವೇ ಸಚಿವರನ್ನು ನೇಮಿಸಿ, ಬರಗಾಲ ಎದುರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು' ಎಂದು ಆಗ್ರಹಿಸಿದರು.

ಮನೆ ಮನೆಗೆ ತೆರಳಿ ಎಸ್‌ಐಆರ್‌ ನಡೆಸಲಿ: ಎಸ್‌ಐಆರ್‌ ಪ್ರಕ್ರಿಯೆ ನಡೆಸುವ ಅಧಿಕಾರಿಗಳು ಮತದಾರರ ಮನೆಗಳಿಗೆ ತೆರಳಿ ಅರ್ಜಿ ಭರ್ತಿ ಮಾಡಿಸಬೇಕು. ಮಸೀದಿ, ಕಲ್ಯಾಣ ಮಂಟಪ ಅಥವಾ ಸರ್ಕಾರಿ ಕಚೇರಿಗಳಲ್ಲಿ ಅರ್ಜಿ ಭರ್ತಿ ಮಾಡುವ ಕ್ರಮ ಸರಿಯಲ್ಲ ಎಂದು ಅವರು ಹೇಳಿದರು.

ಅಧಿಕಾರಿಗಳು ಬಿಎಲ್‌ಎ ಕಾರ್ಯಕರ್ತರನ್ನು ಜೊತೆಯಲ್ಲಿ ಕರೆದುಕೊಂಡು ಹೋಗಬಹುದು. ಆದರೆ ಯಾವುದೇ ಒತ್ತಡಕ್ಕೆ ಒಳಗಾಗದೆ ಮನೆ ಮನೆಗೆ ಭೇಟಿ ನೀಡಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.

ಜಾತಿ ರಕ್ಷಣಾ ಕವಚ ಆಗಬಾರದು: 'ತನ್ನ ಮೇಲೆ ವಿಶ್ವಾಸವಿಲ್ಲದ ರಾಜಕಾರಣಿ ಜಾತಿ ಆಶ್ರಯ ಪಡೆಯಲು ಮುಂದಾಗುತ್ತಾನೆ. ಜಾತಿ ಎಂಬುದು ಯಾರಿಗೂ ರಕ್ಷಣಾ ಕವಚವಾಗಬಾರದು' ಎಂದು ಸುಧಾಕರ್ ಹೇಳಿದರು.

'ಕೈವಾರ ತಾತಯ್ಯನವರ ಮೇಲೆ ನನಗೂ ಅಪಾರ ಭಕ್ತಿ ಇದೆ. ಬಲಿಜ ಸಮುದಾಯದ ಎಲ್ಲರೂ ಇಂತಹ ಕೃತ್ಯಗಳಲ್ಲಿ ಭಾಗಿಯಾಗಿಲ್ಲ. ಕೆಲವರು ಮಾತ್ರ ಅಂತಹ ಕೆಲಸ ಮಾಡಿದ್ದಾರೆ. ಬಲಿಜ ಸಮುದಾಯದ ಅನೇಕ ಮುಖಂಡರು ನನ್ನೊಂದಿಗೆ ಇದ್ದಾರೆ. ಕ್ಷೇತ್ರದ ಎಲ್ಲ ಸಮುದಾಯದ ಜನರೊಂದಿಗೆ ಸಹೋದರಭಾವದಿಂದ ಇದ್ದೇನೆ' ಎಂದರು.

ರಾಮಮಂದಿರ ಕಳ್ಳತನ ಖಂಡನೆ: ಅಯೋಧ್ಯೆಯ ರಾಮಮಂದಿರದಲ್ಲಿ ಹುಂಡಿ ಹಣ ಕಳವಾಗಿರುವುದು ದುರದೃಷ್ಟಕರ. ಪ್ರಕರಣದ ವಿರುದ್ಧ ಉತ್ತರ ಪ್ರದೇಶ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು, ಕಳ್ಳತನ ನಡೆಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ಅದನ್ನು ರಾಜಕೀಯ ವಿಚಾರವನ್ನಾಗಿ ಮಾಡಬಾರದು ಎಂದು ಹೇಳಿದರು.

'ಈ ಹಿಂದೆ ಅನೇಕ ದೇವಾಲಯಗಳಲ್ಲಿಯೂ ಇಂತಹ ಘಟನೆ ನಡೆದಿವೆ. ಇದು ಸಿಬ್ಬಂದಿ ಹಂತದಲ್ಲೇ ನಡೆದಿರುವ ಪ್ರಕರಣ' ಎಂದ ಅವರು, 'ರಾಮನ ಕುರಿತು ಈ ಹಿಂದೆ ಬೇರೆ ನಿಲುವು ಹೊಂದಿದ್ದವರು ಈಗ ರಾಜಕೀಯ ಉದ್ದೇಶದಿಂದ ಆರೋಪ ಮಾಡುತ್ತಿದ್ದಾರೆ' ಎಂದು ಕಾಂಗ್ರೆಸ್‌ ವಿರುದ್ಧ ಹರಿಹಾಯ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260705-16-920395642

Dailyhunt
Disclaimer: This content has not been generated, created or edited by Dailyhunt. Publisher: Prajavani