ಗಂಗಾವತಿ: ಧರ್ಮ ರಕ್ಷಣೆಯ ಮಹಾಸಂಕಲ್ಪದ ಭಾಗವಾಗಿ ಕೊಲ್ಲಾಪುರದ ಕನೇರಿಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಮಂಗಳವಾರ ಸಂಜೆ 4 ಗಂಟೆಗೆ ಇಲ್ಲಿನ ಜೂನಿಯರ್ ಕಾಲೇಜು ಮೈದಾನದ ಆವರಣದಲ್ಲಿ ಬಸವಾದಿ ಶರಣರ ಹಿಂದೂ ಸಮಾವೇಶ ಜರುಗಲಿದೆ.
ಕಾಡಸಿದ್ದೇಶ್ವರ ಸ್ವಾಮೀಜಿ ಬಸವ ಸಂಸ್ಕೃತಿ ಅಭಿಯಾನಕ್ಕೆ ಅವಮಾನಿಸಿದ್ದು, ಸಮಾವೇಶಕ್ಕೆ ಅವಕಾಶ ಕೊಡಬಾರದು ಎಂದು ವಿವಿಧ ಬಸವ ಸಂಘಟನೆಗಳು ಗಂಗಾವತಿ ಹಾಗೂ ಕೊಪ್ಪಳದಲ್ಲಿ ಮನವಿ ಸಲ್ಲಿಸಿದ್ದವು.
ಈ ವಿರೋಧದ ನಡುವೆಯೂ ಸಮಾವೇಶವನ್ನು ಅಚ್ಚುಕಟ್ಟಾಗಿ ಹಾಗೂ ಅದ್ದೂರಿಯಾಗಿ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ನಗರದ ಪ್ರಮುಖ ರಸ್ತೆಗಳಲ್ಲಿ ಬ್ಯಾನರ್‌ಗಳನ್ನು ಅಳವಡಿಸಲಾಗಿದ್ದು ಕೇಸರಿ ಬಣ್ಣದ ಅಲಂಕಾರ ಮಾಡಲಾಗಿದೆ. ಶಾಸಕ ಜನಾರ್ದನ ರೆಡ್ಡಿ, ಮಾಜಿ ಶಾಸಕ ಪರಣ್ಣ ಮುನವಳ್ಳಿ ಸೇರಿದಂತೆ ಹಲವರು ಸೋಮವಾರ ಸಿದ್ಧತಾ ಕಾರ್ಯ ಪರಿಶೀಲಿಸಿದರು.
ಸಮಾವೇಶದ ಉಸ್ತುವಾರಿ ಕನೇರಿಮಠದ ಕುಮಾರ ದೇವರು ಮಾತನಾಡಿ 'ಧರ್ಮ ಜಾಗೃತಿ, ಜಾತಿಗಳ ನಡುವೆ ಸಾಮರಸ್ಯ ಉಂಟು ಮಾಡುವುದು, ರೈತಕಲ್ಯಾಣ, ಮಹಿಳೆಯರು, ಯುವಕರನ್ನು ಜಾಗೃತಿಗೊಳಿಸುವ ಉದ್ದೇಶದಿಂದ ಸಮಾವೇಶ ಹಮ್ಮಿಕೊಳ್ಳಲಾಗಿದೆ. 300 ಜನ ಸ್ವಾಮೀಜಿಗಳು ಪಾಲ್ಗೊಳ್ಳುವರು. ಹತ್ತು ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದ್ದು, ಇದಕ್ಕಿಂತಲೂ ದುಪ್ಪಟ್ಟು ಜನ ಕಾರ್ಯಕ್ರಮಕ್ಕೆ ಬರುವ ನಿರೀಕ್ಷೆಯಿದೆ' ಎಂದು ತಿಳಿಸಿದರು.
ವೇದಿಕೆ ಕಾರ್ಯಕ್ರಮಕ್ಕೂ ಮೊದಲು ನಗರದ ಚನ್ನಬಸವಸ್ವಾಮಿ ಮಠದಿಂದ ಸಾವಿರಾರು ಮಹಿಳೆಯರು ಕುಂಭ ಹೊತ್ತು ಬಂದು ಕಾಡಸಿದ್ಧೇಶ್ವರ ಸ್ವಾಮೀಜಿಯನ್ನು ಸ್ವಾಗತಿಸುವರು. ವಿವಿಧ ವಾದ್ಯಗಳು ಇರಲಿವೆ.
ಮುನಿರಾಬಾದ್ ಕಾಡಾ ಮಾಜಿ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ಮುಖಂಡರಾದ ಸಂತೋಷ ಕೆಲೋಜಿ, ಚಂದ್ರು ಹೀರೂರು, ಡಿ.ಕೆ.ಆಗೋಲಿ, ಪರಶುರಾಮ್ ಮಡ್ಡೇರ್, ನವೀನ್ ಕುಮಾರ್ ಮಾಲಿಪಾಟೀಲ್, ನೀಲಕಂಠಪ್ಪ ಕಟ್ಟಿಮನಿ, ರಾಜಶೇಖರ್‌ಜಿ, ಶಿವು ಅರಕೇರಿ, ನೀಲಕಂಠಪ್ಪ ನಾಗಶೆಟ್ಟಿ, ಅಯ್ಯನಗೌಡ ಹೇರೂರು, ಯಮನೂರಪ್ಪ ಪುಂಡಗೌಡ ಇದ್ದರು.
ಸುರಕ್ಷತಾ ದೃಷ್ಟಿಯಿಂದ ಸ್ವಾಮೀಜಿಗಳನ್ನು ಹೊರತುಪಡಿಸಿ ಉಳಿದ ಯಾರ ವಾಹನಗಳಿಗೂ ಕಾಲೇಜು ಆವರಣದಲ್ಲಿ ಪ್ರವೇಶವಿಲ್ಲ. ಸಾರ್ವಜನಿಕರು ಸಹಕರಿಸಬೇಕು
ಪರಣ್ಣ ಮುನವಳ್ಳಿ, ಮಾಜಿ ಶಾಸಕ
261103-35-1631855348

