ಬಸವಕಲ್ಯಾಣ: ನಗರದ ಯಾವುದೇ ಓಣಿಯಲ್ಲಿ ಗಿಡಮರಗಳು, ಹೂಬಳ್ಳಿಗಳಿರುವ ಸುಂದರ ಪರಿಸರ, ಸ್ವಚ್ಛ ವಾತಾವರಣದ ಉದ್ಯಾನಗಳಿಲ್ಲ. ಇರುವಂಥ ಕೆಲವು ಖಾಲಿ ಜಾಗಗಳಾಗಿದ್ದು ಹಸಿರು ಇಲ್ಲದೆ ಭಣಗುಡುತ್ತಿದ್ದು ಚರಂಡಿ ನೀರಿನ, ಕಸದ ತಿಪ್ಪೆಗಳಾಗಿ ದುರ್ಗಂಧ ಸೂಸುತ್ತಿವೆ.
ಜಿಲ್ಲೆಯಲ್ಲಿ ಇದು ಎರಡನೇ ದೊಡ್ಡ ನಗರ ಆಗಿದ್ದರೂ ನಗರಸಭೆಯವರು ಮೂಲ ಸೌಕರ್ಯ ಒದಗಿಸುವುದಕ್ಕೆ ಕಿಂಚಿತ್ತೂ ಲಕ್ಷ್ಯ ವಹಿಸುತ್ತಿಲ್ಲ.
ದಾಖಲೆಗಳಲ್ಲಿ ಅನೇಕ ಉದ್ಯಾನಗಳಿವೆ. ಆದರೆ, ವಾಸ್ತವದಲ್ಲಿ ಮಾತ್ರ ವಿಶ್ರಮಿಸಿ ಆಯಾಸ ಪರಿಹರಿಸಿಕೊಳ್ಳಲು ಅನುಕೂಲಕರ ವಾತಾವರಣದ ಒಂದೇ ಒಂದು ಹರಿಸಿನ ಸ್ಥಳವಿಲ್ಲ. ಅನೇಕ ಕಡೆಗಳಲ್ಲಿ ಜಾಗ ಅತಿಕ್ರಮಣ ಆಗಿದೆ. ಹಲವೆಡೆ ದೊಡ್ಡ ಕಟ್ಟಡ ಎದ್ದು ನಿಂತಿದ್ದರಿಂದ ಉದ್ಯಾನದ ಸಂರಕ್ಷಿತ ಸ್ಥಳ ಯಾವುದೆಂದು ಗುರುತಿಸುವುದು ಕಷ್ಟವಾಗಿದೆ.
ಪುರಸಭೆ ಅಸ್ತಿತ್ವದಲ್ಲಿ ಇದ್ದಾಗ ರಾಜಾ ಬಾಗಸವಾರ ದರ್ಗಾ ಎದುರಿನ ಚಮನ್ ಗಾರ್ಡನ್ ಅನ್ನು ಉತ್ತಮವಾಗಿ ನಿರ್ವಹಣೆ ಮಾಡಲಾಗುತ್ತಿತ್ತು. ಅಲ್ಲೀಗ ಅಂಗಡಿ ಮಳಿಗೆಗಳಾಗಿವೆ. ಮುಖ್ಯ ಬಸ್ ನಿಲ್ದಾಣಕ್ಕೆ ಹೋಗುವ ರಸ್ತೆಯ ಅಕ್ಕ ಪಕ್ಕ ಹಾಗೂ ಡಾ.ಅಂಬೇಡ್ಕರ್ ವೃತ್ತದಿಂದ ತ್ರಿಪುರಾಂತವರೆಗೆ ಇರುವ ಹೊಸ ಬಡಾವಣೆಗಳಲ್ಲಿನ ಉದ್ಯಾನಗಳ ಜಾಗಗಳಲ್ಲಿ ಹುಲ್ಲು, ಮುಳ್ಳುಕಂಟೆಗಳಿವೆ.
ಶಾಂತಿನಿಕೇತನ ಪ್ರೌಢಶಾಲೆ ಸಮೀಪದಲ್ಲಿನ ಜೈಶಂಕರ ಓಣಿಯ ಮಧ್ಯದಲ್ಲಿರುವ ಸ್ಥಳದಲ್ಲಿ ಭಾರತ ಸ್ವಾತಂತ್ರ್ಯದ ಸುವರ್ಣ ಮಹೋತ್ಸವ ನೆನಪಿಗಾಗಿ ಉದ್ಯಾನ ನಿರ್ಮಿಸಲಾಗಿದೆ. ಸುತ್ತಲಿನಲ್ಲಿ ಉತ್ತಮ ಆವರಣಗೋಡೆ ಇದೆ. ಒಳಗೆ ಮಕ್ಕಳ ಆಟಿಕೆಯ ಸಾಮಾನುಗಳಿದ್ದವು. ಆದರೆ, ಕೆಲ ವರ್ಷಗಳಿಂದ ಇಲ್ಲಿ ಮುಳ್ಳುಕಂಟಿಗಳು ಬೆಳೆದಿದ್ದು ಹಂದಿ, ನಾಯಿ ಓಡಾಡುತ್ತವೆ.
ಈ ಜಾಗ ಕಳ್ಳ ಕಾಕರ ಅಡಗು ತಾಣದಂತಾಗಿದ್ದು ಓಣಿ ನಿವಾಸಿಗಳು ಇಲ್ಲಿ ಕಸ ಚೆಲ್ಲುತ್ತಿದ್ದಾರೆ. ಇದರ ಸುತ್ತಲಿನಲ್ಲಿನ ಚರಂಡಿಯಲ್ಲಿ ಯಾವಾಗಲೂ ಕಲ್ಮಷಯುಕ್ತ ನೀರು ಸಂಗ್ರಹಗೊಂಡಿರುತ್ತದೆ. ಸೊಳ್ಳೆ, ನೊಣಗಳ ಕಾಟ ಹೆಚ್ಚಿದೆ. ಇಲ್ಲಿ ನಿಯಮಿತವಾಗಿ ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕು ಎಂದು ಸ್ಥಳೀಯರು ನಗರಸಭೆಗೆ ಹಲವಾರು ಸಲ ಮನವಿ ಸಲ್ಲಿಸಿದ್ದರೂ ಪ್ರಯೋಜನ ಆಗಿಲ್ಲ.
ಗಂಗಾ-ಮದಿನಾ ಕಾಲೊನಿಯ ಮಧ್ಯದಲ್ಲಿನ ವಿಸ್ತಾರವಾದ ಸ್ಥಳವಿರುವ ಉದ್ಯಾನದ ಬಾಗಿಲಲ್ಲಿಯೇ ಓಣಿಯವರು ಕಸ ತಂದು ಚೆಲ್ಲುತ್ತಾರೆ. 4 ದಿನಕ್ಕೊಮ್ಮೆ ಈ ಸ್ಥಳ ತಿಪ್ಪೆ ಸ್ವರೂಪ ಪಡೆದು ಕಸದ ಗುಡ್ಡೆಯಂತೆ ಗೋಚರಿಸುತ್ತದೆ. ಮುಖ್ಯವೆಂದರೆ ಸುತ್ತಲಿನ ಕೆಲ ಶಾಲೆಗಳ ಮಕ್ಕಳು ಬೆಳಗಿನ ಪ್ರಾರ್ಥನೆಗಾಗಿ ಇಂಥ ಸ್ಥಳದಿಂದಲೇ ಒಳಗಿನ ಖಾಲಿ ಜಾಗಕ್ಕೆ ಹೋಗುತ್ತಾರೆ. ಮನೆಗಳ ಕಸ ಸಂಗ್ರಹಣೆಗೆ ಇಲ್ಲಿ ಅನ್ಯ ವ್ಯವಸ್ಥೆ ಕಲ್ಪಿಸಬೇಕು. ಇಲ್ಲವೆ ಪ್ರತಿದಿನ ಸ್ವಚ್ಛತೆ ಕೈಗೊಳ್ಳಬೇಕು ಎಂದರೂ ಸಂಬಂಧಿತರು ಸ್ಪಂದಿಸುತ್ತಿಲ್ಲ ಎನ್ನುತ್ತಾರೆ ನಿವಾಸಿಗಳು.
ವಿದ್ಯಾನಗರ ಬಡಾವಣೆಯ ಉದ್ಯಾನಕ್ಕೂ ಉತ್ತಮ ಆವರಣಗೋಡೆ ಇದೆ. ಆದರೆ ಒಳ ಭಾಗದಲ್ಲಿ ಹುಲ್ಲು ಬೆಳೆದಿದೆ. ತ್ರಿಪುರಾಂತ, ಸೀತಾ ಕಾಲೊನಿ, ಜೈಶಂಕರ ಕಾಲೊನಿಯ ಹನುಮಾನ ದೇವಸ್ಥಾನದ ಸ್ಥಳ, ವಿಜಯನಗರ ಕಾಲೊನಿ, ಹಿರೇಮಠ ಕಾಲೊನಿ ಮತ್ತಿತರೆಡೆಯ ಉದ್ಯಾನಗಳಿಗೆ ಅವರಣಗೋಡೆ ನಿರ್ಮಿಸಬೇಕು. ಪ್ರತಿದಿನ ಸ್ವಚ್ಛತೆ ಕೈಗೊಳ್ಳಬೇಕು ಎಂಬುದು ಜನರ ಆಗ್ರಹವಾಗಿದೆ.
'ಉದ್ಯಾನಗಳ ಅಭಿವೃದ್ಧಿ ಅವಶ್ಯಕವಾಗಿದ್ದು ಅದಕ್ಕಾಗಿ ಅನುದಾನ ನೀಡಲು ಪ್ರಸ್ತಾವ ಸಲ್ಲಿಸಲಾಗಿದೆ' ಎಂದು ನಗರಸಭೆ ಎಂಜಿನಿಯರ್ ರಮೇಶ ತಿಳಿಸಿದರು.
ಸಿ.ಪಿ.ಸೀಗೆದಾರ ವಕೀಲ ನಗರದಲ್ಲಿನ ಎಲ್ಲ ಉದ್ಯಾನಗಳ ಅತಿಕ್ರಮಣ, ಅವುಗಳಲ್ಲಿನ ಕಟ್ಟಡ ತೆರವುಗೊಳಿಸಿ ಹುಲ್ಲು, ಹೂಗಿಡಗಳನ್ನು ಬೆಳೆಸಬೇಕು. ಎಲ್ಲವುಗಳಿಗೆ ಆವರಣ ಗೋಡೆ ಕಟ್ಟಬೇಕು.ನರಸಿಂಗರೆಡ್ಡಿ ಗದ್ಲೇಗಾಂವ ಉಪನ್ಯಾಸಕಸ್ವಾತಂತ್ರ್ಯದ ಸುವರ್ಣ ಮಹೋತ್ಸವ ನೆನಪಿನ ಉದ್ಯಾನದಲ್ಲಿ ಶಾಂತಿನಿಕೇತನ ಶಾಲೆ ಮಕ್ಕಳು ಆಟವಾಡುತ್ತಿದ್ದರು. ದುಸ್ಥಿತಿಯ ಕಾರಣ ಓಣಿಯವರಿಗೆ ತೊಂದರೆ ಆಗಿದೆ.ಲಕ್ಷ್ಮಣ ಕಪನೂರೆ ಸಾಮಾಜಿಕ ಕಾರ್ಯಕರ್ತಕೆಲ ಉದ್ಯಾನಗಳ ಅಭಿವೃದ್ಧಿಗೆ ಹಣ ಮಂಜೂರಾದರೂ ಅತಿಕ್ರಮಣದ ಕಾರಣ ಕೆಲಸ ನಡೆದಿಲ್ಲ ಎನ್ನಲಾಗುತ್ತಿದೆ. ಆದ್ದರಿಂದ ನಗರಸಭೆಯವರು ಶೀಘ್ರ ಕ್ರಮ ಕೈಗೊಳ್ಳಲಿ.



260928-33-458517575

