ಭಾಲ್ಕಿ: 'ಸಮಾಜ, ಹೆತ್ತವರಿಗೆ ಬೇಡವಾದ ನಿರ್ಗತಿಕರ ಪಾಲನೆ, ಪೋಷಣೆ ಜೊತೆಗೆ ಗುಣಮಟ್ಟದ ಶಿಕ್ಷಣ ಧಾರೆ ಎರೆಯುತ್ತಿರುವ ಬಸವಲಿಂಗ ಪಟ್ಟದ್ದೇವರ ಕಾರ್ಯ ಅತ್ಯಂತ ಮಾನವೀಯ, ಮಾದರಿ ಕೆಲಸವಾಗಿದೆ' ಎಂದು ಜಹೀರಾಬಾದ್ ಸಂಸದ ಸುರೇಶ ಶೆಟಕಾರ್ ಹೇಳಿದರು.
ತಾಲ್ಲೂಕಿನ ಕರಡ್ಯಾಳದ ಚನ್ನಬಸವೇಶ್ವರ ಗುರುಕುಲ ಪಬ್ಲಿಕ್ ಶಾಲೆಯ ನೂತನ ಕಟ್ಟಡದ ಪೂಜಾ ಕಾರ್ಯಕ್ರಮದಲ್ಲಿ ವಿಶ್ವಗುರು ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
'ಪಟ್ಟದ್ದೇವರು ಸ್ಥಾಪಿಸಿರುವ ಗುರುಕುಲ ಶಿಕ್ಷಣ ಸಂಸ್ಥೆಯಲ್ಲಿ ಗುಣಾತ್ಮಕ ಶಿಕ್ಷಣ ಪಡೆದ ಸಾವಿರಾರು ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ಸಮಾಜದಲ್ಲಿ ವೈದ್ಯರು, ಎಂಜಿನಿಯರ್‌ಗಳಾಗಿ ಸೇವೆ ಸಲ್ಲಿಸುತ್ತಿರುವುದು ರಾಷ್ಟ್ರಕ್ಕೆ ನೀಡುತ್ತಿರುವ ಬಹುದೊಡ್ಡ ಕೊಡುಗೆ ಆಗಿದೆ' ಎಂದು ತಿಳಿಸಿದರು.
'ಗುರುಕುಲ ಸಂಸ್ಥೆ ಗುಣಮಟ್ಟದ ಶಿಕ್ಷಣಕ್ಕೆ ಪ್ರಸಿದ್ಧಿ ಪಡೆದಿರುವುದರಿಂದ ವಿವಿಧ ರಾಜ್ಯಗಳಿಂದ ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಇಲ್ಲಿಗೆ ಆಗಮಿಸುತ್ತಿರುವುದು ಹೆಮ್ಮೆಯ ಸಂಗತಿ' ಎಂದು ಹೇಳಿದರು.
'ಬಸವಲಿಂಗ ಪಟ್ಟದ್ದೇವರು ತೆಲಂಗಾಣ, ಆಂಧ್ರಪ್ರದೇಶದಲ್ಲಿ ಬಸವತತ್ವದ ಬೀಜ ಬಿತ್ತಿ ಬೆಳೆಸುತ್ತಿರುವುದು ಮಹತ್ತರ ಕಾರ್ಯವಾಗಿದೆ. ಅವರ ಎಲ್ಲ ಕಾರ್ಯಗಳಿಗೆ ಸಂಪೂರ್ಣ ಸಹಾಯ, ಸಹಕಾರ ನೀಡಲಾಗುವುದು' ಎಂದು ತಿಳಿಸಿದರು.
ಸಾನ್ನಿಧ್ಯ ವಹಿಸಿ ಮಾತನಾಡಿದ ಬಸವಲಿಂಗ ಪಟ್ಟದ್ದೇವರು,'ಚನ್ನಬಸವ ಪಟ್ಟದ್ದೇವರ ಆಶೀರ್ವಾದ, ಕೃಪೆಯಿಂದ ಕೇವಲ ಇಬ್ಬರು ಶಿಕ್ಷಕರು, 40 ವಿದ್ಯಾರ್ಥಿಗಳಿಂದ ಆರಂಭಗೊಂಡ ಶಿಕ್ಷಣ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದಿದೆ' ಎಂದು ಹೇಳಿದರು.
ಮಹಾಲಿಂಗ ಸ್ವಾಮೀಜಿ, ಬಸವಲಿಂಗ ಸ್ವಾಮೀಜಿ, ನಾರಾಯಣಖೇಡ ಮುನ್ಸಿಪಲ್ ಚೇರ್ಮನ್ ನಾಗೇಶ ಶೆಟಕಾರ್, ಉಮಾ ಸುರೇಶ ಶೆಟಕಾರ್, ಪರ್ವತಪ್ಪ ಮಾಸ್ಟರ್, ಜೀತು ಶೆಟಕಾರ್, ಡಾ.ರಾಜಶೇಖರ ಲಕಶೆಟ್ಟಿ, ಗೊಗ್ಗ ಸಂಜು, ನಿವೃತ್ತ ಎಂಜಿನಿಯರ್ ಸಿದ್ದಯ್ಯ ಕಾವಡಿಮಠ, ಎಂಜಿನಿಯರ್ ಸಚಿನ್ ಸೇರಿದಂತೆ ಇತರರು ಇದ್ದರು. ಆಡಳಿತಾಧಿಕಾರಿ ಮೋಹನ ರೆಡ್ಡಿ ಸ್ವಾಗತಿಸಿದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260704-33-453154524

