Dailyhunt Logo
  • Light mode
    Follow system
    Dark mode
    • Play Story
    • App Story
ಬೇಡ್ತಿ-ವರದಾ ಜೋಡಣೆ ಯೋಜನೆ ಜಾರಿಗೆ ಇಂದು ಸಭೆ

ಬೇಡ್ತಿ-ವರದಾ ಜೋಡಣೆ ಯೋಜನೆ ಜಾರಿಗೆ ಇಂದು ಸಭೆ

ಹಾವೇರಿ: ಜಿಲ್ಲೆಯ ಜನರಿಗೆ ಕುಡಿಯುವ ನೀರು ಪೂರೈಸಲು ಹಾಗೂ ಕೃಷಿಗೆ ಅಗತ್ಯವಿರುವ ನೀರು ಒದಗಿಸುವ ಉದ್ದೇಶದಿಂದ ರೂಪಿಸುತ್ತಿರುವ 'ಬೇಡ್ತಿ-ವರದಾ ನದಿ ಜೋಡಣೆ ಯೋಜನೆ' ಜಾರಿಗಾಗಿ ರಾಜ್ಯಮಟ್ಟದ ಹೋರಾಟ ಹಮ್ಮಿಕೊಳ್ಳಲು ಜಿಲ್ಲೆಯ ಜನರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಈ ಬಗ್ಗೆ ಚರ್ಚೆ ನಡೆಸಲು, ಹಾವೇರಿಯ ಹುಕ್ಕೇರಿಮಠದಲ್ಲಿ ನ. 4ರಂದು ಪಕ್ಷಾತೀತ ನಾಯಕರ ಸಭೆ ನಡೆಯಲಿದೆ.

ಹಾವೇರಿ, ಗದಗ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಯೋಜನೆ ರೂಪಿಸಲಾಗಿದೆ. ಆದರೆ, ಈ ಯೋಜನೆಗೆ ಉತ್ತರ ಕನ್ನಡದ ಹಲವರು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. 'ಅಮಾಯಕ ಜನರ ದಿಕ್ಕು ತಪ್ಪಿಸುತ್ತಿರುವ ಕೆಲವರು, ರಾಜಕೀಯ ಉದ್ದೇಶದಿಂದ ಸುಖಾಸುಮ್ಮನೇ ವಿರೋಧ ಮಾಡುತ್ತಿದ್ದಾರೆ' ಎಂದು ಆರೋಪಿಸುತ್ತಿರುವ ಹಾವೇರಿ ಜಿಲ್ಲೆಯ ಮುಖಂಡರು, 'ಜಿಲ್ಲೆಯ ಜನರಲ್ಲಿ ಜಾಗೃತಿ ಮೂಡಿಸಲು ಹಾಗೂ ಮುಂದಿನ ಹೋರಾಟಕ್ಕೆ ಅಣಿಗೊಳಿಸಲು ಸಭೆ ನಡೆಸಲಾಗುತ್ತಿದೆ' ಎಂದರು.

'ಜಿಲ್ಲೆಯ ಜನರಿಗೆ ಅಗತ್ಯವಿರುವ ಕುಡಿಯುವ ನೀರು ಹಾಗೂ ಕೃಷಿಗೆ ನೀರಾವರಿ ಸೌಲಭ್ಯ ಒದಗಿಸುವ ಯೋಜನೆಯನ್ನು ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸದಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಬೇಕಿದೆ. ಯೋಜನೆಯ ಡಿಪಿಆರ್ ಪ್ರಕ್ರಿಯೆ ಆರಂಭಗೊಂಡಿದೆ. ಆದರೆ, ಈ ಪ್ರಕ್ರಿಯೆಗೆ ಕೆಲ ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿರುವ ಮಾಹಿತಿ ಇದೆ. ಇದನ್ನು ನಾವು ಸಹಿಸುವುದಿಲ್ಲ' ಎಂದು ಮುಖಂಡರು ಹೇಳಿದರು.

'ಜಿಲ್ಲೆಯಲ್ಲಿ ವರದಾ, ತುಂಗಭದ್ರಾ ಸೇರಿ ಹಲವು ನದಿಗಳಿದ್ದರೂ ಬರಗಾಲ ಆವರಿಸುತ್ತಿದೆ. ಬೇಸಿಗೆಯಲ್ಲಿ ನದಿ ತೀರದ ಊರುಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗುತ್ತಿದೆ. ಮಳೆಯಾಶ್ರಿತ ಬೇಸಾಯ ನಂಬಿರುವ ರೈತರು, ಪ್ರತಿವರ್ಷವೂ ನಷ್ಟ ಅನುಭವಿಸುತ್ತಿದ್ದಾರೆ. ಇದಕ್ಕೆಲ್ಲ ಬೇಡ್ತಿ-ವರದಾ ನದಿ ಜೋಡಣೆಯೇ ಪರಿಹಾರವಾಗಿದೆ. ಹೀಗಾಗಿ, ಯೋಜನೆ ಅನುಷ್ಠಾನ ಆಗಲೇಬೇಕು' ಎಂದು ತಿಳಿಸಿದರು.

'ಪರಿಸರ ನಾಶ ಆಗುವುದಾಗಿ ಹೇಳುತ್ತಿರುವ ಕೆಲ ಸ್ವಯಂ ಘೋಷಿತ ಪರಿಸರವಾದಿಗಳು, ಉತ್ತರ ಕನ್ನಡ ಜಿಲ್ಲೆಯ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಪರಿಸರಕ್ಕೆ ಯಾವುದೇ ಧಕ್ಕೆಯಾಗದ ರೀತಿಯಲ್ಲಿ ಅಧಿಕಾರಿಗಳು ಹೊಸ ಡಿಪಿಆರ್ ಮಾಡುತ್ತಿದ್ದಾರೆ. ಇದಕ್ಕೆ ಅಡ್ಡಿಪಡಿಸುವುದು ಸರಿಯಲ್ಲ. ಈ ವಿಚಾರದಲ್ಲಿ ರಾಜ್ಯ ಸರ್ಕಾರ ಹೆಚ್ಚಿನ ಗಮನ ಹರಿಸಬೇಕು. ಯೋಜನೆಯನ್ನು ಜಾರಿಗೊಳಿಸಬೇಕು' ಎಂದು ಆಗ್ರಹಿಸಿದರು.

'ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿದಂತೆ ಎಲ್ಲ ರಾಜಕೀಯ ಮುಖಂಡರು, ಸ್ವಾಮೀಜಿಗಳು, ರೈತ ಸಂಘಟನೆ ಮುಖಂಡರು, ಸ್ಥಳೀಯ ಸಂಸ್ಥೆಗಳ ಮುಖಂಡರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಹಿಂದೆ, ಜ. 26ರಂದು ನಡೆದಿದ್ದ ಸಭೆಯಲ್ಲಿ ಸಮಿತಿ ರಚಿಸಲಾಗಿತ್ತು. ಅದರ ಕಾರ್ಯಚಟುವಟಿಕೆ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು. ಜೊತೆಗೆ, ಮುಂಬರುವ ದಿನಗಳಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸುವ ಬಗ್ಗೆ ತೀರ್ಮಾನಿಸಲಾಗು ವುದು' ಎಂದರು.

261104-22-1631464465

Dailyhunt
Disclaimer: This content has not been generated, created or edited by Dailyhunt. Publisher: Prajavani