Thursday, 29 Jul, 11.55 am ಪ್ರಜಾವಾಣಿ

ಜಿಲ್ಲೆ
ಬೆಳಗಾವಿ: ಹದಗೆಟ್ಟ ಸೇತುವೆ ರಸ್ತೆ; ಸಂಚಾರಕ್ಕೆ ತೊಂದರೆ

ಹಂದಿಗುಂದ (ಬೆಳಗಾವಿ ಜಿಲ್ಲೆ): ಘಟಪ್ರಭಾ ಎಡದಂಡೆ ಕಾಲುವೆ ಸೇತುವೆ ಮೇಲಿನ ರಸ್ತೆಯಲ್ಲಿ ಸಂಚಾರ ದುಸ್ತರವಾಗಿದೆ.

ಪಾಲಭಾಂವಿ ಘಟಪ್ರಭಾ ಎಡದಂಡೆ ಕಾಲುವೆ, ಮಾದಾರ ಚನ್ನಯ್ಯ ನಗರ ಪ್ಲಾಟ್ ಹತ್ತಿರ ಹಾಗೂ ಮಲಗೌಡ ನೇಮಿನಾಥ ಪಾಟೀಲ, ನಾಯಕ ಸರ್ಕಾರಿ ಪ್ರೌಢಶಾಲೆ ಬಳಿ ಸೇತುವೆಯನ್ನು ಎತ್ತರದಲ್ಲಿ ನಿರ್ಮಿಸಿರುವ ಪರಿಣಾಮ ಟ್ರ್ಯಾಕ್ಟರ್, ಭಾರಿ ವಾಹನಗಳು ಸಂಚರಿಸಲು ಸಾಧ್ಯವಾಗುತ್ತಿಲ್ಲ. ಸೇತುವೆ ಬಳಿ ಡಾಂಬರು ಹಾಕದಿರುವುದುದು ಅಥವಾ ಕಾಂಕ್ರೀಟ್ ರಸ್ತೆ ನಿರ್ಮಿಸದೆ ಇರುವುದರಿಂದಾಗಿಯೂ ತೊಂದರೆ ಆಗುತ್ತಿದೆ. ಇದಕ್ಕೆ ಅವೈಜ್ಞಾನಿಕ ಹಾಗೂ ಕಳಪೆ ಕಾಮಗಾರಿಯೇ ಕಾರಣ ಎನ್ನುವುದು ಜನರ ದೂರಾಗಿದೆ.

ಈ ಕಾಮಗಾರಿ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ನೀರಾವರಿ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತಿಳಿಸುತ್ತಾರೆ. ಇತ್ತೀಚೆಗೆ ಮಳೆಯಿಂದಾಗಿ ಈ ರಸ್ತೆ ಕೆಸರು ಗದ್ದೆಯಾಗಿದೆ. ವಾಹನಗಳ ಸವಾರರು, ಸೈಕಲ್‌ಗಳಲ್ಲಿ ಹೋಗುವವರು ಸರ್ಕಸ್‌ ಮಾಡುತ್ತಾ ಸಂಚರಿಸುವಂತಾಗಿದೆ. ದ್ವಿಚಕ್ರವಾಹನ ಸವಾರರು ಇಲ್ಲಿ ಜಾರಿ ಬಿದ್ದು ಗಾಯಗೊಂಡಿರುವ ಘಟನೆಗಳೂ ನಡೆದಿವೆ. ಈ ರಸ್ತೆ ಅನಾಹುತಕ್ಕೆ ಆಹ್ವಾನ ನೀಡುತ್ತಲೇ ಇದೆ.

ರಸ್ತೆ ನಿರ್ಮಾಣವಾಗಿ ವರ್ಷಗಳೇ ಕಳೆದರೂ ಅಲ್ಲಲ್ಲಿ ಸೇತುವೆಗಳು ನಿರ್ಮಾಣವಾಗಿಲ್ಲ. ಕಾಮಗಾರಿಗಾಗಿ ತಂದ ಪೈಪ್‌ಗಳನ್ನು ರಸ್ತೆ ಬದಿಯಲ್ಲಿ ಬಿಸಾಡಿ ಹೋಗಲಾಗಿದೆ.

'ಈ ಬಗ್ಗೆ ಪಾಲಭಾಂವಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಬಿಸ್ಮಿಲ್ಲಾ ಇಲಾಹಿ ಕಾಗವಾಡ, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಂಜಿನಿಯರ್‌ ಆರ್.ಕೆ. ನಿಂಗನೂರೆ, ಎಂಜಿನಿಯರ್‌ ಎಂ.ಐ. ಅಂಬೀಗೇರ ಅವರಿಗೆ ತಿಳಿಸಿದ್ದರೂ ಪ್ರಯೋಜನವಾಗಿಲ್ಲ. ಕೂಡಲೇ ರಸ್ತೆಯನ್ನು ಸಂಪೂರ್ಣವಾಗಿ ನಿರ್ಮಿಸಿ ಸುಗಮ ಸಂಚಾರಕ್ಕಾಗಿ ಅವಕಾಶ ಕಲ್ಪಿಸಿಕೊಡಬೇಕು. ಇಲ್ಲವಾದಲ್ಲಿ ಜುಲೈ 31ರಂದು ರಸ್ತೆ ತಡೆದು ಪ್ರತಿಭಟನೆ ನಡೆಸಲಾಗುವುದು' ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Prajavani
Top