Saturday, 25 Sep, 3.12 pm ಪ್ರಜಾವಾಣಿ

ಬೆಂಗಳೂರು
ಬೆಲೆ ಏರಿಕೆ ಖಂಡನೆ: ಟಾಂಗಾ ಏರಿ 'ಕೈ' ನಾಯಕರ ಪ್ರತಿಭಟನೆ

ಬೆಂಗಳೂರು: ಇಂಧನ ಬೆಲೆ ಹಾಗೂ ತತ್ಪರಿಣಾಮ ದಿನಬಳಕೆ ವಸ್ತುಗಳ ದರ ಏರಿಕೆ ಖಂಡಿಸಿ ಎತ್ತಿನ ಗಾಡಿ ಏರಿ, ಸೈಕಲ್‌ ತುಳಿದು ವಿಧಾನಮಂಡಲದ ಅಧಿವೇಶನಕ್ಕೆ ಹೋಗಿದ್ದ ಕಾಂಗ್ರೆಸ್ ನಾಯಕರು, ಶುಕ್ರವಾರ ಟಾಂಗಾ ಏರಿ ಹೋದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ ನೇತೃತ್ವದಲ್ಲಿ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಿಂದ ವಿಧಾನಸೌಧದವರೆಗೆ ಕಾಂಗ್ರೆಸ್ ಮುಖಂಡರು ಟಾಂಗಾ ಜಾಥಾ ನಡೆಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಸಲೀಂ ಅಹಮದ್, ಈಶ್ವರ ಖಂಡ್ರೆ, ಶಾಸಕರಾದ ಕೆ.ಜೆ. ಜಾರ್ಜ್, ಕೃಷ್ಣಬೈರೇಗೌಡ, ಪ್ರಿಯಾಂಕ್ ಖರ್ಗೆ ಈ ಜಾಥಾದಲ್ಲಿ ಇದ್ದರು. ಮಾರ್ಗದುದ್ದಕ್ಕೂ ಕೇಂದ್ರ- ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಪೊಲೀಸರ ತಡೆ: ಈ ವೇಳೆ ಜನದಟ್ಟಣೆ, ಸಂಚಾರ ದಟ್ಟಣೆ ತಡೆಯಲು ಮುಂದಾದ ಪೊಲೀಸರು, ಕಾಂಗ್ರೆಸ್ ನಾಯಕರು ಮತ್ತು ಶಾಸಕರಿಗೆ ಮಾತ್ರ ಎಂಟು ಟಾಂಗಾಗಳಲ್ಲಿ ವಿಧಾನಸೌಧದತ್ತ ಹೋಗಲು ಅವಕಾಶ ನೀಡಿದರು.

ಜಾಥಾ ಬಳಿಕ ಮಾತನಾಡಿದ ಡಿ.ಕೆ. ಶಿವಕುಮಾರ್, 'ಇಂಧನ ಸೇರಿದಂತೆ ಅಗತ್ಯ ವಸ್ತುಗಳು, ಮನೆ ನಿರ್ಮಾಣ ಸಾಮಗ್ರಿಗಳ ಬೆಲೆ ಗಗನಕ್ಕೇರಿದೆ. ನಾವು ಎಷ್ಟೇ ಹೇಳಿದರೂ ಎಮ್ಮೆ ಚರ್ಮದ ಸರ್ಕಾರಕ್ಕೆ ಅರ್ಥವಾಗುತ್ತಿಲ್ಲ. ಸರ್ಕಾರಕ್ಕೆ ಕಣ್ಣು, ಕಿವಿ, ಬಾಯಿ ಯಾವುದೂ ಇಲ್ಲ. ಸರ್ಕಾರದ ಯೋಜನೆಗಳು, ಕಾರ್ಯಕ್ರಮಗಳು ಜನಸಾಮಾನ್ಯರಿಗೆ ಬಡವರ್ಗದವರಿಗೆ ತಲುಪುತ್ತಿಲ್ಲ. ಜನರ ರಕ್ತವನ್ನು ಸರ್ಕಾರ ಹೀರುತ್ತಿದೆ. ಜನರ ಧ್ವನಿಯಾಗಿ ನಾವು ಈ ಪ್ರತಿಭಟನೆ ಮಾಡುತ್ತಿದ್ದೇವೆ. ಅಕ್ಟೋಬರ್ ತಿಂಗಳಿನಲ್ಲಿ ರಾಜ್ಯದ ಪ್ರತಿ ಗ್ರಾಮ ಪಂಚಾಯತಿಯಲ್ಲಿ ಹೋರಾಟ ಹಮ್ಮಿಕೊಳ್ಳುತ್ತೇವೆ' ಎಂದರು.

ಸಿದ್ಧರಾಮಯ್ಯ ಮಾತನಾಡಿ, 'ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ನಮ್ಮ ಮೂರನೇ ಹೋರಾಟವಿದು. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಬೆಲೆ ಗಗನಕ್ಕೇರುತ್ತಿದೆ. ಜನಸಾಮಾನ್ಯರು, ರೈತರು, ಕಾರ್ಮಿಕರು, ಬಡವರಿಗೆ ಬದುಕು ದುಸ್ತರವಾಗಿದೆ. ಜನರ ಮನೆಗಳಿಗೆ ಬೆಂಕಿ ಬಿದ್ದಿದೆ. ಬೆಲೆ ಏರಿಕೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸದಿದ್ದರೆ ಇನ್ನೂ ತೀವ್ರವಾದ ಹೋರಾಟ ನಡೆಸುತ್ತೇವೆ' ಎಂದು ಎಚ್ಚರಿಕೆ ನೀಡಿದರು.

ವಿಧಾನಮಂಡಲ ಅಧಿವೇಶನದ ಮೊದಲ ದಿನ (ಸೆ. 13) ಎತ್ತಿನ ಗಾಡಿಯಲ್ಲಿ ವಿಧಾನಸೌಧಕ್ಕೆ ಬಂದಿದ್ದ ಕಾಂಗ್ರೆಸ್ ನಾಯಕರು, ಕಳೆದ ಸೋಮವಾರ (ಸೆ. 20) ಸೈಕಲ್ ತುಳಿದುಕೊಂಡು ಬಂದಿದ್ದರು. ಅಧಿವೇಶನದ ಕೊನೆಯ ದಿನ ಟಾಂಗಾ ಜಾಥಾ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Prajavani
Top