ತುಮಕೂರು: 'ಬೆಳಿಗ್ಗೆ 11 ಗಂಟೆಯಾದರೂ ಪಡಿತರ ವಿತರಣಾ ಕೇಂದ್ರಗಳ ಬಾಗಿಲು ತೆರೆಯುವುದಿಲ್ಲ, ಅಗತ್ಯ ಪ್ರಮಾಣದ ಪಡಿತರ ವಿತರಿಸುತ್ತಿಲ್ಲ, ಅಧಿಕಾರಿಗಳು ಸ್ಪಂದಿಸುವುದಿಲ್ಲ, ಬೆಸ್ಕಾಂ ಎಂಜನಿಯರ್‌ಗಳು ಕರೆ ಸ್ವೀಕರಿಸುವುದಿಲ್ಲ ....'
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಮಂಗಳವಾರ ನಡೆದ ಗ್ಯಾರಂಟಿ ಯೋಜನೆಗಳ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷರು, ತಾಲ್ಲೂಕು ಅಧ್ಯಕ್ಷರು ಜನರ ಸಮಸ್ಯೆಗಳನ್ನು ತೆರೆದಿಟ್ಟರು.
ಸಮಿತಿಯ ರಾಜ್ಯ ಉಪಾಧ್ಯಕ್ಷ ಎಸ್.ಆರ್.ಮೆಹರೋಜ್ ಖಾನ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
'ಬೆಳಿಗ್ಗೆ 7 ಗಂಟೆಗೆ ತೆರೆಯಬೇಕಾದ ನ್ಯಾಯಬೆಲೆ ಅಂಗಡಿ 11 ಗಂಟೆಯಾದರೂ ಬಾಗಿಲು ಹಾಕಿರುತ್ತದೆ. ಜಿಲ್ಲೆಯ ಎಲ್ಲ ಭಾಗದಲ್ಲಿ ಇದೇ ರೀತಿಯಾಗುತ್ತಿದೆ. ಪಡಿತರ ತೂಕ ಪರಿಶೀಲಿಸುವುದಿಲ್ಲ. ಗ್ರಾಹಕರಿಗೆ ವಂಚಿಸಲಾಗುತ್ತಿದೆ' ಎಂದು ಸಮಿತಿ ಉಪಾಧ್ಯಕ್ಷ ನರಸೀಯಪ್ಪ ಸಭೆಯಲ್ಲಿ ಪ್ರಸ್ತಾಪಿಸಿದರು.
'ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಗೋಡೆಕೆರೆ ನ್ಯಾಯಬೆಲೆ ಅಂಗಡಿಗೆ ಐದಾರು ಕಿ.ಮೀನಿಂದ ಜನ ಬರುತ್ತಿದ್ದಾರೆ. ಒಂದು ಕಡೆಯಲ್ಲಿ 5ರಿಂದ 6 ಸಾವಿರ ಪಡಿತರ ಚೀಟಿಗಳಿವೆ. ಆಯಾ ಗ್ರಾಮಗಳಲ್ಲಿಯೇ ಪಡಿತರ ವಿತರಣೆಗೆ ಅನುವು ಮಾಡಿಕೊಡಬೇಕು. ನೆಟ್‌ವರ್ಕ್ ಸಮಸ್ಯೆಯಿಂದ ಜನ ಅಂಗಡಿ ಬಳಿ ಗಂಟೆಗಟ್ಟಲೆ ನಿಲ್ಲಬೇಕಾಗುತ್ತದೆ. ಶೌಚಾಲಯ, ನೆರಳು, ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದಾರೆ. ಕೂಡಲೇ ಅಗತ್ಯ ಸೌಲಭ್ಯ ಕಲ್ಪಿಸಬೇಕು' ಎಂದು ಚಿಕ್ಕನಾಯಕನಹಳ್ಳಿ ತಾಲ್ಲೂಕು ಸಮಿತಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಒತ್ತಾಯಿಸಿದರು.
'ಪ್ರತಿ ದಿನ 7 ಗಂಟೆಗೆ ಪಡಿತರ ವಿತರಿಸಬೇಕು. ಮೂಲಸೌಕರ್ಯ ಕಲ್ಪಿಸಬೇಕು. ಸಮಿತಿಯ ಪದಾಧಿಕಾರಿಗಳಿಗೆ ಅಧಿಕಾರಿಗಳು ಸ್ಪಂದಿಸಬೇಕು' ಎಂದು ಮೆಹರೋಜ್ ಖಾನ್ ನಿರ್ದೇಶಿಸಿದರು. ಸಭೆಗೆ ಗೈರಾದ ಸಮಿತಿಯ ತಾಲ್ಲೂಕು ಘಟಕದ ಅಧ್ಯಕ್ಷರು, ತಾ.ಪಂ ಇಒ, ಇಲಾಖೆಯ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಸಮಿತಿಯ ಜಿಲ್ಲಾ ಅಧ್ಯಕ್ಷ ಜಿ.ಚಂದ್ರಶೇಖರ್‌ಗೌಡ, ಉಪಾಧ್ಯಕ್ಷರಾದ ಎಚ್.ಸಿ.ಹನುಮಂತಪ್ಪ, ಬಿ.ಪಂಚಾಕ್ಷರಯ್ಯ, ಜಿ.ಪಂ ಸಿಇಒ ಜಿ.ಬಿ.ಅಶ್ವಿಜ ಹಾಜರಿದ್ದರು.
₹6,370 ಕೋಟಿ ಪಾವತಿ
ಪಂಚ ಗ್ಯಾರಂಟಿ ಯೋಜನೆ ಪ್ರಾರಂಭದಿಂದ ಇದುವರೆಗೆ ಜಿಲ್ಲೆಗೆ ₹6,370 ಕೋಟಿ ಬಿಡುಗಡೆಯಾಗಿದೆ. ಇದರಲ್ಲಿ ಗೃಹಲಕ್ಷ್ಮಿಯರಿಗೆ ₹3,905 ಕೋಟಿ ಸಂದಾಯವಾಗಿದೆ.
ಗೃಹಜ್ಯೋತಿಯಡಿ ₹1,014 ಕೋಟಿ, ಯುವ ನಿಧಿಗೆ ₹38 ಕೋಟಿ, ಶಕ್ತಿ ಯೋಜನೆಗೆ ₹800 ಕೋಟಿ, ಅನ್ನ ಭಾಗ್ಯಕ್ಕೆ 613 ಕೋಟಿ ವ್ಯಯಿಸಲಾಗಿದೆ. ಫಲಾನುಭವಿಗಳ ಸಂಖ್ಯೆಯೂ ಹೆಚ್ಚುತ್ತಿದೆ.
261104-17-22896748

