Dailyhunt
ಬೆಂಗಳೂರಿಗೆ 'ರಾಯಲ್ಸ್‌' ಚಾಲೆಂಜ್

ಬೆಂಗಳೂರಿಗೆ 'ರಾಯಲ್ಸ್‌' ಚಾಲೆಂಜ್

ಗುವಾಹಟಿ: ದಿಗ್ಗಜ ವೇಗಿ ಜಸ್‌ಪ್ರೀತ್ ಬೂಮ್ರಾ ಅವರ ಎಸೆತಗಳನ್ನು ಸಿಕ್ಸರ್‌ಗೆತ್ತಿದ ಸಂತಸದಲ್ಲಿರುವ ವೈಭವ್ ಸೂರ್ಯವಂಶಿಯ ಆಟಕ್ಕೆ ಕಡಿವಾಣ ಹಾಕಲು 'ಹಾಲಿ ಚಾಂಪಿಯನ್' ರಾಯಲ್ ಚಾಲೆಂಜರ್ಸ್ ಬೆಂಗಳೂರು ಬೌಲಿಂಗ್ ಪಡೆ ಸನ್ನದ್ಧವಾಗಿದೆ.

ತವರಿನಂಗಳದಲ್ಲಿ ಸತತ ಎರಡೂ ಪಂದ್ಯಗಳಲ್ಲಿ ಜಯಭೇರಿ ಬಾರಿಸಿರುವ ಆರ್‌ಸಿಬಿಯು ಶುಕ್ರವಾರ ಬರ್ಸಾಪರ

ಕ್ರೀಡಾಂಗಣದಲ್ಲಿ ರಿಯಾನ್ ಪರಾಗ್ ನಾಯಕತ್ವದ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದೆ. ರಜತ್ ಪಾಟೀದಾರ್ ಬಳಗವು ಈ ಟೂರ್ನಿಯಲ್ಲಿ ತವರೂರಿನಿಂದ ಹೊರಗೆ ಆಡುತ್ತಿರುವ ಮೊದಲ ಪಂದ್ಯವೂ ಇದಾಗಿದ್ದು, ಜಯದ ಓಟ ಮುಂದುವರಿಸಿ 'ಹ್ಯಾಟ್ರಿಕ್' ಸಾಧಿಸುವ ಛಲದಲ್ಲಿದೆ. ಆತಿಥೇಯ ತಂಡವು ಇದುವರೆಗೆ ಆಡಿರುವ ಮೂರು ಪಂದ್ಯಗಳಲ್ಲಿಯೂ ಜಯಿಸಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿಯ ವೇಗಿ ಜೇಕಬ್ ಡಫಿ ಅಮೋಘವಾಗಿ ಬೌಲಿಂಗ್ ಮಾಡಿದ್ದರು. ಅದರಲ್ಲೂ ಪವರ್‌ ಪ್ಲೇ ಹಂತದಲ್ಲಿ ಅವರ ನಿಖರ ದಾಳಿಗೆ ಸನ್‌ರೈಸರ್ಸ್ ಹೈದರಾಬಾದ್ ತಂಡವು ಸಂಕಷ್ಟಕ್ಕೆ ಸಿಲುಕಿತ್ತು. ಎರಡನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧವೂ ಡಫಿ ಎರಡು ವಿಕೆಟ್ ಗಳಿಸಿದ್ದರು. ಆದರೆ ದುಬಾರಿಯಾಗಿದ್ದರು. ಆ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ (41ಕ್ಕೆ3) ಅವರು ಮಿಂಚಿದ್ದರು. 'ಸ್ಪಿನ್ನರ್‌-ಬೌನ್ಸರ್‌' ಬೌಲರ್ ಕೃಣಾಲ್ ಪಾಂಡ್ಯ ಕೂಡ ಎರಡು ವಿಕೆಟ್ ಪಡೆದಿದ್ದರು. ಸುಯಶ್ ಶರ್ಮಾ, ಹೊಸಪ್ರತಿಭೆ ಅಭಿನಂದನ್ ಸಿಂಗ್ ಕೂಡ ಮಿಂಚಿದ್ದರು. ಅದರಿಂದಾಗಿ ಆತಿಥೇಯ ತಂಡದ ಸ್ಫೋಟಕ ಆರಂಭಿಕ ಜೋಡಿಯನ್ನು ಕಟ್ಟಿಹಾಕುವ ಆತ್ಮವಿಶ್ವಾಸದಲ್ಲಿ ಆರ್‌ಸಿಬಿ ಬೌಲಿಂಗ್ ಪಡೆ ಇದೆ.

ಒಂದೊಮ್ಮೆ ಜೈಸ್ವಾಲ್ ಮತ್ತು ವೈಭವ್ ಅವರನ್ನು ಬೇಗನೆ ಕಟ್ಟಿಹಾಕಿದರೂ, ರಾಜಸ್ಥಾನ ತಂಡದಲ್ಲಿ ಬ್ಯಾಟರ್‌ಗಳ ದೊಡ್ಡ ಪಟ್ಟಿ ಇದೆ. ವಿಕೆಟ್‌ಕೀಪರ್-ಬ್ಯಾಟರ್ ಧ್ರುವ ಜುರೇಲ್, ಶಿಮ್ರಾನ್ ಹೆಟ್ಮೆಯರ್, ರವೀಂದ್ರ ಜಡೇಜ, ನಾಯಕ ಪರಾಗ್, ಡೊನೊವನ್ ಪೆರೆರಾ ಅವರು ಉತ್ತಮ ಲಯದಲ್ಲಿದ್ಧಾರೆ. ಅವರನ್ನೂ ನಿಯಂತ್ರಿಸಲು ಬೌಲರ್‌ಗಳು ಗಮನ ಹರಿಸುವುದು ಅನಿವಾರ್ಯವಾಗಲಿದೆ. ಅದರಲ್ಲೂ ಜುರೇಲ್ ಅವರು ಯಾವುದೇ ಹಂತದಲ್ಲಿಯೂ ಜಯವನ್ನು ತಮ್ಮ ತಂಡದತ್ತ ವಾಲುವಂತೆ ಮಾಡುವ ಸಮರ್ಥರಾಗಿದ್ದಾರೆ. ಇದುವರೆಗೆ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್, ನಾಂದ್ರೆ ಬರ್ಗರ್, ಸ್ಪಿನ್ನರ್ ರವಿ ಬಿಷ್ಣೋಯಿ ಹಾಗೂ ತುಷಾರ್ ದೇಶಪಾಂಡೆ ಅವರು ಪರಿಣಾಮಕಾರಿ ದಾಳಿಯನ್ನು ಮಾಡಿದ್ದಾರೆ. ಅವರ ಮುಂದೆ ಈಗ ಆರ್‌ಸಿಬಿಯ ಬಲಾಢ್ಯ ಬ್ಯಾಟಿಂಗ್ ಪಡೆಯನ್ನು ನಿಯಂತ್ರಿಸುವ ಸವಾಲು ಇದೆ.

ಸ್ಥಿರವಾದ ಆರಂಭ ನೀಡುತ್ತಿರುವ ವಿರಾಟ್ ಕೊಹ್ಲಿ, ಎರಡೂ ಪಂದ್ಯಗಳಲ್ಲಿ ಅರ್ಧಶತಕ ದಾಖಲಿಸಿರುವ ದೇವದತ್ತ ಪಡಿಕ್ಕಲ್, ಮಧ್ಯಮ ಕ್ರಮಾಂಕದಲ್ಲಿ ಅಬ್ಬರಿಸುತ್ತಿರುವ ನಾಯಕ ರಜತ್ ಹಾಗೂ ಟಿಮ್ ಡೇವಿಡ್ ಅವರು ಬೌಲರ್‌ಗಳಿಗೆ ಕಠಿಣ ಸವಾಲೊಡ್ಡುವುದು ಖಚಿತ. ಚೆನ್ನೈ ಎದುರಿನ ಪಂದ್ಯದ ಮೊದಲ ಹತ್ತು ಓವರ್‌ಗಳಲ್ಲಿ ಆರ್‌ಸಿಬಿಯು ಕೇವಲ 91 ರನ್ ಗಳಿಸಿತ್ತು. ಆದರೆ ನಂತರದ ಹತ್ತು ಓವರ್‌ಗಳಲ್ಲಿ 159 ರನ್‌ಗಳನ್ನು ಸೂರೆ ಮಾಡಿತ್ತು. ಅದಕ್ಕೆ ಪ್ರಮುಖ ಕಾರಣರಾಗಿದ್ದು ಟಿಮ್ ಡೇವಿಡ್ ಅವರು. ಅಜಾನುಬಾಹು ಆಟಗಾರ ಡೇವಿಡ್ ಎಂಟು ಸಿಕ್ಸರ್‌ ಸಿಡಿಸಿದ್ದರು. ಕೇವಲ 25 ಎಸೆತಗಳಲ್ಲಿ ಅಜೇಯ 70 ರನ್ ಹೊಡೆದಿದ್ದರು. ಈ ಪಂದ್ಯದಲ್ಲಿ ಆರಂಭಿಕ ಫಿಲ್ ಸಾಲ್ಟ್ ಕೂಡ ಲಯಕ್ಕೆ ಮರಳಿದ್ದರು. ನಾಲ್ಕು ರನ್‌ ಅಂತರದಿಂದ ಅರ್ಧಶತಕ ತಪ್ಪಿಸಿಕೊಂಡಿ ದ್ದರು. ಆದರೆ ಅವರು ಫಾರ್ಮ್‌ನಲ್ಲಿ ರುವುದು ಆರ್‌ಸಿಬಿ ಬ್ಯಾಟಿಂಗ್ ಪಡೆ ಮತ್ತಷ್ಟು ಬಲಿಷ್ಠವಾದಂತಾಗಿದೆ. ಜಿತೇಶ್‌ ಶರ್ಮಾ, ಕೃಣಾಲ್ ಅವರೂ ಅವಕಾಶ ಸಿಕ್ಕರೆ ರನ್‌ಗಳ ಕಾಣಿಕೆ ನೀಡಬಲ್ಲರು.

ಗುವಾಹಟಿಯಲ್ಲಿ ಶುಕ್ರವಾರ ರಾತ್ರಿ ಒಂದೊಮ್ಮೆ ಮಳೆ ಬರದೇ ಹೋದರೆ, ಉಭಯ ತಂಡಗಳ ಬ್ಯಾಟರ್‌ಗಳು ರನ್‌ ಹೊಳೆ ಹರಿಸುವ ಸಾಧ್ಯತೆಯಂತೂ ಖಂಡಿತ ಇದೆ.

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೊಹಾಟ್‌ಸ್ಟಾರ್ ಆಯಪ್

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260410-51-262615823

Dailyhunt
Disclaimer: This content has not been generated, created or edited by Dailyhunt. Publisher: Prajavani