
ತಮಿಳುನಾಡು ಮುಖ್ಯಮಂತ್ರಿ ಹಾಗೂ ನಟ ಸಿ. ಜೋಸೆಫ್ ವಿಜಯ್ ಅಭಿನಯದ ಕೊನೆಯ ಚಿತ್ರ 'ಜನ ನಾಯಗನ್' ಜುಲೈ 23ರಂದು ಬಿಡುಗಡೆಯಾಗಿದೆ.

ತಮ್ಮ ನೆಚ್ಚಿನ ನಟನ ಕೊನೆಯ ಸಿನಿಮಾ ಬಿಡುಗಡೆ ದಿನ ಬೆಂಗಳೂರಿನ ಚಿತ್ರಮಂದಿರಗಳ ಬಳಿ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು.

ಜನ ನಾಯಗನ್ ನೋಡಲು ಹಾಗೂ ನಟ ವಿಜಯ್ ಅವರ ಕೊನೆಯ ಸಿನಿಮಾಗೆ ಬೀಳ್ಕೊಡುಗೆ ನೀಡಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಹರಿದು ಬಂದಿದ್ದರು.

ಪ್ರದರ್ಶನ ವೀಕ್ಷಿಸಲು ಬಂದ ವಿಜಯ್ ಅಭಿಮಾನಿಗಳಿಗೆ ಹಾಗೂ ಸಾರ್ವಜನಿಕರಿಗೆ ಬಿರಿಯಾನಿ ಹಂಚುವ ಮೂಲಕ ಈ ಕ್ಷಣವನ್ನು ದುಪ್ಪಟ್ಟು ಮಾಡಲಾಗಿದೆ.

ತಮಿಳುನಾಡಿನಷ್ಟೇ ಬೆಂಗಳೂರಿನ ರಸ್ತೆಗಳಲ್ಲೂ ವಿಜಯ್ ಅಭಿನಯದ ಕೊನೆಯ ಚಿತ್ರದ ಪೋಸ್ಟರ್‌ಗಳು ರಾರಾಜಿಸುತ್ತಿದ್ದವು. ಏಕಪರದೆ ಹಾಗೂ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳು ಪ್ರೇಕ್ಷಕರಿಂದ ಸಂಪೂರ್ಣ ಭರ್ತಿಯಾಗಿವೆ.

ಚಿತ್ರಮಂದಿರಗಳ ಮುಂದೆ ವಿಜಯ್ ಅವರ ಬೃಹತ್ 50 ಅಡಿ ಎತ್ತರದ ಕಟೌಟ್‌ಗಳಿಗೆ ಅಭಿಮಾನಿಗಳು ಹೂವಿನ ಹಾರವನ್ನು, ಹಾಲಿನ ಅಭಿಷೇಕ ಮಾಡಿದರು.

ಚಿತ್ರಮಂದಿರಗಳ ಹೊರಭಾಗದಲ್ಲಿ ಡೊಳ್ಳು ಮತ್ತು ತಮಟೆ ವಾದ್ಯಗಳ ಆರ್ಭಟ ಪ್ರೇಕ್ಷಕರಲ್ಲಿ ರೋಮಾಂಚನ ಅನುಭವ ನೀಡಿತು. ಅಭಿಮಾನಿಗಳು ಕುಣಿದು ಕುಪ್ಪಳಿಸುವ ಮೂಲಕ ತಮ್ಮ ನೆಚ್ಚಿನ ನಟನಿಗೆ ಜಯಘೋಷ ಕೂಗಿದರು.

